ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಎಂಬ ಶೈಕ್ಷಣಿಕ ಮೈಲಿಗಲ್ಲು

Last Updated 5 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಪರೀಕ್ಷಾ ಸಮಯದಲ್ಲಿ ಅಧ್ಯಯನ ಮಾಡುವುದು ಹೇಗೆ?– ಇದು ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕಾಡುವ ಪ್ರಶ್ನೆ. ಮಹಾತ್ಮ ಗಾಂಧಿಯವರು ‘ನಾವು ಏನನ್ನು ಓದುತ್ತೇವೆಯೋ ಅದರ ಬಗ್ಗೆ ಚಿಂತಿಸಬೇಕು, ಅದನ್ನು ಜೀರ್ಣಿಸಿಕೊಳ್ಳಬೇಕು ಹಾಗೂ ಅದು ನಮ್ಮ ದಿನನಿತ್ಯ ಜೀವನದ ಒಂದು ಅವಿಭಾಜ್ಯ ಅಂಗವಾಗಿರಬೇಕು’ ಎಂದು ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈ ರೀತಿ ಅಭ್ಯಾಸ ಮಾಡುವುದಕ್ಕೆ ಬಹಳಷ್ಟು ತಾಳ್ಮೆ ಮತ್ತು ಕಷ್ಟವನ್ನು ಎದುರಿಸುವ ಶಕ್ತಿ ಇರಬೇಕಾದದ್ದು ಅವಶ್ಯಕ.

ಶೈಕ್ಷಣಿಕ ಜೀವನದ ಮೊದಲ ಮೈಲಿಗಲ್ಲು ಎಂದೇ ಹೇಳಲಾಗುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಇನ್ನೇನು ಬಂದೇ ಬಿಟ್ಟಿತು. ಪರೀಕ್ಷೆಯ ಬಿಸಿ ಏರುತ್ತಿರುವ ಈ ಸಂದರ್ಭದಲ್ಲಿ ಕೊನೆಯ ಕ್ಷಣದ ಮಾರ್ಗದರ್ಶಿ ಸೂತ್ರಗಳು ವಿದ್ಯಾರ್ಥಿಗಳನ್ನು ಓರ್ವ ಉತ್ತಮ ಅಧ್ಯಯನಶೀಲ ವಿದ್ಯಾರ್ಥಿಯನ್ನಾಗಿ ಮಾಡಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡಬಲ್ಲವು. ಇವುಗಳನ್ನು ಸಾಧ್ಯವಾದಷ್ಟು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಿದರೆ ಬದಲಾವಣೆಯನ್ನು ಕೆಲವೇ ದಿನಗಳಲ್ಲಿ ಗುರುತಿಸಬಹುದು. ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಬಹುದು. ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಆಧ್ಯಯನಕ್ರಮ ಮುಖ್ಯವೇ ಹೊರತು ಅತಿ ಬುದ್ಧಿವಂತಿಕೆಯಲ್ಲ.

ಉತ್ತಮ ಕಲಿಕೆಯ ತಳಹದಿ
ನೀವು ಒಂದು ವಿಷಯದಲ್ಲಿ ಪರಿಣಿತರಾಗಿರುತ್ತೀರಿ. ಆದರೂ ಕೂಡ ಅದರಲ್ಲಿ ಸಣ್ಣಸಣ್ಣ ತಪ್ಪುಗಳನ್ನು ಮಾಡುತ್ತಿರುತ್ತೀರಿ. ಇಂತಹ ಚಿಕ್ಕಪುಟ್ಟ ತಪ್ಪುಗಳತ್ತ ಹೆಚ್ಚು ಗಮನ ಕೊಡಿ ಮತ್ತು ಆ ತಪ್ಪುಗಳಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನಮಾಡಿ.

ನಿಮ್ಮ ಅಧ್ಯಯನಕ್ಕಾಗಿ ಒಂದು ವೇಳಾಪಟ್ಟಿಯನ್ನು ಮಾಡಿಕೊಳ್ಳಿ. ಯಾವುದೇ ಸಂದರ್ಭದಲ್ಲೂ ವೇಳಾಪಟ್ಟಿಯಿಂದ ವಿಚಲಿತರಾಗದಂತೆ ನೋಡಿಕೊಳ್ಳಿ.

ಭಾಷೆ ಮತ್ತು ಸಾಮಾಜಿಕ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಬೆಳಗಿನ ವೇಳೆಯಲ್ಲಿ ಅಭ್ಯಾಸ ಮಾಡಿ.

ಗಣಿತಕ್ಕೆ ಸಂಬಂಧಿಸಿದ ಸಮಸ್ಯೆ, ಚಿತ್ರ ಮತ್ತು ನಕಾಶೆಗಳನ್ನು ರಾತ್ರಿಯ ಸಮಯದಲ್ಲಿ ಮಾಡಿ. ಇವುಗಳನ್ನು ಮಾಡುವಾಗ ಬಳಪ ಇಲ್ಲವೇ ಉದ್ದವಾದ ಕರಿಹಲಗೆಯನ್ನು ಬಳಸಿಕೊಳ್ಳಿ. ಗಣಿತಶಾಸ್ತ್ರದಲ್ಲಿ ಅಂಕಗಣಿತ ನಿಮಗೆ ಸುಲಭವಾಗಿರಬಹುದು ಮತ್ತು ಬೀಜಗಣಿತ ಕಷ್ಟವಾಗಿರಬಹುದು. ಇದಕ್ಕಾಗಿ ಬೀಜಗಣಿತದ ಅಭ್ಯಾಸದತ್ತ ನಿಮ್ಮ ಗಮನವನ್ನು ಮೊದಲು ಕೇಂದ್ರೀಕರಿಸಿ.

ವಿಷಯವನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ. ಬಳಿಕ ಪುಸ್ತಕ ಮುಚ್ಚಿಟ್ಟು ಏನನ್ನು ಓದಿರುವಿರೋ ಅದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ. ನಿಮಗೆ ಜ್ಞಾಪಕಕ್ಕೆ ಬಂದ ಅಂಶಗಳನ್ನು ಒಂದು ಹಾಳೆಯಲ್ಲಿ ಬರೆಯಿರಿ. ಪುನಃ ಪುಸ್ತಕವನ್ನು ಓದಿ, ನೀವು ಮರೆತಿರುವ ಅಂಶಗಳನ್ನು ಗುರುತಿಸಿಕೊಳ್ಳಿ. ಇದೇ ಕ್ರಮವನ್ನು ಪುನರಾವರ್ತಿಸಿ.

ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ
* ಪರೀಕ್ಷೆಗೆ ತಯಾರಾಗುವುದು ಒಂದು ಕಲೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

* ಪರೀಕ್ಷೆ ವಿದ್ಯಾರ್ಥಿ ಜೀವನದ ಒಂದು ಅವಿಭಾಜ್ಯ ಅಂಗ. ಪರೀಕ್ಷೆ ಎಂದು ಹೆದರಿಕೊಳ್ಳಬೇಡಿ. ನಿಮ್ಮ ಸಾಮರ್ಥ್ಯಗಳು ಹಾಗೂ ನ್ಯೂನತೆಗಳ ಬಗ್ಗೆ ಗಮನಹರಿಸಿ.

* ಪರೀಕ್ಷೆಗೆ ಕೆಲವೇ ನಿಮಿಷಗಳಿರುವಾಗ ಓದುವುದನ್ನು ನಿಲ್ಲಿಸಿ. ಪ್ರಶ್ನೆಗಳನ್ನು ಉತ್ತರಿಸುವಾಗ ಆತುರ ಪಡಬೇಡಿ.

* ಯಾವ ಪ್ರಶ್ನೆಗಳನ್ನು ಉತ್ತರಿಸಲು ಕಷ್ಟವಾಗುವುದೋ ಅದನ್ನು ಕಡೆಯಲ್ಲಿ ಉತ್ತರಿಸಿ.

* ಯಾವುದಾದರೂ ಪ್ರಶ್ನೆ ಅತಿ ಕಷ್ಟವೆನಿಸಿದರೆ, ನಿಮಗೆ ತಿಳಿದ ಉತ್ತರವನ್ನು ಬರೆಯಿರಿ.

* ಯಾವುದೇ ಪ್ರಶ್ನೆಗಳನ್ನು ಉತ್ತರಿಸುವಾಗ ಹೆಚ್ಚಿನ ಸಮಯವನ್ನು ವ್ಯಯಮಾಡಬೇಡಿ.

* ಎಲ್ಲಾ ಪ್ರಶ್ನೆಗಳನ್ನೂ ತಪ್ಪದೇ ಉತ್ತರಿಸಿ. ಯಾವ ಪ್ರಶ್ನೆಯನ್ನೂ ಉತ್ತರಿಸದೇ ಬಿಡಬೇಡಿ.

*ಒಂದು ವಿಷಯದ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸಿದ ನಂತರ ಅದರ ಬಗ್ಗೆ ಹೆಚ್ಚು ಚಿಂತಿಸಿಬೇಡಿ. ಮುಂದಿನ ವಿಷಯಕ್ಕೆ ತಯಾರಾಗಿ.

ಮಾನಸಿಕ ಒತ್ತಡ ನಿರ್ವಹಣೆ ಹೇಗೆ?
ಮನುಷ್ಯನಾದವನಿಗೆ ಮಾನಸಿಕ ಒತ್ತಡಗಳು ಸಾಮಾನ್ಯ. ಒತ್ತಡದಿಂದ ಕಂಗಾಲಾಗುವುದರ ಬದಲಾಗಿ ಅದನ್ನು ನಿಭಾಯಿಸುವುದು ಹೇಗೆ ಎಂದು ಗಮನ ಹರಿಸುವುದು ಸೂಕ್ತ. ಒತ್ತಡವೇ ಇಲ್ಲದ ಜೀವನ ಸಾಧ್ಯವಿಲ್ಲ. ಇದಕ್ಕೆ ವಿದ್ಯಾರ್ಥಿಗಳೂ ಹೊರತಾಗಿಲ್ಲ. ಒತ್ತಡಗಳ ನಿವಾರಣೆಯೆಂದರೆ ಸಾಂದರ್ಭಿಕವಾಗಿ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ. ಪ್ರತಿ ಕೆಲಸವನ್ನು ಆದ್ಯತೆಯ ಮೇಲೆ ನಿರ್ವಹಿಸಿ. ನಿಮ್ಮ ಮೇಲೆ ಬೀಳುವ ಒತ್ತಡದ ಪ್ರಮಾಣ ಕಡಿಮೆಯಾಗಬಹುದು.

ಅನಾವಶ್ಯಕ ಸಂಗತಿಗಳ ಬಗ್ಗೆ ಗಮನ ಕೊಡಬೇಡಿ. ವಿಷಯವನ್ನು ಅರ್ಥಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸಿ. ವಾಸ್ತವದ ಕನಸು ನಿಮ್ಮದಾಗಲಿ, ಅವಾಸ್ತವಿಕ ವಿಚಾರಗಳಿಂದ ದೂರವಿರಿ. ನಮ್ಮ ಸಮಸ್ಯೆಯನ್ನು ನಾವೇ ಪರಿಹಾರ ಮಾಡಿಕೊಳ್ಳದಿದ್ದಲ್ಲಿ ಗೆಲವು ಅಸಾಧ್ಯ. ಒತ್ತಡವನ್ನು ಲಾಭದಾಯಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ.

ಜಾಗಿಂಗ್, ವ್ಯಾಯಾಮ, ಯೋಗ, ಕ್ರೀಡೆ ಮುಂತಾದ ದೈಹಿಕ ಚಟುವಟಿಕೆಗಳು ಮಾನಸಿಕ ಒತ್ತಡವನ್ನು ದೂರವಿರಿಸುತ್ತವೆ.

ಸಾಕಷ್ಟು ನಿದ್ದೆ ಮಾಡಿ, ನಿದ್ರಾಹೀನತೆಯಿಂದ ಮಾನಸಿಕ ಒತ್ತಡ ಉಂಟಾಗಬಹುದು. ವಿಶ್ರಾಂತಿಯೂ ಅಷ್ಟೇ ಅವಶ್ಯ.

ಕಲಿಕೆಯ ಹವ್ಯಾಸಗಳು
ಒಂದು ವಿಷಯವನ್ನು ಅಭ್ಯಾಸ ಮಾಡುವಾಗ ಅದರ ಕಡೆಗೆ ಗಮನವನ್ನು ಕೇಂದ್ರೀಕರಿಸಿ. ಒಂದು ವಿಷಯವನ್ನು ಅಭ್ಯಾಸ ಮಾಡಬೇಕಾದರೆ ಬೇರೆ ವಿಷಯಗಳತ್ತ ತಲೆಕೆಡಿಸಿಕೊಳ್ಳಬೇಡಿ. ನಾನು ಏನನ್ನೂ ಸಾಧಿಸಬಲ್ಲೆ (ಕಲಿಯಬಲ್ಲೆ) ಎಂಬ ಭಾವನೆಯನ್ನು ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಸಮಯ ತಗಲಬಹುದು.

ಮಾರ್ಚ್ 10ರವರೆಗೆ ಯಾವುದೇ ಕ್ಲಿಷ್ಟವಾದ ವಿಷಯಗಳಿದ್ದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಂತರ ಏನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತೀರೋ ಅದನ್ನು ಮಾತ್ರ ಸರಿಯಾಗಿ ಓದಿಕೊಳ್ಳಿ. ಸೂತ್ರಗಳ, ವ್ಯಾಖ್ಯೆಗಳ, ದಿನಾಂಕ ಮತ್ತು ಘಟನೆ (ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ) ಗಳ ಪಟ್ಟಿಯನ್ನು ಮಾಡಿಟ್ಟುಕೊಳ್ಳಿ. ವಿಷಯ ಮತ್ತು ಕಲ್ಪನೆಗಳ ಮೇಲೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸಿ. ಚಿತ್ರಗಳನ್ನು/ ನಕಾಶೆಗಳನ್ನು ಚೆನ್ನಾಗಿ ಬರೆಯಲು ಮತ್ತು ಅವುಗಳ ಭಾಗಗಳನ್ನು ಹೆಸರಿಸಲು ಪ್ರಯತ್ನಮಾಡಿ. ಎಲ್ಲಾ ವಿಷಯಗಳನ್ನು ಮುತುವರ್ಜಿಯಿಂದ ಓದಿ. ಏಕೆಂದರೆ ತೃತೀಯ ಭಾಷೆ ಪ್ರಥಮ ಭಾಷೆಯಷ್ಟೇ ಮುಖ್ಯವಾದದ್ದು. ಸಮಾಜವಿಜ್ಞಾನವು ಗಣಿತದಷ್ಟೇ ಮುಖ್ಯ.

ಪರೀಕ್ಷೆಯಲ್ಲಿ ವೈಫಲ್ಯಕ್ಕೆ ಕಾರಣಗಳು
*
ಬೌದ್ಧಿಕ ಮಟ್ಟವನ್ನು ಸರಿಯಾಗಿ ಬಳಸಿಲ್ಲ.
* ಸಾಮರ್ಥ್ಯ ಸರಿಯಾಗಿ ಬಳಕೆಯಾಗಿಲ್ಲ.
* ಆಸಕ್ತಿಯ ಕೊರತೆ.
* ಅಧ್ಯಯನ ವಿಧಾನ ಸರಿಯಾಗಿಲ್ಲ.
* ಓದುವ ಸಮಸ್ಯೆ.
*ಕಲಿಕೆಯ ಮಾಧ್ಯಮದ ಕ್ಲಿಷ್ಟತೆ.
*ಪ್ರೇರಣೆಯ ಕೊರತೆ.
*ಅಧ್ಯಯನ ವಿಷಯದ (ಕೊರತೆ )ಕುರಿತು ಅಪನಂಬಿಕೆ.
*ಮೂಲ ವ್ಯಕ್ತಿತ್ವದಲ್ಲಿಯೇ ಸಮಸ್ಯೆ.
*ಅನಾರೋಗ್ಯ.
*ಇದಾವುದೂ ನಿಮ್ಮ ಸಮಸ್ಯೆ ಆಗಿಲ್ಲದಿದ್ದಲ್ಲಿ ಪರೀಕ್ಷೆಯಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಪೋಷಕರಿಗೆ ಕಿವಿ ಮಾತು
*
ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳ ಅವಶ್ಯಕತೆಯನ್ನು ಕಂಡುಕೊಳ್ಳಿ.
*ಓದಲು ಅವರಿಗೆ ಆಸಕ್ತಿ ಇಲ್ಲದಿದ್ದಲ್ಲಿ, ಒತ್ತಡದಿಂದ ಅವರನ್ನು ಓದಲು ಕೂರಿಸಬೇಡಿ.
*ನಿರ್ದಿಷ್ಟವಾಗಿ ಓದುವುದು ಒಳ್ಳೆಯದು ಎಂದು ಪ್ರೋತ್ಸಾಹಿಸಿ.
*ಧನಾತ್ಮಕವಾಗಿ ಸ್ಪಂದಿಸಿ.
*ಮಕ್ಕಳನ್ನು ಬೇರೆ ಯಾರೊಂದಿಗೂ ಹೋಲಿಸಬೇಡಿ.
*ಪರೀಕ್ಷೆಯಿಂದ ಬರುತ್ತಿದ್ದಂತೆ ಅವರ ಮೇಲೆ ಪ್ರಶ್ನೆಗಳ ಮಳೆಯನ್ನೇ ಸುರಿಸಬೇಡಿ.
*ಅತಿ ಸುಲಭವಾದ ಯಾವುದಾದರೂ ಒಂದೆರಡು ಪ್ರಶ್ನೆಗಳನ್ನು ಉತ್ತರಿಸಿದ್ದಾರೆಯೇ ಎಂದು ಕೇಳಿ ತಿಳಿದುಕೊಳ್ಳಿ. ಭೇಷ್‌ ಅನ್ನಿ.
*ಬೇರೆ ಏನಾದರೂ ಸಮಸ್ಯೆ ಇದ್ದಲ್ಲಿ ಉಪಾಧ್ಯಾಯರೊಂದಿಗೆ ಚರ್ಚಿಸಿ.
(ಲೇಖಕರು ಬೆಂಗಳೂರಿನ ಎಂ.ಇ.ಎಸ್. ಟೀಚರ್ಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT