ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಹಣತೆ ಬೆಳಗಿದ ಗುರುಗಳು...

ಶಿಕ್ಷಕರ ದಿನಾಚರಣೆ
Last Updated 5 ಸೆಪ್ಟೆಂಬರ್ 2019, 10:19 IST
ಅಕ್ಷರ ಗಾತ್ರ

ಬದುಕು ಸಾಮಾನ್ಯ ಕಲ್ಲಾದರೆ, ಅದಕ್ಕೆ ಉಳಿಪೆಟ್ಟು ಕೊಟ್ಟು ಶಿಲೆಯಾಗಿ ರೂಪಿಸುವವರು ಅನೇಕರು. ಎಲ್ಲರ ಜೀವನದಲ್ಲಿಯೂ ಒಂದಲ್ಲ ಒಂದು ಹಂತದಲ್ಲಿ ಕೈಹಿಡಿದು ನಡೆಸಿ ಗುರುಗಳು ಎನಿಸಿಕೊಳ್ಳುತ್ತಾರೆ. ತಪ್ಪುಗಳನ್ನು ತಿದ್ದಿ ತೀಡಿ, ಹೊಸ ಕನಸುಗಳನ್ನು ಬಿತ್ತಿ ದಾರಿ ತೋರುತ್ತಾರೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಾಧಕನನ್ನು ಹುರಿದುಂಬಿಸುತ್ತಾರೆ. ಅಂಥ ಮಹಾನ್‌ ಸಾಧಕರ ಗುರುಗಳನ್ನು ‘ಶಿಕ್ಷಕರ ದಿನಾಚರಣೆ’ ಸುಸಂದರ್ಭದಲ್ಲಿ ನೆನೆಯೋಣ.

ಗಾಂಧೀಜಿ– ಗೋಪಾಲಕೃಷ್ಣ ಗೋಖಲೆ

ಗಾಂಧೀಜಿ ಮತ್ತು ಗೋಖಲೆ
ಗಾಂಧೀಜಿ ಮತ್ತು ಗೋಖಲೆ

ಮಹಾನ್‌ ಮಾನವತಾವಾದಿ, ಸ್ವಾತಂತ್ರ್ಯ ತಂದುಕೊಟ್ಟ ಅಗ್ರಗಣ್ಯರಲ್ಲಿ ಒಬ್ಬರಾದ ಮಹಾತ್ಮಗಾಂಧೀಜಿಗೆ ರಾಜಕೀಯವಾಗಿ ಗುರುವಾಗಿದ್ದವರು ಗೋಪಾಲಕೃಷ್ಣ ಗೋಖಲೆ.

ಗೋಖಲೆಯು ಬಡಕುಟುಂಬದಲ್ಲಿ ಜನಿಸಿ, ಇಂಗ್ಲಿಷ್‌ ಕಲಿತು, ಅಪಾರ ಜ್ಞಾನವನ್ನು ಗಳಿಸಿದ್ದರು. ಇಂಗ್ಲಿಷ್‌ ಪಾಂಡಿತ್ಯದಿಂದಾಗಿ ಬ್ರಿಟಿಷ್‌ ಸರ್ಕಾರದಲ್ಲಿ ಕೆಲಸ ಪಡೆಯುವುದು ಕಷ್ಟವೇನೂ ಆಗಿರಲಿಲ್ಲ. ಆದರೆ, ಸಾರ್ವಜನಿಕ ಬದುಕಿಗಾಗಿ ಜೀವನವನ್ನೇ ಮುಡುಪಾಗಿಟ್ಟರು. ಗಾಂಧೀಜಿ ಆಹ್ವಾನದ ಮೇರೆಗೆ 1912ರಲ್ಲಿ ಗೋಖಲೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದರು. ಭಾರತದ ಒಟ್ಟಾರೆ ಚಿತ್ರಣದ ಕುರಿತು ಚರ್ಚೆ ನಡೆಸಿ, ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅರಿವು ಮೂಡಿಸಿದ್ದರು. ಗಾಂಧೀಜಿ ತಮ್ಮ ಆತ್ಮಕತೆಯಲ್ಲಿ ಗೋಖಲೆಯನ್ನು ಮಾರ್ಗದರ್ಶಕನೆಂದೇ ಕರೆದಿದ್ದಾರೆ.

ಚಂದ್ರಗುಪ್ತ ಮೌರ್ಯ– ಚಾಣಕ್ಯ

ನಂದ ಸಾಮ್ರಾಜ್ಯವನ್ನು ಅಳಿಸಿ ಮೌರ್ಯ ಸಾಮ್ರಾಜ್ಯದ ಸ್ಥಾಪನೆ ಮಾಡಿದ ಚಂದ್ರಗುಪ್ತ ಮೌರ್ಯನಿಗೆ ಗುರುವಾಗಿದ್ದವರು ಚಾಣಕ್ಯ. ಕೌಟಿಲ್ಯನೆಂದೂ ಪ್ರಸಿದ್ಧಿ ಪಡೆದಿದ್ದರು.

ರಾಜಕೀಯ ತಂತ್ರಗಾರಿಕೆ, ಯುದ್ಧದ ಕೌಶಲಗಳನ್ನು ಚಂದ್ರಗುಪ್ತನಿಗೆ ಕಲಿಸಿದವರು ಚಾಣಕ್ಯ. ಚಾಣಕ್ಯ ತಕ್ಷಶಿಲಾ ವಿಶ್ವವಿದ್ಯಾಲಯಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರವನ್ನು ಬೋಧಿಸುತ್ತಿದ್ದ ಶಿಕ್ಷಕ. ಧನನಂದನನ್ನು ಸೋಲಿಸಲು ಮೌರ್ಯನಿಗೆ ನೆರವಾದವರು ಇವರೇ. ಪೂರ್ವಕ್ಕೆ ಬಂಗಾಳದಿಂದ ಆಫ್ಗಾನಿಸ್ತಾನ, ಬಲೂಚಿಸ್ತಾನದವರೆಗೆ, ಪಶ್ಚಿಮಕ್ಕೆ ಇರಾನ್‌ನಿಂದ ಉತ್ತರಕ್ಕೆ ಕಾಶ್ಮೀರದಿಂದ ದಖನ್‌ ಪ್ರಸ್ಥಭೂಮಿಯವರೆಗೂ ಸಾಮ್ರಾಜ್ಯ ವಿಸ್ತಾರ ಪಡೆದಿತ್ತು. ಚಾಣಕ್ಯನ ಮಾರ್ಗದರ್ಶನದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ಹಲವು ಪ್ರಗತಿಪರ ಯೋಜನೆಗಳನ್ನು ಚಂದ್ರಗುಪ್ತ ಮೌರ್ಯ ಜಾರಿಗೆ ತಂದ.

ಚಾರ್ಲಿ ಚಾಪ್ಲಿನ್‌– ರೋಸ್ಕೊ ಅರ್ಬಕಲ್‌ (Roscoe Arbuckle)

ಚಾರ್ಲಿ ಚಾಪ್ಲಿನ್ ಹೆಸರು ಕೇಳಿದಾಕ್ಷಣ ಮುಖದ ಮೇಲೆ ನಗುವೊಂದು ಹಾದು ಹೋಗುತ್ತದೆ. ನಟನೆಯಿಂದಲೇ ಜನರನ್ನು ನಕ್ಕು ನಗಿಸಿದ್ದ ಚಾರ್ಲಿ ಚಾಪ್ಲಿನಂಥ ನಟನಿಗೆ ವೇದಿಕೆ ಕೊಟ್ಟ ಗುರು ರೋಸ್ಕೊ ಅರ್ಬಕಲ್‌. ಇವರೂ ನಟರು. ಗಾಯನ, ನಟನಾ ಪ್ರತಿಭೆ ಇದ್ದ ಮೂಕಿ ಚಿತ್ರಗಳ ಪರಂಪರೆಯಲ್ಲಿಯೂ ದೊಡ್ಡ ಹೆಸರು ಮಾಡಿದವರು. ದಢೂತಿಕಾಯದ ಅವರು ರಂಜನೆಗಾಗಿ, ಹಾಸ್ಯಕ್ಕಾಗಿ ತನ್ನ ಶರೀರದ ಆಕಾರವನ್ನು ಬಳಸಬಾರದು ಎಂದು ಧೃಢವಾಗಿ ನಂಬಿದ್ದರು.

ಜುಕರ್‌ಬರ್ಗ್‌– ಸ್ಟೀವ್‌ ಜಾಬ್ಸ್‌

ಫೇಸ್‌ಬುಕ್‌ನ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ಆ್ಯಪಲ್‌ ಕಂಪನಿಯನ್ನು ಹುಟ್ಟುಹಾಕಿದ್ದ ಸ್ಟೀವ್‌ ಜಾಬ್ಸ್‌ ದೊಡ್ಡ ಗುರು. ಬದುಕೆಂದರೆ ಕೇವಲ ಉದ್ಯಮವನ್ನು ಕಟ್ಟುವುದಷ್ಟೇ ಅಲ್ಲ, ನಂಬಿಕೆಗಳನ್ನು, ಹೊಸ ಭರವಸೆಗಳನ್ನು ಹುಟ್ಟುಹಾಕುವುದು, ತಂಡಗಳನ್ನು ರೂಪಿಸುವುದು ಎಂದು ನಂಬಿದ್ದ ಸ್ಟೀವ್‌ ಜಾಬ್ಸ್‌ನ ಆದರ್ಶಗಳೇ ದೊಡ್ಡ ಮಾರ್ಗದರ್ಶನ ನೀಡಬಲ್ಲದು ಎಂದು ಸಂದರ್ಶನವೊಂದರಲ್ಲಿ ಜುಕರ್‌ಬರ್ಗ್ ಹೇಳಿಕೊಂಡಿದ್ದರು.

ಕುವೆಂಪು– ಟಿ.ಎಸ್‌.ವೆಂಕಣ್ಣಯ್ಯ

ರಾಷ್ಟ್ರಕವಿ ಕುವೆಂಪು ಅವರ ಗುರುಗಳು ಟಿ.ಎಸ್‌.ವೆಂಕಣ್ಣಯ್ಯ. ತಳುಕಿನ ಸುಬ್ಬಣ್ಣ ವೆಂಕಣ್ಣಯ್ಯನವರು (ಟಿ.ಎಸ್. ವೆಂಕಣಯ್ಯ) ಕನ್ನಡದ ಪ್ರಾಧ್ಯಾಪಕರು. ಅಲ್ಲಿಯವರೆಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮದರಾಸಿಗೆ (ಈಗಿನ ಚೆನ್ನೈ) ಹೋಗಬೇಕಿತ್ತು. ವೆಂಕಣ್ಣಯ್ಯನವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರಲ್ಲಿ ಕುವೆಂಪು ಒಬ್ಬರು. ವೆಂಕಣ್ಣಯ್ಯನವರು ತಮ್ಮ ವಿದ್ಯಾರ್ಥಿಗಳ ಮೇಲೆ ಬೀರಿದ ಪ್ರಭಾವ ಗಾಢವಾದದ್ದು. ಅವರ ಆಳವಾದ ವಿದ್ವತ್ತು ವಿದ್ಯಾರ್ಥಿಗಳ ಅಧ್ಯಯನವನ್ನು ರೂಪಿಸಿತು. ಅವರ ಪ್ರೀತಿಯ ಪ್ರೋತ್ಸಾಹ ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಪೋಷಿಸಿತು. ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ವೆಂಕಣ್ಣಯ್ಯನವರಿಗೆ ‘ಪ್ರಿಯ ಗುರು’ ಎಂದು ಸಂಬೋಧಿಸಿ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT