ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ದುಡಿಯುವ ಮಕ್ಕಳ ‘ದನಿ’ ಕೇಳುತ್ತಿದೆಯೇ?

Last Updated 21 ಡಿಸೆಂಬರ್ 2020, 11:44 IST
ಅಕ್ಷರ ಗಾತ್ರ
ADVERTISEMENT
""

ಹದಿನೇಳು...

ಮೈತುಂಬಾ ಹರೆಯ ಕಾಲಿಡುವ ವಯಸು. ಕಣ್ತುಂಬಾ ಕನಸು ಕಾಣುವ ಮನಸು...

ಆದರೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ನಂದಿಗ್ರಾಮದ ಹದಿನೇಳರ ಫಾತಿಮಾಬಿ ಅವರ ಮನದಲ್ಲಿ ಕುಟುಂಬವನ್ನು ಸಲಹುವ ಚಿಂತೆ. ಸರೀಕರ ಎದುರು ತಲೆ ಎತ್ತಿ ನಡೆಯುವ ಕನಸು. ಬಣ್ಣಬಣ್ಣದ ಬಟ್ಟೆ ಮಾರುವ ಅಂಗಡಿಯಲ್ಲಿ ಕೆಲಸ ಮಾಡುವ ಫಾತಿಮಾಬಿ ಅವರಿಗೆ ಬೀಳುವ ಕನಸುಗಳಲ್ಲಿ ಸಮಾನತೆಯ ಬಣ್ಣವೊಂದೇ ಕಾಡುತ್ತದೆ. ತನ್ನಂತೆಯೇ ದುಡಿವ ಮಕ್ಕಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತುವ ಹಂಬಲ ಅವರದ್ದು.

ಕರ್ನಾಟಕದ ಫಾತಿಮಾಬಿಯಷ್ಟೇ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಕುಟುಂಬಕ್ಕಾಗಿ ದುಡಿಯುತ್ತಿರುವ ಹದಿಹರೆಯದ ಮಕ್ಕಳು (14ರಿಂದ 18) ದುಡಿಯುತ್ತಲೇ ಘನತೆಯ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ತಮ್ಮ ಸಂಘಟನೆಗಳ ಮೂಲಕ ಎನ್‌ಜಿಒಗಳ ನೆರವಿನಿಂದ ಮಾಧ್ಯಮ ಮತ್ತು ಸರ್ಕಾರದ ಕಿವಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ.

'ದ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್‌’ (ಸಿಡಬ್ಲ್ಯುಸಿ) ಇತ್ತೀಚೆಗೆ ಆಯೋಜಿಸಿದ್ದ ‘ಮಕ್ಕಳು: ಬದಲಾವಣೆಯ ಹರಿಕಾರರು’ ರಾಷ್ಟ್ರೀಯ ವೆಬಿನಾರ್‌ನಲ್ಲಿ ಭಾರತದ 8 ರಾಜ್ಯಗಳ ಹದಿಹರೆಯದವರು ನಡೆಸಿದ ಚರ್ಚೆ ಬೆರಗುಗೊಳಿಸುವಂಥದ್ದು.

ಕರ್ನಾಟಕದ ಫಾತಿಮಾಬಿ, ತಮಿಳುನಾಡಿನ ರೋಹಿತ್ ಶಕ್ತಿ, ಪಶ್ಚಿಮ ಬಂಗಾಳದ ಪ್ರೀತಂ ಮೊಂಡಾಲ್, ಗುಜರಾತ್‌ನ ಅಸ್ಮಿತಾ, ರಾಜಸ್ಥಾನದ ಆರತಿ ಮೇಘವಾಲ್, ಮಹಾರಾಷ್ಟ್ರದ ಅಯ್ಯಪ್ಪ ಅಯ್ಯಪ್ಪನ್, ಮಧ್ಯಪ್ರದೇಶದ ಮಹಫೌಜ್, ನವದೆಹಲಿಯ ಕಿಶನ್ ಎತ್ತಿರುವ ಪ್ರಶ್ನೆಗಳು ದುಡಿಯುವ ಹದಿಹರೆಯದ ಮಕ್ಕಳ ಎದುರಿಸುತ್ತಿರುವ ಸಮಸ್ಯೆಗಳನ್ನಷ್ಟೇ ಅವುಗಳನ್ನು ಹೇಗೆ ಪರಿಹರಿಸಬಹುದೆಂಬ ಮಾರ್ಗೋಪಾಯಗಳನ್ನು ಮನಗಾಣಿಸಿವೆ.

ಆರತಿ ಮೇಘವಾಲ್, ರಾಜಸ್ಥಾನ

ಆರು ವರ್ಷಗಳ ಹಿಂದೆ ತಂದೆ ತೀರಿ ಹೋದ ನಂತರ ತಾಯಿ–ತಮ್ಮನೊಂದಿಗೆ ಕುಟುಂಬದ ಹೊಣೆ ಹೊತ್ತಿರುವ ರಾಜಸ್ಥಾನದ ಆರತಿ ಮೇಘವಾಲ್, ತಮ್ಮ ಓದಿನ ಖರ್ಚಿಗಾಗಿ ಮೆಹಂದಿ ಹಾಕುತ್ತಿದ್ದರು. ಕೋವಿಡ್‌ನಿಂದಾಗಿ ಮದುವೆಗಳು ನಿಂತು ಹೋದ ಮೇಲೆ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಅಲ್ಲೂ ಕೆಲಸ ಕಳೆದುಕೊಂಡರು. ಆದರೂ ದೃತಿಗೆಡದ ಆರತಿ ಹೇಗಾದರೂ ಮಾಡಿ ಬಾಕಿ ಉಳಿದಿರುವ ತಮ್ಮ ಕಂಪ್ಯೂಟರ್ ಶಿಕ್ಷಣವನ್ನು ಪೂರ್ಣಗೊಳಿಸಿಕೊಳ್ಳಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಈ ಶಿಕ್ಷಣ ಪೂರ್ಣಗೊಂಡಲ್ಲಿ ಬೇರೆ ಕಡೆ ಉತ್ತಮ ಉದ್ಯೋಗ ಸಿಗುವ ನಂಬಿಕೆ ಅವರದ್ದು.

ಈ ಎಲ್ಲದರ ನಡುವೆಯೇ ತಮ್ಮಂತೆಯೇ ಇರುವ ಯುವತಿಯರ ಗುಂಪು ರಚಿಸಿಕೊಂಡಿರುವ ಆರತಿ ಅಲ್ಲಿ ಪರಸ್ಪರ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ತಮ್ಮಂತೆ ದುಡಿಯುತ್ತಿರುವವರ ಹದಿಹರೆಯದವರಿಗೆ ಸರ್ಕಾರ ಕರಕುಶಲ ಕಲೆಯ ತರಬೇತಿಯನ್ನಾದರೂ ನೀಡಬೇಕು ಎಂಬುದು ಅವರ ಒತ್ತಾಯ.

ಅಸ್ಮಿತಾ, ಗುಜರಾತ್

ಗುಜರಾತ್‌ನ ಭಾವನಗರದವರಾದ ಅಸ್ಮಿತಾ ಅವರಿಗೆ ಲಾಕ್‌ಡೌನ್‌ನಲ್ಲಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ವಜ್ರವನ್ನು ಪಾಲಿಷ್ ಮಾಡುವ ಕೆಲಸ ಮಾಡುತ್ತಿದ್ದ ಅಸ್ಮಿತಾ ಖಿನ್ನತೆಗೊಳಗಾಗಿದ್ದರು. ಆತ್ಮಹತ್ಯೆಯಂಥ ಆಲೋಚನೆಗಳು ಸುಳಿದಾಡತೊಡಗಿದಾಗ ಅವರ ನೆರವಿಗೆ ನಿಂತದ್ದು ಬಾಲಸೇನಾ ಮತ್ತು ತರುಣ್ ಸೇನಾ ಸಂಘಟನೆಗಳು.

‘ಸರ್ಕಾರ ದುಡಿಯುವ ಹದಿಹರೆಯದ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಉದಾಹರಣೆಗೆ ಹಳ್ಳಿಗಳ ರಸ್ತೆಗಳ ನಿರ್ವಹಣೆಯಂಥ ಕೆಲಸವನ್ನು ನೀಡಿದರೆ ಇಂಥ ಮಕ್ಕಳು ಉದ್ಯೋಗಕ್ಕಾಗಿ ಪರ ಊರುಗಳಿಗೆ ಹೋಗುವುದು ತಪ್ಪುತ್ತದೆ. ತಮ್ಮ ಹಳ್ಳಿಯಲ್ಲೇ ಉಳಿದು ಕುಟುಂಬಕ್ಕೆ ನೆರವಾಗುವ ಜತೆಗೆ ಶಿಕ್ಷಣವನ್ನೂ ಪೂರೈಸಲು ಸಾಧ್ಯ’ ಎನ್ನುತ್ತಾರೆ ಅವರು.

ಕಿಶನ್, ನವದೆಹಲಿ

ತನ್ನ ಜೀವನದಲ್ಲಿ ನಡೆದ ದುರಂತದಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ನವದೆಹಲಿಯ ಕಿಶನ್ ಈಗ ‘ಬಾಲಕ್‌ನಾಮ’ ಪತ್ರಿಕೆಯ ಸಂಪಾದಕ. ಬೀದಿ ಮತ್ತು ದುಡಿಯುವ ಮಕ್ಕಳ ಜಾಗೃತಿಗಾಗಿ ಕೆಲಸ ಮಾಡುತ್ತಿರುವ ಕಿಶನ್, ಕೌಟುಂಬಿಕ ಪರಿಸ್ಥಿತಿಯ ಕಾರಣಕ್ಕಾಗಿ ಬಾಲ್ಯದಲ್ಲೇ ದುಶ್ಚಟಕ್ಕೊಳಗಾಗುವ ಮಕ್ಕಳ ಹಿತರಕ್ಷಣೆಗೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕು ಎನ್ನುತ್ತಾರೆ.

‘ಚೇತನಾ’ ಸಂಘಟನೆಯ ನೆರವಿನಿಂದ ಕಿಶನ್ ಈಗ ಹತ್ತನೇ ತರಗತಿಗೆ ದಾಖಲಾಗಿದ್ದಾರೆ. ‘ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ದುಡಿಯಲು ಹೋದಾಗ ಪುಟ್ಟಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ದೊಡ್ಡ ಮಕ್ಕಳ ಹೆಗಲೇರುತ್ತದೆ. ಇದಕ್ಕಾಗಿಯೇ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಒತ್ತಾಯಿಸುತ್ತಾರೆ.‌

ರೋಹಿತ್ ಶಕ್ತಿ, ತಮಿಳುನಾಡು

ಫಾಸ್ಟ್‌ ಫುಡ್ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಶಕ್ತಿಯ ಪೋಷಕರು ಲಾಕ್‌ಡೌನ್ ಹೇರಿದಾಗ ಕೆಲಸ ಕಳೆದುಕೊಂಡರು. ಅಮೃತಶಿಲೆಗೆ ಹೊಳಪು ನೀಡುವ ಅರೆಕಾಲಿಕ ಕೆಲಸ ಮಾಡುತ್ತಿದ್ದ 17 ವರ್ಷದ ರೋಹಿತ್ ಶಕ್ತಿ ಈಗ ಪೂರ್ಣ ಪ್ರಮಾಣದಲ್ಲಿ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಸರ್ಕಾರ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಕೆಲಸದ ಸ್ಥಳದಲ್ಲಿ ವೇತನದಲ್ಲಿ ತಾರತಮ್ಯವಾಗದಂತೆ ಕ್ರಮ ಕೈಗೊಳ್ಳಬೇಕು. ಮಕ್ಕಳು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸಬೇಕು’ ಎಂದು ಆಗ್ರಹಿಸುತ್ತಾರೆ.

ಪಶ್ಚಿಮ ಬಂಗಾಳದ ಪ್ರೀತಂ ಮೊಂಡಾಲ್, ಮಹಾರಾಷ್ಟ್ರದ ಅಯ್ಯಪ್ಪ ಅಯ್ಯಪ್ಪನ್, ಮಧ್ಯಪ್ರದೇಶದ ಮಹಫೌಜ್ ಕೂಡಾ ಇಂಥದ್ದೇ ಪ್ರಶ್ನೆಗಳನ್ನು ಎತ್ತುತ್ತಾರೆ. ದುಡಿಯುವ ಈ ಮಕ್ಕಳು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನಷ್ಟೇ ಅಲ್ಲ ತಮ್ಮ ಸುತ್ತಲಿನ ಸಮುದಾಯದ ಚಿತ್ರಣವನ್ನೂ ಕಟ್ಟಿಕೊಟ್ಟಿದ್ದಾರೆ. ತಮ್ಮ ಸಂಘಟನೆಗಳಿಗೆ ಜವಾಬ್ದಾರಿ ಮನವರಿಕೆ ಮಾಡಿಕೊಡುವ ಜತೆಗೆ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಎನ್‌ಜಿಒಗಳು ಏನು ಮಾಡಬಹುದು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಹೇಗೆ ಕಾರ್ಯಪ್ರವೃತ್ತಿಯಾಗಬೇಕೆಂದು ಸಲಹೆ ನೀಡಿರುವುದೂ ವಿಶೇಷ.

‘ನಮಗೆ ಕೂರಿಸಿ ಅನ್ನ ಹಾಕಬೇಡಿ. ಕೆಲಸ ಮಾಡುತ್ತಲೇ ನಮಗೆ ಓದುವ ಅವಕಾಶ ಕೊಡಿ. ಅದಕ್ಕಾಗಿ ಸಂಜೆ, ರಾತ್ರಿ ಶಾಲೆಗಳನ್ನು ತೆರೆಯಿರಿ. ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ನಮಗೂ ಕೆಲಸ ಕೊಡಿ. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಬಿಸಿಯೂಟ ಪೌಷ್ಟಿಕ ಆಹಾರ ಸೌಲಭ್ಯ ಕಲ್ಪಿಸಿ, ನಮ್ಮ ದುಡಿಮೆಯನ್ನೂ ಗೌರವಿಸಿ, ಸಮಾನ ವೇತನ ಕೊಡಿ. ಕೆಲಸದ ಸ್ಥಳದಲ್ಲಿ ನಮಗೆ ಸುರಕ್ಷತೆಯ ವಾತಾವರಣ ಕಲ್ಪಿಸಿಕೊಡಿ, ನಮ್ಮ ಇಂದಿನ ಸ್ಥಿತಿಗೆ ನಾವು ಮರುಗುವುದಿಲ್ಲ. ಕಣ್ಣೀರು ಹಾಕುವುದಿಲ್ಲ. ದುಡಿಮೆಯ ಜತೆಗೇ ಓದುವ ಮತ್ತು ದುಡಿಮೆಗೆ ತಕ್ಕ ಮೌಲ್ಯ ನೀಡಿ’ ಎಂದು ಆಗ್ರಹಿಸುತ್ತಾರೆ ದುಡಿಯುವ ಹದಿಹರೆಯದ ಈ ಮಕ್ಕಳು.

ಎಲ್ಲಾ ಕೆಲಸ ಕೆಟ್ಟದ್ದಲ್ಲ...

‘ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ 14 ವರ್ಷದ ನಂತರ ಮಕ್ಕಳು ಪಾಕೆಟ್ ಮನಿಗಾಗಿ ದುಡಿಯುತ್ತಾರೆ. ಅದು ಅವರಿಗೆ ಹೆಮ್ಮೆಯ ಸಂಗತಿ. ಏಕೆಂದರೆ ಅಲ್ಲಿ ಮಕ್ಕಳು ಸುರಕ್ಷಿತವಾಗಿ ಕೆಲಸ ಮಾಡುವಂಥ ವಾತಾವರಣವಿದೆ. ಅದನ್ನು ಮೇಲ್ವಿಚಾರಣೆ ಮಾಡುವಂಥ ವ್ಯವಸ್ಥೆಯೂ ಇದೆ. 14, 15 ವರ್ಷದ ಮಕ್ಕಳು ಮನೆಯಲ್ಲಿ ಕೇಕ್ ಮಾಡಿದರೆ, ಪೋಷಕರು ಆ ಕೇಕಿನ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಳ್ಳುತ್ತಾರೆ. ಕೆಲಸದಲ್ಲಿ ತುಂಬಾ ಮೌಲ್ಯಗಳಿವೆ. ದೊಡ್ಡವರ ವಿಷಯದಲ್ಲಿ ದುಡಿಮೆ ಅಂದರೆ ಅದನ್ನು ನಾವು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಮಕ್ಕಳು ಕೆಲಸ ಕಲಿಯುವುದರಲ್ಲೂ ಕಲಿಕೆ ಇದೆ. ಜನರನ್ನು ನಿಭಾಯಿಸುವಂಥದ್ದು, ಹಣವನ್ನು ನಿರ್ವಹಿಸುವಂಥದ್ದು, ನಿಗದಿತ ಅವಧಿಗೆ ಕೆಲಸ ಮುಗಿಸುವುದು, ಕೆಲಸದ ಗುಣಮಟ್ಟ ಕಾಪಾಡಿಕೊಳ್ಳುವುದು ಹೀಗೆ ಅನೇಕ ಅಂಶಗಳನ್ನು ಕಲಿಯಬಹುದು. ನಿಮ್ಮ ಕೇಕ್ ಗುಣಮಟ್ಟದ್ದಾಗಿದ್ದರೆ ಮಾತ್ರ ಗ್ರಾಹಕರು ಖರೀದಿಸುತ್ತಾರೆ ಅಲ್ವೇ ಈ ಮೂಲಕ ನಮ್ಮ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಬೇಕೆಂಬ ಗುಣ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮನವರಿಕೆಯಾಗುತ್ತದೆ. ‘ಎಲ್ಲಾ ಶಾಲೆ ಒಳ್ಳೆಯದಲ್ಲ, ಎಲ್ಲಾ ಕೆಲಸ ಕೆಟ್ಟದ್ದಲ್ಲ’ ಅಂತ ಒಂದು ಪೋಸ್ಟರ್ ಇದೆ. ಶಾಲೆ ಅಥವಾ ಕೆಲಸ ಕೆಟ್ಟದ್ದಾಗುವುದು ಯಾವಾಗ ಅಂದರೆ ಅಲ್ಲಿ ಶೋಷಣೆ ಇದ್ದಾಗ ಮಾತ್ರ. ನಮ್ಮ ಸಾಮರ್ಥ್ಯ ಬೆಳೆಸುವಂಥ, ನಮ್ಮನ್ನು ಸೃಜನಶೀಲರನ್ನಾಗಿ ಯೋಚಿಸುವಂಥ, ನಮ್ಮನ್ನು ಬೆಳೆಸುವಂಥ ಕೆಲಸ ಹದಿಹರೆಯದರಷ್ಟೇ ಅಲ್ಲ ಎಲ್ಲರಿಗೂ ಒಳ್ಳೆಯದೇ’ ಎನ್ನುತ್ತಾರೆ'ದ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್‌’ ನಿರ್ದೇಶಕಿ (ಅಡ್ವೊಕೆಸಿ) ಕವಿತಾ ರತ್ನ.

ಕೆಲಸ ಮೌಲ್ಯ ಕಲಿಸಲಿ, ಶೋಷಣೆಯನ್ನಲ್ಲ...

ಕವಿತಾ ರತ್ನಾ

‘ಕೆಲಸ ನಿಮಗೆ ಮೌಲ್ಯವನ್ನು ತಂದುಕೊಡುತ್ತದೆ. ಹಾಗಾಗಿ ವಿದೇಶದಲ್ಲಿ ಕೆಲಸ ಮಾಡುವ ಮಕ್ಕಳನ್ನು ಗೌರವಿಸುತ್ತಾರೆ. ಭಾರತದಂಥ ದೇಶದಲ್ಲಿ ಸಾರಾಸಗಟವಾಗಿ ಎಲ್ಲವೂ ಕೆಟ್ಟದ್ದು ಎನ್ನಲಾಗುತ್ತದೆ. ಯಾವುದೇ ಕುಟುಂಬದಲ್ಲಿ ಯಾವುದೇ ಮಗುವಿರಲಿ ಅದರ ವಯಸ್ಸಿಗೆ ತಕ್ಕಂತೆ ಕೆಲಸ ಕಲಿಸಿಕೊಂಡೇ ಬರುತ್ತೇವೆ. ಚಿಕ್ಕವರಿದ್ದರೆ ತಟ್ಟೆ ತಗೊಂಡು ಹೋಗು ಅಂತಿವೀ, ಸ್ವಲ್ಪದೊಡ್ಡವರಾದರೆ ಊಟ ಬಡಿಸು ಅಂತೇವಿ. ಇನ್ನೂ ದೊಡ್ಡವರಾದರೆ ಅಡುಗೆ ಮಾಡು ಅಂತೀವಿ. ಯಾಕೆ ಅಂದರೆ ಆ ಮೂಲಕ ಮಕ್ಕಳು ಸಾಮಾಜೀಕರಣಗೊಳ್ಳಲಿ ಅನ್ನುವ ಉದ್ದೇಶದಿಂದ ಹೇಳುತ್ತೇವೆ. ಮಕ್ಕಳಲ್ಲಿ ತಾವೂ ಕುಟುಂಬದ ಒಂದು ಭಾಗ ಅನ್ನುವ ಭಾವ ಬೆಳೆಸಿಕೊಳ್ಳಲಿ ಅನ್ನುವ ಕಾರಣಕ್ಕಾಗಿ ಕೆಲಸ ಹೇಳುತ್ತೇವೆ. ಆದರೆ, ಅದೇ ಕೆಲಸವನ್ನು ನೀವು ದಿನವಿಡೀ ಮಕ್ಕಳ ಹತ್ತಿರ ಮಾಡಿಸಿದರೆ ಅದು ಖಂಡಿತಾ ಶೋಷಣೆ ಆಗುತ್ತದೆ. ಸುರಕ್ಷಿತ ಕೆಲಸ ಒಳ್ಳೆಯ ಕೆಲಸ. ಯಾವ ಕೆಲಸದಲ್ಲಿ ಘನತೆ ಇದೆ, ಅವರು ಸಮರ್ಥವಾಗಿ ನಿಭಾಯಿಸಬಲ್ಲರೋ ಆ ಕೆಲಸವನ್ನು ಹದಿಹರೆಯದ ಮಕ್ಕಳು ನಿಭಾಯಿಸಬಹುದು. ಇದು ಶಿಕ್ಷಣದಲ್ಲೇ ಅಡಕವಾಗಿರುವುದು ಒಳಿತು. ಕಾನೂನು ಪ್ರಕಾರ 14ರಿಂದ 18 ವರ್ಷದ ಮಕ್ಕಳಿಗೆ ಅಪಾಯಕಾರಿ ಅಲ್ಲದ ಕೆಲಸ ಮಾಡಲು ಅವಕಾಶವಿದೆ. ನಾಲ್ಕು ಗಂಟೆ ಕೆಲಸ ಮಾಡಲು ಅನುಮತಿ ಸಿಕ್ಕರೂ, ಆ ಮಕ್ಕಳಿಗೆ ಸಂಜೆ ಶಾಲೆ ಇದೆಯೇ’ ಎಂದು ಪ್ರಶ್ನಿಸುತ್ತಾರೆ ಕವಿತಾ.

ಪರ್ಯಾಯ ಕೊಡಿ

‘ಜ್ಯೂಸ್ ಅಂಗಡಿಯೊಂದರಲ್ಲಿ ದುಡಿಯುವ ಹದಿನಾಲ್ಕರ ಹರೆಯದ ಹುಡುಗ 3 ತಿಂಗಳ ದುಡಿಮೆಯಲ್ಲಿ ತನಗೆ ಅಗತ್ಯವಾದ ಶಾಲಾ ಕೈಚೀಲ ಅಥವಾ ಪಠ್ಯಪುಸ್ತಕ ಖರೀದಿಸುವುದು ತಪ್ಪೇ? ಯಾವ ಬಾಯಿಂದ ಅವನು ಕೆಲಸ ಮಾಡುತ್ತಿರುವುದು ತಪ್ಪು ಎಂದು ಹೇಳುವುದು? ಅಪ್ಪನಿಗೆ ದುಡಿಮೆ ಇಲ್ಲ. ಓದಲು ಪುಸ್ತಕ ಕೊಡಿ ಅಂತ ಮನೆಯಲ್ಲಿ ಕೇಳಲು ಸಂಕೋಚವಾಗುತ್ತದೆ.ಹಾಗಾಗಿ, ನಾನು ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುವೆ ಅನ್ನುತ್ತಾರೆ ಒಬ್ಬ ಬಾಲಕ. ಅಂಥ ಸಂದರ್ಭದಲ್ಲಿ ಆ ಕೆಲಸದ ಸ್ಥಳ ಸುರಕ್ಷಿತವಾಗಿದೆಯೇ? ಅವರು ಬಳಸುವ ಉಪಕರಣಗಳಿಂದ ಮಕ್ಕಳಿಗೆ ಹಾನಿಯಾಗುವ ಸಾಧ್ಯತೆ ಇದೆಯೇ? ಅವರು ಓಡಾಡುವ ಸ್ಥಳಗಳು ಸುರಕ್ಷಿತವಾಗಿಯೇ ಎಂದು ಪರಿಶೀಲಿಸಬೇಕಲ್ವೇ? ನಮ್ಮ ಸಂವಿಧಾನದಲ್ಲಿ ಬದುಕುವ ಹಕ್ಕು ಮೊದಲು ಬರುತ್ತದೆ. ನಂತರವೇ ಶಿಕ್ಷಣದ ಹಕ್ಕು ಬರುತ್ತದೆ. ಬದುಕಲಿಕ್ಕೇ ದಾರಿ ಇಲ್ಲದಿರುವಾಗ ನೀವು ದಾರಿ ಕೊಡದೇ ಇದನ್ನು ನೀ ಮಾಡಬೇಡ ಅನ್ನುವುದು ನ್ಯಾಯವೇ? ನಾವು ಈ ಮಕ್ಕಳಿಗೆ ಪರ್ಯಾಯ ಕೊಟ್ಟರೆ ಖಂಡಿತಾ ಇಂಥ ಕೆಲಸ ಮಾಡಲು ಬರುವುದಿಲ್ಲ ಅನ್ನುವುದು ನನ್ನ ನಂಬಿಕೆ’ ಅನ್ನುತ್ತಾರೆ ಕವಿತಾ.

ದುಡಿಯುವ ಹದಿಹರೆಯದ ಈ ಮಕ್ಕಳು ತಮ್ಮ ಕುಟುಂಬವನ್ನು ಕೈಬಿಟ್ಟವರಲ್ಲ, ಮನೆ ಬಿಟ್ಟು ಓಡಿ ಹೋದವರೂ ಅಲ್ಲ. ಮನೆಯ ಪರಿಸ್ಥಿತಿ ಸುಧಾರಣೆಗಾಗಿ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಿರುವವರು. ಆ ಮೂಲಕ ಕುಟುಂಬಕ್ಕೂ ನೆರವಾಗಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಒದ್ದಾಡುತ್ತಿರುವವರು. ಅಂಥವರನ್ನು ತಪ್ಪಿತಸ್ಥರೆಂದು ಕಾಣುವ ಬದಲು ಅವರ ಕೆಲಸಕ್ಕೆ ಅನುಗುಣವಾದ ವಾತಾವರಣ ಕಲ್ಪಿಸಿಕೊಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ ಆಗಬೇಕಿದೆ.

ಮುಂಜಾನೆಯ ಥಂಡಿಯಲ್ಲಿ ದಿನಪತ್ರಿಕೆ ಹಾಕುವ ಹುಡುಗರಿಗೆ ಕನಿಷ್ಠ ಒಂದು ಸ್ವೆಟರ್, ಟೋಪಿ ಕೊಟ್ಟರೂ ಸಾಕು. ತಾವು ಗಳಿಸಿದ ಹಣ ಹಾಕಲು ಬ್ಯಾಂಕ್ ಖಾತೆ ತೆರೆಯಲು ಸಹಾಯ, ಅವರು ಓಡಾಡುವ ಬೀದಿಗಳಲ್ಲಿ ಬೀದಿದೀಪದ ಸೌಲಭ್ಯ, ದಿನಪತ್ರಿಕೆ ನೆನೆಯದಂತೆ ಪ್ಲಾಸ್ಟಿಕ್‌ನ ಒಂದು ಬಾಸ್ಕೆಟ್ ಸೌಲಭ್ಯ ಕಲ್ಪಿಸಿದರೆ ಸಾಕು ದುಡಿವ ಪುಟ್ಟ ರಟ್ಟೆಗಳಿಗೆ ಮತ್ತಷ್ಟು ಬಲ ಬಂದೀತು, ಅವರೆದೆಯಲ್ಲಿ ಅಕ್ಷರದ ಬೀಜ ಮೊಳಕೆಯೊಡದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT