ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಮಹಿಳೆಯರ ಹ್ಯಾಟ್ರಿಕ್‌ ಗೆಲುವು

1978ರ ವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿಗಿ ಹಿಡಿತ; ನಂತರದ ವರ್ಷಗಳಲ್ಲಿ ಬಿಜೆಪಿ ಬಲವರ್ಧನೆ
Last Updated 14 ಏಪ್ರಿಲ್ 2023, 6:09 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ, ಸತತ ಮೂರು ಅವಧಿಗೆ ಮಹಿಳೆಯರನ್ನು ವಿಧಾನಸಭೆಗೆ ಕಳುಹಿಸಿದ ಏಕೈಕ ವಿಧಾನಸಭಾ ಕ್ಷೇತ್ರ ಪುತ್ತೂರು.

2004, 2008 ಹಾಗೂ 2013ರಲ್ಲಿ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಮಹಿಳೆಯರೇ ಆಯ್ಕೆಯಾಗಿದ್ದರು. ಅಲ್ಲದೆ, ಈ ಕ್ಷೇತ್ರದಿಂದ ಸ್ಪರ್ಧಿಸಿದವರಲ್ಲಿ ಹೆಚ್ಚಿನವರಿಗೆ (ವೆಂಕಟ್ರಮಣ ಗೌಡ ಅವರನ್ನು ಬಿಟ್ಟು) ಗರಿಷ್ಠ ಎರಡು ಅವಧಿಗೆ ಮಾತ್ರ ಶಾಸಕರಾಗಲು ಅವಕಾಶ ಸಿಕ್ಕಿರುವುದು ಇಲ್ಲಿನ ವಿಶೇಷ.

1952 ಹಾಗೂ 1957ರ ಚುನಾವಣೆಗಳಲ್ಲಿ ಇದು ದ್ವಿ–ಸದಸ್ಯ ಕ್ಷೇತ್ರವಾಗಿತ್ತು. ಸ್ವಾತಂತ್ರ್ಯಾ ನಂತರದ ಮೊದಲ (1952) ಚುನಾವಣೆಯಲ್ಲಿ ಕೆ. ವೆಂಕಟ್ರಮಣ ಗೌಡ ಹಾಗೂ ಕೆ. ಈಶ್ವರ, 1957ರ ಚುನಾವಣೆಯಲ್ಲಿ ಮತ್ತೆ ಕೆ. ವೆಂಕಟ್ರಮಣ ಗೌಡ ಹಾಗೂ ಸುಬ್ಬಯ್ಯ ನಾಯ್ಕ ಆಯ್ಕೆಯಾಗಿದ್ದರು. ಮೂವರೂ ಕಾಂಗ್ರೆಸ್‌ ಪಕ್ಷದವರೇ.

1978ರವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿಗಿ ಹಿಡಿತವಿತ್ತು. ಕೆ. ರಾಮ ಭಟ್‌ (ಉರಿಮಜಲು) ಅವರ ಪ್ರವೇಶವಾದ ನಂತರ ಕ್ಷೇತ್ರದ ಚಿತ್ರಣ ಬದಲಾಗಲು ಶುರುವಾಯಿತು. ನಂತರದ ವರ್ಷಗಳಲ್ಲಿ ಬಿಜೆಪಿಯ ಬಲವರ್ಧನೆಯಾಗುತ್ತಾ, ಕಾಂಗ್ರೆಸ್‌ಗೆ ಪೈಪೋಟಿ ನೀಡಲಾರಂಭಿಸಿತು. ಈಗಲೂ ಪ್ರಬಲ ಪೈಪೋಟಿ ಇರುವುದು ಈ ಎರಡು ಪಕ್ಷಗಳ ನಡುವೆಯೇ.

1962ರ ಚುನಾವಣೆಯಿಂದ ಪುತ್ತೂರು ಏಕಸದಸ್ಯ ಕ್ಷೇತ್ರವಾಯಿತು. ಆ ವರ್ಷ ಕಾಂಗ್ರೆಸ್‌ನ ಕೆ. ವೆಂಕಟ್ರಮಣಗೌಡ ಪುನಃ (ಮೂರನೇ ಬಾರಿ) ಆಯ್ಕೆಯಾದರು. ಆದರೆ, 1967ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿ. ವಿಠ್ಠಲದಾಸ ಶೆಟ್ಟಿ ಅವರಿಗೆ ಟಿಕೆಟ್‌ ನೀಡಿತು. ಅವರು ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ರಾಮ ಭಟ್‌ ಅವರನ್ನು ಸೋಲಿಸಿದರು.

1972ರಲ್ಲಿ ಕೆ. ರಾಮ ಭಟ್‌ ಅವರು ಭಾರತೀಯ ಜನಸಂಘದಿಂದ ಕಣಕ್ಕೆ ಇಳಿದು, ಕಾಂಗ್ರೆಸ್‌ನ ಎ. ಶಂಕರ ಆಳ್ವ ಅವರ ಎದುರು ಸೋಲಬೇಕಾಯಿತು.

1978ರ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಜನರು ಮೊದಲ ಬಾರಿ ಕಾಂಗ್ರೆಸ್‌ ಕೈಬಿಟ್ಟು ಬದಲಾವಣೆಗೆ ನಾಂದಿ ಹಾಡಿದರು. ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದ ಕೆ. ರಾಮ ಭಟ್‌ ಅವರು ಕಾಂಗ್ರೆಸ್‌ನ ಪಿ. ಈಶ್ವರ ಭಟ್‌ ಅವರ ಎದುರು 642 ಮತಗಳ ಅಂತರದ ಗೆಲುವು ದಾಖಲಿಸಿದರು. ಆ ಚುನಾವಣೆಯಲ್ಲಿ ರಾಮ ಭಟ್‌ ಅವರು ಜನತಾ ಪಕ್ಷದಿಂದ ಕಣಕ್ಕೆ ಇಳಿದಿದ್ದರು.

1983ರ ಚುನಾವಣೆಯಲ್ಲಿ ರಾಮ ಭಟ್‌ ಅವರು ಜನತಾ ಪಕ್ಷದ ಬದಲು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್‌ನ ಬಿ. ಸಂಕಪ್ಪ ರೈ ವಿರುದ್ಧ ಜಯ ಸಾಧಿಸಿದರು. ಆ ಚುನಾವಣೆಯಲ್ಲಿ ಗೆಲುವಿನ ಅಂತರವನ್ನು 1,429 ಮತಗಳಿಗೆ ಹೆಚ್ಚಿಸಿಕೊಂಡಿದ್ದರು. ಆದರೆ, 1985ರ ಚುನಾವಣೆ ಮತ್ತೆ ಕಾಂಗ್ರೆಸ್‌ಗೆ ಶಕ್ತಿ ತುಂಬಿತು.

ಬಿಜೆಪಿಯ ರಾಮ ಭಟ್‌ ಅವರ ವಿರುದ್ಧ ಕಾಂಗ್ರೆಸ್‌ ಹೊಸ ಮುಖ ವಿನಯಕುಮಾರ್‌ ಸೊರಕೆ ಅವರನ್ನು ಕಣಕ್ಕಿಳಿಸಿತ್ತು. ಸೊರಕೆ ಅವರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ರಾಮ ಭಟ್‌ ಅವರನ್ನು ಸೋಲಿಸಿದರು. ಆನಂತರ ರಾಮ ಭಟ್‌ ಅವರು ಕ್ಷೇತ್ರದ ರಾಜಕೀಯದಲ್ಲಿ ಹಿಡಿತ ಸಾಧಿಸಿದ್ದರೂ ಚುನಾವಣಾ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುವಂತಾಯಿತು.

1989ರಲ್ಲಿ ಕಾಂಗ್ರೆಸ್‌ ಪಕ್ಷವು ಮತ್ತೆ ಸೊರಕೆಗೆ ಟಿಕೆಟ್‌ ನೀಡಿದರೆ, ಬಿಜೆಪಿಯು ಡಿ.ವಿ ಸದಾನಂದ ಗೌಡ ಅವರನ್ನು ಕಣಕ್ಕೆ ಇಳಿಸಿತು. ಸೊರಕೆ ಗೆಲುವು ದಾಖಲಿಸಿದರು. ಆದರೆ ಗೆಲುವಿನ ಅಂತರವು 1,561 ಮತಗಳಿಗೆ ಇಳಿದಿತ್ತು. ಇದು ಬಿಜೆಪಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಪರಿಣಾಮ 1994ರ ಚುನಾವಣೆಯಲ್ಲಿ ಸದಾನಂದ ಗೌಡ ಅವರು 404 ಮತಗಳ ಅಂತರದಿಂದ ಸೊರಕೆ ಅವರನ್ನು ಸೋಲಿಸಿದರು. ಇದಾದ ಬಳಿಕ ಸೊರಕೆ ಅವರು ಪುತ್ತೂರು ತ್ಯಜಿಸಿ, ಉಡುಪಿ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಪಡೆದದ್ದು ಇತಿಹಾಸ.

1999ರಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದ ಸದಾನಂದ ಗೌಡ ಅವರು ಕಾಂಗ್ರೆಸ್‌ನ ಸುಧಾಕರ ಶೆಟ್ಟಿ ವಿರುದ್ಧ ಏಳು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು.

2004ರ ಚುನಾವಣೆಯಿಂದ ಪುತ್ತೂರು ಕ್ಷೇತ್ರದಲ್ಲಿ ಮಹಿಳೆಯರ ಪಾರುಪತ್ಯ ಆರಂಭವಾಯಿತು. ಆ ವರ್ಷ ಬಿಜೆಪಿಯು ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಹಿಳೆಯನ್ನು (ಶಕುಂತಳಾ ಶೆಟ್ಟಿ) ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಶಕುಂತಳಾ ಅವರು ಕಾಂಗ್ರೆಸ್‌ನ ಸುಧಾಕರ ಶೆಟ್ಟಿ ಅವರನ್ನು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಆದರೆ ಆ ನಂತರ ಉಂಟಾದ ರಾಜಕೀಯ ಪಲ್ಲಟಗಳಿಂದಾಗಿ 2008ರ ಚುನಾವಣೆಯಲ್ಲಿ ಬಿಜೆಪಿಯು ಅಭ್ಯರ್ಥಿಯನ್ನು ಬದಲಿಸಿತು. ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿ ಬದಲಿಗೆ ಮಲ್ಲಿಕಾ ಪ್ರಸಾದ್‌ ಅವರನ್ನು ಕಣಕ್ಕಿಳಿಸಿತು. ಅವರೂ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಗೆಲುವು ದಾಖಲಿಸಿದರು.

ಬಿಜೆಪಿ ನಿಲುವಿನಿಂದ ಬೇಸರಗೊಂಡಿದ್ದ ಶಕುಂತಳಾ, ಕಾಂಗ್ರೆಸ್‌ ಸೇರ್ಪಡೆಯಾಗಿ 2013ರಲ್ಲಿ ಆ ಪಕ್ಷದಿಂದ ಕಣಕ್ಕಿಳಿದರು. ಬಿಜೆಪಿಯು ಸಂಜೀವ ಮಠಂದೂರು ಅವರನ್ನು ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ ಪುನಃ ಆಯ್ಕೆಯಾಗಿ ಕ್ಷೇತ್ರದಲ್ಲಿ ಮಹಿಳಾ ಪಾರುಪತ್ಯ ಮುಂದುವರಿಸಿದರು. ಆದರೆ 2018ರ ಚುನಾವಣೆಯಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್‌ ತೆಕ್ಕೆಯಿಂದ ಜಾರಿತು. ಸುಮಾರು 15 ವರ್ಷಗಳ ಮಹಿಳಾ ಪಾರುಪತ್ಯ ಕೊನೆಗೊಂಡಿತು. ಸಂಜೀವ ಮಠಂದೂರು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಶಕುಂತಳಾ ಶೆಟ್ಟಿ ಅವರನ್ನು ಸೋಲಿಸಿದರು. ಈ ಬಾರಿ ಹಾಲಿ ಶಾಸಕ ಮಠಂದೂರು ಕಣದಲ್ಲಿಲ್ಲ. ಇವರ ಬದಲಿಗೆ ಆಶಾ ತಿಮ್ಮಪ್ಪ ಗೌಡ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ. ಕಾಂಗ್ರೆಸ್‌ ಪಕ್ಷದ ನಡೆ ಕುತೂಹಲ ಮೂಡಿಸಿದೆ.

ಮತ್ತೆ ಮಹಿಳೆಗೆ ಅವಕಾಶ?

ಪುತ್ತೂರು ಕ್ಷೇತ್ರದಿಂದ 2023ರಲ್ಲಿ ಮತ್ತೆ ಮಹಿಳೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯು ಸಂಜೀವ ಮಠಂದೂರು ಬದಲಿಗೆ, ಆಶಾ ತಿಮ್ಮಪ್ಪಗೌಡ ಅವರಿಗೆ ಟಿಕೆಟ್‌ ಘೋಷಿಸಿದೆ. ಕಾಂಗ್ರೆಸ್‌ನಿಂದ ಶಕುಂತಳಾ ಶೆಟ್ಟಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ ಒಂದುವೇಳೆ ಶಕುಂತಳಾ ಅವರನ್ನು ಕಣಕ್ಕಿಳಿಸಿದರೆ ಇಬ್ಬರು ಮಹಿಳೆಯರ ಮಧ್ಯೆಯೇ ತೀವ್ರ ಪೈಪೋಟಿ ನಡೆಯಬಹುದು. ಸದ್ಯದ ಮಟ್ಟಿಗೆ ಇಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಕಾಣಿಸುತ್ತಿರುವುದರಿಂದ ಯಾರೇ ಗೆದ್ದರೂ ಕ್ಷೇತ್ರ ಪುನಃ ಮಹಿಳೆಯ ಪಾಲಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT