ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ವೃದ್ಧಿಗೆ ಸುಸಮಯ

Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್ ಸಾಂಕ್ರಾಮಿಕ ಅನಿರೀಕ್ಷಿತ. ಇಂತಹ ಸಂದರ್ಭದಲ್ಲಿ ಒಬ್ಬ ಒಳ್ಳೆಯ ಶಿಕ್ಷಣ ಪಡೆದ ಅಥವಾ ಕೌಶಲಗಳಲ್ಲಿ ನುರಿತ ಉದ್ಯೋಗಿ ಮುಂದಿನ ಒಂದು ಅಥವಾ ಎರಡು ವರ್ಷಗಳನ್ನು ಯಾವ ರೀತಿ ಎದುರಿಸಬೇಕು? ಆರ್ಥಿಕ ಹಿಂಜರಿತದ ಬಗ್ಗೆ ಚಿಂತಿಸುತ್ತ ಕೂರುವ ಬದಲು ಸೂಕ್ತವಾದ ಕೌಶಲಗಳೊಂದಿಗೆ ಬೇರೆ ಉದ್ಯೋಗ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಸಜ್ಜಾಗುವುದು ಒಳಿತು.

ಯಾವಾಗಲೂ ಸೂಕ್ತವಾದ ಶಿಕ್ಷಣದೊಂದಿಗೆ ಉದ್ಯೋಗ ವಲಯದಲ್ಲಿ ಸವಾಲು ಎದುರಿಸಲು ಸನ್ನದ್ಧರಾಗುವುದು ಉತ್ತಮ. ಇದು ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ವ್ಯಾಪಾರ ನಿರ್ವಹಣೆ, ಹಣಕಾಸು ಅಥವಾ ಕಾನೂನಿನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲೂ ಇರಬಹುದು. ಅದರಲ್ಲೂ ಆರ್ಥಿಕತೆ ಏರುಪೇರಾದಾಗ ಉದ್ಯೋಗಕ್ಕೆ ಬೇಕಾದ ಕೌಶಲವಿರುವುದನ್ನು ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈಗ ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಉದ್ಯೋಗಕ್ಕೆ ಹೆಚ್ಚು ಅವಕಾಶಗಳಿರುವ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ ಕಡೆಗೆ ಯುವಜನರು ವಾಲುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗಕ್ಕೆ ನೆರವಾಗುವಂತಹ ಶೈಕ್ಷಣಿಕ ಜ್ಞಾನವನ್ನು ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಮತ್ತೊಂದೆಡೆ ವೃತ್ತಿಪರರು, ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತಮ್ಮ ನೈಪುಣ್ಯವನ್ನು ಹೆಚ್ಚಿಸುವಂತಹ ಕೌಶಲಗಳನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಈ ಕೌಶಲಗಳ ಪೈಕಿ ಒಂದೆಂದರೆ ತಂತ್ರಜ್ಞಾನ. ಆರ್ಥಿಕ ಹಿಂಜರಿತದಿಂದಾಗಿ ಉದ್ಯೋಗ ನಷ್ಟದ ಭಯವಿದ್ದರೂ ಕೂಡ, ಬದಲಾಗುತ್ತಿರುವ ಉದ್ಯಮ ಕ್ಷೇತ್ರದ ಸವಾಲು ಎದುರಿಸಲು ವೃತ್ತಿಪರರಿಗೆ ಇದು ಅವಕಾಶಗಳನ್ನೂ ಒದಗಿಸಿದೆ. ಹಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಕೋವಿಡ್‌ಗಿಂತ ಮುಂಚೆಯೇ ಯೋಜನೆ ರೂಪಿಸಿದ್ದವು. ಕೃತಕ ಬುದ್ಧಿಮತ್ತೆ ಮೂಲಕ ಕಂಪನಿ ಕೆಲಸಗಳನ್ನು ಯಾಂತ್ರೀಕೃತ ವ್ಯವಸ್ಥೆಗೆ ಒಳಪಡಿಸುವ ಬಗ್ಗೆ ಮಾತು ಕೇಳಿಬರುತ್ತಿತ್ತು. ಮುಂಬರುವ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ತಂತ್ರಜ್ಞಾನದಲ್ಲಿ ಕೌಶಲ ಹೆಚ್ಚಿಸಿಕೊಳ್ಳುವುದು ವೃತ್ತಿಪರವಾಗಿ ಮುಂದುವರಿಯಲು ಮತ್ತು ಸ್ಪರ್ಧೆ ಎದುರಿಸಲು ಇರುವ ಮೂಲಭೂತ ಅಗತ್ಯ.

ತಂತ್ರಜ್ಞಾನವು ಆಡಳಿತ ನಿರ್ವಹಣೆ, ಔಷಧಿ ತಯಾರಿಕೆ, ಕಟ್ಟಡ ನಿರ್ಮಾಣ ಕಲೆ ಅಥವಾ ಕೃಷಿ ಕ್ಷೇತ್ರದಲ್ಲಿ ಕೂಡ ಉಪಯುಕ್ತ. ಉದಾಹರಣೆಗೆ ಕಂಪನಿಯಲ್ಲಿ ಮ್ಯಾನೇಜರ್‌ ಹುದ್ದೆಯಲ್ಲಿರುವವರು ಡೇಟಾ ವಿಜ್ಞಾನ ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ನೈಪುಣ್ಯ ಪಡೆಯುತ್ತಿದ್ದಾರೆ. ಡೇಟಾ ವಿಜ್ಞಾನ ಮತ್ತು ಆಟೋಮೇಶನ್‌ ಉದ್ಯಮದ ನಿರ್ಧಾರಗಳು ಹಾಗೂ ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗುತ್ತಿರುವುದರಿಂದ ಈ ಕೌಶಲಗಳನ್ನು ಪಡೆಯುವುದು ಅತ್ಯಂತ ಮುಖ್ಯ. ಇದರಲ್ಲಿ ಅನುಭವೀ ವೃತ್ತಿಪರರು ಹೆಚ್ಚುವರಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್‌ ಸಂದರ್ಭವು ಬಹುತೇಕ ಎಲ್ಲಾ ವಿಷಯಗಳಲ್ಲೂ ವರ್ಚುವಲ್ ಅಂಶವನ್ನು ತಂದು ಬಿಟ್ಟಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಕೋರ್ಸ್ ಮಾಡುವುದಕ್ಕೆ ಇದು ಸಕಾಲ ಎನ್ನಬಹುದು. ಈ ಕುರಿತ ಕೋರ್ಸ್‌ಗಳು ಹಲವು ಭಾಷೆ, ಕ್ಷೇತ್ರಗಳು, ಫಾರ್ಮಾಟ್‌ನಲ್ಲಿ ಲಭ್ಯವಿವೆ. ಅನೇಕ ಮಂದಿ ಈಗ ಮನೆಯಿಂದಲೇ ಕೆಲಸ ಮಾಡುತ್ತಿರುವಂತಹ ಸಂದರ್ಭದಲ್ಲಿ ಕೆಲಸ ಹಾಗೂ ಹೆಚ್ಚುವರಿ ಕಲಿಕಾ ಕೋರ್ಸ್‌ಗಳ ನಡುವೆ ಸಮಯ ಹೊಂದಿಸಿಕೊಂಡು ಕಲಿಯುವುದು ಸುಲಭವಾಗುತ್ತಿದೆ.

ತನ್ನ ಆಸಕ್ತಿ ಹಾಗೂ ಸಾಮರ್ಥ್ಯಗಳಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಒಬ್ಬ ವಿದ್ಯಾರ್ಥಿಯ ಇಚ್ಛೆಗೆ ಬಿಟ್ಟಿದ್ದು. ಆದರೂ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲಗಳನ್ನು ಒದಗಿಸುವಂತಹ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸಂಸ್ಥೆಯು ಒಳ್ಳೆಯ ಹೆಸರು ಗಳಿಸಿರಬೇಕು, ಉತ್ತಮ ಶಿಕ್ಷಕ ಸಿಬ್ಬಂದಿ ಇರಬೇಕು, ಮೂಲಸೌಕರ್ಯ ಇರಬೇಕು, ಮಾನ್ಯತೆ ಪಡೆದ ಸಂಸ್ಥೆಯೂ ಆಗಿರಬೇಕು. ಇದರಿಂದ ಕೂಡ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪೈಪೋಟಿ ಕೊಡಬಹುದು.

(ಲೇಖಕರು: ನಿರ್ದೇಶಕರು,ಎನ್‌ಎಂಐಎಎಂಎಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT