ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಪ್ಪುಳ (ಕೇರಳ)

Published 15 ಏಪ್ರಿಲ್ 2024, 19:23 IST
Last Updated 15 ಏಪ್ರಿಲ್ 2024, 19:23 IST
ಅಕ್ಷರ ಗಾತ್ರ

‘ಪೂರ್ವದ ವೆನಿಸ್‌’ ಎಂದೇ ಪ್ರಸಿದ್ಧವಾಗಿರುವ ಕೇರಳದ ಆಳಪ್ಪುಳ ಲೋಕಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಅಣಿಯಾಗಿದೆ. ಕಾಂಗ್ರೆಸ್‌ ಈ ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್ ಅವರನ್ನು ಕಣಕ್ಕಿಳಿಸಿದರೆ, ಸಿಪಿಎಂ ಕಳೆದ ಬಾರಿ ಇಲ್ಲಿಂದ ಗೆದ್ದಿದ್ದ ಎ.ಎಂ. ಆರಿಫ್‌ ಅವರನ್ನೇ ಮತ್ತೆ ಅಖಾಡಕ್ಕಿಳಿಸಿದೆ. ಬಿಜೆಪಿಯು ಪಕ್ಷದ ಪ್ರಮುಖ ನಾಯಕಿ ಶೋಭಾ ಸುರೇಂದ್ರನ್‌ ಅವರನ್ನು ಸ್ಪರ್ಧಿಯಾಗಿಸಿದೆ. ಮೂರೂ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನೇ ಅಖಾಡಕ್ಕಿಳಿಸಿರುವುದರಿಂದ ಕಣವು ಕುತೂಹಲ ಕೆರಳಿಸಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಗಳ ಅಭ್ಯರ್ಥಿಗಳಿಗೆ ಈ ಹಿಂದೆ ಒಲಿದ ಇತಿಹಾಸ ಈ ಕ್ಷೇತ್ರಕ್ಕಿದೆ. ಹಿನ್ನೀರು, ಸಮುದ್ರ ದಂಡೆ, ಹುರಿ ಹಗ್ಗ ಉದ್ಯಮಕ್ಕೆ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರವೇ ಪ್ರಮುಖ ಚುನಾವಣಾ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯಗಳನ್ನು ಜನರ ಮುಂದಿಡಲು ವೇಣುಗೋಪಾಲ್‌ ಅವರು ಪ್ರಯತ್ನಿಸಿದರೆ, ಸಿಪಿಎಂ ಅಭ್ಯರ್ಥಿಯು ರಾಜ್ಯದ ಆಡಳಿತಾರೂಢ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರೆದುರು ತೆರೆದಿಡುತ್ತಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವೇಣುಗೋಪಾಲ್‌ ಅವರನ್ನು ಗೆಲ್ಲಿಸಿದರೆ ಬಿಜೆಪಿಗೆ ರಾಜ್ಯಸಭೆಯ ಒಂದು ಸೀಟನ್ನು ದಾನವಾಗಿ ಕೊಟ್ಟಂತೆ ಎಂದು ಸಿಪಿಎಂ ಹೇಳುತ್ತಿದೆ. 2019ರಲ್ಲಿ ಎ.ಎಂ. ಆರಿಫ್‌ ಅವರು 10,485 ಮತಗಳ ಅಂತರದಿಂದ ಕಾಂಗ್ರೆಸ್‌ನ ಶಾನಿಮೋಳ್‌ ಉಸ್ಮಾನ್‌ ಅವರನ್ನು ಪರಾಭವಗೊಳಿಸಿದ್ದರು. ಶೋಭಾ ಸುರೇಂದ್ರನ್‌ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT