ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆ ಧರ್ಮಕೇಂದ್ರಿತ ಆಗಬಾರದು: ಡಾ. ಸಿ.ಎನ್. ಮಂಜುನಾಥ್ ಸಂದರ್ಶನ

Published 24 ಮಾರ್ಚ್ 2024, 21:58 IST
Last Updated 24 ಮಾರ್ಚ್ 2024, 21:58 IST
ಅಕ್ಷರ ಗಾತ್ರ

ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಯದೇವ ಹೃದ್ರೋಗ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಮತ್ತು ಹಾಲಿ ಸಂಸದ, ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಮಧ್ಯೆ ನೇರ ಹಣಾಹಣಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಸಜ್ಜಾಗುತ್ತಿದೆ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬೆನ್ನಲ್ಲೇ ಚುನಾವಣಾ ಅಖಾಡಕ್ಕೆ ಧುಮುಕಿರುವ ಮಂಜುನಾಥ್‌, ರಾಜಕೀಯ ಪ್ರವೇಶ, ಗೆಲುವಿನ ಲೆಕ್ಕಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ಪ್ರ

ರಾಜಕೀಯ ಪ್ರವೇಶ ಪೂರ್ವಯೋಜಿತವೊ ಅಥವಾ ಆಕಸ್ಮಿಕವೊ?

ನಿಜಕ್ಕೂ ಆಕಸ್ಮಿಕ. ರಾಜಕೀಯ ಕುಟುಂಬದ ನಂಟಿದ್ದರೂ ನನಗೆ ಆಸಕ್ತಿ ಇರಲಿಲ್ಲ. ವೈದ್ಯನಾಗಿ ನನ್ನದೇ ಹಾದಿಯಲ್ಲಿ ಸೇವೆ ಮಾಡುತ್ತಿದ್ದೆ. ನಿವೃತ್ತಿಯ ಬಳಿಕ ರಾಜಕೀಯ ಸೇರುವಂತೆ ಹಲವರು ಸಲಹೆ ನೀಡಿದ್ದರು. ನಾನು ನಿರಾಕರಿಸಿದ್ದೆ. ಆದರೆ, ಪಕ್ಷಾತೀತವಾಗಿ ಹಿತೈಷಿಗಳು, ವಿವಿಧ ಕ್ಷೇತ್ರಗಳ ತಜ್ಞರು ಸೇರಿದಂತೆ ಹಲವರು ಒತ್ತಡ ಹೇರಿದರು. ಬಿಜೆಪಿ ವರಿಷ್ಠರಿಂದಲೂ ಸ್ಪರ್ಧಿಸುವಂತೆ ಕರೆ ಬಂತು. ಕುಟುಂಬದಲ್ಲಿ ರಾಜಕೀಯವಾಗಿ ಸಕ್ರಿಯವಾಗಿರುವವರು ಒಪ್ಪಿಕೊಳ್ಳುವಂತೆ ಮನವೊಲಿಸಿದರು. ನನ್ನ ಸೇವೆಗೆ ರಾಷ್ಟ್ರಮಟ್ಟದ ವೇದಿಕೆಯೊಂದು ಸಿಗುವಾಗ ನಿರಾಕರಣೆ ಸಲ್ಲದು ಎಂದು ನಿರ್ಧರಿಸಿ ಸ್ಪರ್ಧೆಗೆ ಸಮ್ಮತಿಸಿದೆ.

ಪ್ರ

ವೈದ್ಯರಾಗಿ ನೀವು ಸಂಪಾದಿಸಿದ ಜನಪ್ರಿಯತೆ ಹಾಗೂ ಜನಮೆಚ್ಚುಗೆಯನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವ ಬಿಜೆಪಿ–ಜೆಡಿಎಸ್‌ ತಂತ್ರಕ್ಕೆ ಕೈಗೊಂಬೆಯಾಗಿದ್ದೀರಾ?

ಹಾಗೇನಿಲ್ಲ. ನನ್ನಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಸಹ ರಾಜಕಾರಣದಲ್ಲಿದ್ದಾರೆ. ಚುನಾವಣೆಯಲ್ಲಿ ಗೆಲುವು ಮುಖ್ಯ. ಅದಕ್ಕೆ ಜನಪ್ರಿಯತೆ ಜೊತೆಗೆ ರಾಜಕೀಯ ತಂತ್ರಗಾರಿಕೆಯೂ ಬೇಕು. ನನ್ನ ಸ್ಪರ್ಧೆಯಲ್ಲಿ ಅವೆರಡೂ ಇವೆ.


ಪ್ರ

ಧರ್ಮದ ಆಧಾರದ ಮೇಲೆ ಚುನಾವಣೆ ಎದುರಿಸುವ ಬಿಜೆಪಿಯ ಕಾರ್ಯತಂತ್ರವನ್ನು ನೀವು ಒಪ್ಪುತ್ತೀರಾ?

ಚುನಾವಣೆ ಜನ ಕೇಂದ್ರಿತವಾಗಿರಬೇಕೇ ಹೊರತು, ಧರ್ಮ ಕೇಂದ್ರಿತವಾಗಿರಬಾರದು. ನನ್ನ ಬದುಕಿನಲ್ಲಿ ಎಂದಿಗೂ ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ನೋಡಿದವನಲ್ಲ. ನನಗೆ ಗೊತ್ತಿರುವುದು ಎರಡೇ ಜಾತಿ. ಕೆಲಸ ಮಾಡುವವರು ಮತ್ತು ಮಾಡದವರು. ಅಭಿವೃದ್ಧಿಯ ದೂರದೃಷ್ಟಿ ಹಾಗೂ ನಾನು ಮಾಡಿದ ಕೆಲಸಗಳನ್ನು ಹೇಳಿಯೇ ಜನರ ಬಳಿ ಮತ ಕೇಳುವೆ.

ಪ್ರ

ರಾಜಕಾರಣಿಗೆ ದಪ್ಪ ಚರ್ಮ ಇರಬೇಕು ಅಂತಾರೆ. ಸೌಮ್ಯ ಸ್ವಭಾವದ ನಿಮಗೆ ರಾಜಕಾರಣ ಹೊಂದಿಕೊಳ್ಳುತ್ತದೆಯೆ?

ನಾನು ರಾಜಕಾರಣಿಯ ಬದಲು ರಾಷ್ಟ್ರಕಾರಣಿಯಾಗುವೆ. ರಾಜಕಾರಣಿ ಯಾವಾಗಲೂ ಚುನಾವಣೆ ದೃಷ್ಟಿಯಿಂದಲೇ ರಾಜಕಾರಣ ಮಾಡುತ್ತಾರೆ. ರಾಷ್ಟ್ರಕಾರಣಿಗೆ ಸ್ವಾರ್ಥವಿರುವುದಿಲ್ಲ. ಸೇವಾ ಮನೋಭಾವ, ದೇಶಸೇವೆ ಹಾಗೂ ಅಭಿವೃದ್ಧಿಯೇ ಆದ್ಯತೆಯಾಗಿರುತ್ತದೆ. ನಾನು ಸಹ ಅಂತಹದ್ದೇ ದೂರದೃಷ್ಟಿ ಹೊಂದಿರುವವನು.


ಪ್ರ

ನಿಮಗೆ ರಾಜಕೀಯದ ಗಂಧ–ಗಾಳಿ ಗೊತ್ತಿಲ್ಲ, ನಿಮ್ಮನ್ನು ಹರಕೆ ಕುರಿ ಮಾಡಲಾಗಿದೆ ಎಂದು ವಿರೋಧಿಗಳು ಹೇಳುತ್ತಿದ್ದಾರಲ್ಲ?

ರಾಜಕೀಯದಲ್ಲಿ ಸಕ್ರಿಯವಾಗಿದ್ದರೆ ಮಾತ್ರ ರಾಜಕೀಯದ ಗಂಧ–ಗಾಳಿ ಗೊತ್ತಿರುತ್ತದೆ ಎಂಬುದೇ ತಪ್ಪು. ಕುಟುಂಬದೊಳಗೆ ದೊಡ್ಡಮಟ್ಟದ ರಾಜಕೀಯ ನೇತಾರರನ್ನು ನೋಡಿರುವ ನನಗೆ ರಾಜಕೀಯ ಆಗುಹೋಗುಗಳ ಬಗ್ಗೆ ಅರಿವಿದೆ. ಆದರೆ, ನಾನು ಸಕ್ರಿಯವಾಗಿರಲಿಲ್ಲ. ನನ್ನ ಎದುರಾಳಿಗಳು ವೈಯಕ್ತಿಕವಾಗಿ ಏನೇ ಹೇಳಿದರೂ ಪ್ರತಿಕ್ರಿಯಿಸುವುದಿಲ್ಲ. ಸ್ಪರ್ಧೆಯು ಆರೋಗ್ಯಕರವಾಗಿರಬೇಷ್ಟೇ.

ಪ್ರ

ನೀವು ಗೆದ್ದರೆ ಮುಂದೆ ಕೇಂದ್ರ ಆರೋಗ್ಯ ಸಚಿವರಾಗುತ್ತೀರಿ ಎಂಬ ಮಾತುಗಳು ಈಗಾಗಲೇ ಹರಿದಾಡುತ್ತಿವೆ? ಅಂತಹ ಭರವಸೆ ಸಿಕ್ಕಿದೆಯೆ?

ನನ್ನ ವೃತ್ತಿಯ ಹಿನ್ನೆಲೆ ನೋಡಿ ಗೆದ್ದಾಗ ಸಚಿವನಾಗುತ್ತೇನೆ ಎಂದು ಪಕ್ಷದ ಕಾರ್ಯಕರ್ತರು ಸೇರಿದಂತೆ ಹಿತೈಷಿಗಳು  ಹೇಳುತ್ತಿದ್ದಾರಷ್ಟೇ. ಸಚಿವ ಸ್ಥಾನ ಬೇಕು ಎಂದು ನಾನು ಸ್ಪರ್ಧಿಸಿಲ್ಲ. ನಮ್ಮ ಕುಟುಂಬದವರು ಸಹ ಅಂತಹ ಷರತ್ತು ಹಾಕಿಲ್ಲ. ಚುನಾವಣೆ ಗೆಲ್ಲುವುದಷ್ಟೇ ಸದ್ಯದ ಆದ್ಯತೆ. ಮುಂದಿನದನ್ನು ವರಿಷ್ಠರು ತೀರ್ಮಾನಿಸುತ್ತಾರೆ.


ಪ್ರ

ಡಿ.ಕೆ ಸೋದರರ ರಾಜಕೀಯ ಪ್ರಭಾವ ಹಾಗೂ ಅಧಿಕಾರದ ಬಲವನ್ನು ಹೇಗೆ ಎದುರಿಸುತ್ತೀರಿ?

ಎಲ್ಲರಿಗೂ ಅವರದ್ದೇ ಆದ ಪ್ರಭಾವ ಹಾಗೂ ಶಕ್ತಿ ಇರುತ್ತದೆ. ವೃತ್ತಿಯಲ್ಲಿ ಮಾಡಿದ ಸಾಧನೆ ನನ್ನ ಜತೆಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬಲವಿದೆ. ಜನ ನನ್ನನ್ನು ಪಕ್ಷಾತೀತವಾಗಿ ನೋಡಿ ಬೆಂಬಲಿಸುತ್ತಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಸುಮಾರು 2 ಕೋಟಿ ಜನರನ್ನು ಭೇಟಿ ಮಾಡಿದ್ದೇನೆ. ಹವಾ ನಿಯಂತ್ರಿತ ಕಚೇರಿಯಲ್ಲಿ ಕುಳಿತಿದ್ದಕ್ಕಿಂತ ಹೆಚ್ಚಾಗಿ ಆಪರೇಷನ್ ಥಿಯೇಟರ್ ಹಾಗೂ ವಾರ್ಡ್‌ಗಳಲ್ಲಿ ಸುತ್ತಾಡಿದ್ದೇ ಹೆಚ್ಚು. ಸರ್ಕಾರಿ ಆಸ್ಪತ್ರೆಯನ್ನು ಪಂಚತಾರಾ ಹೋಟೆಲ್‌ನಂತೆ ಕಟ್ಟಿ, ಅತ್ಯುತ್ತಮ ಸೇವೆಯ ಆಸ್ಪತ್ರೆಯಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ್ದೇನೆ.


ಪ್ರ

ಕಾಂಗ್ರೆಸ್ ಪಕ್ಷ ಹಾಗೂ ಅಲ್ಲಿನ ರಾಜಕೀಯ ನಾಯಕತ್ವದ ಕುರಿತು ನಿಮ್ಮ ಅಭಿಪ್ರಾಯವೇನು? ನಿಮ್ಮ ಗೆಲುವಿಗೆ ಪ್ರಧಾನಿ ಮೋದಿ ಜನಪ್ರಿಯತೆಯೊಂದೇ ಸಾಕೆ?

ಬೇರೆ ಪಕ್ಷ ಮತ್ತು ನಾಯಕತ್ವದ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ. ಬಿಜೆಪಿ–ಜೆಡಿಎಸ್ ಮೈತ್ರಿಯೇ ಗೆಲುವಿಗೆ ದೊಡ್ಡ ಕಾರಣವಾಗಲಿದೆ. ಜೊತೆಗೆ ಪ್ರಧಾನಿ ಮೋದಿ ಅವರು ಹತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿಯ ನಾಯಕತ್ವ ಹಾಗೂ ಸ್ವಾರ್ಥರಹಿತ ರಾಜಕಾರಣ ನನ್ನ ಗೆಲುವಿಗೆ ಪೂರಕವಾಗಲಿವೆ.⇒v

ಪ್ರ

ನಿಮ್ಮದೇ ಕುಟುಂಬದ ಜೆಡಿಎಸ್ ಪಕ್ಷವಿದ್ದರೂ ಬಿಜೆಪಿಯಿಂದ ಕಣಕ್ಕಿಳಿದಿದ್ದು ಏಕೆ?

ಚುನಾವಣೆ ಎಂದರೆ ಸೋಲು–ಗೆಲುವಿನ ಲೆಕ್ಕಾಚಾರ. ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ, ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಎರಡೂ ಪಕ್ಷಗಳ ನಾಯಕರು ತಂತ್ರ ರೂಪಿಸಿದ್ದಾರೆ. ಅದರ ಭಾಗವಾಗಿ ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯಿಂದ ನನ್ನ ಹೆಸರು ಘೋಷಣೆ ಮಾಡಿದ್ದಾರೆ.


ಪ್ರ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಅದೃಷ್ಟ ಪರೀಕ್ಷೆಗಿಳಿಯಲು ಕಾರಣವೇನು?

ನನ್ನ ಸ್ಪರ್ಧೆ, ಕ್ಷೇತ್ರ ಹಾಗೂ ಪಕ್ಷ ಎಲ್ಲವೂ ವರಿಷ್ಠರ ಆಯ್ಕೆಯಾಗಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಎರಡಕ್ಕೂ ನೆಲೆ ಇದೆ. ಇವೆರಡರ ಮತಬ್ಯಾಂಕ್ ಒಂದಾದರೆ ಗೆಲುವಿನ ಹಾದಿ ಸುಲಭವಾಗಲಿದೆ ಎಂಬ ಲೆಕ್ಕಾಚಾರವೂ ಇರಬಹುದು.

ಪ್ರ

ಡಿ.ಕೆ. ಸಹೋದರರು ಬಿಜೆಪಿ–ಜೆಡಿಎಸ್ ಕಾರ್ಯಕರ್ತರನ್ನು ಖರೀದಿಸುತ್ತಿದ್ದಾರೆ ಎಂಬ ಆತಂಕವನ್ನು ಮೈತ್ರಿಕೂಟದ ನಾಯಕರು ಹೊರಹಾಕಿದ್ದಾರೆ. ಇದು ನಿಮ್ಮ ಗೆಲುವಿಗೆ ತೊಡಕಾಗುವುದಿಲ್ಲವೆ?

ಅದಕ್ಕೆ ಪ್ರತಿಯಾಗಿ ನಾವು ಬಿಜೆಪಿ–ಜೆಡಿಎಸ್ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಬೆಸೆಯುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಮುಂಚೆಯೇ ಇದು ನಡೆಯಬೇಕಿತ್ತು. ಆದರೆ, ಸ್ಪರ್ಧೆಗೆ ನಾನು ತಡವಾಗಿ ಒಪ್ಪಿಗೆ ಕೊಟ್ಟಿದ್ದರಿಂದ ಸ್ವಲ್ಪ ವಿಳಂಬವಾಗಿದೆ. ಆದರೆ, ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಬದ್ಧತೆಯುಳ್ಳವರೇ ಹೊರತು ಮಾರಿಕೊಳ್ಳುವವರಲ್ಲ.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT