ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂಡಿಯಾ' ಸರ್ಕಾರ ರಚನೆಯಾದರೆ 30 ಲಕ್ಷ ಸರ್ಕಾರಿ ಹುದ್ದೆ ಭರ್ತಿ: ರಾಹುಲ್‌ ಗಾಂಧಿ

Published 27 ಮೇ 2024, 15:33 IST
Last Updated 27 ಮೇ 2024, 15:33 IST
ಅಕ್ಷರ ಗಾತ್ರ

ಬಖ್ತಿಯಾರ್‌ಪುರ/ಪಾಲಿಗಂಜ್ (ಬಿಹಾರ): ಲೋಕಸಭಾ ಚುನಾವಣೆ ಬಳಿಕ ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರ ರಚನೆಯಾದರೆ, ಮುಚ್ಚಿರುವ ಎಲ್ಲ ಕೈಗಾರಿಕೆಗಳನ್ನು ತೆರೆಯುತ್ತೇವೆ ಮತ್ತು ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದರು.

ಬಿಹಾರದಲ್ಲಿ ಮಹಾಘಟಬಂಧನ್‌ ಅಭ್ಯರ್ಥಿಗಳ ಪರವಾಗಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ‘ನಾವು ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು ರದ್ದುಪಡಿಸುತ್ತೇವೆ ಮತ್ತು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ತಲಾ ₹8,500 ಜಮೆ ಮಾಡುತ್ತೇವೆ’ ಎಂದು ಪುನರುಚ್ಚರಿಸಿದರು.

‘ದೇಶದಲ್ಲಿ ನಮ್ಮ ಮೈತ್ರಿ ಪರ ಅಲೆ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. 

‘ಮೋದಿ ಅವರು ಅಗ್ನಿಪಥ ಯೋಜನೆ ತಂದು ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡಿದ್ದಾರೆ. ಕೇಂದ್ರವು ಸೇನೆಯಲ್ಲಿ ಅಗ್ನಿವೀರರು ಮತ್ತು ಇತರರು ಎಂದು ಎರಡು ವಿಭಾಗಗಳನ್ನು ಸೃಷ್ಟಿಸಿದೆ. ಅಗ್ನಿವೀರರು ಗಾಯಗೊಂಡರೆ ಅವರಿಗೆ ಪರಿಹಾರ ಸಿಗುವುದಿಲ್ಲ. ಅಲ್ಲದೆ ಅವರು ಹುತಾತ್ಮರಾದರೆ ಹುತಾತ್ಮರ ಸ್ಥಾನಮಾನವೂ ಸಿಗುವುದಿಲ್ಲ. ಏಕೆ ಈ ತಾರತಮ್ಯ’ ಎಂದು ಪ್ರಶ್ನಿಸಿದರು. 

ತನ್ನನ್ನು ದೇವರೇ ಕಳಿಸಿದ್ದಾನೆ ಎನ್ನುವ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಜೂನ್‌ 4ರ ಬಳಿಕ, ಜಾರಿ ನಿರ್ದೇಶನಾಲಯವು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಕೇಳಿದರೆ, ಅವರು ನನಗೇನು ಗೊತ್ತಿಲ್ಲ. ಏಕೆಂದರೆ ನನ್ನನ್ನು ದೇವರೇ ಕಳುಹಿಸಿರುವುದು ಎನ್ನುತ್ತಾರೆ’ ಎಂದರು.

ಮೋದಿ ಅವರು 22 ಶತಕೋಟ್ಯಧಿಪತಿಗಳನ್ನು ಸೃಷ್ಟಿಸಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೋಟಿಗಟ್ಟಲೆ ಕೋಟ್ಯಧಿಪತಿಗಳನ್ನು ಸೃಷ್ಟಿಸಲಿದ್ದೇವೆ ಎಂದು ಹೇಳಿದರು. ತಮ್ಮ ಶತಕೋಟ್ಯಧಿಪತಿ ಸ್ನೇಹಿತರ ₹16 ಲಕ್ಷ ಕೋಟಿ ಸಾಲವನ್ನು ಮೋದಿ ಅವರು ಮನ್ನಾ ಮಾಡಿದ್ದಾರೆ ಎಂದು ಅರೋಪಿಸಿದ ಅವರು, ಇದನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರತಿಪಾದಿಸಿದರು. 

ಈ ಚುನಾವಣೆಯು ದೇಶ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಬಡವರ ಮೀಸಲಾತಿ ಉಳಿಸಲು ನಡೆಯುತ್ತಿದೆ ಎಂದು ಅವರು ಹೇಳಿದರು.

ರಾಹುಲ್‌ ಇದ್ದ ವೇದಿಕೆ ಕುಸಿತ

ಪಾಲಿಗಂಜ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿದ್ದ ವೇದಿಕೆ ತುಸು ಕುಸಿದಿದ್ದರಿಂದ ಕೆಲ ಕ್ಷಣ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮಿಸಾ ಭಾರತಿ (ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಅವರ ಪುತ್ರಿ) ಪರವಾಗಿ ಪ್ರಚಾರ ಮಾಡಲು ರಾಹುಲ್‌ ಗಾಂಧಿ ಅವರು ಸೋಮವಾರ ಪಾಲಿಗಂಜ್‌ಗೆ ಬಂದಿದ್ದರು.

ಮಿಸಾ ಅವರು ರಾಹುಲ್‌ ಅವರ ಕೈಹಿಡಿದು ಆಸನದ ಕಡೆಗೆ ಕರೆದೊಯ್ಯುತ್ತಿದ್ದಾಗ ವೇದಿಕೆ ಅಲ್ಪ ಪ್ರಮಾಣದಲ್ಲಿ ಕುಸಿಯಿತು. ಇದರಿಂದ ವೇದಿಕೆ ಮೇಲಿದ್ದ ರಾಹುಲ್‌ ಸೇರಿದಂತೆ ಹಲವರು ಸಮತೋಲನ ಕಳೆದುಕೊಂಡರು. ಈ ಸಂದರ್ಭದಲ್ಲಿ ರಾಹುಲ್‌ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಮಿಸಾ ಅವರು ಪುನಃ ಸಮತೋಲನ ಕಂಡುಕೊಳ್ಳುವಂತೆ ಮಾಡಿದರು. ಈ ವೇಳೆ ಭದ್ರತಾ ಸಿಬ್ಬಂದಿ ಆತಂಕದಿಂದ ರಾಹುಲ್‌ ಅವರ ರಕ್ಷಣೆಗೆ ಓಡಿಬಂದರು.

‘ಏನೂ ತೊಂದರೆಯಾಗಿಲ್ಲ ನಾನು ಚೆನ್ನಾಗಿಯೇ ಇದ್ದೇನೆ’ ಎಂದು ಅವರಿಗೆ ರಾಹುಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT