ಭಾನುವಾರ, ಡಿಸೆಂಬರ್ 6, 2020
19 °C

ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ| ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ

ಹರೀಶ್‌ ಶೆಟ್ಟಿ ಬಂಡ್ಸಾಲೆ Updated:

ಅಕ್ಷರ ಗಾತ್ರ : | |

Prajavani

ನಾನು 2019–20ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ವಿದೇಶದಲ್ಲಿ ವೈದ್ಯಕೀಯ ಕೋರ್ಸ್ ಮಾಡಬೇಕೆಂಬ ಆಸೆ ಇದೆ. ಅದಕ್ಕೆ ಯಾವ ಪರೀಕ್ಷೆ ಬರೆಯಬೇಕು ಮತ್ತು ಯಾವ ರೀತಿ ತಯಾರಿ ನಡೆಸಬೇಕು? ಹಾಗೆಯೇ ಬ್ಯಾಂಕ್‌ನ ಸಹಾಯ ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಸಿ.

– ಹೆಸರು ಬೇಡ, ಹುಬ್ಬಳ್ಳಿ

ಪ್ರತಿಯೊಂದು ದೇಶಕ್ಕೂ ಪ್ರತ್ಯೇಕವಾದ ಪ್ರವೇಶಾತಿ ಪ್ರಕ್ರಿಯೆ ಇರುವುದರಿಂದ ನೀವು ಯಾವ ದೇಶದಲ್ಲಿ ಓದಲು ಇಚ್ಛಿಸುತ್ತೀರಿ ಎಂದು ತೀರ್ಮಾನಿಸಿ ಪರಿಶೀಲಿಸಬೇಕು. ಕೆಲವು ಸಾಮಾನ್ಯ ಅಂಶಗಳನ್ನು ಇಲ್ಲಿ ನೋಡಬಹುದು.

ಸಾಮಾನ್ಯವಾಗಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಸ್ವೀಡನ್, ಬಲ್ಗೇರಿಯಾ, ಜಪಾನ್‌ನಂತಹ ರಾಷ್ಟ್ರಗಳಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ದೊರಕುತ್ತದೆ. ಆದರೆ ಅಲ್ಲಿ ಪ್ರವೇಶಾತಿ ದೊರೆಯುವುದು ಅಷ್ಟೇ ಕಠಿಣ ಮತ್ತು ಶುಲ್ಕವು ಕೂಡ ದುಬಾರಿ.

ಆಯಾ ರಾಷ್ಟ್ರದ ಉತ್ತಮ ಕಾಲೇಜುಗಳ ಪಟ್ಟಿಯನ್ನು ಅಂತರ್ಜಾಲದಿಂದ ಪಡೆದು ಅವುಗಳ ಅಂತರರಾಷ್ಟ್ರಿಯ ರ‍್ಯಾಂಕಿಂಗ್, ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ, ಶುಲ್ಕ ಇತ್ಯಾದಿಗಳನ್ನು ಪರಿಶೀಲಿಸಿ. ಭಾರತೀಯ ಮೆಡಿಕಲ್ ಕೌನ್ಸಿಲ್‌ನ ಪಟ್ಟಿಯಲ್ಲಿ ಆ ಕಾಲೇಜಿನ ಹೆಸರು ಇದೆಯೇ ಎಂದು ಪರಿಶೀಲಿಸಿ. ಎಂ.ಸಿ.ಎ. ನ ಪಟ್ಟಿಯಲ್ಲಿರುವ ಕಾಲೇಜಿನಿಂದ ಪಡೆದ ಡಿಗ್ರಿಗೆ ಮಾತ್ರ ಭಾರತದಲ್ಲಿ ಮಾನ್ಯತೆ ಇರುತ್ತದೆ. ಆದರೆ ಇತರ ದೇಶಗಳಲ್ಲಿ ಉದ್ಯೋಗ ಮಾಡಬಹುದು.

ವಿದೇಶಗಳಲ್ಲಿ ವೈದ್ಯಕೀಯ ವಿಜ್ಞಾನ ಓದಲು ಹದಿನೇಳು ವರ್ಷ ಆಗಿರಬೇಕು. ಪಿ.ಯು.ಸಿ. ಯಲ್ಲಿ ಜೀವಶಾಸ್ತ್ರವನ್ನು ಕಡ್ಡಾಯವಾಗಿ ಓದಿರಬೇಕು. ಜೀವಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ 50 ಅಂಕ ಗಳಿಸಿರಬೇಕು. ಆದರೆ ಹೆಚ್ಚು ಅಂಕ ಗಳಿಸಿದಷ್ಟೂ ಪ್ರವೇಶಾತಿ ಸಾಧ್ಯತೆಗಳು ಹೆಚ್ಚು. ಇಂಗ್ಲಿಷ್ ಭಾಷಾ ಸಾಮರ್ಥ್ಯ ತೋರಿಸಲು ಐ.ಇ.ಎಲ್.ಟಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಕೆಲವು ದೇಶದ ಕಾಲೇಜುಗಳಲ್ಲಿ ಮೆಡಿಕಲ್ ಪ್ರವೇಶಾತಿ ಪರೀಕ್ಷೆಯನ್ನು ತೇರ್ಗಡೆ ಹೊಂದಿರಬೇಕು ಮತ್ತು ಇನ್ನು ಕೆಲವು ದೇಶದ ಕಾಲೇಜಿನಲ್ಲಿ ಅಂತಹ ಪರೀಕ್ಷೆಗಳು ಇರುವುದಿಲ್ಲ. ಹಾಗಾಗಿ ಆ ಬಗ್ಗೆ ಆಯಾ ಕಾಲೇಜಿನ ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಿ.

ಶೈಕ್ಷಣಿಕ ಸಾಲಕ್ಕಾಗಿ ನಿಮ್ಮ ಪ್ರವೇಶಾತಿ ಅಂತಿಮ ಆದ ನಂತರ ನಿಮ್ಮ ಕಾಲೇಜಿನಿಂದ ನಿಮ್ಮ ಶಿಕ್ಷಣಕ್ಕೆ ತಗಲುವ ವೆಚ್ಚದ ಕೊಟೇಷನ್ ಮತ್ತು ಪ್ರವೇಶಾತಿಯ ದಾಖಲೆಗಳೊಂದಿಗೆ ನಿಮ್ಮ ಅಕೌಂಟ್ ಇರುವ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆ ಅರ್ಜಿಯನ್ನು ಪರಿಶೀಲಿಸಿ ಬ್ಯಾಂಕ್‌ನಿಂದ ಒಪ್ಪಿಗೆ ಆದ ನಂತರ ಶೈಕ್ಷಣಿಕ ಸಾಲ ಸಿಗುತ್ತದೆ. ಇದು ಸಾಮಾನ್ಯವಾದ ಪ್ರಕ್ರಿಯೆ ಆದರೂ ನನ್ನ ವೈಯಕ್ತಿಕ ಅನುಭವದಂತೆ ನಮ್ಮ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಲ ಸಿಗುವುದಕ್ಕೆ ಸ್ವಲ್ಪ ಪ್ರಯಾಸ ಪಡಬೇಕಾಗುತ್ತದೆ. ಅದಕ್ಕಾಗಿ ನಿಮಗೆ ಅಥವಾ ನಿಮ್ಮ ಕುಟುಂಬದವರಿಗೆ ಈಗಾಗಲೇ ಪರಿಚಯ ಇರುವ ಬ್ಯಾಂಕ್‌ನಲ್ಲಿ ಮಾತನಾಡಿ. ನಿಮಗೆ ಪರಿಚಯ ಇಲ್ಲದಿದ್ದರೆ ನಿಮ್ಮ ಶಿಕ್ಷಕರ ಅಥವಾ ನಿಮ್ಮ ಊರಿನಲ್ಲಿ ಬ್ಯಾಂಕ್‌ನೊಂದಿಗೆ ಸಂಪರ್ಕ ಇರುವ ಗಣ್ಯ ವ್ಯಕ್ತಿಗಳ ಸಹಾಯ ಪಡೆದು ಅರ್ಜಿ ಹಾಕುವ ಮುನ್ನ ಬ್ಯಾಂಕಿನವರ ಜೊತೆ ಮಾತನಾಡಿ. ಶೈಕ್ಷಣಿಕ ಸಾಲಕ್ಕೆ ಬಡ್ಡಿದರ, ಮರುಪಾವತಿಯ ನಿಯಮಗಳು ಇತ್ಯಾದಿಗಳನ್ನು ಆಯಾ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಪಡೆಯಿರಿ. ಶುಭಾಶಯ.

ನಾನು ಬಿ.ಕಾಂ. ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದಿನ ಭವಿಷ್ಯಕ್ಕಾಗಿ ಯಾವುದಾದರೂ ಕಂಪ್ಯೂಟರ್‌ ಕೋರ್ಸ್‌ ಮಾಡಬೇಕು. ಯಾವುದನ್ನು ಮಾಡಿದರೆ ಒಳ್ಳೆಯದು?

– ಹೆಸರು, ಊರು ಬೇಡ

ನಿಮ್ಮ ಬಿ.ಕಾಂ. ಶಿಕ್ಷಣದ ಜೊತೆ ಕಂಪ್ಯೂಟರ್ ಶಿಕ್ಷಣವನ್ನು ಪಡೆಯಲು ಯೋಚಿಸಿರುವುದು ಉತ್ತಮವಾದ ಅಂಶ. ಇಂದು ಬಿ.ಕಾಂ. ಮಾತ್ರವಲ್ಲದೆ ಎಲ್ಲ ಕ್ಷೇತ್ರದ ಉದ್ಯೋಗಿಗಳಿಗೂ ಕಂಪ್ಯೂಟರ್ ಜ್ಞಾನ ಮತ್ತು ಕೌಶಲ ಅಗತ್ಯ. ಈ ಕಾಲದಲ್ಲಿ ಎಲ್ಲ ಸಂಸ್ಥೆಗಳ ಅಕೌಂಟ್, ಮಾನವ ಸಂಪನ್ಮೂಲ ಮತ್ತು ಎಲ್ಲ ರೀತಿಯ ವಹಿವಾಟುಗಳು ಕಂಪ್ಯೂಟರ್ ಅಪ್ಲೀಕೇಶನ್‌ಗಳ ಮುಖಾಂತರ ನಡೆಯುತ್ತವೆ. ಹೀಗಾಗಿ ಕಂಪ್ಯೂಟರ್‌ನ ಮೂಲಭೂತ ಕೌಶಲಗಳನ್ನು ಕಲಿತಿರಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಅಂತಿಮ ವರ್ಷದ ಬಿ.ಕಾಂ. ಮುಗಿಯುವ ಮುನ್ನ ಕಂಪ್ಯೂಟರ್ ಬೇಸಿಕ್ ಕೋರ್ಸ್‌ ಅನ್ನು ಮಾಡಿಕೊಳ್ಳಿ. ಅದರಲ್ಲಿ ಎಂ.ಎಸ್. ಆಫೀಸ್ (ವರ್ಡ್, ಎಕ್ಸೆಲ್, ಪವರ್ ಪಾಯಿಂಟ್, ಇತ್ಯಾದಿ), ಅಂತರ್ಜಾಲ, ಟೈಪಿಂಗ್ ಇತ್ಯಾದಿ ಅಂಶಗಳು ಸೇರಿರುತ್ತದೆ.
ಇದಕ್ಕಿಂತ ಹೆಚ್ಚು ಕೌಶಲಗಳನ್ನು ಕಲಿಯಬೇಕು ಎಂದು ನೀವು ಬಯಸಿದಲ್ಲಿ ಟ್ಯಾಲಿ, ಎಸ್.ಎ.ಪಿ. (ಸ್ಯಾಪ್), ಡಿಜಿಟಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ಕಲಿಯಬಹುದು.

ಇದಲ್ಲದೆ ನಿಮ್ಮ ಕಾಮರ್ಸ್ ಕ್ಷೇತ್ರಕ್ಕಿಂತ ಭಿನ್ನವಾದ ಕ್ಷೇತ್ರದ ಕಂಪ್ಯೂಟರ್ ಕೋರ್ಸ್ ಮಾಡಲು ಇಚ್ಛಿಸಿದ್ದಲ್ಲಿ ನಿಮ್ಮ ಆಸಕ್ತಿ ಯಾವುದು ಎಂದು ತಿಳಿದು ನಿರ್ಧರಿಸಿ. ಅನಿಮೇಶನ್, ವೆಬ್‌ಡಿಸೈನ್, ಗ್ರಾಫಿಕ್ ಡಿಸೈನ್, ಕೋರಲ್ ಡ್ರಾ ಡಿಸೈನಿಂಗ್, ಫೋಟೊಷಾಪ್ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಶುಭಾಶಯ

ನನ್ನ ವಿದ್ಯಾಭ್ಯಾಸ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಎಸ್‌ಸಿ. ಆದರೆ ಪೂರ್ಣಗೊಳಿಸಲು ಆಗಲಿಲ್ಲ. (2010-2013 ನೇ ಸಾಲು). ಈಗ ನಾನು ಏನು ಓದಬಹುದು? ಅಥವಾ ಉದ್ಯೋಗಕ್ಕೆ ಯತ್ನಿಸಬಹುದೇ? ಓದುವುದಾದರೆ ಯಾವ ಕೋರ್ಸ್‌ ಮಾಡಬೇಕು? ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸಬಹುದೇ?

– ಶಾಲಿನಿ ಪಿ., ಊರು ಬೇಡ

ನೀವು ಓದಲೂಬಹುದು ಅಥವಾ ಕೆಲಸಕ್ಕೂ ಪ್ರಯತ್ನಿಸಬಹುದು. ಮೊದಲು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೀರಿ ಎಂದು ನಿರ್ಧರಿಸಿ. ಅದಕ್ಕಾಗಿ ಇರುವ ಅಲ್ಪಾವಧಿಯ ಕೋರ್ಸ್‌ಗಳನ್ನು ಹುಡುಕಿ ನೋಡಿ. ಅದು ಆರು ತಿಂಗಳಿಂದ ಎರಡು ವರ್ಷಗಳ ಕೋರ್ಸ್ ಆಗಿರಬಹುದು. ಉದಾಹರಣೆಗೆ ಕಂಪ್ಯೂಟರ್‌ನ ಬೇಸಿಕ್ ಮಾಡಿಕೊಂಡಲ್ಲಿ ಅದರ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್, ಟ್ಯಾಲಿ ಇತ್ಯಾದಿ ಕೆಲಸಗಳನ್ನು ನೋಡಬಹುದು. ಡಿಸೈನಿಂಗ್ ಕೋರ್ಸ್‌ಗಳನ್ನು ಮಾಡಿದರೆ ಆ ಕ್ಷೇತ್ರದಲ್ಲೂ ಕೆಲಸ ಮಾಡಬಹುದು. ಅರೆ ವೈದ್ಯಕೀಯ ಕ್ಷೇತ್ರದ ಆಪರೇಶನ್ ಥಿಯೇಟರ್, ಡೆಂಟಲ್/ನರ್ಸಿಂಗ್ ಅಸಿಸ್ಟೆಂಟ್ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಅದರಲ್ಲದೆ ರಿಸೆಪ್ಶನ್, ಸೇಲ್ಸ್, ಮಾರ್ಕೆಟಿಂಗ್, ಬಿ.ಪಿ.ಒ. ಕ್ಷೇತ್ರಗಳಲ್ಲೂ ಕೆಲಸ ನೋಡಬಹುದು. ಇವುಗಳ ಆಧಾರದ ಮೇಲೆ ಕೆಲಸ ಮಾಡುತ್ತ ದೂರ ಶಿಕ್ಷಣದಲ್ಲಿ ನಿಮಗೆ ಇಷ್ಟವಾಗಿರುವ ಅಥವಾ ನಿಮ್ಮ ಕೆಲಸಕ್ಕೆ ಸಹಾಯವಾಗುವ ಪದವಿ ಕೋರ್ಸ್‌ ಅನ್ನು ಮಾಡಿ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು.

ಸರ್ಕಾರಿ ಕೆಲಸಕ್ಕೆ ನಿಮ್ಮ ಪಿ.ಯು.ಸಿ. ಶಿಕ್ಷಣ ಮತ್ತು ವಯಸ್ಸಿನ ಆಧಾರದ ಮೇಲೆ ಕರ್ನಾಟಕ ಸರಕಾರದ ಎಸ್.ಡಿ.ಎ., ಗ್ರಾಮ ಲೆಕ್ಕಿಗರು, ಕೇಂದ್ರ ಸರ್ಕಾರದ ಎಸ್.ಎಸ್.ಸಿ. ಇತ್ಯಾದಿ ಹುದ್ದೆಗಳಿಗೆ ಪ್ರಯತ್ನಿಸಬಹುದು. ದೂರ ಶಿಕ್ಷಣದಲ್ಲಿ ಪದವಿ ಮುಗಿಸಿದ ನಂತರ ಪದವಿ ಆಧಾರದ ಮೇಲೂ ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳನ್ನು ಪ್ರಯತ್ನಿಸಬಹುದು. ನಿಮ್ಮ ವಯಸ್ಸು ಹೇಳದೆ ಇರುವುದರಿಂದ ಅದನ್ನು ಪರಿಗಣಿಸಿ ಅವಕಾಶಗಳನ್ನು ನೋಡಿ. ಸಾಮಾನ್ಯವಾಗಿ ಮಹಿಳಾ ಅಭ್ಯರ್ಥಿಗಳಿಗೆ 30–35 ವರ್ಷಗಳ ತನಕವೂ ಅರ್ಜಿ ಸಲ್ಲಿಸುವ ಅವಕಾಶಗಳಿದ್ದು ಆಯಾ ನೇಮಕಾತಿ ಅಧಿಸೂಚನೆಯನ್ನು ಗಮನಿಸಿ ಅರ್ಜಿ ಸಲ್ಲಿಸಿ. ಸದ್ಯ ಈಗ ಮುಂದಿನ ಗುರಿಯ ಬಗ್ಗೆ ಆಲೋಚಿಸಿ ಕಾರ್ಯಪ್ರವೃತ್ತರಾಗಿ. ಆಲ್ ದಿ ಬೆಸ್ಟ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು