ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ಕಾಂಗ್ರೆಸ್‌ನ 'ಘರ್ ಘರ್ ಗ್ಯಾರಂಟಿ' ಅಭಿಯಾನಕ್ಕೆ ಚಾಲನೆ ನೀಡಿದ ಖರ್ಗೆ

Published 3 ಏಪ್ರಿಲ್ 2024, 9:26 IST
Last Updated 3 ಏಪ್ರಿಲ್ 2024, 9:26 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ 'ಘರ್ ಘರ್ ಗ್ಯಾರಂಟಿ' ಅಭಿಯಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು (ಬುಧವಾರ) ಚಾಲನೆ ನೀಡಿದರು.

ಈ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಎಂಟು ಕೋಟಿ ಮನೆಗಳಿಗೆ ತಲುಪಿ ಗ್ಯಾರಂಟಿ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ.

ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕೈಥವಾಡದ ಉಸ್ಮಾನ್‌ಪುರದಿಂದ ಈ ಅಭಿಯಾನವನ್ನು ಮಲ್ಲಿಕಾರ್ಜುನ ಖರ್ಗೆ ಪ್ರಾರಂಭಿಸಿದರು.

'ನಮ್ಮ 'ಪಂಚ ನ್ಯಾಯ ಪಚ್ಚೀಸ್ ಗ್ಯಾರಂಟಿ' ಅನ್ನು ಜನರಿಗೆ ತಲುಪಿಸಲು ಈ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇವೆ. ದೇಶದಾದ್ಯಂತ ಎಂಟು ಕೋಟಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಯೋಜನೆ ಹೊಂದಿದ್ದೇವೆ. ನಾವು ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲಿದ್ದೇವೆ ಎಂದು ಜನರಿಗೆ ತಿಳಿಸಲಿದ್ದೇವೆ' ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್‌ನ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಈ ಕಾರ್ಡ್ ಅನ್ನು ಮನೆ ಮನೆಗಳಿಗೆ ತೆರಳಿ ವಿತರಣೆ ಮಾಡಲಿದ್ದಾರೆ. ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡಲಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

'ನಮ್ಮ ಸರ್ಕಾರ ಸದಾ ಜನಪರ ಕೆಲಸ ಮಾಡಲಿದೆ ಎಂದು ಭರವಸೆ ನೀಡುತ್ತೇವೆ. ಪ್ರಧಾನಿ 'ಮೋದಿ ಕಿ ಗ್ಯಾರಂಟಿ' ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಗ್ಯಾರಂಟಿಗಳು ಎಂದಿಗೂ ಜನರನ್ನು ತಲುಪುವುದಿಲ್ಲ. ಪ್ರಧಾನಿ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಜನರಿಗೆ ಅದು ಸಿಕ್ಕಿಲ್ಲ' ಎಂದು ಅವರು ಆರೋಪಿಸಿದರು.

‘ನಾವು ಏನು ಭರವಸೆ ನೀಡಿದ್ದೇವೋ ಅದನ್ನು ಈಡೇರಿಸುತ್ತೇವೆ ಎಂದು ದೇಶಕ್ಕೆ ಹೇಳಲು ಹೊರಟಿದ್ದೇವೆ’ ಎಂದ ಖರ್ಗೆ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಉದ್ಯೋಗ ಖಾತ್ರಿ, ಆರ್‌ಟಿಐ, ಆಹಾರದ ಹಕ್ಕು, ಶಿಕ್ಷಣ ಹಕ್ಕು ಮುಂತಾಗಿ ಹಲವು ಗ್ಯಾರಂಟಿಗಳನ್ನು ಈಡೇರಿಸಿದ್ದನ್ನು ಮತ್ತು ಭರವಸೆ ನೀಡದೆಯೂ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿದ್ದನ್ನು ಸ್ಮರಿಸಿದರು.

ಕಾಂಗ್ರೆಸ್‌ನ ಐದು ಗ್ಯಾರಂಟಿಗಳು: ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ.

ಹಾಥ್ ಬದ್ಲೇಗಾ ಹಾಲಾತ್: 

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, 1978ರಲ್ಲಿ ಪಕ್ಷವು ಮೊದಲ ಬಾರಿಗೆ ‘ಹಸ್ತ’ ಚಿಹ್ನೆ ಬಳಸಿದ ಸ್ಥಳದಿಂದಲೇ ‘ಮನೆ ಮನೆ ಗ್ಯಾರಂಟಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. 1978ರಲ್ಲಿ ಘೊಂಡಾ ಮಹಾನಗರ ಪಾಲಿಕೆಗೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೊದಲ ಬಾರಿಗೆ ಇದೇ ಸ್ಥಳದಲ್ಲಿ ‘ಹಸ್ತ’ ಚಿಹ್ನೆಯನ್ನು ಬಳಸಿತ್ತು. 1977ರಲ್ಲಿ ಕಾಂಗ್ರೆಸ್ ಹೋಳಾದಾಗ ದೇವರಾಜ ಅರಸು ಅವರ ಬಣವು ‘ಹಸು ಮತ್ತು ಕರು’ ಚಿಹ್ನೆ ಬಳಸಿದರೆ, ಇಂದಿರಾ ಗಾಂಧಿ ‘ಹಸ್ತ’ದ ಚಿಹ್ನೆ ಆಯ್ಕೆ ಮಾಡಿಕೊಂಡಿದ್ದರು.

ಆಸಕ್ತಿಕರ ವಿಚಾರವೇನೆಂದರೆ, ಈ ಬಾರಿ ಕಾಂಗ್ರೆಸ್ ಪ್ರಚಾರದ ಅಡಿಬರಹವು ‘ಹಾಥ್ ಬದ್ಲೇಗಾ ಹಾಲಾತ್’ (ಕೈ ಪರಿಸ್ಥಿತಿಯನ್ನು ಬದಲಿಸಲಿದೆ) ಎಂಬುದಾಗಿದ್ದು, ಅದು ಪಕ್ಷದ ‘ಚಿಹ್ನೆ’ಗೆ ಸಂಬಂಧಿಸಿದಂತೆಯೇ ಇದೆ.             

ಕೇಂದ್ರ ಸರ್ಕಾರ ನಮ್ಮನ್ನು ಭಯಪಡಿಸಲು ಹೊರಟಿದೆ. ಆದಾಯ ತೆರಿಗೆ ಇಲಾಖೆಯು ನಮ್ಮ ಹಣದಲ್ಲಿ ₹135 ಕೋಟಿ ಪಡೆದಿದೆ. ಈ ರೀತಿ ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಸಾಧ್ಯವೇ? 

-ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT