ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ–ಪ್ಯಾಟ್‌ನಲ್ಲೂ ಮೈಕ್ರೊಕಂಟ್ರೋಲರ್‌: ಚುನಾವಣಾ ಆಯೋಗ

Published 24 ಏಪ್ರಿಲ್ 2024, 21:48 IST
Last Updated 24 ಏಪ್ರಿಲ್ 2024, 21:48 IST
ಅಕ್ಷರ ಗಾತ್ರ

ಮತಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ–ಪ್ಯಾಟ್‌ನಲ್ಲಿನ ಮತಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್‌ 18ರಂದೇ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ಪೀಠವು, ತೀರ್ಪನ್ನು ಕಾಯ್ದಿರಿಸಿತ್ತು. ಆದರೆ, ಈ ಸಂಬಂಧ ಚುನಾವಣಾ ಆಯೋಗವು ನೀಡಿದ್ದ ವಿವರಣೆಯಲ್ಲಿ ಹಲವು ಕೊರತೆಗಳು ಇದ್ದ ಕಾರಣ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ , ದೀಪಂಕರ್ ದತ್ತಾ ಅವರಿದ್ದ ಪೀಠವು ಬುಧವಾರ ಮತ್ತೆ ವಿಚಾರಣೆ ನಡೆಸಿತು. ಅಂದರೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಪೂರ್ಣ ಮಾಹಿತಿ ನೀಡಿರಲಿಲ್ಲ. ಅರೆಮಾಹಿತಿಯ ಆಧಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದೇ ಪೀಠವು ಹೇಳಿತ್ತು. 

ವಿವಿ–ಪ್ಯಾಟ್‌ನಲ್ಲಿ 4 ಎಂಬಿಯಷ್ಟು ಫ್ಲ್ಯಾಷ್‌ ಮೆಮೊರಿ ಅಷ್ಟೇ ಇರುತ್ತದೆ ಎಂದು ಆಯೋಗ ಈ ಹಿಂದಿನ ವಿಚಾರಣೆ ವೇಳೆ ಹೇಳಿತ್ತು. ಈಗ ಪೀಠವು ಮರುಪ್ರಶ್ನಿಸಿದಾಗ, ವಿವಿ–ಪ್ಯಾಟ್‌ನಲ್ಲಿ ಮೈಕ್ರೊ ಕಂಟ್ರೋಲರ್‌ ಸಹ ಇರುತ್ತದೆ ಎಂದು ಹೇಳಿದೆ. ಈಗ ಎರಡನೇ ಬಾರಿಗೆ ವಿಚಾರಣೆ ಪೂರ್ಣಗೊಳಿಸಿರುವ ಪೀಠವು ತೀರ್ಪನ್ನು ಮತ್ತೆ ಕಾಯ್ದಿರಿಸಿದೆ.

ಪ್ರ

ಮೈಕ್ರೊಕಂಟ್ರೋಲರ್‌ ಅನ್ನು ಕಂಟ್ರೋಲ್‌ ಯೂನಿಟ್‌ನಲ್ಲಿ ಅಳವಡಿಸಲಾಗಿದೆಯೇ ಅಥವಾ ವಿವಿ–ಪ್ಯಾಟ್‌ನಲ್ಲಿ ಅಳವಡಿಸಲಾಗಿದೆಯೇ?

ಕಂಟ್ರೋಲ್‌ ಯೂನಿಟ್‌, ಇವಿಎಂ ಹಾಗೂ ವಿವಿ–ಪ್ಯಾಟ್‌ ಮೂರರಲ್ಲಿಯೂ ಪ್ರತ್ಯೇಕ ಮೈಕ್ರೊಕಂಟ್ರೋಲರ್‌ ಅನ್ನು ಅಳವಡಿಸಲಾಗಿದೆ. ಇವುಗಳನ್ನು ಸುರಕ್ಷಿತವಾಗಿ ಇರಿಸಲಾಗಿರುತ್ತದೆ. ಒಂದು ವೇಳೆ ಇವುಗಳನ್ನು ಮುಟ್ಟಲು ಪ್ರಯತ್ನಿಸಿದರೆ, ಇವಿಎಂ ಯಂತ್ರವು ಹಾಳಾಗುತ್ತದೆ.

ಪ್ರ

ಈ ಮೈಕ್ರೊ ಕಂಟ್ರೋಲರ್‌ ಗಳಲ್ಲಿ ಒಂದು ಬಾರಿಯಷ್ಟೇ ಪ್ರೋಗ್ರಾಂಮಿಂಗ್‌ ಮಾಡಲು ಸಾಧ್ಯವೇ?

ಹೌದು. ಈ ಮೂರು ಮೈಕ್ರೊಕಂಟ್ರೋಲರ್‌ ಗಳನ್ನು ಒಂದು ಬಾರಿಯಷ್ಟೇ ಪ್ರೋಗ್ರಾಮಿಂಗ್‌ ಮಾಡಲು ಸಾಧ್ಯ. ಈ ಪ್ರೋಗ್ರಾಂಗಳನ್ನು ಈ ಯಂತ್ರಗಳ ತಯಾರಿಕೆ ವೇಳೆಯಲ್ಲಿಯೇ ಅವಳಡಿಸಲಾಗುತ್ತದೆ. ಅದನ್ನು ಬದಲಿಸಲಾಗದು.

ಪ್ರ

ಮತಎಣಿಕೆ ಬಳಿಕ 30 ದಿನಗಳವರೆಗೆ ಮಾತ್ರ ತಕರಾರು ಅರ್ಜಿಗೆ ಅವಕಾಶ ಇದೆ. ಹೀಗಾಗಿ 45 ದಿನದ ವರೆಗೆ ಇವಿಎಂಗಳನ್ನು ಹಾಗೇ ಇರಿಸುತ್ತೇವೆ ಎಂದು ನೀವು ಹೇಳಿದ್ದೀರಿ. ಆದರೆ ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ ತಕರಾರು ಸಲ್ಲಿಸಲು 45 ದಿನ ಅವಕಾಶವಿದೆ. ನೀವು ಹೆಚ್ಚಿನ ಅವಧಿಯವರೆಗೆ ಇವಿಎಂಗಳನ್ನು ಇರಿಸಬೇಕಲ್ಲವೇ?

ಮತ ಎಣಿಕೆ ಬಳಿಕ 45 ದಿನಗಳ ಒಳಗೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ. ಯಾವುದಾರರೂ ತರಕಾರು ಅರ್ಜಿಗಳು ಬಂದಿವೆಯೇ ಎಂದು 46ನೇ ದಿನ ಮುಖ್ಯ ಚುನಾವಣಾ ಅಧಿಕಾರಿಯು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಅವರಿಗೆ ಪತ್ರ ಬರೆಯುತ್ತಾರೆ. ಯಾವುದೇ ಅರ್ಜಿ ಸಲ್ಲಿಕೆಯಾಗದಿದ್ದಲ್ಲಿ, ರಿಜಿಸ್ಟ್ರಾರ್‌ ಅವರು ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದು, ಸ್ಟ್ರಾಂಗ್‌ ರೂಮ್‌ ಅನ್ನು ತೆರೆಯಲು ಅನುಮತಿ ನೀಡುತ್ತಾರೆ. ಒಂದು ವೇಳೆ ಅರ್ಜಿ ಸಲ್ಲಿಕೆಯಾಗಿದ್ದರೆ, ಇವಿಎಂಗಳನ್ನು ಸೀಲ್‌ ಮಾಡಿ, ಲಾಕ್‌ ಮಾಡಿ ಇಡಲಾಗುತ್ತದೆ.

ಪ್ರ

ಇವಿಎಂಗಳನ್ನು ಸಂರಕ್ಷಿಸಿ ಇಟ್ಟಿರುವಾಗಲೇ ಕಂಟ್ರೋಲ್‌ ಯೂನಿಟ್‌ ಹಾಗೂ ವಿವಿ–ಪ್ಯಾಟ್‌ಗಳನ್ನೂ ಸಂರಕ್ಷಿಸಿ ಇಡಲಾಗುತ್ತದೆಯೇ?

ಕಂಟ್ರೋಲ್‌ ಯೂನಿಟ್‌ ಎನ್ನುವುದು ಮುಖ್ಯವಾಗಿರುವುದರಿಂದ, ಮೊದಲ ಹಂತ ಪರಿಶೀಲನೆಯ ವೇಳೆಯಲ್ಲಿ ಸೀಲ್‌ ಮಾಡಿ ಇಡಲಾಗುತ್ತದೆ. ಅಣಕು ಮತದಾನವಾದ ಬಳಿಕ ಮೂರೂ ಯಂತ್ರಗಳನ್ನು ಸೀಲ್‌ ಮಾಡಿ ಇಡಲಾಗುತ್ತದೆ. ಎರಡನೇ ಹಂತದ ಅಣಕು ಮತದಾನದ ಬಳಿಕ ಮೂರು ಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಒಟ್ಟಿಗೆ ಇಡಲಾಗುತ್ತದೆ. ಮತದಾನ ನಡೆದ ಮೇಲೂ ಸೀಲ್‌ ಮಾಡಿಡಲಾಗುತ್ತದೆ.

‘ಅನುಮಾನದ ಆಧಾರದಲ್ಲಿ ನಿರ್ದೇಶನ ಸಾಧ್ಯವಿಲ್ಲ’
‘ಕೇವಲ ಸಂದೇಹದ ಆಧಾರದ ಮೇಲೆ ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಅಥವಾ ಚುನಾವಣೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಪೀಠವು ಅಭಿಪ್ರಾಯಪಟ್ಟಿದೆ. ಎಡಿಆರ್ ಪರವಾಗಿ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್, ‘ಈ ಮೈಕ್ರೊ ಕಂಟ್ರೋಲರ್‌ಗಳು ಫ್ಲ್ಯಾಷ್‌ ಮೆಮೊರಿಯನ್ನು ಹೊಂದಿದ್ದು, ಅದನ್ನು ಮರು ಪ್ರೋಗ್ರಾಂ ಮಾಡಬಹುದಾಗಿದೆ’ ಎಂದು ಒಂದು ವರದಿಯನ್ನು ಪೀಠದ ಎದುರು ಇರಿಸಿದರು. ಅದನ್ನು ಪರಿಶೀಲಿಸಿದ ಪೀಠವು, ವರದಿಯಲ್ಲಿ ‘ಅನುಮಾನಾಸ್ಪದ’ ಎಂದು ಹೇಳಲಾಗಿದೆ. ಅದನ್ನು ಪರಿಗಣಿಸುವುದು ಸಾಧ್ಯವಿಲ್ಲ. ಆಯೋಗ ನೀಡಿರುವ ತಾಂತ್ರಿಕ ವರದಿಯನ್ನೇ ನಾವು ಪರಿಗಣಿಸಬೇಕಾಗುತ್ತದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಪ್ರಾಧಿಕಾರಕ್ಕೆ, ಹೀಗೇ ಮಾಡಿ ಎಂದು ತಾಕೀತು ಮಾಡಲೂ ಸಾಧ್ಯವಿಲ್ಲ ಎಂದು ಹೇಳಿತು. ಆರ್‌ಟಿಐಗೆ ಮಾಹಿತಿ ನೀಡದ ಬಿಇಎಲ್‌, ಇಸಿಐಎಲ್‌: ಇವಿಎಂ ಮತ್ತು ವಿವಿ–ಪ್ಯಾಟ್‌ಗಳ ತಯಾರಕರು ಮತ್ತು ಪೂರೈಕೆದಾರರ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬಹಿರಂಗಪಡಿಸಲು ಬಿಇಎಲ್‌ ಮತ್ತು ಇಸಿಐಎಲ್‌ ನಿರಾಕರಿಸಿವೆ.
ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT