ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗಿ ಬಿದ್ದ ಕ್ಷತ್ರಿಯರು– ಬಿಜೆಪಿಗೆ ತಲೆಬಿಸಿ

‘ಹಿಂದುತ್ವದ ಪ್ರಯೋಗ ಶಾಲೆ’ಯಲ್ಲಿ ಹೋರಾಟದ ಕಿಚ್ಚು
Published 1 ಮೇ 2024, 23:43 IST
Last Updated 1 ಮೇ 2024, 23:43 IST
ಅಕ್ಷರ ಗಾತ್ರ
ಗುಜರಾತ್ ರಾಜ್ಯದ 26 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಲವೂ ಗೆಲುವು ಖಚಿತ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ, ರಜಪೂತರು (ಕ್ಷತ್ರಿಯರ) ಮುನಿಸಿಕೊಂಡಿರುವುದು ಪಕ್ಷಕ್ಕೆ ತಲೆಬಿಸಿ ತಂದೊಡ್ಡಿದೆ. ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವ ಹೊತ್ತಿನಲ್ಲಿ ಕ್ಷತ್ರಿಯರ ಹೋರಾಟದ ನೆಲೆ ವಿಸ್ತರಿಸುತ್ತಿರುವುದು ಬಿಜೆಪಿ ಪಾಲಿಗೆ ಕೆಟ್ಟ ಸುದ್ದಿ. 

ನವದೆಹಲಿ: ‘ಹಿಂದುತ್ವದ ಪ್ರಯೋಗ ಶಾಲೆ’ ಎಂದೇ ಹೆಸರು ಗಳಿಸಿರುವ ರಾಜ್ಯ ಗುಜರಾತ್‌. ನರೇಂದ್ರ ಮೋದಿ ಅವರು ದೇಶದ ಜನರ ಹೃದಯದಲ್ಲಿ ‘ಗುಜರಾತ್‌ ಮಾದರಿ’ ಎಂಬ ಕನಸನ್ನು ಬಿತ್ತಿದ್ದು ಇಲ್ಲಿಯೇ. 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದ ಎಲ್ಲ 26 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. 2022ರ ವಿಧಾನಸಭಾ ಚುನಾವಣೆಯಲ್ಲೂ ಪ್ರಚಂಡ ದಿಗ್ವಿಜಯ ಸಾಧಿಸಿತ್ತು. ಪ್ರಮುಖ ನಾಯಕರ ವಲಸೆ, ನಾಯಕರ ಒಳ ಜಗಳ, ತಳಮಟ್ಟದ ಸಂಘಟನೆ ಕೊರತೆ ಹಾಗೂ ಕೋಮು ಆಧಾರದ ಧ್ರುವೀಕರಣ ರಾಜಕಾರಣದಿಂದ ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಅಕ್ಷರಶಃ ನೆಲೆ ಕಳೆದುಕೊಂಡಿದೆ. ಬಿಜೆಪಿ ಕೂಡ ಸಮಸ್ಯೆಗಳಿಂದ ಮುಕ್ತವಾಗಿಲ್ಲ. 

ರಾಜ್‌ಕೋಟ್‌ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ಪರಶೋತ್ತಮ್‌ ರೂಪಾಲಾ ಅವರು ಕಟ್ಟಾ ಪಾಟೀದಾರರು. ರಜಪೂತ ದೊರೆಗಳ ವಿರುದ್ಧ ರೂಪಾಲಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬುದು ಕ್ಷತ್ರಿಯರ ಕೋಪಕ್ಕೆ ಕಾರಣ. ರಾಜ್‌ಕೋಟ್‌ನಲ್ಲಿ ಮಾರ್ಚ್‌ 22ರಂದು ನಡೆದ ಸಭೆಯಲ್ಲಿ ರೂಪಾಲಾ, ‘ರಜಪೂತ ದೊರೆಗಳು ಬ್ರಿಟಿಷರಿಗೆ ಸಹಕರಿಸಿದ್ದರು ಮತ್ತು ಅವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು’ ಎಂದು ಹೇಳಿಕೆ ನೀಡಿದ್ದರು.

ರೂಪಾಲಾ ವಿರುದ್ಧ ಸಿಡಿದೆದ್ದಿರುವ ಕ್ಷತ್ರಿಯ ಸಮುದಾಯದವರು ಕರ್ಣಿ ಸೇನಾ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮಾತಿಗೆ ರೂಪಾಲಾ ಎರಡು ಬಾರಿ ಕ್ಷಮೆಯನ್ನೂ ಯಾಚಿಸಿದ್ದಾರೆ. ಅವರಿಗೆ ನೀಡಿರುವ ಟಿಕೆಟ್‌ ಅನ್ನು ವಾಪಸ್‌ ಪಡೆಯಬೇಕು ಎಂದು ಕರ್ಣಿ ಸೇನಾ ಪಟ್ಟು ಹಿಡಿದಿದೆ. ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ರಜಪೂತ ನಾಯಕರ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೂ, ಸಮುದಾಯದ ಕೋಪ ತಣ್ಣಗಾಗಿಲ್ಲ. ರಾಜ್ಯದ ವಿವಿಧ ಭಾಗಗಳಿಗೆ ಹೋರಾಟವನ್ನು ವಿಸ್ತರಿಸಿದ್ದಾರೆ. ‍ಪ್ರತಿಭಟನಾ ರ‍್ಯಾಲಿಗಳಿಗೆ ಸಾವಿರಾರು ಜನರು ಸೇರುತ್ತಿದ್ದಾರೆ. ಬಿಜೆಪಿ ವಿರುದ್ಧ ಪ್ರಚಾರಕ್ಕಾಗಿ ಎಲ್ಲ 26 ಲೋಕಸಭಾ ಕ್ಷೇತ್ರಗಳಲ್ಲಿ ‘ಧರ್ಮ ರಥ’ ಹೋರಾಟ ನಡೆಸಲಾಗುವುದು ಎಂದು ಕ್ಷತ್ರಿಯ ಸಂಘಟನೆಗಳು ಎಚ್ಚರಿಕೆ ನೀಡಿದ್ದವು.    

ಕ್ಷತ್ರಿಯರು ಭೂಮಾಲೀಕರು. ರಾಜ್ಯದ ಮತದಾರರಲ್ಲಿ ಸಮುದಾಯದ ಪಾಲು ಶೇ 7ರಷ್ಟಿದೆ. ಈಚಿನ ದಶಕಗಳಿಂದ ಈ ಸಮುದಾಯದವರು ಬಿಜೆಪಿಯ ಬೆನ್ನಿಗೆ ನಿಂತಿದ್ದಾರೆ. ‘ರೂಪಾಲಾ ಅವರು ಕ್ಷಮೆ ಯಾಚಿಸಿದ್ದರಿಂದ ವಿವಾದ ಮುಕ್ತಾಯಗೊಂಡಿದೆ. ರಾಜ್‌ಕೋಟ್‌ನಲ್ಲಿ ಅಭ್ಯರ್ಥಿಯನ್ನು ಬದಲಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂಬುದು ಬಿಜೆಪಿ ನಾಯಕರ ವಾದ. ‘ಜತೆಗೆ, ರಜಪೂತರಲ್ಲಿ ಒಗ್ಗಟ್ಟಿಲ್ಲ. ಸಮುದಾಯದ ಒಂದು ಪಂಗಡದವರಷ್ಟೇ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ಎರಡು ಕ್ಷೇತ್ರಗಳಲ್ಲಿ ಒಬಿಸಿ ಕ್ಷತ್ರಿಯರಿಗೆ ಪಕ್ಷ ಟಿಕೆಟ್‌ ನೀಡಿದೆ. ಅಲ್ಲದೆ, ಹೋರಾಟಕ್ಕೆ ಮಣಿದರೆ ಪಾಟೀದಾರರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಈ ಪ್ರತಿಭಟನೆಯು ಚುನಾವಣೆ ಮೇಲೆ ಭಾರಿ ಪರಿಣಾಮ ಬೀರುವುದಿಲ್ಲ. ಮೋದಿ ಅಲೆಯಲ್ಲಿ ಇದೆಲ್ಲ ತೇಲಿ ಹೋಗುತ್ತದೆ. ಹಾಗಾಗಿ, ಪಕ್ಷದ ವರಿಷ್ಠರು ಹೆಚ್ಚು ಚಿಂತಿಸುತ್ತಿಲ್ಲ’ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ. 

‘2011ರಲ್ಲಿ ವಂಕನೇರ್‌ ರಾಜ ಮನೆತನದವರು ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಮುಂದಿನ ಪ್ರಧಾನಿಯವರಿಗೆ ದೇಶ ಕಾಯುತ್ತಿದೆ ಎಂದೂ ಶ್ಲಾಘಿಸಿದ್ದರು. 18 ರಾಜವಂಶಸ್ಥರು ಮೋದಿ ಅವರನ್ನು ಬೆಂಬಲಿಸಿದ್ದರು. ಬಿಜೆಪಿಯ ಇತ್ತೀಚಿನ ಗೆಲುವಿನಲ್ಲಿ ಸಮುದಾಯದ ಪಾತ್ರವೂ ದೊಡ್ಡದು. ಆದರೆ, ಈಚಿನ ವರ್ಷಗಳಲ್ಲಿ ಕ್ಷತ್ರಿಯರನ್ನು ಬಿಜೆಪಿ ಕಡೆಗಣಿಸುತ್ತಿದೆ. ಪಕ್ಷದಲ್ಲಿ ಪಾಟೀದಾರರಿಗೆ ಅನಗತ್ಯ ಪ್ರಾತಿನಿಧ್ಯ ನೀಡಲಾಗುತ್ತಿದೆ’ ಎಂಬುದು ಕ್ಷತ್ರಿಯ ನಾಯಕರ ಆರೋಪ.    

ನರೇಂದ್ರ ಮೋದಿ
ನರೇಂದ್ರ ಮೋದಿ

ರಕ್ತಸಿಕ್ತ ಅಧ್ಯಾಯದ ಸುತ್ತ ಗುಜರಾತ್‌

ರಾಜಕಾರಣವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ಪಟೇಲರ (ಪಾಟೀದಾರರ) ಪ್ರಾಬಲ್ಯವನ್ನು ಮೊದಲ ಬಾರಿಗೆ ಮುರಿದವರು ಕಾಂಗ್ರೆಸ್‌ನ ಮಾಧವ ಸಿಂಗ್‌ ಸೋಲಂಕಿ ಅವರು. 1980 ಹಾಗೂ 1985ರ ವಿಧಾನಸಭಾ ಚುನಾವಣೆಗಳಲ್ಲಿ ‘ಖಾಮ್‌’ (ಕ್ಷತ್ರಿಯ–ದಲಿತ–ಆದಿವಾಸಿ–ಮುಸ್ಲಿಂ) ಸೂತ್ರದ ಅಳವಡಿಕೆಯಿಂದ ಕಾಂಗ್ರೆಸ್‌ ಅನ್ನು ಅಧಿಕಾರದ ಗದ್ದುಗೆಗೆ ಏರಿಸಿದ್ದರು. ಆದರೆ ಪಟೇಲರು ಮತ್ತಿತರ ಸಮುದಾಯಗಳನ್ನು ಪಕ್ಷ ದೂರ ಮಾಡಿಕೊಂಡಿತ್ತು ಕೂಡಾ. ರಾಜ್ಯದಲ್ಲಿ ಪಾಟೀದಾರರು ಶೇ 18ರಷ್ಟು ಇದ್ದಾರೆ. ಕಾಂಗ್ರೆಸ್‌ನಲ್ಲಿ ಕ್ಷತ್ರಿಯರಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಪಟೇಲರು ಮುನಿಸಿಕೊಂಡಿದ್ದರು. ಇದರಿಂದಾಗಿ ಪಟೇಲರು ಬಿಜೆಪಿ ಕಡೆಗೆ ವಾಲಿದ್ದರು. ಈ ಸಮುದಾಯದ ಮತಗಳ ಕ್ರೋಡೀಕರಣದ ನೆರವಿನಿಂದ ಬಿಜೆಪಿಯು 1995ರಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅಂದಿನಿಂದ ಪಾಟೀದಾರರು ರಾಜ್ಯದಲ್ಲಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಪ್ರಭಾವಶಾಲಿ ಸಮುದಾಯವಾಗಿ ಹೊರ ಹೊಮ್ಮಿದ್ದಾರೆ. ಸರ್ಕಾರ ಹಾಗೂ ಪಕ್ಷದ ಮೇಲೆ ಹಿಡಿತ ಹೊಂದಿದ್ದಾರೆ. ಇನ್ನೊಂದೆಡೆ ಪಕ್ಷ ಹಾಗೂ ಸರ್ಕಾರದಲ್ಲಿ ಕ್ಷತ್ರಿಯರ ಪ್ರಾತಿನಿಧ್ಯ ನಿಧಾನವಾಗಿ ಕಡಿಮೆಯಾಗುತ್ತಾ ಬಂತು. ಇದು ಸಹ ಕ್ಷತ್ರಿಯರ ಅಸಮಾಧಾನಕ್ಕೆ ಕಾರಣ. ರೂಪಾಲಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಮುದಾಯದವರು ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.  ಪಾಟೀದಾರರು ಹಾಗೂ ಕ್ಷತ್ರಿಯರು ಒಕ್ಕಲುತನವನ್ನು ನೆಚ್ಚಿಕೊಂಡವರು. 1950ರ ದಶಕದಲ್ಲಿ ಭೂಸುಧಾರಣೆಯಿಂದಾಗಿ ಹೆಚ್ಚಿನ ಲಾಭ ಪಡೆದವರು ಪಾಟೀದಾರರು. ರಜಪೂತರಿಗೆ ಹೆಚ್ಚಿನ ಅನುಕೂಲವಾಗಲಿಲ್ಲ. ಅಂದಿನಿಂದ ಜಾತಿಗಳ ಪೈಪೋಟಿ ಬೆಳೆದು 80ರ ದಶಕದಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಅದು ಆಗಾಗ ವಿಕೋಪಕ್ಕೆ ಹೋಗುತ್ತಿದೆ. 

ಐದು ರಾಜ್ಯಗಳ ಮೇಲೆ ಪರಿಣಾಮ?

ಉತ್ತರ ಪ್ರದೇಶದ ಪಶ್ಚಿಮ ಭಾಗ ರಾಜಸ್ಥಾನ ಗುಜರಾತ್‌ ಬಿಹಾರ ಹಾಗೂ ಹಿಮಾಚಲ ಪ್ರದೇಶದ ಕೆಲವೊಂದು ಪ್ರದೇಶಗಳಲ್ಲಿ ರಜಪೂತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ರಜಪೂತರ ಪ್ರತಿಭಟನೆ ಬಗ್ಗೆ ಬಿಜೆಪಿಯ ಉನ್ನತ ನಾಯಕರು ಪ್ರತಿಕ್ರಿಯೆಯನ್ನೇ ನೀಡಿಲ್ಲ. ಇದು ಸಮುದಾಯದ ಅಸಮಾಧಾನ ಹೆಚ್ಚಲು ಕಾರಣವಾಗಿದೆ. ಜತೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕ್ಷತ್ರೀಯ ಸಮುದಾಯದವರು ಪ್ರತಿಭಟನೆಗಳನ್ನು ನಡೆಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT