ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದೇ ಇತಿಹಾಸ

ಇಬ್ಬರಿಗೆ ಕ್ಯಾಬಿನೆಟ್‌ ದರ್ಜೆ, ಮೂವರಿಗೆ ರಾಜ್ಯಗಳ ಉಸ್ತುವಾರಿ, ಅವಧಿ ಪೂರ್ಣಗೊಳಿಸಿದ್ದು ಇಬ್ಬರೇ
Published 30 ಮಾರ್ಚ್ 2024, 6:20 IST
Last Updated 30 ಮಾರ್ಚ್ 2024, 6:20 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಇತಿಹಾಸದಲ್ಲಿ ಈವರೆಗೆ ಐವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಈ ಪೈಕಿ ಪೂರ್ಣಪ್ರಮಾಣದಲ್ಲಿ ಸಚಿವ ಸ್ಥಾನ ನಿಭಾಯಿಸಿದ್ದು ಇಬ್ಬರು ಮಾತ್ರ. ಒಬ್ಬರು ಬಿ.ಎನ್‌.ದಾತಾರ; ಮತ್ತೊಬ್ಬರು ಬಿ.ಶಂಕರಾನಂದ. ಸತತ ನಾಲ್ಕು ಬಾರಿ ಗೆದ್ದರೂ, ಮಂತ್ರಿ ಸ್ಥಾನದಿಂದ ವಂಚಿತರಾದವರ ಹಿನ್ನೆಲೆಯೂ ಇದೇ ಜಿಲ್ಲೆಗಿದೆ.

1957ರಿಂದ ಈವರೆಗೆ 18 ಚುನಾವಣೆಗಳಿಗೆ (ಎರಡು ಉಪಚುನಾವಣೆ ಸೇರಿ) ಬೆಳಗಾವಿ ಲೋಕಸಭೆ ಕ್ಷೇತ್ರ ಸಾಕ್ಷಿಯಾಗಿದೆ. 1957ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಬಿ.ಎನ್‌.ದಾತಾರ ಅವರು, ಜವಾಹರಲಾಲ್‌ ನೆಹರೂ ಸಂಪುಟದಲ್ಲಿ ಗೃಹ ವ್ಯವಹಾರಗಳ ಸಚಿವರಾಗಿದ್ದರು. 1962ರಲ್ಲಿ ಮತ್ತೆ ಗೆದ್ದು ಅವರು ಸಚಿವರಾಗಿದ್ದರು. 1963ರಲ್ಲಿ ಅಕಾಲಿಕವಾಗಿ ನಿಧನರಾದರು.

ಅವರ ನಂತರ ಬೆಳಗಾವಿ ಕ್ಷೇತ್ರಕ್ಕೆ ಸಚಿವ ಸ್ಥಾನ ದಕ್ಕಿದ್ದು ಮೂರೂವರೆ ದಶಕದ ನಂತರ. 1998ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ, ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯ ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ಆದರೆ, ಒಂದು ವರ್ಷಕ್ಕೆ ಆ ಸರ್ಕಾರ ಪತನವಾಯಿತು.

2019ರ ಚುನಾವಣೆಯಲ್ಲಿ ಸತತ ನಾಲ್ಕನೇ ಸಲ ಗೆದ್ದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದರು. 2020ರಲ್ಲಿ ಕೊರೊನಾ ಸೋಂಕಿನಿಂದ ಅವರೂ ಮೃತಪಟ್ಟರು.

‘ರಾಜ್ಯದಲ್ಲಿ ಹಲವು ಜಿಲ್ಲೆಗಳಿಗೆ ಮಂತ್ರಿ ಸ್ಥಾನವೇ ಸಿಕ್ಕಿಲ್ಲ. ಹೀಗಿರುವಾಗ ಬೆಳಗಾವಿ ಜಿಲ್ಲೆಯಲ್ಲಿ ಐವರು ಸಚಿವರಾಗಿರುವುದು ಮತ್ತು ಅದರಲ್ಲೂ ಮಹಿಳೆಯೊಬ್ಬರು ಮಂತ್ರಿ ಸ್ಥಾನ ಅಲಂಕರಿಸಿದ್ದು ವಿಶೇಷ ಸಂಗತಿ’ ಎನ್ನುತ್ತಾರೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ.

ಬಾಬಾಗೌಡ ಪಾಟೀಲ
ಬಾಬಾಗೌಡ ಪಾಟೀಲ
ಸುರೇಶ ಅಂಗಡಿ
ಸುರೇಶ ಅಂಗಡಿ
ರತ್ನಮಾಲಾ ಸವಣೂರ
ರತ್ನಮಾಲಾ ಸವಣೂರ

ವಿವಿಧ ಸಂಪುಟಗಳಲ್ಲಿ ಶಂಕರಾನಂದ ಛಾಪು ಈ ಭಾಗದ ಪ್ರಭಾವಿ ರಾಜಕಾರಣಿ ಬಿ.ಶಂಕರಾನಂದ ಅವರು ಇಂದಿರಾ ಗಾಂಧಿ ಕುಟುಂಬದ ಆಪ್ತರಾಗಿ ಗುರುತಿಸಿಕೊಂಡಿದ್ದರು. 1967ರಿಂದ 1991ರವರೆಗೆ ನಡೆದ ಏಳು ಚುನಾವಣೆಗಳಲ್ಲಿ ಚಿಕ್ಕೋಡಿ (ಮೀಸಲು) ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು ಇಂದಿರಾ ಗಾಂಧಿ ರಾಜೀವ್‌ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್‌ ಅವರ ಸಂಪುಟಗಳಲ್ಲಿ ಧೀರ್ಘ ಅವಧಿಗೆ ಸಚಿವರಾಗಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಶಿಕ್ಷಣ ನೀರಾವರಿ ಮತ್ತು ವಿದ್ಯುತ್‌ ಜಲಸಂಪನ್ಮೂಲ ಕಾನೂನು ಮತ್ತು ನ್ಯಾಯ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.

ಇತಿಹಾಸ ಬರೆದ ರತ್ನಮಾಲಾ ಬೆಳಗಾವಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹಿಳೆಯೂ ಮಂತ್ರಿಯಾಗಿದ್ದು ವಿಶೇಷ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ 1998ರಲ್ಲಿ ಕಣಕ್ಕಿಳಿದಿದ್ದ ಜನತಾ ದಳದ ಅಭ್ಯರ್ಥಿ ರತ್ನಮಾಲಾ ಸವಣೂರ ಅವರು ಸತತ ಏಳು ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಹುರಿಯಾಳು ಶಂಕರಾನಂದ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಐ.ಕೆ.ಗುಜ್ರಾಲ್‌ ನೇತೃತ್ವದ ಸಂಪುಟದಲ್ಲಿ ಕೇಂದ್ರದ ಯೋಜನೆ ಮತ್ತು ಅನುಷ್ಠಾನದ ರಾಜ್ಯ ಸಚಿವೆಯಾಗಿ ಅಲ್ಪಾವಧಿಗೆ ಕೆಲಸ ಮಾಡಿದ್ದರು.

- ಸಿದ್ನಾಳಗೆ ಸಿಗಲಿಲ್ಲ ಮಂತ್ರಿಗಿರಿ ‘1980 1984 1989 ಮತ್ತು 1991ರ ಚುನಾವಣೆಗಳಲ್ಲಿ ಎಸ್‌.ಬಿ.ಸಿದ್ನಾಳ ಅವರು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಆ ಅವಧಿಯಲ್ಲೇ ಚಿಕ್ಕೋಡಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿ.ಶಂಕರಾನಂದ ಮಂತ್ರಿಯಾಗಿದ್ದರಿಂದ ಸಿದ್ನಾಳ ಅವರಿಗೆ ಮಂತ್ರಿ ಸ್ಥಾನವೇ ಸಿಗಲಿಲ್ಲ’ ಎಂಬ ಈಗಲೂ ರಾಜಕೀಯ ವಲಯದಲ್ಲಿ ಕೇಳಿಬರುವ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT