ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ ‘ಕೊಡು–ಕೊಳ್ಳು’ ಸಂಬಂಧ: ಬಿಜೆಪಿಯತ್ತಲೇ ಬೊಟ್ಟು, ಆದರೆ...

Published 24 ಮಾರ್ಚ್ 2024, 21:20 IST
Last Updated 24 ಮಾರ್ಚ್ 2024, 21:20 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ ಈ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಂಪನ ಸೃಷ್ಟಿಸಲಿರುವ ವಿಷಯಗಳಲ್ಲಿ ಒಂದು ಎಂಬುದು ಖಂಡಿತ ಹೌದು. ಅದು ಚುನಾವಣೆಯನ್ನು ಪ್ರಭಾವಿಸುತ್ತದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ, ಬಹುತೇಕ ಇಲ್ಲ ಎಂಬ ಉತ್ತರವೇ ಸಿಗುತ್ತದೆ. ಈ ವಿಚಾರವು ಮತದಾರನ ನಿರ್ಧಾರವನ್ನು ಪ್ರಭಾವಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ಚುನಾವಣಾ ಬಾಂಡ್‌ ಪ್ರಕರಣವು ದೇಶದ ಪ್ರಮುಖ ರಾಜಕೀಯ ಪಕ್ಷಗಳನ್ನು ಮತದಾರ ನೋಡಬೇಕಾದ ರೀತಿಯನ್ನು ಖಂಡಿತ ಬದಲಿಸುತ್ತಿದೆ ಎಂಬುದನ್ನಂತೂ ತಳ್ಳಿ ಹಾಕಲಾಗದು. ಇದರ ಜತೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಪಾರದರ್ಶಕತೆಯನ್ನು ಮೈಗೂಡಿಸಿಕೊಳ್ಳಲೇಬೇಕಾದ ಅಗತ್ಯವನ್ನು ಈ ಪ್ರಸಂಗ ಒತ್ತಿ ಹೇಳುತ್ತಿದೆ

–––––––––––

ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ಕೇಂದ್ರದ ಬಿಜೆಪಿ ಸರ್ಕಾರವು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಹೇಳಿತ್ತು. ಆದರೆ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಕಾನೂನಿನಲ್ಲೇ ಮಾಹಿತಿಯನ್ನು ಗೋಪ್ಯವಾಗಿ ಇರಿಸಲು ಅವಕಾಶವಿತ್ತು. ಯಾರು, ಯಾರಿಗೆ ಮತ್ತು ಎಷ್ಟು ದೇಣಿಗೆ ನೀಡಿದರು ಎಂಬುದನ್ನು ಬಹಿರಂಗಪಡಿಸಲು ಈ ಕಾನೂನಿನಲ್ಲಿ ಅವಕಾಶವೇ ಇರಲಿಲ್ಲ. ಯಾವುದೇ ರೀತಿಯ ಲೆಕ್ಕ ಪರಿಶೋಧನೆಗೆ ಒಳಪಡಿಸಲು ಸಾಧ್ಯವಿಲ್ಲದಂತೆ ಮತ್ತು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರದಂತೆ ಈ ಕಾನೂನನ್ನು ರೂಪಿಸಲಾಗಿತ್ತು. ಪಾರದರ್ಶಕತೆ ಹೆಸರಿನಲ್ಲಿ ಹೀಗೆ ಅಪಾರದರ್ಶಕವಾಗಿದ್ದ ಕಾರಣದಿಂದಲೇ ಚುನಾವಣಾ ಬಾಂಡ್‌ ಅನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿತು. ಜತೆಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿದವರ ಮತ್ತು ಪಡೆದುಕೊಂಡವರ ಮಾಹಿತಿ ಬಹಿರಂಗಕ್ಕೆ ಆದೇಶಿಸಿತು. ಐದು ವರ್ಷಗಳಿಂದ ನ್ಯಾಯಾಲಯದಲ್ಲಿ ಇದ್ದರೂ, ಈ ವಿಚಾರ ಜನರ ಗಮನ ಸೆಳೆದದ್ದು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರವೇ. 

ಸುಪ್ರೀಂ ಕೋರ್ಟ್‌ ಆದೇಶಿಸಿದಂತೆ ಮಾಹಿತಿಯನ್ನು ಬಹಿರಂಗಪಡಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ತಡ ಮಾಡಿದ್ದು ಮತ್ತು ವಿವಿಧ ನೆಪ ಹೇಳಿದ್ದು ದೇಶದಾದ್ಯಂತ ದೊಡ್ಡ ಸುದ್ದಿಯಾಯಿತು. ಈವರೆಗೆ ಚುನಾವಣಾ ಬಾಂಡ್‌ನತ್ತ ತಿರುಗಿಯೂ ನೋಡದವರು, ಈ ಕಾರಣದಿಂದಲೇ ಅತ್ತ ಗಮನ ಕೇಂದ್ರೀಕರಿಸಿದ್ದು. ಚುನಾವಣಾ ಬಾಂಡ್‌ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಸ್ವಯಂಸೇವಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಇದನ್ನು, ಅವ್ಯವಹಾರ ಅಥವಾ ಭ್ರಷ್ಟಾಚಾರವನ್ನು ಮುಚ್ಚಿಡುವ ಯತ್ನ ಎಂದು ಆರೋಪಿಸಿದರು. ಆ ಆರೋಪಕ್ಕೆ ಇಂಬು ನೀಡುವಂತೆ ಎಸ್‌ಬಿಐ ಮೊದಲ ಕಂತಿನಲ್ಲಿ ಅರೆಬರೆ ಮಾಹಿತಿ ನೀಡಿತು. ಇದು ಚುನಾವಣಾ ಬಾಂಡ್‌ ಮತ್ತು ಆಡಳಿತ ಪಕ್ಷದ ಬಗ್ಗೆ ಇದ್ದ ಸಂದೇಹವನ್ನು ಹೆಚ್ಚಿಸಿದ್ದಂತೂ ಸುಳ್ಳಲ್ಲ. ಈಗ 2019ರ ಏಪ್ರಿಲ್‌ 12ರಿಂದ ಈವರೆಗೆ ನೀಡಲಾದ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ. ಅದರಿಂದ ದೇಶದ ರಾಜಕಾರಣದ ಹಲವು ವಿಷಯಗಳು ಸ್ಪಷ್ಟವಾಗಿವೆ.

ಕೇಂದ್ರದ ಬಿಜೆಪಿ ಸರ್ಕಾರವು ಕಾರ್ಪೊರೇಟ್‌ ಸಂಸ್ಥೆಗಳಿಂದ ನೂರಾರು ಕೋಟಿ ದೇಣಿಗೆ ಪಡೆದುಕೊಂಡು, ಆ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬಹಿರಂಗಕ್ಕೂ ಮುನ್ನ ಬಿಜೆಪಿ ವಿರುದ್ಧ ಇದ್ದ ಪ್ರಮುಖ ಆರೋಪ. ಬಹಿರಂಗವಾದ ಮಾಹಿತಿ ಇದನ್ನು ದೃಢಪಡಿಸಿದೆ. ಅತಿಹೆಚ್ಚು ದೇಣಿಗೆ ನೀಡಿದ ಎರಡನೇ ಕಂಪನಿ ಎಂಇಐಎಲ್‌ ಮತ್ತು ಅದರ ಆಧೀನ ಕಂಪನಿಗಳು ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ₹669 ಕೋಟಿ ದೇಣಿಗೆ ನೀಡಿವೆ. ಈ ಅವಧಿಯಲ್ಲೇ ಈ ಕಂಪನಿಗಳು ದೇಶದಾದ್ಯಂತ ಒಟ್ಟು ₹1.87 ಲಕ್ಷ ಕೋಟಿಯಷ್ಟು ಮೊತ್ತದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿವೆ. ಇದು ಒಂದು ಉದಾಹರಣೆ ಅಷ್ಟೆ. ‘ಇದೇ ಅವಧಿಯಲ್ಲಿ ಒಟ್ಟು ₹3.7 ಲಕ್ಷ ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ 33 ಕಂಪನಿಗಳು ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ₹1,750 ಕೋಟಿ ದೇಣಿಗೆ ಪಡೆದಿವೆ’ ಎಂದು ಎಡಿಆರ್‌ ಹೇಳಿದೆ. ಚುನಾವಣಾ ಬಾಂಡ್‌ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಿ ಆ ಮೊಕದ್ದಮೆಯನ್ನು ಗೆದ್ದ ಎಡಿಆರ್‌, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ವಿಶ್ಲೇಷಿಸಿ ವರದಿ ಪ್ರಕಟಿಸಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದೆ.

ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳ ಮೂಲಕ ಬೆದರಿಸಿ, ಬಿಜೆಪಿಯು ಕಂಪನಿಗಳಿಂದ ದೇಣಿಗೆ ವಸೂಲಿ ಮಾಡಿದೆ ಎಂಬುದು ಬಿಜೆಪಿ ವಿರುದ್ಧದ ಇನ್ನೊಂದು ಆರೋಪ. ಕೇಂದ್ರದ ಈ ತನಿಖಾ ಸಂಸ್ಥೆಗಳ ಮೂಲಕ ಕಂಪನಿಗಳ ಮೇಲೆ ಪ್ರಕರಣ ದಾಖಲಿಸಿ, ಶೋಧ ಕಾರ್ಯ ನಡೆಸಿ ಆನಂತರ ದೇಣಿಗೆ ವಸೂಲಿ ಮಾಡಲಾಗಿದೆ ಎನ್ನಲಾಗುತ್ತಿತ್ತು. ಎಸ್‌ಬಿಐ ಬಹಿರಂಗ ಪಡಿಸಿದ ಮಾಹಿತಿಗಳೂ ತನಿಖಾ ಸಂಸ್ಥೆಗಳ ಶೋಧ ಕಾರ್ಯದ ನಂತರ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂಬುದನ್ನು ದೃಢಪಡಿಸಿದೆ. ಚುನಾವಣಾ ಬಾಂಡ್‌ ಚಾಲ್ತಿಯಲ್ಲಿ ಇದ್ದ ಅವಧಿಯಲ್ಲಿ ದೇಶದ 41 ಕಂಪನಿಗಳ ಮೇಲೆ ಹೀಗೆ ಶೋಧಕಾರ್ಯ ನಡೆಸಲಾಗಿದೆ. ಆ ಶೋಧಕಾರ್ಯದ ನಂತರ ಆ ಕಂಪನಿಗಳು ಬಿಜೆಪಿಗೆ ₹1,698 ಕೋಟಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ನೀಡಿವೆ. ದಾಳಿ ಮತ್ತು ದೇಣಿಗೆ ಮಧ್ಯೆ ಸಂಬಂಧವಿದೆಯೇ ಎಂಬುದನ್ನು ತನಿಖೆಯ ಮೂಲಕ ದೃಢಪಡಿಸಿಕೊಳ್ಳಬೇಕಿದೆ. ಆದರೆ ಬಿಜೆಪಿಯ ಬಗ್ಗೆ ಸಣ್ಣ ಅಪನಂಬಿಕೆಯನ್ನಂತೂ ಇದು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು, ‘ಚಂದಾ ದೋ, ದಂದಾ ಲೋ’ ಅಭಿಯಾನಗಳು ಇದನ್ನೇ ಹೇಳುತ್ತವೆ.

ಎಲ್ಲ ಪಕ್ಷಗಳು ಉತ್ತರ ನೀಡಬೇಕಿದೆ

ಇದಕ್ಕಿಂತಲೂ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಪ್ರಾದೇಶಿಕ ಪಕ್ಷಗಳಿಗೆ ದೊರೆತ ದೇಣಿಗೆ. ಅತಿಹೆಚ್ಚು ದೇಣಿಗೆ ನೀಡಿದ ಫ್ಯೂಚರ್‌ ಗೇಮಿಂಗ್‌ ಆ್ಯಂಡ್‌ ಹೋಟೆಲ್‌ ಸರ್ವಿಸಸ್‌ ಲಿಮಿಟೆಡ್‌ ತಮಿಳುನಾಡಿನ ಡಿಎಂಕೆಗೆ (₹509 ಕೋಟಿ), ಪಶ್ಚಿಮ ಬಂಗಾಳದ ಟಿಎಂಸಿಗೆ (₹540 ಕೋಟಿ), ಆಂಧ್ರಪ್ರದೇಶದ ವೈಎಸ್‌ಆರ್‌ಸಿಗೆ (₹154 ಕೋಟಿ), ಕಾಂಗ್ರೆಸ್‌ಗೆ (₹50 ಕೋಟಿ) ದೇಣಿಗೆ ನೀಡಿದೆ. ಈ ಕಂಪನಿ ಬಿಜೆಪಿಗೂ (₹104 ಕೋಟಿ) ದೇಣಿಗೆ ನೀಡಿದೆಯಾದರೂ, ತನ್ನ ವಿರುದ್ಧ ರಾಜ್ಯಮಟ್ಟದಲ್ಲಿ ವಂಚನೆ ಪ್ರಕರಣಗಳಿದ್ದ ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳಿಗೇ ಹೆಚ್ಚು ದೇಣಿಗೆ ನೀಡಿದೆ. (ಈ ಕಂಪನಿಯಿಂದ ದೇಣಿಗೆ ಪಡೆದಿರುವುದಾಗಿ ತಾನೇ ಘೋಷಿಸಿಕೊಂಡಿದ್ದು ಡಿಎಂಕೆ ಮಾತ್ರ). ₹6,000 ಕೋಟಿ ಮೊತ್ತದ ವಂಚನೆ ಪ್ರಕರಣ ಎದುರಿಸುತ್ತಿರುವ ಕಂಪನಿಯಿಂದ ನೂರಾರು ಕೋಟಿ ದೇಣಿಗೆ ಪಡೆದುಕೊಂಡದ್ದು ಏಕೆ ಎಂಬುದಕ್ಕೆ ಬಿಜೆಪಿಯಾದಿಯಾಗಿ, ಈ ಎಲ್ಲಾ ಪಕ್ಷಗಳು ಉತ್ತರ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT