ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ರಸ್ತೆ- ಹೈ ಸ್ಪೀಡ್ ರೈಲ್ವೆ ಸಂಪರ್ಕಕ್ಕೆ ಆದ್ಯತೆ: ಕ್ಯಾ. ಬ್ರಿಜೇಶ್

Published 23 ಏಪ್ರಿಲ್ 2024, 6:10 IST
Last Updated 23 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಪದ್ಮರಾಜ್‌ ಹಾಗೂ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅಭಿವೃದ್ಧಿ ಕುರಿತ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. ಸೌಹಾರ್ದ ಮತ್ತು ಅಭಿವೃದ್ಧಿ ತಮ್ಮ ಆದ್ಯತೆ ಎಂದು ಪದ್ಮರಾಜ್‌ ಹೇಳಿದರೆ, ಅಭಿವೃದ್ಧಿಗೆ ಆದ್ಯತೆ–ಹಿಂದುತ್ವಕ್ಕೆ ಬದ್ಧತೆ ಎಂಬುದು ಕ್ಯಾ.ಬ್ರಿಜೇಶ್‌ ಅವರ ಪ್ರತಿಪಾದನೆ.
ಪ್ರ

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಮಂಗಳೂರಿನಿಂದ ಬೆಂಗಳೂರಿಗೆ ಸರ್ವಋತು ಹೈ ಸ್ಪೀಡ್ ರಸ್ತೆ ಮತ್ತು ಹೈ ಸ್ಪೀಡ್ ರೈಲ್ವೆ ಸಂಪರ್ಕ ಕಲ್ಪಿಸುವ ದೂರದರ್ಶಿತ್ವದ ಯೋಜನೆ ಮೂಲಕ ಕರಾವಳಿಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬೇಕೆಂಬುದು ನನ್ನ ಕನಸು.

ಈ ಯೋಜನೆ ಕೈಗೆತ್ತಿಕೊಳ್ಳಲು ಹಲವಾರು ಸವಾಲುಗಳೂ ಇದ್ದು, ಪರಿಸರ ಅಧ್ಯಯನ ನಡೆಸಿ, ತಜ್ಞರು, ಅಧಿಕಾರಿಗಳ ಸಲಹೆ ಪಡೆದು, ಯೋಜನೆ ರೂಪಿಸಬೇಕಾಗುತ್ತದೆ. ಹೊಸ ರೈಲ್ವೆ ನೆಟ್‌ವರ್ಕ್ ಕೂಡ ಆಗಬೇಕಾಗಿದೆ. ಪ್ರಸ್ತುತ ಇರುವ ರೈಲ್ವೆ ವ್ಯವಸ್ಥೆ ಗೂಡ್ಸ್‌ ಲಾಜಿಸ್ಟಿಕ್ಸ್‌ ರೈಲು ಸಂಚಾರಕ್ಕೆ ಪೂರಕವಾಗಿಲ್ಲ. ಇವೆರಡು ಅಭಿವೃದ್ಧಿ ಹೊಂದಿದರೆ, ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ಮಂಗಳೂರು ಬಂದರಿನ ಬೇಡಿಕೆ ಹೆಚ್ಚುತ್ತದೆ. ಇದು ಕರ್ನಾಟಕದ ಜಿಡಿಪಿ ಹೆಚ್ಚಳಕ್ಕೆ ದೊಡ್ಡ ಕೊಡುಗೆಯಾಗುತ್ತದೆ.

ಸಂಸದ ನಳಿನ್‌ ಕುಮಾರ್ ಕಟೀಲ್ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದಾರೆ. ಯೋಜನೆ ಹಂತದಲ್ಲಿರುವ ಎಲ್ಲ ರಸ್ತೆ ಸಂಪರ್ಕ ಕೊಂಡಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ.

ಪ್ರ

ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳೇನು?

ದಕ್ಷಿಣ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಹಿಮದ ಅನುಭವ ಹೊರತುಪಡಿಸಿದರೆ, ಉಳಿದೆಲ್ಲವನ್ನು ಹೊಂದಿರುವ ಶ್ರೀಮಂತ ನೆಲವಿದು. ಕಡಲು ನಮಗೆ ವರ. ವಿಶ್ವದ ಆರು ವಿರಳ ಕಡಲ ತೀರಗಳಲ್ಲಿ ಸಸಿಹಿತ್ಲು ಕೂಡ ಒಂದು. ನಿಸರ್ಗ ನೀಡಿರುವ ಕೊಡುಗೆ ಇದು. ಇಲ್ಲಿ ಸಾಹಸಮಯ ಕ್ರೀಡೆ ಅಭಿವೃದ್ಧಿಪಡಿಸುವ ಹಂಬಲವಿದೆ.

ಪ್ರ

ಕ್ಷೇತ್ರವನ್ನು ಬಹುವಾಗಿ ಕಾಡುತ್ತಿರುವ ಉದ್ಯೋಗ ವಲಸೆ ತಡೆ ಹೇಗೆ?

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಉದ್ಯೋಗ ಸೃಷ್ಟಿಯ ಕಲ್ಪನೆಯೊಂದಿಗೆ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಬೆಂಗಳೂರು ಹೊರತುಪಡಿಸಿ, ಉಳಿದ ನಗರಗಳಲ್ಲಿ ಐಟಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಈ ಯೋಜನೆಯನ್ನು ಈಗಿನ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕೇಂದ್ರ ಸರ್ಕಾರದ ನೆರವಿನಲ್ಲಿ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಲಾಗುವುದು.

ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರದಲ್ಲಿ (ಪ್ರಣಾಳಿಕೆ) ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೋಂ ಸ್ಟೇ ನಡೆಸಲು ಪ್ರೋತ್ಸಾಹಿಸುವ ಯೋಜನೆಯ ಭರವಸೆ ನೀಡಿದೆ. ಸ್ಥಳೀಯವಾಗಿ ಇದರ ಅನುಷ್ಠಾನದ ಬಗ್ಗೆಯೂ ಯೋಜನೆ ರೂಪಿಸಲಾಗುವುದು.

ಪ್ರ

ಬಿಜೆಪಿ ಹಿಂದುತ್ವದ ಮಂತ್ರ ಪಠಿಸುತ್ತಿದೆ, ಕಾಂಗ್ರೆಸ್‌ ಸಾಮರಸ್ಯ ಮಾತು ಹೇಳುತ್ತಿದೆ. ಇದನ್ನು ಹೇಗೆ ವಿಶ್ಲೇಷಿಸಬಹುದು?

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ‘ಸಾಮರಸ್ಯ’, ರಾಷ್ಟ್ರ ಪುರುಷರ ನೆನಪಾಗುತ್ತದೆ. ಪದಗಳ ಅರ್ಥ ಗೊತ್ತಿಲ್ಲ, ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೂ ಇಲ್ಲ. ಹಿಂದುತ್ವ ಪದದಲ್ಲೇ ಸಾಮರಸ್ಯ ಬೆರೆತಿದೆ. ಹಿಂದುತ್ವ ಅಂದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಈ ನೆಲದ ಅಸ್ಮಿತೆ. ಸಮಾಜ ವಿರೋಧಿ ಶಕ್ತಿಗಳನ್ನು ಒಂದಾಗಿ ಎದುರಿಸುವುದು ಹಿಂದುತ್ವ. ನಾವು ತುಷ್ಟೀಕರಣ ಮಾಡುವವರಲ್ಲ. ಹಿಂದುತ್ವ ನಮ್ಮ ಬಾಯ್ಮಾತಲ್ಲ, ಜೀವನ ಕ್ರಮ. ಹಿಂದುತ್ವದ ಬದ್ಧತೆಯಲ್ಲೇ ಜಿಲ್ಲೆಯ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ.

ಪ್ರ

ಯಾವ ವಿಷಯ ಮುಂದಿಟ್ಟು ಮತ ಕೇಳುತ್ತೀರಿ?

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಯೇ ನಮಗೆ ಶ್ರೀರಕ್ಷೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ದೇಶ ಪರಿವರ್ತನೆಯ ಹಾದಿಯಲ್ಲಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತೇವೆ.

ಪ್ರ

ಜನಪ್ರತಿನಿಧಿ ಯಾಗುವವರಿಗೆ ಕಾರ್ಯಕರ್ತರ ನಡುವಿನ ಸಮನ್ವಯವೇ ದೊಡ್ಡ ಸವಾಲು. ಹೇಗೆ ನಿಭಾಯಿಸುವಿರಿ?

ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರ ಮಾನಸಿಕತೆಯಲ್ಲೇ ಕೆಲಸ ಮಾಡುತ್ತಾರೆ. ಸಮನ್ವಯ ನಮ್ಮ ಕಾರ್ಯಪದ್ಧತಿಯ ಭಾಗ. ಬೇರೆ ಬೇರೆ ಸಂದರ್ಭಗಳಲ್ಲಿ ಪಕ್ಷ ಒಬ್ಬೊಬ್ಬರಿಗೆ ಅವಕಾಶ ಕೊಡುತ್ತದೆ ಅಷ್ಟೆ.

ಪ್ರ

ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ಸೂಕ್ಷ್ಮ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿದೆ. ಇದನ್ನು ಅಳಿಸುವುದು ಹೇಗೆ?

ಕೋಮು ಸೂಕ್ಷ್ಮ ಜಿಲ್ಲೆ ಎಂಬುದು ಕೆಲವು ಇಸ್ಲಾಮಿಕ್ ಮೂಲಭೂತವಾದಿಗಳನ್ನು ಬದುಕಿಸಲು ಮಾಡುತ್ತಿರುವ ಪ್ರಚಾರ. ಮಂಗಳೂರಿನಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಚಟುವಟಿಕೆಗಳ ಸ್ಲೀಪರ್ ಸೆಲ್ ಇದೆ. ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಘಟನೆ ಕುರಿತ ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಯ ವೇಳೆ ಇದು ಬಹಿರಂಗಗೊಂಡಿದೆ. ಕೇಂದ್ರ ಸರ್ಕಾರವು ಇಸ್ಲಾಮಿಕ್ ಮೂಲಭೂತವಾದಿ ಚಟುವಟಿಕೆಯನ್ನು ಜಿಲ್ಲೆಯಿಂದ ಕಿತ್ತೆಸೆಯುವ ಸಂಕಲ್ಪ ಮಾಡಿದೆ. ತುಕ್ಡೆ ತುಕ್ಡೆ ಗ್ಯಾಂಗ್‌ಗಳು ದಕ್ಷಿಣ ಕನ್ನಡವನ್ನು ಕೋಮು ಸೂಕ್ಷ್ಮ ಜಿಲ್ಲೆ ಎಂದು ಹೇಳುವ ಮೂಲಕ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿವೆ. ಇದು ಜಿಲ್ಲೆಯ ಜನರಿಗೆ ಮಾಡುವ ಅವಮಾನ. ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುವ ಮನಃಸ್ಥಿತಿ ಹೊಂದಿರುವವರು ಜಿಲ್ಲೆಯ ಜನರು. ನಮ್ಮ ಮಣ್ಣಿನ ಸ್ವಾಭಿಮಾನ ಕೆಣಕುವ ಸಂಸ್ಕೃತಿಗೆ ವಿರುದ್ಧದ ಕೆಲಸ ನಡೆದರೆ ಸಹಜವಾಗಿ ಪ್ರತಿರೋಧ ಮಾಡಬೇಕಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT