ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ‘ಉಬ್ಬಿಸಿದ ಜಿಡಿಪಿ’ಯ ಲಾಭ–ನಷ್ಟ

ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ನಾಯಕರು ಪದೇ–ಪದೇ ಹೇಳುತ್ತಲೇ ಇದ್ದಾರೆ.
Published 16 ಏಪ್ರಿಲ್ 2024, 1:40 IST
Last Updated 16 ಏಪ್ರಿಲ್ 2024, 1:40 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಲೆಕ್ಕಾಚಾರಗಳ ಪ್ರಕಾರ 2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು (ಒಟ್ಟು ದೇಶೀಯ ಉತ್ಪಾದನೆ), 2022–23ನೇ ಸಾಲಿಗೆ ಹೋಲಿಸಿದರೆ ಶೇ 7.6ರಷ್ಟು ಬೆಳವಣಿಗೆ ಸಾಧಿಸಿತ್ತು. ಅದು ಆ ಅವಧಿಯಲ್ಲಿ ವಿಶ್ವದ ಬಹುತೇಕ ಎಲ್ಲಾ ಆರ್ಥಿಕತೆಗಳಿಗಿಂತ ಹೆಚ್ಚಿನ ಬೆಳವಣಿಗೆ ದರ. ನಮ್ಮ ಆರ್ಥಿಕತೆ ವಿಶ್ವದ ಬೇರೆಲ್ಲಾ ದೇಶಗಳ ಆರ್ಥಿಕತೆಗಿಂತ ಉತ್ತಮ ಸ್ಥಿತಿಯಲ್ಲಿದೆ. ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ನಾಯಕರು ಪದೇ–ಪದೇ ಹೇಳುತ್ತಲೇ ಇದ್ದಾರೆ. ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಹೊರಡಿಸಿದ ಶ್ವೇತಪತ್ರದಲ್ಲೂ ಈ ವಿಚಾರಗಳನ್ನು ಉಲ್ಲೇಖಿಸಿತ್ತು. ಈಗ ಲೋಕಸಭಾ ಚುನಾವಣೆಯ ಪ್ರಚಾರದಲ್ಲೂ ಬಿಜೆಪಿ ನಾಯಕರು ಈ ಮಾತುಗಳನ್ನು ಆಡುತ್ತಿದ್ದಾರೆ. ಹೀಗಾಗಿ ಈ ವಿಚಾರವು ಮತದಾನವನ್ನು ಪ್ರಭಾವಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರವು ಹೇಳುತ್ತಿರುವ ಈ ಅಂಕಿಅಂಶಗಳನ್ನು ಅರ್ಥಶಾಸ್ತ್ರಜ್ಞರು ಅನುಮಾನದಿಂದಲೇ ನೋಡುತ್ತಾರೆ. ಏಕೆಂದರೆ ಜಿಡಿಪಿ ಲೆಕ್ಕಾಚಾರ ವಿಧಾನ ಮತ್ತು ಸೂತ್ರಗಳನ್ನು 2015ರಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಬದಲಾಯಿಸಿತ್ತು. ಈ ವಿಧಾನವನ್ನು ಬದಲಾಯಿಸಿದ್ದು ಮಾತ್ರವಲ್ಲ, ಅದರ ಜತೆಯಲ್ಲಿ ಅದಕ್ಕೂ ಹಿಂದಿನ 15 ವರ್ಷಗಳ ಜಿಡಿಪಿ ಬೆಳವಣಿಗೆ ದರವನ್ನು ಮರುಲೆಕ್ಕಾಚಾರ ಮಾಡಿತು. ಯುಪಿಎ ಅವಧಿಯ ಜಿಡಿಪಿ ಬೆಳವಣಿಗೆ ದರವನ್ನು ಕಡಿಮೆ ಮಾಡಿತು. ಈ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೂ, ಅದು ಹೆಚ್ಚು ಸದ್ದು ಮಾಡಲಿಲ್ಲ.

ಈ ಮೊದಲು ಕೇಂದ್ರ ಸರ್ಕಾರದ್ದೇ ಸಂಸ್ಥೆಗಳು ಒದಗಿಸುತ್ತಿದ್ದ ವಾರ್ಷಿಕ ಕೈಗಾರಿಕಾ ಸಮೀಕ್ಷೆ ವರದಿ ದತ್ತಾಂಶಗಳು, ಕಂಪನಿ ಖಾತಾ ದತ್ತಾಂಶಗಳನ್ನು ಆಧರಿಸಿ ದೇಶದ ಜಿಡಿಪಿಯನ್ನು ಲೆಕ್ಕಹಾಕಲಾಗುತ್ತಿತ್ತು. ಆದರೆ ಬದಲಾದ ವಿಧಾನದಲ್ಲಿ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಒದಗಿಸುವ ಸುಮಾರು 6 ಲಕ್ಷ ಕಂಪನಿಗಳ ಹಣಕಾಸು ದತ್ತಾಂಶಗಳನ್ನು ಆಧರಿಸಿ ಜಿಡಿಪಿಯನ್ನು ಲೆಕ್ಕಹಾಕಲಾಗುತ್ತಿದೆ. ಇದು ದೇಶದ ಆರ್ಥಿಕತೆಯ ಪೂರ್ಣ ಚಿತ್ರಣ ನೀಡುವುದಿಲ್ಲ. ಜತೆಗೆ ನೈಜ ಬೆಲೆಗಿಂತ ಮೌಲ್ಯವರ್ಧಿತ ಬೆಲೆಯನ್ನು ಪರಿಗಣಿಸುವುದರಿಂದ ಜಿಡಿಪಿ ತೀವ್ರಮಟ್ಟದಲ್ಲಿ ಏರಿಕೆಯಾದಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ, ಸರ್ಕಾರ ಹೇಳುತ್ತಿರುವುದಕ್ಕಿಂತ ಅರ್ಧದಷ್ಟು ಕಡಿಮೆ ಮಟ್ಟದಲ್ಲಿ ಜಿಡಿಪಿ ಬೆಳವಣಿಗೆ ಕಾಣುತ್ತಿದೆ. ಜಿಡಿಪಿ ಬೆಳವಣಿಗೆಯನ್ನು ಸರ್ಕಾರವು ಉಬ್ಬಿಸಿ ಹೇಳುತ್ತಿದೆ ಎಂದು ಅರ್ಥಶಾಸ್ತ್ರಜ್ಞ ಅರವಿಂದ ಸುಬ್ರಮಣಿಯನ್‌ ಹೇಳಿದ್ದಾರೆ.

ಆದರೆ ಜಿಡಿಪಿ ಲೆಕ್ಕಾಚಾರದ ಈ ಸಂಕೀರ್ಣತೆಯನ್ನು ಸಾಮಾನ್ಯ ಮತದಾರರಿಗೆ ವಿವರಿಸಿ ಹೇಳುವವರು ಯಾರು? ಸಾಮಾನ್ಯ ಮತದಾರರನ್ನು ಪ್ರಶ್ನಿಸಿದರೆ ದೇಶದ ಜಿಡಿಪಿ ಏರಿಕೆಯಾಗುತ್ತಿದೆ. ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳುತ್ತಾರೆ. ಸರ್ಕಾರ ಹೇಳುವ ಈ ಮಾತು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾರರವರೆಗೆ ತಲುಪುತ್ತಿದೆ. ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿರುವ ಮತ್ತು ಇನ್ನೂ ವಿದ್ಯಾಭ್ಯಾಸದ ಹಂತದಲ್ಲಿರುವ ಮೊದಲ ಬಾರಿಯ ಮತದಾರರು ಇವನ್ನು ನಂಬುವ ಸಾಧ್ಯತೆ ಹೆಚ್ಚೇ ಇದೆ. ಈ ಮತದಾರರು ಜಿಡಿಪಿ ಪ್ರಗತಿ ಸಾಧಿಸುತ್ತಿದೆ ಎಂದೇ ಭಾವಿಸಿ ಮತವನ್ನು ನಿರ್ಣಯಿಸುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಜಿಡಿಪಿ ಪ್ರಗತಿ ಸಾಧಿಸುತ್ತಿದೆ ಎಂಬ ಸರ್ಕಾರದ ಘೋಷಣೆಗಳು ಮತ್ತು ವರದಿಗಳು ಇಷ್ಟರಮಟ್ಟಿಗೆ ಅದರ ಪರವಾಗಿ ಮತದಾನವನ್ನು ಪ್ರಭಾವಿಸುತ್ತದೆ.

ಜಿಡಿ‍ಪಿ ಬೆಳವಣಿಗೆಯಾಗುತ್ತಿದೆಯೇ ಇಲ್ಲವೇ ಎಂಬುದನ್ನು ಹಸಿವಿನ ಸೂಚ್ಯಂಕ, ಜನರ ಜೀವನಮಟ್ಟ ಮತ್ತು ಉದ್ಯೋಗ ಸೃಷ್ಟಿಯು ಸೂಚಿಸುತ್ತದೆ. ಜಿಡಿಪಿ ಹೆಚ್ಚಾಗಿದ್ದರೆ ಹಸಿವಿನ ಸೂಚ್ಯಂಕದಲ್ಲಿ ದೇಶದ ಸ್ಥಿತಿ  ಸುಧಾರಿಸಬೇಕು, ಜನರ ಜೀವನಮಟ್ಟ ಸುಧಾರಿಸಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆದರೆ ಈ ಯಾವುವೂ ವಾಸ್ತವದಲ್ಲಿ ಜಿಡಿಪಿ ಬೆಳವಣಿಗೆಯ ದರದೊಂದಿಗೆ ತಾಳೆಯಾಗುತ್ತಿಲ್ಲ. ಅಂದರೆ ಜಿಡಿಪಿ ಬೆಳವಣಿಗೆ ದರದಲ್ಲಿ ಸಮಸ್ಯೆ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಸರ್ಕಾರದ ಅವಧಿಯಲ್ಲಿ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ರಿಂದ 111ನೇ ಸ್ಥಾನಕ್ಕೆ ಕುಸಿದಿದೆ. ದೇಶದ ಜನರಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರೆಯುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಅದೇ ರೀತಿ ಭಾರತದ ವಿದ್ಯಾವಂತ ಯುವಜನರಲ್ಲಿ ಶೇ 67ರಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಈಚೆಗಷ್ಟೇ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ತನ್ನ ವರದಿಯಲ್ಲಿ ಹೇಳಿತ್ತು. ಜಿಡಿಪಿ ಉತ್ತಮ ಮಟ್ಟದಲ್ಲಿ ಪ್ರಗತಿ ಸಾಧಿಸಿದ್ದರೆ, ಉದ್ಯೋಗ ಸೃಷ್ಟಿಯಾಗಬೇಕಿತ್ತಲ್ಲವೇ? ಬದಲಿಗೆ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಈ ಎಲ್ಲಾ ಅಂಶಗಳು ಪ್ರಸಕ್ತ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. 

ಜಿಡಿಪಿ ಏರಿಕೆಯಾಗಿದೆ ಎಂದು ನಂಬಿ ಮತದಾನ ಮಾಡುವವರ ಪ್ರಮಾಣ ಕಡಿಮೆ ಇದ್ದರೆ, ಆರ್ಥಿಕತೆಯ ಕುಂಠಿತ ಪ್ರಗತಿಯ ಪರಿಣಾಮಗಳನ್ನು ಎದುರಿಸುತ್ತಿರುವವರ ಪ್ರಮಾಣ ಅತ್ಯಧಿಕ. ಆ ಬಹುಜನರು ತಮ್ಮ ಮತನಿರ್ಣಯ ಮಾಡುವಾಗ ಬೆಲೆ ಏರಿಕೆ, ಆಹಾರ ಲಭ್ಯತೆ, ಆರೋಗ್ಯ ಸೇವೆ, ನಿರುದ್ಯೋಗ ಮೊದಲಾದ ಅಂಶಗಳನ್ನು ಪರಿಗಣಿಸುವ ಸಾಧ್ಯತೆ ಇದ್ದೇ ಇರುತ್ತದೆ. ಅವು ಮತದಾನದ ದಿಕ್ಕನ್ನು ಬದಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT