ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಸಂದರ್ಶನ: ಕಾಂಗ್ರೆಸ್‌ ಗ್ಯಾರಂಟಿ ತಾತ್ಕಾಲಿಕ, ಮೋದಿ ಗ್ಯಾರಂಟಿ ಶಾಶ್ವತ; ಅಮರೇಶ್ವರ

ಸಂದರ್ಶನ: ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ
Published : 26 ಏಪ್ರಿಲ್ 2024, 4:46 IST
Last Updated : 26 ಏಪ್ರಿಲ್ 2024, 4:46 IST
ಫಾಲೋ ಮಾಡಿ
Comments
ಪ್ರ

ಕಾಂಗ್ರೆಸ್‌ನವರು ದೇಶದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎನ್ನುತ್ತಿದ್ದಾರಲ್ಲ?

ದೇಶದಲ್ಲಿ ಇರುವುದೇ ಬಿಜೆಪಿ, ಎನ್‌ಡಿಎ ಅಲೆ. ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಸರಿಯಾದ ಹೊಂದಾಣಿಕೆಯೇ ಇಲ್ಲ. ಕಾಂಗ್ರೆಸ್‌ ಮೊದಲಿನಂತೆ ಪ್ರಬಲವಾಗಿಲ್ಲ. ಸ್ಥಳೀಯ ಪಕ್ಷಗಳೇ ಪ್ರಬಲ ಹೋರಾಟ ನಡೆಸಿವೆ.

ಪ್ರ

ನಿಮ್ಮ ಎದುರು ಅನುಭವಿ ನಿವೃತ್ತ ಐಎಎಸ್ ಅಧಿಕಾರಿ ಕಣದಲ್ಲಿದ್ದಾರಲ್ಲ?

ಹಿಂದೆ ಬಳ್ಳಾರಿಯ ಎಂ.ವೈ. ಘೋರ್ಪಡೆ ಅವರಿಗೆ ಕಾಂಗ್ರೆಸ್ ಟಿಕೆಟ್‌ ಕೊಟ್ಟಿದ್ದರು. ಆದರೆ, ಗೆದ್ದ ನಂತರ ಅವರು ಜಿಲ್ಲೆಗೆ ಬಂದು ಕೆಲಸ ಮಾಡಲಿಲ್ಲ. ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಥಳೀಯರಿಗೆ ಅನ್ಯಾಯ ಮಾಡಿ ಹೊರಗಿನವರಿಗೆ ಟಿಕೆಟ್‌ ಕೊಟ್ಟಿದೆ. ಸ್ಥಳೀಯರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ. ಹೊರಗಿನವರು ಬಂದರೆ ಅಂದುಕೊಂಡಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಪ್ರ

ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದ್ದರೂ ಜಿಲ್ಲೆಗೆ ಏಮ್ಸ್, ಅತ್ಯಧಿಕ ಜಿನ್ನಿಂಗ್‌ ಫ್ಯಾಕ್ಟರಿ ಇದ್ದರೂ ಜವಳಿ ಪಾರ್ಕ್‌ ತರಲು ಏಕೆ ಸಾಧ್ಯವಾಗಲಿಲ್ಲ?

ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಮೂಲಸೌಕರ್ಯ ಒದಗಿಸುವ ಬದ್ಧತೆ ಪ್ರದರ್ಶಿಸಬೇಕು. ರಾಜ್ಯ ಸರ್ಕಾರ ಮೊದಲು ಹುಬ್ಬಳ್ಳಿ–ಧಾರವಾಡ ಎಂದಿತು. ಸಚಿವ ಶರಣಪ್ರಕಾಶ ಪಾಟೀಲ ಕಲಬುರಗಿಗೆ ಏಮ್ಸ್‌ ಬೇಕು ಎಂದು ಹೇಳಿಕೆ ಕೊಟ್ಟರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ರಾಯಚೂರು ಹೆಸರು ಸೂಚಿಸಿದರು. ಅವರಲ್ಲೇ ಗೊಂದಲ ಇದೆ. ರಾಜ್ಯ ಸರ್ಕಾರದ ಸ್ಪಂದನೆಯೇ ತಡವಾಯಿತು. ಅಷ್ಟರಲ್ಲಿ ಚುನಾವಣೆ ಘೋಷಣೆ ಆಯಿತು. ಜಿಲ್ಲೆಗೆ ಮೆಣಸಿನಕಾಯಿ ಮಾರುಕಟ್ಟೆ ಒದಗಿಸುವ ಹಾಗೂ ಅಗ್ರೋ ಇಂಡಸ್ಟ್ರೀಸ್ ತರುವ ಕೆಲಸವನ್ನು ಮಾಡುತ್ತೇನೆ.

ಪ್ರ

ಜನರು ನಿಮಗೇ ಏಕೆ ಮತ ಕೊಡಬೇಕು?

35 ವರ್ಷಗಳಿಂದ ರಾಜಕೀಯದಲ್ಲಿ ಇರುವೆ. ಎರಡು ಕ್ಷೇತ್ರಗಳಲ್ಲಿ ಶಾಸಕ, ಸಚಿವ ಹಾಗೂ ಸಂಸದನಾಗಿ ಕೆಲಸ ಮಾಡಿದ ಅನುಭವ ಇದೆ. ಐಎಎಸ್‌ ಅಧಿಕಾರಿ ಕೆಲಸವೇ ಬೇರೆ, ಜನಪ್ರತಿನಿಧಿಯಾಗಿ ಜನ ಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವುದೇ ಬೇರೆ. ಅಲ್ಲದೇ ಜಿಲ್ಲೆಯ ಆಗುಹೋಗುಗಳ ಬಗ್ಗೆಯೂ ಸರಿಯಾದ ಮಾಹಿತಿ ಇರಬೇಕು. ನಗರದ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದವರು ಗ್ರಾಮಾಂತರ ಪ್ರದೇಶಕ್ಕೆ ಬಂದು ಕೆಲಸ ಮಾಡುವುದು ಅಸಾಧ್ಯವಾದದು. ಹೀಗಾಗಿ ಜನರ ಮಧ್ಯೆ ಇರುವ ನನಗೇ ಮತ ಕೊಡಬೇಕು.

ಪ್ರ

ಪಕ್ಷದ ಟಿಕೆಟ್‌ ಸಿಗದ ಮುಖಂಡರ ಅಸಮಾಧಾನ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ?

ರಾಜ್ಯದ ನಾಯಕರೊಬ್ಬರು ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ನಿಮಗೇ ಟಿಕೆಟ್‌ ಸಿಗಲಿದೆ ಎಂದು ಹುರಿದುಂಬಿಸಿದ್ದರು. ಪಕ್ಷದ ರಾಜ್ಯ ಉಸ್ತುವಾರಿ ಅಗರವಾಲ ಅವರು ತಿಳಿವಳಿಕೆ ನೀಡಿದ ನಂತರ ಹಾಲಿ ಸಂಸದರಿಗೆ ಟಿಕೆಟ್‌ ಕೊಟ್ಟಿರುವುದು ಸರಿ ಎನ್ನುವುದು ಬಿ.ವಿ.ನಾಯಕ ಅವರಿಗೆ ಮನವರಿಕೆ ಆಗಿದೆ. ಚುನಾವಣೆ ಬಂದಾಗ ಆಕಾಂಕ್ಷಿಗಳು ಇರುವುದು ಸಹಜ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರು ಆರಂಭದಲ್ಲೇ ಪಕ್ಷದ ತೀರ್ಮಾನ ಗೌರವಿಸಿ ಪ್ರಚಾರಕ್ಕೆ ಬಂದಿದ್ದಾರೆ. ಇದೀಗ ಎಲ್ಲರೂ ಪಕ್ಷದ ಪ್ರಚಾರಕ್ಕೆ ಬರುತ್ತಿದ್ದಾರೆ. ಪ್ರಸ್ತುತ ಯಾವುದೇ ಅಸಮಾಧಾನ ಇಲ್ಲ.

ಪ್ರ

ಶಿಕ್ಷಣ, ಉದ್ಯೋಗ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಜಿಲ್ಲೆ ಈಗಲೂ ಹಿಂದೆ ಬಿದ್ದಿದೆಯಲ್ಲ?

ಜಿಲ್ಲೆಯಲ್ಲಿ ಫ್ಲೋರೈಡ್‌ ಅಂಶ ಅಧಿಕ ಪ್ರಮಾಣದಲ್ಲಿ ಇದೆ. ಜಲ ಮೂಲಗಳು ಕಡಿಮೆ ಇವೆ. ಕೇಂದ್ರ ಸರ್ಕಾರದಿಂದ ₹ 2800 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಜಲಧಾರೆ ಕಾಮಗಾರಿ ಆರಂಭಿಸಲಾಗಿದೆ. ಒಂದೂವರೆ ವರ್ಷದಲ್ಲಿ ನಾರಾಯಾಣಪುರ ಜಲಾಶಯದಿಂದ ಕೆಲ ನಗರ, ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಯಾದಗಿರಿಯಲ್ಲಿ ಮೆಡಿಕಲ್‌ ಕಾಲೇಜು, ರಾಯಚೂರಲ್ಲಿ ಐಐಐಟಿ ಕಾಲೇಜು ಆರಂಭಿಸಲಾಗಿದೆ. ಕೇಂದ್ರೀಯ ವಿದ್ಯಾಲಯ ಆರಂಭ ಮಾಡುತ್ತೇವೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಕೊಡುತ್ತೇವೆ.

ಪ್ರ

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಮತದಾರರ ಮೇಲೆ ಪರಿಣಾಮ ಬೀರಬಲ್ಲದೆ?

ಇದು ಲೋಕಸಭೆ ಚುನಾವಣೆ ಹೊರತು; ವಿಧಾನಸಭೆ ಚುನಾವಣೆಯಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕ ಎನ್ನುವುದು ಜನರಿಗೆ ಗೊತ್ತಿದೆ. ಜನ ಹುಷಾರು ಇದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಮೋದಿ ಗ್ಯಾರಂಟಿ ಅಂದರೆ ಉಜ್ವಲಾ ಯೋಜನೆ, ನಾರಿ ಶಕ್ತಿ ಯೋಜನೆ, ರೈಲ್ವೆ ಯೋಜನೆ ಇವು ಶ್ವಾಶತ ಯೋಜನೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT