ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Work From Jail ಬಗ್ಗೆ ಕೇಳಿದ್ದು ಇದೇ ಮೊದಲು: ಕೇಜ್ರಿವಾಲ್ ಕಾಲೆಳೆದ ರಾಜನಾಥ್

Published 26 ಮೇ 2024, 11:55 IST
Last Updated 26 ಮೇ 2024, 11:55 IST
ಅಕ್ಷರ ಗಾತ್ರ

ಚಂಡೀಗಢ (ಪಂಜಾಬ್‌): ಇದುವರೆಗೆ 'ವರ್ಕ್ ಫ್ರಂ ಹೋಮ್‌' (ಮನೆಯಿಂದ ಕೆಲಸ) ಬಗ್ಗೆ ಗೊತ್ತಿತ್ತು. ಆದರೆ, ಇದೇ ಮೊದಲ ಸಲ 'ವರ್ಕ್ ಫ್ರಂ ಜೈಲ್‌' (ಜೈಲಿನಿಂದ ಕೆಲಸ) ಬಗ್ಗೆ ಕೇಳುತ್ತಿದ್ದೇನೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಹೇಳಿದ್ದಾರೆ. ಆ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಕಾಲೆಳೆದಿದ್ದಾರೆ.

ಸಿಂಗ್ ಅವರು, ಫತೇಗಢ ಸಾಹಿಬ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ಗೆಜ್ಜ ರಾಮ್‌ ವಾಲ್ಮೀಕಿ ಪರ ಖನ್ನಾದಲ್ಲಿ ನಡೆದ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. 'ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಅಸ್ತಿತ್ವದಲ್ಲಿದೆ. ಎಂತಹ ಆಡಳಿತ ನೀಡುತ್ತಿದೆ ಎಂಬ ಬಗ್ಗೆ ನಾನೇನು ಹೆಚ್ಚು ಹೇಳಬೇಕಾಗಿಲ್ಲ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಕೇಜ್ರಿವಾಲ್‌, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಈ ಕುರಿತು ಮಾತನಾಡಿರುವ ಸಿಂಗ್, 'ದೆಹಲಿಯಲ್ಲಿಯೂ ಎಎಪಿ ಸರ್ಕಾರವಿದೆ. ಆದರೆ, ಆ ಪಕ್ಷದ ನಾಯಕ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿದ್ದರು' ಎಂದಿದ್ದಾರೆ.

'ಯಾವುದೇ ನಾಯಕ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದರೆ, ಇತ್ಯರ್ಥವಾಗುವವರೆಗೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನೈತಿಕ ಸ್ಥೈರ್ಯ ಹೊಂದಿರಬೇಕು. ಅದೇ ನೈತಿಕತೆ ಎಂದು ಕೇಜ್ರಿವಾಲ್‌ ಪ್ರತಿಪಾದಿಸುತ್ತಾರೆ. ಆದರೆ, ಅಬಕಾರಿ ಹಗರಣದಲ್ಲಿ ಸ್ವತಃ ಜೈಲಿಗೆ ಸೇರಿದಾಗ, ತಾವು ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಮತ್ತು ಜೈಲಿನಿಂದಲೇ ಕೆಲಸ ಮಾಡುವುದಾಗಿ ಹೇಳುತ್ತಾರೆ. ನಮಗೆ 'ವರ್ಕ್ ಫ್ರಂ ಹೋಮ್‌' ಬಗ್ಗೆ ಗೊತ್ತಿತ್ತು. ಅದರೆ, ಇದೇ ಮೊದಲ ಬಾರಿ 'ವರ್ಕ್ ಫ್ರಂ ಜೈಲ್‌' ಬಗ್ಗೆ ಕೇಳುತ್ತಿದ್ದೇನೆ' ಎಂದು ತಿವಿದಿದ್ದಾರೆ.

ಸುಪ್ರೀಂ ಕೋರ್ಟ್‌, ಕೇಜ್ರಿವಾಲ್‌ ಅವರಿಗೆ ಜೂನ್‌ 1ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಲೋಕಸಭೆ ಚುನಾವಣೆಯ ಕೊನೇ (7ನೇ) ಹಂತದ ಮತದಾನ ಮುಗಿಯುವ ಅದೇ ದಿನ ಮತ್ತೆ ಶರಣಾಗುವಂತೆ ಹಾಗೂ ಜೈಲಿಗೆ ವಾಪಸ್‌ ಆಗುವಂತೆಯೂ ನಿರ್ದೇಶನ ನೀಡಿದೆ.

'ಗುರುವಿನ ಮಾತು ಕೇಳದ ಕೇಜ್ರಿವಾಲ್'
ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟದ ವೇಳೆ ಕೇಜ್ರಿವಾಲ್‌ ಅವರು ಎಎಪಿಯನ್ನು ಕಟ್ಟಿದರು ಎಂದು ಸಿಂಗ್‌ ಕಿಡಿಕಾರಿದ್ದಾರೆ.

'ಹೋರಾಟ ನಡೆಸುತ್ತಿರುವುದು ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರದ ವಿರುದ್ಧ. ಇದರ ಯಶಸ್ಸನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ಪ್ರತಿಭಟನೆಯ ಬಳಿಕ ಯಾವುದೇ ರಾಜಕೀಯ ಪಕ್ಷವನ್ನು ಕಟ್ಟಬಾರದು ಎಂದು ಅಣ್ಣಾ ಹಜಾರೆ ಅವರು ತಮ್ಮೊಂದಿಗೆ ಪಾಲ್ಗೊಂಡಿದ್ದ ಕೇಜ್ರಿವಾಲ್‌ ಅವರಿಗೆ ಸ್ಪಷ್ಟವಾಗಿ ಹೇಳಿದ್ದರು. ಆದರೆ, ಕೇಜ್ರಿವಾಲ್‌ ತಮ್ಮ ಗುರುವಿನ ಮಾತನ್ನು ಕೇಳದೆ ಎಎಪಿಯನ್ನು ಕಟ್ಟಿದರು' ಎಂದು ರಕ್ಷಣಾ ಸಚಿವ ದೂರಿದ್ದಾರೆ.

'ಮುಖ್ಯಮಂತ್ರಿಯಾದರೆ, ಸರ್ಕಾರದ ವಸತಿ ಸೌಕರ್ಯವನ್ನು ಬಳಸುವುದಿಲ್ಲ ಎಂದಿದ್ದ ಕೇಜ್ರಿವಾಲ್‌, ಸಿಎಂ ಆಗುತ್ತಿದ್ದಂತೆಯೇ ತಮ್ಮ ಅಧಿಕೃತ ನಿವಾಸವನ್ನು 'ಶೀಷ್‌ ಮಹಲ್'ಗೆ ಸ್ಥಳಾಂತರಿಸಿದ್ದಾರೆ. ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣ ಬಳಸುತ್ತಿದ್ದಾರೆ' ಎಂದು ಆರೋಪ ಮಾಡಿದ್ದಾರೆ.

'ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಕ್ಕು ಇದೆಯೇ?'
ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಮೇ 13ರಂದು ಹಲ್ಲೆ ನಡೆದಿತ್ತು. ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್‌ ಅವರು ಹಲ್ಲೆ ಮಾಡಿದ್ದರು. ಈ ಸಂಬಂಧ ಮೇ 18ರಂದು ಬಿಭವ್ ಅವರನ್ನು ಬಂಧಿಸಲಾಗಿದೆ.

ಈ ಕುರಿತು ಮಾತನಾಡಿರುವ ಸಿಂಗ್, ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಕ್ಕು ಕೇಜ್ರಿವಾಲ್‌ ಅವರಿಗೆ ಇದೆಯೇ ಎಂದು ಕೇಳಿದ್ದಾರೆ.

'ಮಾಲಿವಾಲ್‌ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಆದರೆ, ಕೇಜ್ರಿವಾಲ್‌ ಅವರು ದೇಶದ ಜನರ ಮುಂದೆ ಭಾಷಣ ಬಿಗಿಯುತ್ತಿದ್ದಾರೆ. ನಾನು ಇಷ್ಟು ಆವೇಶದಿಂದ ಮಾತನಾಡುತ್ತಿರುವುದು ಏಕೆ ಎಂಬುದನ್ನು ನೀವೆಲ್ಲ ಆಲೋಚಿಸಬೇಕು. ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಮಹಿಳೆಯಾದರೂ, ನಮಗೆ ತಾಯಿ ಅಥವಾ ಮಗಳಿಗೆ ಸಮಾನ. ಮಹಿಳೆಯನ್ನು ಗೌರವಿಸುವುದು ದೇಶದ ಸಂಸ್ಕೃತಿ' ಎಂದಿರುವ ಅವರು, ಘಟನೆ ನಡೆದು 15 ದಿನಗಳಾದರೂ ಕೇಜ್ರಿವಾಲ್‌ ಮೌನವಾಗಿದ್ದಾರೆ ಎಂದು ಒತ್ತಿಹೇಳಿದ್ದಾರೆ.

'ನಿಮ್ಮದೇ ಮನೆಯಲ್ಲಿ, ನಿಮ್ಮ ಸಂಸದರ ಮೇಲೆ ಹಲ್ಲೆ ಮಾಡಲಾಗಿದೆ. ಆದರೂ ನೀವು ಮೌನವಾಗಿದ್ದೀರಿ' ಎಂದು ಕೇಜ್ರಿವಾಲ್‌ಗೆ ಹೇಳಿದ್ದಾರೆ. ಹಾಗೆಯೇ, 'ಇಂತಹ ವ್ಯಕ್ತಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಹಕ್ಕು ಇದೆಯೇ ಎಂದು ನಿಮ್ಮನ್ನು ಕೇಳಲು ಬಯಸುತ್ತೇನೆ' ಎಂದು ಜನರನ್ನುದ್ದೇಶಿಸಿ ಗುಡುಗಿದ್ದಾರೆ.

ಇದೇ ವೇಳೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ವಿರುದ್ಧವೂ ಟೀಕಾಪ್ರಹಾರ ನಡೆಸಿದ್ದಾರೆ.

'ಪಂಜಾಬ್‌ ಮುಖ್ಯಮಂತ್ರಿ ಅವರು ಎಎಪಿಯವರು. ಕೇಜ್ರಿವಾಲ್‌ ಅವರನ್ನು ತಮ್ಮ ನಾಯಕ ಎಂದು ಹೇಳುತ್ತಾರೆ. ಅವರ ನಾಯಕರೇ ಹೀಗಿರುವಾಗ, ಮಾನ್‌ ಪರಿಸ್ಥಿತಿ ಹೇಗಿರಬೇಕು. ದೇವರೇ ಬಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳಿಗೆ ಜೂನ್‌ 1ರಂದು, ಕೊನೇ ಹಂತದಲ್ಲಿ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT