ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ವಿಭಜನೆ ಬಗ್ಗೆ ಮಾತನಾಡುವವರ ಕೈ ಕತ್ತರಿಸಿ: ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ

Published 28 ಮಾರ್ಚ್ 2024, 3:03 IST
Last Updated 28 ಮಾರ್ಚ್ 2024, 3:03 IST
ಅಕ್ಷರ ಗಾತ್ರ

ಭೋಪಾಲ್: ಲೋಕಸಭೆ ಚುನಾವಣೆ ವೇಳೆ ಮತ ವಿಭಜಿಸುವ ಕುರಿತು ಹೇಳಿಕೆ ನೀಡುವವರ ಕೈಗಳನ್ನು ಕತ್ತರಿಸಿ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ಕರೆ ನೀಡಿದ್ದಾರೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಝಬೌ ಜಿಲ್ಲೆಯ ಥಂಡ್ಲಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ವೀರ್ ಸಿಂಗ್‌ ಭುರಿಯಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರು, ರತ್ಲಾಂ–ಝಬೌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿತಾ ಚೌಹಾಣ್‌ ಅವರನ್ನು ಗುರಿಯಾಗಿಸಿ, ಭಿಲಾಲ ಸಮುದಾಯದವರು 'ಕಳ್ಳರು ಮತ್ತು ಡಕಾಯಿತರು' ಎಂದಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ಕಂಟಿಲಾಲ್‌ ಭುರಿಯಾ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೀರ್‌ ಸಿಂಗ್‌, ಝಬೌನಿಂದ 25 ಕಿ.ಮೀ ದೂರದಲ್ಲಿರುವ ಮದರಾನಿಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ್ದರು. ಕಂಟಿಲಾಲ್‌ ಸಹ ಉಪಸ್ಥಿತರಿದ್ದರು.

'ಯಾರಾದರೂ ನಿಮ್ಮನ್ನು ಬೆದರಿಸಲು ಪ್ರಯತ್ನಿಸಿದರೆ, ಅದು ಮಧ್ಯರಾತ್ರಿಯಾದರೂ ಸರಿ ನಮಗೆ ತಿಳಿಸಿ. 500 ಜನರು ಕೂಡಲೇ ಸ್ಥಳಕ್ಕೆ ಬಂದು, ಸಮಸ್ಯೆ ಬಗೆಹರಿಸುತ್ತೇವೆ. ನಾವು ಚುನಾವಣೆಯಲ್ಲಿ ಭಾರೀ ಜಯ ಸಾಧಿಸಬೇಕು ಎಂದು ಪ್ರಮಾಣ ಮಾಡಿ' ಎಂದು ಹೇಳಿದ್ದಾರೆ.

ಮುಂದುವರಿದು, 'ಮತ ಮತ್ತು ಜೈ ಆದಿವಾಸಿ ಯುವ ಶಕ್ತಿ ಸಂಘಟನೆ (ಜೆಎವೈಎಸ್‌) ವಿಭಜನೆ ಕುರಿತು ಮಾತನಾಡುವವರ ಕೈಗಳನ್ನು ಕತ್ತರಿಸಿ. ಅವರನ್ನು ಬಿಡಬೇಡಿ. ಆಗಷ್ಟೇ ನಿಮ್ಮನ್ನು ಗುರುತಿಸುತ್ತಾರೆ' ಎಂದು ಕರೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ (ಅನಿತಾ ಚೌಹಾಣ್‌) ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದಿರುವ ವೀರ್‌ ಸಿಂಗ್‌, 'ಅವರು ಭಿಲಾಲ ಸಮುದಾಯದಕ್ಕೆ ಸೇರಿದವರು. ಕಳ್ಳರು ಮತ್ತು ಡಕಾಯಿತರು. ಅವರು ಅಲಿರಾಜ್‌ಪುರದಿಂದ ಬಂದವರು. ಆಕೆಯ ಬಗ್ಗೆ ಯಾರಿಗೂ ಗೊತ್ತಿ‌ಲ್ಲ. ಆದರೆ, ಭುರಿಯಾ ಅವರು ಮಾಜಿ ಶಾಸಕ ಮತ್ತು ಕೇಂದ್ರದ ಮಾಜಿ ಸಚಿವರು' ಎಂದು ಹೇಳಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಮಾಧ್ಯಮವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ವೀರ್ ಸಿಂಗ್‌, ತಾವು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ಎಲ್ಲ ಸಮುದಾಯದವರನ್ನೂ ಗೌರವಿಸುವುದಾಗಿ ತಿಳಿಸಿದ ಅವರು, ಯಾರನ್ನಾದರೂ ನೋಯಿಸುವಂತಹ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ ಎಂದಿದ್ದಾರೆ. ಆದರೆ, 'ಕೈ ಕತ್ತರಿಸಿ' ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಕರೆ ಕಡಿತಗೊಳಿಸಿದ್ದಾರೆ.

ವೀರ್ ಸಿಂಗ್‌ ಹೇಳಿಕೆ ಬಗ್ಗೆ, ಅನಿತಾ ಅವರ ಪತಿ ಹಾಗೂ ಮಧ್ಯಪ್ರದೇಶ ಅರಣ್ಯ ಸಚಿವ ನಗರ್‌ ಸಿಂಗ್ ಚೌಹಾಣ್‌ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್‌ ಶಾಸಕ, ಭಿಲಾಲ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿರುವ ಅವರು, ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ರತ್ಲಾಂ–ಝಬೌ ಲೋಕಸಭೆ ಕ್ಷೇತ್ರವು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT