ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಖಾತೆಗಳ ಬಳಕೆಗೆ ಅನುಮತಿ: ಕಾಂಗ್ರೆಸ್‌ ನಾಯಕರ ಒತ್ತಾಯ

Published 22 ಮಾರ್ಚ್ 2024, 0:22 IST
Last Updated 22 ಮಾರ್ಚ್ 2024, 0:22 IST
ಅಕ್ಷರ ಗಾತ್ರ

ನವದೆಹಲಿ: ತನ್ನ ಬ್ಯಾಂಕ್‌ ಖಾತೆಗಳ ಬಳಕೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ಗುರುವಾರ ಮತ್ತೆ ಆಗ್ರಹಿಸಿದೆ. ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು ಎಂದು ಹೇಳಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸೋನಿಯಾ ಗಾಂಧಿ, ‘ಕಾಂಗ್ರೆಸ್‌ ಪಕ್ಷವನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

‘ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿರುವ ಈ ಕ್ರಮವು ಕಾಂಗ್ರೆಸ್‌ ಪಕ್ಷದ ಮೇಲಷ್ಟೆ ಅಲ್ಲ, ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ’ ಎಂದು ಹೇಳಿದರು.

‘ನಾವು ಈ ದಿನ ಪ್ರಸ್ತಾಪಿಸಿರುವ ವಿಷಯ ಬಹಳ ಗಂಭೀರವಾದುದು. ಕೇಂದ್ರ ಸರ್ಕಾರದ ಈ ನಡೆ ಕಾಂಗ್ರೆಸ್‌ ‍ಪಕ್ಷವನ್ನು ಮಾತ್ರವಲ್ಲ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಬಲವಾದ ಪೆಟ್ಟು ನೀಡಲಿದೆ’ ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗೂ ಎಐಸಿಸಿ ಖಜಾಂಚಿ ಅಜಯ್‌ ಮಾಕನ್ ಸಹ ಇದ್ದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, ‘ಚುನಾವಣೆಯಲ್ಲಿ ಹೋರಾಟ ನಡೆಸುವ ನಮ್ಮ ಸಾಮರ್ಥ್ಯವನ್ನೇ ನಾಶ ಮಾಡಲಾಗಿದೆ. ನಾವು ಚುನಾವಣಾ ಪ್ರಚಾರ ಕಾರ್ಯ ಮಾಡುವ ಶಕ್ತಿ ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

ಆದಾಯ ತೆರಿಗೆ ಬಾಕಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

‘ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಿ, ಅದರಿಂದ ₹115.32 ಕೋಟಿಯಷ್ಟು ಮೊತ್ತವನ್ನು ಒತ್ತಾಯದಿಂದ ಪಡೆದುಕೊಂಡಿರುವ ಬಿಜೆಪಿ, ಆ ಮೂಲಕ ಸಾಮಾನ್ಯ ಜನರು ಕಾಂಗ್ರೆಸ್‌ಗೆ ನೀಡಿದ್ದ ದೇಣಿಗೆಗಳನ್ನು ಲೂಟಿ ಮಾಡಿದೆ’ ಎಂದು ಮಾಕನ್ ಆರೋಪಿಸಿದರು.

ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ
ಭಾರತದಲ್ಲಿ ಈಗ ಪ್ರಜಾಪ್ರಭುತ್ವವೇ ಇಲ್ಲ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ಸಂಪೂರ್ಣ ಸುಳ್ಳು
ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ
ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಬಳಕೆ ಮಾಡುವುದಕ್ಕೆ ಸಾಂವಿಧಾನಿಕ ಸಂಸ್ಥೆಗಳು ಅವಕಾಶ ನೀಡಬೇಕು
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಕಾಂಗ್ರೆಸ್‌ ಹೇಳಿಕೆ ಹಾಸ್ಯಾಸ್ಪದ: ನಡ್ಡಾ
ನವದೆಹಲಿ: ‘ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಿರುವುದರಿಂದ ಹಣಕಾಸು ವಿಚಾರವಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ನ ಹೇಳಿಕೆ ಹಾಸ್ಯಾಸ್ಪದ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಹೇಳಿದ್ದಾರೆ. ತನ್ನ ಬ್ಯಾಂಕ್‌ ಖಾತೆಗಳನ್ನು ಸಕ್ರಿಯಗೊಳಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿರುವುದಕ್ಕೆ ಈ ರೀತಿ ಪ್ರತಿಕ್ರಿಯಿಸಿರುವ ನಡ್ಡಾ ‘ಕಾಂಗ್ರೆಸ್‌ ತನ್ನ ಆಡಳಿತದ ಅವಧಿಯಲ್ಲಿ ಮಾಡಿರುವ ಹಗರಣಗಳಿಂದ ಸಂಗ್ರಹಿಸಿರುವ ಹಣವನ್ನು ಈ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳಲಿ’ ಎಂದು ತಿರುಗೇಟು ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ನಡ್ಡಾ ‘ತಾನು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್‌ ಅಸಂಬದ್ಧವಾಗಿ ದೂಷಣೆ ಮಾಡುತ್ತಿದೆ. ವಾಸ್ತವದಲ್ಲಿ ಆ ಪಕ್ಷ ನೈತಿಕವಾಗಿ ಬೌದ್ಧಿಕವಾಗಿ ದಿವಾಳಿಯಾಗಿದೆಯೇ ಹೊರತು ಆರ್ಥಿಕವಾಗಿ ಅಲ್ಲ’ ಎಂದಿದ್ದಾರೆ. ‘ಈ ಬಾರಿ ಜನರು ಕಾಂಗ್ರೆಸ್‌ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಲಿದ್ದಾರೆ. ಈ ಹೀನಾಯ ಸೋಲಿನ ಭಯದಿಂದ ಪಕ್ಷದ ಉನ್ನತ ನಾಯಕರು ಸುದ್ದಿಗೋಷ್ಠಿ ನಡೆಸಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹರಿಹಾಯ್ದಿದ್ದಾರೆ’ ಎಂದೂ ಹೇಳಿದ್ದಾರೆ. ‘ಕಾಂಗ್ರೆಸ್‌ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ತನ್ನ ಸಂಕಷ್ಟಗಳಿಗೆ ಕೇಂದ್ರೀಯ ಸಂಸ್ಥೆಗಳನ್ನು ದೂಷಿಸುತ್ತಿದ್ದಾರೆ. ಐಟಿಎಟಿ ಅಥವಾ ದೆಹಲಿ ಹೈಕೋರ್ಟ್‌ ಆಗಲಿ ಬಾಕಿ ತೆರಿಗೆಯನ್ನು ಪಾವತಿಸುವ ಮೂಲಕ ನಿಯಮಗಳನ್ನು ಪಾಲಿಸುವಂತೆ ಕಾಂಗ್ರೆಸ್‌ಗೆ ಸೂಚಿಸಿದೆ. ಆದರೆ ಪಕ್ಷ ಆ ಕೆಲಸ ಮಾಡುತ್ತಿಲ್ಲ’ ಎಂದು ನಡ್ಡಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT