ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಗೆ ಧೋನಿ; ಭಾರತದ ರಾಜಕೀಯಕ್ಕೆ ರಾಹುಲ್ ಗಾಂಧಿ ಉತ್ತಮ ಫಿನಿಷರ್: ರಾಜನಾಥ್

Published 6 ಏಪ್ರಿಲ್ 2024, 14:54 IST
Last Updated 6 ಏಪ್ರಿಲ್ 2024, 14:54 IST
ಅಕ್ಷರ ಗಾತ್ರ

ಭೋಪಾಲ್: ‘ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತ ರಾಜಕೀಯದ ಅತ್ಯುತ್ತಮ ಫಿನಿಷರ್’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಾಲೆಳೆದಿದ್ದಾರೆ.

ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಶನಿವಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು, ‘ಭ್ರಷ್ಟಾಚಾರದೊಂದಿಗೆ ಕಾಂಗ್ರೆಸ್‌ನ ಸಂಬಂಧ ನಿರಂತರ’ ಎಂದಿದ್ದಾರೆ.

‘ಭಾರತದ ರಾಜಕೀಯದಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್‌ ಪ್ರಭಾವ ಹೆಚ್ಚಿತ್ತು. ಆದರೆ ಸದ್ಯ 2ರಿಂದ 3 ಚಿಕ್ಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹೀಗೇಕೆ ಆಯಿತು ಎಂದು ಯೋಚಿಸಿದ ನಾನು, ಈ ಅನಿಸಿಕೆಗೆ ಬಂದಿದ್ದೇನೆ’ ಎಂದ ಅವರು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರ ಯಾರು ಎಂದು ನೆರೆದಿದ್ದ ಜನರಿಗೆ ಕೇಳಿದರು. 

‘ಧೋನಿ’ ಎಂಬ ಉತ್ತರ ಬಂತು. 

‘ಹಾಗೆಯೇ ಭಾರತದ ರಾಜಕೀಯದಲ್ಲಿ ಪಂದ್ಯವನ್ನು ಉತ್ತಮವಾಗಿ ಅಂತ್ಯಗೊಳಿಸುವವರು ಯಾರು ಎಂಬುದನ್ನು ಯೋಚಿಸಿದರೆ, ಅದು ನಿಸ್ಸಂದೇಹವಾಗಿ ರಾಹುಲ್ ಗಾಂಧಿ ಎಂಬುದು ಸ್ಪಷ್ಟ. ಏಕೆಂದರೆ ಬಹಳಷ್ಟು ನಾಯಕರು ಆ ಪಕ್ಷ ತೊರೆದಿದ್ದಾರೆ’ ಎಂದು ರಾಜನಾಥ ಸಿಂಗ್ ಹೇಳಿದರು.

‘ರಾಹುಲ್ ಗಾಂಧಿ ಅವರು ಅತ್ಯಂತ ಹಳೆಯ ಪಕ್ಷವನ್ನು ‘ಮುಗಿಸುವ’ವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಭ್ರಷ್ಟಾಚಾರದೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಕಾಂಗ್ರೆಸ್‌ ಹೊಂದಿದೆ. ಕಾಂಗ್ರೆಸ್‌ನ ಬಹಳಷ್ಟು ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಯಾವುದೇ ಮಂತ್ರಿ ವಿರುದ್ಧ ಇಂಥ ಭ್ರಷ್ಟಾಚಾರದ ಆರೋಪವಿಲ್ಲ’ ಎಂದರು.

ಸಲ್ಮಾನ್ ಖಾನ್ ನಟನೆಯ ಮೇನೇ ಪ್ಯಾರ್‌ ಕಿಯಾ ಚಿತ್ರದ ಗೀತೆ, ‘ತು ಚಲ್ ಮೇ ಆಯೀ’ (ನಾನು ನಿನ್ನನ್ನು ಅನುಸರಿಸುತ್ತೇನೆ) ಗೀತೆಯನ್ನು ಗುನುಗಿದ ಅವರು, ಕಾಂಗ್ರೆಸ್ ಮತ್ತು ಭ್ರಷ್ಟಾಚಾರದ ನಡುವಿನ ಸಂಬಂಧ ಈ ಗೀತೆಯಂತೆಯೇ ಇದೆ’ ಎಂದು ರಾಜನಾಥ ವ್ಯಂಗ್ಯವಾಡಿದರು.

‘ಒಂದು ದೇಶ, ಒಂದು ಚುನಾವಣೆ’ ಪರವಾಗಿ ಮಾತನಾಡಿದ ರಾಜನಾಥ್ ಸಿಂಗ್, ‘ಸಮಯ ಹಾಗೂ ಸಂಪನ್ಮೂಲ ಎರಡನ್ನೂ ಇದು ಉಳಿಸುತ್ತದೆ. ಆದರೆ ಕಾಂಗ್ರೆಸ್ ನಿರಂತರವಾಗಿ ಚುನಾವಣೆ ನಡೆಯುತ್ತಲೇ ಇದ್ದರೆ, ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದೆನ್ನುತ್ತಿದೆ. ಪ್ರತಿ ಐದು ವರ್ಷದಲ್ಲಿ ಚುನಾವಣೆ ಎಂಬುದು ಎರಡು ಬಾರಿಯಷ್ಟೇ ನಡೆಯಬೇಕು. ಒಂದು ಸ್ಥಳೀಯ ಸಂಸ್ಥೆಗಳಿಗೆ, ಮತ್ತೊಂದು ಲೋಕಸಭಾ ಹಾಗೂ ವಿಧಾನಸಭೆಗೆ’ ಎಂದು ಹೇಳಿದರು.

‘2045ರ ಹೊತ್ತಿಗೆ ಭಾರತವು ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ. ಆದರೆ ಆ ಸ್ಥಾನಕ್ಕೆ ಭಾರತ ಎಂದೋ ಏರಬಹುದಾಗಿತ್ತು. ಬಿಜೆಪಿಯು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ನಮ್ಮ ಈ ಹಿಂದಿನ ಎಲ್ಲಾ ಪ್ರಣಾಳಿಕೆಗಳನ್ನೂ ಗಮನಿಸಿ. ನಾವು ಏನು ಹೇಳಿದ್ದೆವೋ, ಅವುಗಳನ್ನು ಈಡೇರಿಸದ್ದೇವೆ. 1984ರಿಂದಲೂ ನಾವು ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎನ್ನುತ್ತಲೇ ಬಂದಿದ್ದೆವು. ಈಗ ಮಂದಿರ ನಿರ್ಮಿಸಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನೂ ಪೂರ್ಣಗೊಳಿಸಿದ್ದೇವೆ. ಅದರಂತೆಯೇ ತ್ರಿವಳಿ ತಲಾಖ್ ಹಾಗೂ ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದೇವೆ’ ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.

‘ಎಲ್ಲಾ ಧರ್ಮಗಳ ತಾಯಂದಿರು ಹಾಗೂ ಮಹಿಳೆಯರ ಪರವಾಗಿ ನಾವು ನಿಂತಿದ್ದೇವೆ. ಅವರ ಘನತೆಯ ಪರವಾಗಿ ಸರ್ಕಾರ ನಿಲ್ಲುತ್ತದೋ, ಬಿಡುತ್ತದೋ ಗೊತ್ತಿಲ್ಲ. ಆದರೆ ಬಿಜೆಪಿ ಸದಾ ಇರಲಿದೆ. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶ ಭಾರತಕ್ಕೂ ಇದೆ. ಆದರೆ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಒಂದೊಮ್ಮೆ ನಡೆಸಿದ್ದೇ ಆದಲ್ಲಿ, ಎಂದಿಗೂ ಬಿಡುವುದಿಲ್ಲ’ ಎಂದು ರಾಜನಾಥ ಸಿಂಗ್ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT