ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಲೆಗೆ ಕಾಂಗ್ರೆಸ್‌ ಕಂಗಾಲು: ಬಿ.ವೈ.ವಿಜಯೇಂದ್ರ ಅವರ ಸಂದರ್ಶನ

ಮೊದಲ ಹಂತದಲ್ಲಿ 14 ಕ್ಷೇತ್ರಗಳೂ ಬಿಜೆಪಿ ಬುಟ್ಟಿಗೆ: ಬಿ.ವೈ.ವಿಜಯೇಂದ್ರ
Published 15 ಏಪ್ರಿಲ್ 2024, 23:58 IST
Last Updated 15 ಏಪ್ರಿಲ್ 2024, 23:58 IST
ಅಕ್ಷರ ಗಾತ್ರ

‘ಹತ್ತು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಆಗಿದ್ದರೆ ಹೇಳಲಿ. ಆರ್ಥಿಕತೆ ಅಧೋಗತಿಗೆ ಇಳಿದಿದೆ. ಸರ್ಕಾರದ ಚುಕ್ಕಾಣಿ ಹಿಡಿದಿರುವವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಜನ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ನೋಡಿ ಗಾಬರಿಯಾಗಿರುವ ಕಾಂಗ್ರೆಸ್‌ ನಾಯಕರು ಮೋದಿ ಅಲೆಯೂ ಇಲ್ಲ ಯಾವ ಅಲೆಯೂ ಇಲ್ಲ ಎಂದು ಬಡಬಡಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

----

‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲುತ್ತೇವೆ ಎನ್ನುತ್ತೀರಲ್ಲ, ಇದು ಅತಿಯಾದ ವಿಶ್ವಾಸವಲ್ಲವೇ? 

ಈ ಚುನಾವಣೆಯಲ್ಲಿ ಮೋದಿ ಸರ್ಕಾರದ ಸಾಧನೆಯೇ ಮಹತ್ವದ ಅಂಶ. ಹಲವು ಕ್ಷೇತ್ರಗಳಲ್ಲಿ ಜನರಿಗೆ ಅಭ್ಯರ್ಥಿಗಳ ಹೆಸರೇ ಗೊತ್ತಿಲ್ಲ. ಅವರೂ ಕೂಡ ಮೋದಿ ಮತ್ತು ಕಮಲದ ಚಿಹ್ನೆಗೆ ಮತ ಹಾಕುವುದಾಗಿ ಹೇಳುತ್ತಿದ್ದಾರೆ. ತೀರಾ ಗ್ರಾಮೀಣ ಪ್ರದೇಶದ ಸಾಮಾನ್ಯ ಮತದಾರನೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಮಾತು ಹೇಳುತ್ತಾನೆ. 28 ಸ್ಥಾನ ಗೆಲ್ಲುತ್ತೇವೆ ಎಂಬುದು ಉತ್ಪ್ರೇಕ್ಷೆಯಲ್ಲ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಎರಡು ಕಡೆ ಕೊಂಚ ಸಮಸ್ಯೆ ಇದೆ. ಆ ಎರಡೂ ಸೇರಿ 14 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇಂತಹ ವಾತಾವರಣದಿಂದಾಗಿ ಕಾಂಗ್ರೆಸ್‌ ನಾಯಕರು ಗಾಬರಿಗೆ ಒಳಗಾಗಿದ್ದಾರೆ. ಮೋದಿ ಅಲೆ ಕಾಣುತ್ತಿಲ್ಲ ಎಂದು ಒಮ್ಮೆ ಹೇಳುತ್ತಾರೆ. ವರುಣದಲ್ಲಿ ಲೀಡ್‌ ಕೊಡದಿದ್ದರೆ ತಾವು ಮುಖ್ಯಮಂತ್ರಿ ಆಗಿ ಮುಂದುವರೆಯುವುದೇ ಕಷ್ಟ ಎಂದು ಗೋಗರೆಯುತ್ತಾರೆ.

* ‘ಗ್ಯಾರಂಟಿ’ಗಳು ಅತಿ ಹೆಚ್ಚು ಸ್ಥಾನಗಳನ್ನು ತಂದುಕೊಡುತ್ತವೆ ಎಂಬ ಗ್ಯಾರಂಟಿ ಕಾಂಗ್ರೆಸ್‌ ನಾಯಕರಲ್ಲಿ ಇದ್ದಂತಿದೆ?

ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್‌ ನಾಯಕರಲ್ಲಿ 18 ರಿಂದ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, 3–4 ತಿಂಗಳಿಂದ ಈಚೆಗೆ ಅವರಿಗೆ ವಾಸ್ತವ ಸ್ಥಿತಿ ಗೊತ್ತಾಗಿದೆ. ಗ್ಯಾರಂಟಿ ಕೈ ಹಿಡಿಯುವುದಿಲ್ಲ ಎಂಬುದು ಅರಿವಿಗೆ ಬಂದ ಬಳಿಕ ಅವರು ಕಂಗಾಲಾಗಿದ್ದಾರೆ. ಜನ ಮೋದಿಯವರ ಬಗ್ಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಜನಸಾಮಾನ್ಯರ ಬದುಕನ್ನು ಬದಲಿಸುವ ಮೋದಿಯವರ ಮಹತ್ವದ ಯೋಜನೆಗಳು ಮತ್ತು ಭ್ರಷ್ಟಾಚಾರರಹಿತ ಆಡಳಿತ.

* ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರ ಮಧ್ಯೆ ಇರುವ ಅಸಮಾಧಾನ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೆ?

ಈ ಬಾರಿ ಪ್ರತಿ ಕ್ಷೇತ್ರಕ್ಕೂ 6 ರಿಂದ 7 ಮಂದಿ ಟಿಕೆಟ್‌ ಆಕಾಂಕ್ಷಿಗಳು ಇದ್ದರು. ಟಿಕೆಟ್‌ ಸಿಗದವರಿಗೆ ಅಸಮಾಧಾನ ಆಗಿರುವುದು ನಿಜ. ಆದರೆ, ಟಿಕೆಟ್‌ ಹಂಚಿಕೆ ತೀರ್ಮಾನ ನನ್ನ ಕೈಯಲ್ಲಾಗಲಿ, ಯಡಿಯೂರಪ್ಪ ಅವರ ಕೈಯಲ್ಲಾಗಲೀ ಇರಲಿಲ್ಲ. ವರಿಷ್ಠರೇ ತೀರ್ಮಾನ ಮಾಡಿದ್ದು. ಕೇವಲ ನಮ್ಮ ಮಾತು ಕೇಳಿಕೊಂಡು ಟಿಕೆಟ್‌ ಹಂಚಿಕೆ ಮಾಡುವ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಇಲ್ಲ. ರಾಜ್ಯದ ವಿಚಾರದಲ್ಲಿ ನಮ್ಮ ವರಿಷ್ಠರು ಹೆಚ್ಚು ಎಚ್ಚರಿಕೆಯಿಂದಲೇ ತೀರ್ಮಾನ ಮಾಡಿದ್ದಾರೆ.

* ಟಿಕೆಟ್‌ ಸಿಗದೇ ಇರುವುದಕ್ಕೆ ಈಶ್ವರಪ್ಪ ಮತ್ತು ಬಸನಗೌಡ ಯತ್ನಾಳ ನಿಮ್ಮನ್ನೇ ಗುರಿಯಾಗಿಸಿದ್ದಾರೆ?

ನಮ್ಮನ್ನು ಟೀಕೆ ಮಾಡುವುದರಿಂದ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ತಂದುಕೊಡುತ್ತದೆ ಮತ್ತು ಒಳ್ಳೆಯದಾಗುತ್ತದೆ ಎಂದಾದರೆ ಹಾಗೇ ಮಾಡಲಿ. ಆದರೆ, ನಮ್ಮ ಉದ್ದೇಶ ಮೋದಿಯವರು ಮತ್ತೊಮ್ಮೆ 400 ಸ್ಥಾನಗಳೊಂದಿಗೆ ಪ್ರಧಾನಿ ಆಗಬೇಕು ಎನ್ನುವುದು. ಅದಕ್ಕೆ ಕರ್ನಾಟಕದಿಂದ 28 ಸ್ಥಾನಗಳನ್ನು ಕಾಣಿಕೆಯಾಗಿ ನೀಡಬೇಕು. ಯತ್ನಾಳ ಅವರ ಉದ್ದೇಶವೂ ಅದೇ ಆಗಿರುತ್ತದೆ.

* ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ವಾದ ಕಾಂಗ್ರೆಸ್‌ ವಾದ ಬಿಜೆಪಿಗೆ ಹಿನ್ನಡೆ ಆಗುವುದಿಲ್ಲವೆ?

ರಾಷ್ಟ್ರ ಮಟ್ಟದಲ್ಲಿ ಯಾವುದೇ ವಿಚಾರದಲ್ಲಿ  ಬಿಜೆಪಿಯನ್ನು ಎದುರಿಸುವ ಸಾಮರ್ಥ್ಯವೂ ಕಾಂಗ್ರೆಸ್‌ಗೆ ಇಲ್ಲ. ಹೀಗಾಗಿ ಅವರು ಅನುದಾನ ಕೊಡುತ್ತಿಲ್ಲ, ತೆರಿಗೆ ಪಾಲು ಕಡಿಮೆ ಆಗಿದೆ ಎಂಬ ವಿಷಯ ಮುನ್ನೆಲೆಗೆ ತಂದು ಪದೇ ಪದೇ ಹೇಳಿ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬರ ಪರಿಹಾರಕ್ಕಾಗಿ ಹಣ ಕೊಡುವುದು ತಾಂತ್ರಿಕ ಕಾರಣಕ್ಕೆ ತಡವಾಗಿರುವುದು ನಿಜ. ಕರ್ನಾಟಕ ಮಾತ್ರವಲ್ಲ; ಎಲ್ಲ ರಾಜ್ಯಗಳಿಗೂ ಅದೇ ರೀತಿ ಆಗಿದೆ. ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ  ಜವಾಬ್ದಾರಿ ಸರಿಯಾಗಿ ನಿರ್ವಹಿಸದೇ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ನಮ್ಮ ಅವಧಿಯಲ್ಲಿ ಭೀಕರ ಪ್ರವಾಹ ಬಂದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಟ್ಟಿದ್ದೇವೆ. ಇವರು ಹೆಕ್ಟೇರ್‌ಗೆ ₹2,000 ಪರಿಹಾರ ಕೊಟ್ಟರೆ, ನಮ್ಮ ಸರ್ಕಾರ ₹24,000 ಕೊಟ್ಟಿತ್ತು.

KARNATAKA BJP PRESIDENT B.Y VIJAYENDRA
ಪ್ರಜಾವಾಣಿ ಜೊತೆ ವಿಶೇಷ ಸಂದರ್ಶನ...
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ –ಪ್ರಜಾವಾಣಿ ಚಿತ್ರ/ ರಂಜು ಪಿ
KARNATAKA BJP PRESIDENT B.Y VIJAYENDRA ಪ್ರಜಾವಾಣಿ ಜೊತೆ ವಿಶೇಷ ಸಂದರ್ಶನ... ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ –ಪ್ರಜಾವಾಣಿ ಚಿತ್ರ/ ರಂಜು ಪಿ

‘ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮ ಗುರಿ’

* ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಸಿಗುವುದೇನು?

ಬೆಂಗಳೂರು ಅಭಿವೃದ್ಧಿಯ ಭಾರಕ್ಕೆ ಕುಸಿಯುತ್ತಿದೆ. ಹೀಗಾಗಿ ಕರ್ನಾಟಕದ ಪ್ರತಿಯೊಂದು ನಗರ ಜಿಲ್ಲೆ ತಾಲ್ಲೂಕುಗಳು ಬೆಳವಣಿಗೆ ಹೊಂದಬೇಕು. ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ರಾಜ್ಯದ ಆರ್ಥಿಕ ಬೆಳವಣಿಗೆ ದೇಶದಲ್ಲೇ ಅಗ್ರಸ್ಥಾನದಲ್ಲಿರಬೇಕು. ಇದಕ್ಕಾಗಿ ಐ.ಟಿ ಬಿ.ಟಿ ಅಲ್ಲದೇ ಪ್ರವಾಸೋದ್ಯಮ ಕೃಷಿ ಔಷಧ ರಸಗೊಬ್ಬರ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಇದರ ಪ್ರಯೋಜನ ರಾಜ್ಯದ ಜನರಿಗೆ ಸಿಗಬೇಕು. ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಿರುದ್ಯೋಗ ನಿವಾರಣೆ ಜತೆ ರಾಜ್ಯದ ಜನರ ಜೀವನ ಸುಧಾರಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT