ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ | ಮಹಾಘಟಬಂಧನ್‌ ಸೀಟು ಹಂಚಿಕೆ: ಆರ್‌ಜೆಡಿಗೆ 26, ಕಾಂಗ್ರೆಸ್‌ಗೆ 9 

Published 29 ಮಾರ್ಚ್ 2024, 14:31 IST
Last Updated 29 ಮಾರ್ಚ್ 2024, 14:31 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ವಿರೋಧ ಪಕ್ಷಗಳ ಮೈತ್ರಿಕೂಟ ‘ಮಹಾಘಟಬಂಧನ್’ ಘೋಷಿಸಿದೆ. ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಬಿಹಾರದ 40 ಲೋಕಸಭಾ ಕ್ಷೇತ್ರಗಳಿಗೆ ಸೀಟು ಹಂಚಿಕೆ ಸೂತ್ರವನ್ನು ‘ಮಹಾಘಟಬಂಧನ್‌’ ಶುಕ್ರವಾರ ಘೋಷಿಸಿತು. ಸಿಪಿಐ (ಎಂಎಲ್‌) ಮೂರು ಸ್ಥಾನಗಳಲ್ಲಿ ಹಾಗೂ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

ಸೀಟು ಹಂಚಿಕೆ ಸೂತ್ರದಂತೆ ಕಾಂಗ್ರೆಸ್‌ಗೆ ಪೂರ್ಣಿಯಾ ಕ್ಷೇತ್ರವನ್ನು ಆರ್‌ಜೆಡಿಗೆ ಬಿಟ್ಟುಕೊಡಬೇಕಾಯಿತು. ರಾಜ್ಯಸಭಾ ಸದಸ್ಯೆ ರಂಜೀತಾ ರಂಜನ್‌ ಅವರ ಪತಿ ಪಪ್ಪು ಯಾದವ್ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪೂರ್ಣಿಯಾ ಕ್ಷೇತ್ರದ ಟಿಕೆಟ್‌ನ ಭರವಸೆ ಕೊಟ್ಟಿದ್ದಾರೆ ಎಂದು ಪಪ್ಪು ಯಾದವ್ ಹೇಳಿದ್ದರು.

‘ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ’ ಎಂದು ಮಾಜಿ ಸಂಸದರೂ ಆಗಿರುವ ಪಪ್ಪು ಯಾದವ್‌ ಸ್ಪಷ್ಟಪಡಿಸಿದ್ದಾರೆ. ‘ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಮತ್ತು ಬಿಹಾರದಲ್ಲಿ ಕಾಂಗ್ರೆಸ್‌ನ ಬಲವೃದ್ಧಿಗೆ ನೆರವಾಗಲು ನಾನು ಬದ್ಧನಾಗಿದ್ದೇನೆ. ಈ ಚುನಾವಣೆಯಲ್ಲಿ ಪೂರ್ಣಿಯಾ ಕ್ಷೇತ್ರದಲ್ಲಿ ನನ್ನ ಪಾತ್ರ ಏನು ಎಂಬುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ನಿರ್ಧರಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಐದು ಬಾರಿಯ ಸಂಸದ ಪಪ್ಪು ಅವರು 2014 ರಲ್ಲಿ ಮಧೇಪುರ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಕೊನೆಯದಾಗಿ ಜಯಿಸಿದ್ದರು. ಪೂರ್ಣಿಯಾ ಕ್ಷೇತ್ರದಿಂದ ಮೂರು ಸಲ ಆಯ್ಕೆಯಾಗಿದ್ದರು. ಈ ಬಾರಿ ಮಧೇಪುರ ಅಥವಾ ಸುಪೌಲ್‌ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಊಹಾಪೋಹಗಳು ಎದ್ದಿದ್ದವು. ಆದರೆ ಸೀಟು ಹಂಚಿಕೆ ಸೂತ್ರದಂತೆ ಈ ಎರಡೂ ಕ್ಷೇತ್ರಗಳು ಆರ್‌ಜೆಡಿ ಪಾಲಾಗಿವೆ.

ಆರ್‌ಜೆಡಿಯು ಪೂರ್ಣಿಯಾ ಕ್ಷೇತ್ರದ ಟಿಕೆಟ್ಅನ್ನು ಬೀಮಾ ಭಾರತಿ ಅವರಿಗೆ ನೀಡಿದೆಯಾದರೂ, ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಮೊದಲ ಹಂತದ ಮತದಾನದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಗೊಂಡ ಮರುದಿನವೇ ‘ಮಹಾಘಟಬಂಧನ್‌’ನ ಸೀಟು ಹಂಚಿಕೆ ಘೋಷಣೆ ಹೊರಬಿದ್ದಿದೆ.

ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಎಲ್ಲ ನಾಲ್ಕೂ ಕ್ಷೇತ್ರಗಳಲ್ಲಿ ಆರ್‌ಜೆಡಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೈತ್ರಿಕೂಟದ ಇತರ ಪಕ್ಷಗಳು ಈ ನಡೆಯನ್ನು ‘ಏಕಪಕ್ಷೀಯ ತೀರ್ಮಾನ’ ಎಂದಿದ್ದವು. 

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಮನೋಜ್‌ ಝಾ ಭಾಗವಹಿಸಿದರು. ಪಕ್ಷದ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT