ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಸೋಮಣ್ಣ ಹೊರಗಿನವರು ಎಂಬ ಸತ್ಯ ಮುಚ್ಚಿಡಲಾಗದು: ಮುದ್ದಹನುಮೇಗೌಡ

Published 14 ಏಪ್ರಿಲ್ 2024, 0:30 IST
Last Updated 14 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ತುಮಕೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾಗಿದ್ದಾಗ ಮಾಡಿದ ಸಾಧನೆ ಮತ್ತು ಅಭಿವೃದ್ಧಿಯ ಕನಸುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಒಳ ಒಪ್ಪಂದ, ಪಕ್ಷಾಂತರದ ಪರಿಣಾಮಗಳನ್ನು ತೆರೆದಿಟ್ಟಿದ್ದಾರೆ.

ಪ್ರ

ಯಾವ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೀರಿ?

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಬಡವರಿಗೆ ನೆರವಾಗಿವೆ. ಇದಕ್ಕೆ ಪ್ರತಿಫಲವಾಗಿ ಮತ ನೀಡುವಂತೆ ಕೇಳುತ್ತಿದ್ದೇನೆ. ಯಾರು ಸಮರ್ಥರೆಂದು ಮೌಲ್ಯಮಾಪನ ಮಾಡಿ, ಸಾಮರ್ಥ್ಯ ಇದ್ದವರನ್ನು ಆಯ್ಕೆ ಮಾಡುವಂತೆ ಮನವಿ ಮಾಡುತ್ತಿದ್ದೇನೆ.

2014–19ರಲ್ಲಿ ಸಂಸದನಾಗಿ ಜಿಲ್ಲೆ, ರಾಜ್ಯ, ದೇಶದ ಧ್ವನಿಯಾಗಿದ್ದೆ. ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯೂ ನೇರವಾಗಿ ಭೇಟಿಯಾಗುವ ಮಟ್ಟಕ್ಕೆ ಲಭ್ಯವಿದ್ದೇನೆ. ಲೋಕಸಭೆಯಲ್ಲಿ ಐದು ವರ್ಷಗಳಲ್ಲಿ 700ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದೇನೆ. 120ಕ್ಕೂ ಹೆಚ್ಚು ಬಾರಿ ಮಾತನಾಡಿದ್ದೇನೆ.

ಪ್ರ

ಪಕ್ಷಾಂತರಿ ಎಂಬ ಅಪವಾದ ಇದೆಯಲ್ಲ?

ನಾನೆಂದೂ ಅಧಿಕಾರಕ್ಕಾಗಿ ಎಂದೂ ಪಕ್ಷಾಂತರ ಮಾಡಿಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ತಪ್ಪಿಸಿದ್ದರಿಂದ ಪಕ್ಷಾಂತರ ಮಾಡಬೇಕಾಯಿತು ಇದು ಸರಿ ಎಂದು ವಾದಿಸುವುದಿಲ್ಲ. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ.

ಪ್ರ

ಕಳೆದ ಚುನಾವಣೆಯಂತೆ ಒಳ ಒಪ್ಪಂದ?

ಈ ಬಾರಿ ಕಾಂಗ್ರೆಸ್‌ನಲ್ಲಿ ಯಾರೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅಂತಹ ಆತಂಕ, ಭಯ ಇಲ್ಲ. ಸಚಿವರು, ಶಾಸಕರು, ಎಲ್ಲಾ ಮುಖಂಡರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರ

ಕಳೆದ ಬಾರಿ ದೇವೇಗೌಡರ ಸೋಲಿಗೆ ಕಾರಣರಾಗಿದ್ದೀರಿ ಎಂಬ ಅಪವಾದ ನಿಮ್ಮ ಮೇಲೆ ಇದೆಯಲ್ಲ?

ಈ ವಿಚಾರ ಕಳೆದ ಐದು ವರ್ಷಗಳಲ್ಲಿ ಎಲ್ಲೂ ಚರ್ಚೆಯಾಗಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದ ನಂತರ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆಗ ನಾನು ಹಾಲಿ ಸಂಸದನಾಗಿದ್ದರೂ (2019) ಗೌಡರ ಸ್ಪರ್ಧೆಗೆ ವಿರೋಧ ಮಾಡಲಿಲ್ಲ. ಗೌಡರು, ಎಚ್.ಡಿ.ಕುಮಾರಸ್ವಾಮಿ ಕರೆಯದಿದ್ದರೂ ಪ್ರಚಾರ ಮಾಡಿದ್ದೇನೆ. ಗೌಡರ ವಿರುದ್ಧ ಪ್ರಚಾರ ಮಾಡಿರುವುದನ್ನು ತೋರಿಸಿದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ಧನಿದ್ದೇನೆ. ರಾಜಕೀಯ ಜೀವನದಿಂದ ದೂರ ಉಳಿಯುತ್ತೇನೆ.

ಪ್ರ

ಕಾಂಗ್ರೆಸ್‌ನವರು ದೇವೇಗೌಡರ ಸಾವು ಬಯಸಿದ್ದಾರೆ ಎಂಬ ಪ್ರಚಾರದ ಬಗ್ಗೆ ಏನು ಹೇಳುತ್ತೀರಿ?

ಪದ ಬಳಕೆಯಲ್ಲಿ, ಮಾತಿನ ಬರದಲ್ಲಿ ವ್ಯತ್ಯಾಸ ಆಗಿರಬಹುದು. ಯಾರೂ ಗೌಡರ ಸಾವು ಬಯಸಿಲ್ಲ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು ಜಾತಿವಾದ ಮಾಡುವ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಹಿರಿಯ ರಾಜಕಾರಣಿ ಬಗ್ಗೆ ಲಘುವಾಗಿ ಯಾರೊಬ್ಬರೂ ಮಾತನಾಡುವುದು ನನಗೂ ಇಷ್ಟವಾಗುವುದಿಲ್ಲ.

ಪ್ರ

ಕಳೆದ ಬಾರಿ ‘ಹೊರಗಿನವರು’ ವಿಚಾರ ಹೆಚ್ಚು ಪ್ರಚಾರವಾಗಿತ್ತು?

ಎಚ್.ಡಿ.ದೇವೇಗೌಡ ಅವರನ್ನು ಹೊರಗಿನವರು ಎಂದು ಬಿಜೆಪಿಯವರು ಹಂಗಿಸಿದರು. ಈ ಬಾರಿಯೂ ಸೋಮಣ್ಣ ಹೊರಗಿನವರು ಎಂಬ ಸತ್ಯವನ್ನು ಮುಚ್ಚಿಡಲಾಗದು. ‘ಹೊರಗಿನವರು’ ವಿಚಾರಕ್ಕೆ ಒತ್ತುಕೊಟ್ಟು ಪ್ರಚಾರ ಮಾಡಿದರು. ಈ ಬಾರಿ ಅವರಿಗೇ ತಿರುಗು ಬಾಣವಾಗಲಿದೆ. ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾದವರು ಕಡಿಮೆ.

ಪ್ರ

ನಿಮ್ಮ ಎದುರಾಳಿ ಮೋದಿ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ?

ಅದು ಅವರ ವೀಕ್‌ನೆಸ್. ಜಿಲ್ಲೆಗೆ ಸೋಮಣ್ಣ ಕೊಡುಗೆ ಏನು? ಆಯ್ಕೆಯಾದರೆ ಏನು ಕೆಲಸ ಮಾಡುತ್ತೇನೆ ಎಂದು ಹೇಳಿ ಅವರು ಮತ ಕೇಳುತ್ತಿಲ್ಲ. ಮೋದಿ ಪ್ರಧಾನಿ ಮಾಡಲು ವೋಟು ಕೊಡಿ ಎನ್ನುತ್ತಿದ್ದಾರೆ. ಹಾಗಾದರೆ ಸಮರ್ಥರಲ್ಲದವರನ್ನು ಆಯ್ಕೆ ಮಾಡಬೇಕೆ? ಅವರಿಗೂ ಜಿಲ್ಲೆಗೂ ಏನು ಸಂಬಂಧ? ಜಿಲ್ಲೆಯಲ್ಲಿ ಬಿಜೆಪಿಗೆ ಸಮರ್ಥ ನಾಯಕರು ಇರಲಿಲ್ಲವೆ?

ಪ್ರ

ಜೆಡಿಎಸ್– ಬಿಜೆಪಿ ಹೊಂದಾಣಿಕೆಯ ಪರಿಣಾಮ?

ಕಳೆದ ಬಾರಿ ಹೊಂದಾಣಿಕೆ (ಕಾಂಗ್ರೆಸ್– ಜೆಡಿಎಸ್) ಮಾಡಿಕೊಂಡು ದೇವೇಗೌಡರು ಸೋಲುವಂತಾಯಿತು. ಗೆಲುವಿಗೆ ಹೊಂದಾಣಿಕೆ ನೆರವಾಗುವುದಿಲ್ಲ. ನಾಯಕರು ಒಟ್ಟಾದರೂ ಕಾರ್ಯಕರ್ತರು ಒಗ್ಗೂಡುವುದಿಲ್ಲ. ಲಾಭಕ್ಕಿಂತ ನಷ್ಟವೇ ಹೆಚ್ಚು. ಈಗಲೂ ಅಂತಹುದೇ ಪರಿಸ್ಥಿತಿ ಇದೆ. ಅದು ನಮ್ಮ ನೆರವಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT