ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಒಕ್ಕಲಿಗರ ಒಲವಿಗೆ ನಾನಾ ಲೆಕ್ಕ

ಗ್ರಾಮೀಣ ಭಾಗಗಳಲ್ಲಿ ಮೂರು ಪಕ್ಷಗಳ ನಾಯಕತ್ವವಹಿಸಿರುವ ಗೌಡರು
Published 13 ಏಪ್ರಿಲ್ 2024, 7:26 IST
Last Updated 13 ಏಪ್ರಿಲ್ 2024, 7:26 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿಕೂಟವು ನಾನಾ ರಾಜಕೀಯ ಲೆಕ್ಕಾಚಾರ, ಆಟಗಳನ್ನು ಹೂಡಿವೆ. 

ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಕಾಂಗ್ರೆಸ್ ಮತ್ತು ‘ಮೈತ್ರಿ’ ಕೂಟದ ಒಕ್ಕಲಿಗ ನಾಯಕರ ನಡುವೆ ವಾಕ್ಸಮರವೂ ಜೋರಾಗಿದೆ.

ಇದು ರಾಜ್ಯ ಮಟ್ಟದ ಮಾತಾದರೆ ಇತ್ತ ಒಕ್ಕಲಿಗ ಸಮುದಾಯದ ಮತಗಳು ಗಣನೀಯವಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿಯೂ ಸಮುದಾಯದ ಮತಗಳ ಧ್ರುವೀಕರಣ ಮತ್ತು ವಿಘಟನೆಯ ಕುರಿತು ತೀವ್ರವಾಗಿಯೇ ಚರ್ಚೆಗಳು ಗರಿಗೆದರಿವೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಬಲಿಜ ಸಮುದಾಯದವರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯದ ಅಂದಾಜು ಆರು ಲಕ್ಷ ಮತದಾರರು ಇದ್ದಾರೆ. ಹೀಗೆ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಹೊಂದಿದ್ದರೂ ಈ ಕ್ಷೇತ್ರದಲ್ಲಿ ಎರಡು ಬಾರಿ ಮಾತ್ರ ಸಮುದಾಯದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ಒಕ್ಕಲಿಗರು ಹೆಚ್ಚಿರುವ ಕಡೆಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ನಾಯಕತ್ವವು ಈ ಸಮುದಾಯದ ನಾಯಕರ ಕೈಯಲ್ಲಿ ಇದೆ.

ಟಿಕೆಟ್ ಘೋಷಣೆ ತರುವಾಯ ಇಬ್ಬರು ಅಭ್ಯರ್ಥಿಗಳು ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಸಹ ಪಡೆದಿದ್ದಾರೆ. ಆ ಚಿತ್ರಗಳನ್ನು ಅಭ್ಯರ್ಥಿಗಳ ಬೆಂಬಲಿಗರು ರಾಜಕೀಯಕ್ಕೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸಹ ಹರಿಬಿಟ್ಟಿದ್ದಾರೆ.

ಪ್ರತಿಷ್ಠೆ: ಮೂರು ಪಕ್ಷಗಳಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಇದ್ದಾರೆ. ತಮ್ಮ ಹಳ್ಳಿ, ಬೂತ್‌ಗಳಲ್ಲಿ ತಮ್ಮ ಪಕ್ಷ ಮತ್ತು ಅಭ್ಯರ್ಥಿ ಪರವಾಗಿ ಹೆಚ್ಚು ಮತಗಳನ್ನು ದೊರಕಿಸಿಕೊಡುವ ಪ್ರತಿಷ್ಠೆ ಸಹ ಇವರದ್ದೇ ಆಗಿದೆ. ಒಕ್ಕಲಿಗ ಸಮುದಾಯದ ಕಾರಣದಿಂದಲೇ ಜೆಡಿಎಸ್ ಇಂದಿಗೂ ಈ ಕ್ಷೇತ್ರದಲ್ಲಿ ತನ್ನದೇ ಆದ ನೆಲೆಗಟ್ಟು ಹೊಂದಿದೆ.

ಕಳೆದ ಲೋಕಸಭೆ  ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿತ್ತು. ಆದರೆ ‘ಮೈತ್ರಿ’ಯ ಮುಖಂಡರ ನಡುವೆ ಬಂಧ ಬಿಗಿಯಾಗಿರಲಿಲ್ಲ. ಈ ಬಾರಿ ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರಂಭದಲ್ಲಿಯೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಇದನ್ನು ಹೊರತುಪಡಿಸಿದರೆ ಜೆಡಿಎಸ್ ನೆಲೆ ಉತ್ತಮವಾಗಿರುವ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರದಲ್ಲಿ ‘ಮೈತ್ರಿ’ಯಲ್ಲಿ ಅಪಸ್ವರ ಸದ್ಯಕ್ಕೆ ಕಂಡು ಬರುತ್ತಿಲ್ಲ. 

ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಸಕರಾದ ಶರತ್ ಬಚ್ಚೇಗೌಡ, ಸುಬ್ಬಾರೆಡ್ಡಿ, ಪುಟ್ಟಸ್ವಾಮಿಗೌಡ ‘ಕೈ’ ಅಭ್ಯರ್ಥಿಗೆ ಬಲ ತುಂಬುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಸಮುದಾಯದ ಮಾಜಿ ಶಾಸಕರು, ಮುಖಂಡರು ಪಕ್ಷದ ಅಭ್ಯರ್ಥಿ ಪರ ಮತಕೇಳುತ್ತಿದ್ದಾರೆ.  

ಹೀಗೆ ‘ಮೈತ್ರಿ’ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಆಯಾ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಸಮುದಾಯದ ಮುಖಂಡರು ನಾನಾ ವಿಚಾರಗಳನ್ನು ಮುಂದಿಟ್ಟು ಒಕ್ಕಲಿಗರ ಮತವನ್ನು ಕೇಳುತ್ತಿದ್ದಾರೆ.  

ಕೈನಿಂದ ಎರಡು ಬಾರಿ ಒಕ್ಕಲಿಗರ ಸ್ಪರ್ಧೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1977ರಿಂದ 2019ರವರೆಗೆ ಒಟ್ಟು 12 ಚುನಾವಣೆಗಳು ನಡೆದಿವೆ. ಇಷ್ಟು ಚುನಾವಣೆಗಳಲ್ಲಿ ಎರಡು ಬಾರಿ ಮಾತ್ರ ಕಾಂಗ್ರೆಸ್ ಪಕ್ಷವು ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. 

1977ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯದ ಎಂ.ವಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿತು. ಕೃಷ್ಣಪ್ಪ ಗೆಲುವು ಸಾಧಿಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ವಿ.ಮುನಿಯಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. 

ಬಿಜೆಪಿಯಿಂದ ಮೂರು ಬಾರಿ ಟಿಕೆಟ್: 2024ರ ಲೋಕಸಭೆ ಚುನಾವಣೆಯೂ ಸೇರಿದಂತೆ ಬಿಜೆಪಿಯು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಮೂರು ಬಾರಿ ಟಿಕೆಟ್ ನೀಡಿದೆ. 2014 ಮತ್ತು 2019ರಲ್ಲಿ ಬಿ.ಎನ್.ಬಚ್ಚೇಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದರು. 2024ರಲ್ಲಿ ಡಾ.ಕೆ.ಸುಧಾಕರ್ ಅಭ್ಯರ್ಥಿ ಆಗಿದ್ದಾರೆ. 2019ರ ಚುನಾವಣೆಯಲ್ಲಿ ಒಕ್ಕಲಿಗ ಮತಗಳ ಕ್ರೋಡೀಕರಣವು ಸಹ ಬಚ್ಚೇಗೌಡ ಅವರ ಗೆಲುವಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. 

ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ‌ಕಾಂಗ್ರೆಸ್‌ನಿಂದ ಒಮ್ಮೆ, ಬಿಜೆಪಿಯಿಂದ ಮತ್ತೊಮ್ಮೆ ಒಕ್ಕಲಿಗರು ಗೆಲುವು ಸಾಧಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT