ಶನಿವಾರ, ಮೇ 30, 2020
27 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ: ಕಾರ್ಬನ್‌ ಅಲೋಹದ ಸ್ವರೂಪ

ಶ್ರೀಲತ ಎಸ್. Updated:

ಅಕ್ಷರ ಗಾತ್ರ : | |

ವಿಜ್ಞಾನದ ವಿಷಯದಲ್ಲಿ ಮುಖ್ಯಾಂಶ ಆಧಾರಿತ ಘಟಕಗಳಲ್ಲಿ ‘ನಿತ್ಯ ಜೀವನದಲ್ಲಿ ಪದಾರ್ಥಗಳು’ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು.

ಈ ವಿಷಯದಲ್ಲಿ ಬರುವ ಕಾರ್ಬನ್ ಎರಡನೆಯ ಆವರ್ತ ಹಾಗೂ ನಾಲ್ಕನೆಯ ವರ್ಗದಲ್ಲಿರುವ ಒಂದು ಅಲೋಹ. ಕಾರ್ಬನ್‌ನ ಪರಮಾಣುಗಳ ವಿಭಿನ್ನ ಜೋಡಣೆಯಿಂದಾಗಿ ವಜ್ರ, ಗ್ರಾಫೈಟ್ ಹಾಗೂ ಫುಲರೀನ್ ಪ್ರಾಪ್ತವಾಗುತ್ತವೆ. ಅಲೋಹದ ಗುಣದಂತಲ್ಲದೆ ವಜ್ರ ಹೊಳಪುಳ್ಳ ಹಾಗೂ ಬಹು ಗಡಸು ಪದಾರ್ಥವಾದರೆ, ಗ್ರಾಫೈಟ್ ಅತ್ಯುತ್ತಮ ವಿದ್ಯುದ್ವಾಹಕ.

ಕಾರ್ಬನ್‌ ಕೆಟನೀಕರಣ ಸಾಮರ್ಥ್ಯ, ಸಣ್ಣ ಗಾತ್ರ, ಏಕ ಬಂಧ, ದ್ವಿಬಂಧ, ತ್ರಿಬಂಧಗಳ ಜೋಡಣೆ ಹೊಂದುವ ಸಾಮರ್ಥ್ಯ ಹಾಗೂ ಅದರ ಚತುರ್ವೇಲೆನ್ಸಿಯಿಂದಾಗಿ ಇದು ಅತಿ ವಿಶಿಷ್ಟ ಧಾತು. ಮಿಲಿಯನ್‌ಗಟ್ಟಲೆ ಕಾರ್ಬನ್ ಸಂಯುಕ್ತಗಳು ಲಭ್ಯ. ಒಂದೇ ಕ್ರಿಯಾಬಂಧವನ್ನು ಹೊಂದಿ ಸಾಮಾನ್ಯ ರಾಸಾಯನಿಕ ಗುಣ ಹಾಗೂ ಭೌತಿಕ ಗುಣಗಳಲ್ಲಿ ಕ್ರಮಬದ್ಧತೆ ಹೊಂದಿರುವ ಸರಣಿಗಳನ್ನು ‘ಅನುರೂಪ ಶ್ರೇಣಿ’ಗಳೆನ್ನುತ್ತೇವೆ. ಅವುಗಳ ನಡುವೆ - CH2 ಅಂತರವಿರುತ್ತದೆ.

ಹೈಡ್ರೊಕಾರ್ಬನ್ ಸಂಯುಕ್ತಗಳನ್ನು ಹೆಸರಿಸುವ ಸರಳ ಉಪಾಯ ಹೀಗಿದೆ. ಮೊದಲಿಗೆ ಉದ್ದನೆಯ ಮುಖ್ಯ ಸರಪಳಿಯನ್ನು ಗುರುತಿಸಿ. ನಂತರ ಕ್ರಿಯಾಗುಂಪು ಅತಿ ಕಡಿಮೆ ಸಂಖ್ಯೆ ಪಡೆಯುವಂತೆ ಪ್ರತಿ ಕಾರ್ಬನ್‌ಗೂ ಅಂಕೆಗಳನ್ನು ನೀಡಿ. ಕ್ರಿಯಾಗುಂಪಿಗೆ ಅನುಗುಣವಾಗಿ ಹೆಸರಿಸಿ. ಪೂರ್ವ ಪ್ರತ್ಯಯಗಳಿದ್ದರೆ ಅವುಗಳನ್ನು ಮೊದಲು ಹೆಸರಿಸಿ. ‍[ಪೂರ್ವ ಪ್ರತ್ಯಯ (ಹ್ಯಾಲೋ ಅಥವಾ ಆಲ್ಕೈಲ್ ಗುಂಪು)- ಮುಖ್ಯ ಸರಪಳಿ- ಅಂತ್ಯ ಪ್ರತ್ಯಯ (ಕ್ರಿಯಾ ಗುಂಪು)] ಸೂತ್ರವನ್ನು ನೆನಪಿನಲ್ಲಿಡಿ. ಉದಾ: 6CH3- 5CH2- 4CH2-3CH2-2C 1CH 1-Hexyne

ಹೈಡ್ರೊಕಾರ್ಬನ್ ಸಂಯುಕ್ತದಲ್ಲಿ ಹೈಡ್ರೋಜನ್ ಸಂಖ್ಯೆಯು ಕಾರ್ಬನ್‌ನ ಎರಡು ಪಟ್ಟಿಗಿಂತ ಹೆಚ್ಚು ಇದ್ದರೆ ಅವುಗಳನ್ನು ಪರ್ಯಾಪ್ತಗಳೆಂದೂ, ಇಲ್ಲದಿದ್ದರೆ ಅಪರ್ಯಾಪ್ತಗಳೆಂದೂ ಪರಿಗಣಿಸಲಾಗುತ್ತದೆ. ಪರ್ಯಾಪ್ತ ಸಂಯುಕ್ತಗಳು ಉರಿಯುವಾಗ ಸ್ವಚ್ಛ ಜ್ವಾಲೆಯನ್ನು ಹೊಂದಿದ್ದರೆ, ಅಪರ್ಯಾಪ್ತಗಳು ಹಳದಿ ಜ್ವಾಲೆಯನ್ನು ಹೊಂದಿರುತ್ತವೆ ಹಾಗೂ ದಟ್ಟ ಕಪ್ಪು ಹೊಗೆಯನ್ನು ಉಗುಳುತ್ತವೆ. ಸಾಮಾನ್ಯವಾಗಿ ಘನ ಪದಾರ್ಥಗಳು (ತುಪ್ಪ) ಪರ್ಯಾಪ್ತಗಳೂ, ದ್ರವ ಪದಾರ್ಥಗಳು(ಎಣ್ಣೆ) ಅಪರ್ಯಾಪ್ತಗಳೂ ಆಗಿರುತ್ತವೆ

ಧಾತುಗಳ ಆವರ್ತನೀಯ ವರ್ಗೀಕರಣ

ಮೆಂಡಲೀವ್ ಅವರ ಆವರ್ತಕ ಕೋಷ್ಟಕವು ಧಾತುಗಳ ವರ್ಗೀಕರಣದಲ್ಲಿ ಅತಿ ಮುಖ್ಯ ಹೆಜ್ಜೆ. ಇದು ಧಾತುಗಳ ಪರಮಾಣು ರಾಶಿ, ಮೂಲಭೂತ ಗುಣ ಹಾಗೂ ರಾಸಾಯನಿಕ ಲಕ್ಷಣಗಳ ಮೇಲೆ ಆಧಾರಿತವಾಗಿದೆ. ಆಧುನಿಕ ಕೋಷ್ಟಕದಲ್ಲಿ ಧಾತುಗಳನ್ನು ಪರಮಾಣು ಸಂಖ್ಯೆಗಳ ಮೇಲೆ ವರ್ಗೀಕರಿಸಲಾಗಿದೆ. ಇದರಲ್ಲಿ 18 ವರ್ಗಗಳಿದ್ದು 7 ಆವರ್ತಗಳಿವೆ. ಮೊದಲನೇ ಕವಚದಲ್ಲಿ ಎಲೆಕ್ಟ್ರಾನ್(2ಟಿ2 ಸೂತ್ರಕ್ಕೆ ಅನುಗುಣವಾಗಿ) ಭರ್ತಿಯಾಗುವತನಕ ಅದು ಎರಡನೇ ಕವಚಕ್ಕೆ ಹೋಗುವುದಿಲ್ಲ. ಆದ್ದರಿಂದ ಕ್ರಮಶಃ K L M N ಕವಚಗಳಲ್ಲಿ 2, 8, 18 ಹಾಗೂ 32 ಧಾತುಗಳಿವೆ.

ಆಧುನಿಕ ಆವರ್ತಕ ಕೋಷ್ಟಕದಲ್ಲಿನ ಪ್ರವೃತ್ತಿಗೆ ಉದಾಹರಣೆ: ಒಂದು ಧಾತುವಿನ ಪರಮಾಣು ಸಂಖ್ಯೆ 12. ಕೋಷ್ಟಕದಲ್ಲಿ ಅದರ ಸ್ಥಳ ಮತ್ತು ಗುಣ ವಿಶೇಷತೆ ತಿಳಿಯಲು ಮೊದಲು ಅದರ ಎಲೆಕ್ಟ್ರಾನಿಕ್ ವಿನ್ಯಾಸ ನೋಡಬೇಕು - 2, 8, 2. ಆದ್ದರಿಂದ ಈ ಧಾತುವು ಮೂರನೇ ಆವರ್ತ ಹಾಗೂ ಎರಡನೆಯ ವರ್ಗದಲ್ಲಿದೆ. ಹೀಗಾಗಿ ಇದರ ವೇಲೆನ್ಸಿ 2 ಮತ್ತು ಇದು ಒಂದು ಲೋಹ.

(ಲೇಖಕಿ ನಿವೃತ್ತ ವಿಜ್ಞಾನ ಉಪನ್ಯಾಸಕಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು