ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಮೋದಿ ಹೊರತು ನಾನಲ್ಲ: ಖರ್ಗೆ

ಪ್ರಧಾನಿ ಅಭಿವೃದ್ಧಿಯತ್ತ ಗಮನ ಹರಿಸಲಿ
Published 15 ಮೇ 2024, 15:49 IST
Last Updated 15 ಮೇ 2024, 15:49 IST
ಅಕ್ಷರ ಗಾತ್ರ

ಲಖನೌ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಇತರೆ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದು, ‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಅವರೇ ಹೊರತು ನಾವಲ್ಲ ಎಂದು ಹೇಳಿದ್ದಾರೆ.

ತಾನು ಹಿಂದೂ ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದಕ್ಕೆ ಖರ್ಗೆ ಈ ರೀತಿ ಪ್ರತಿಕ್ರಿಯಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗಿನ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 10 ವರ್ಷಗಳಲ್ಲಿ ತಾವು ಮಾಡಿದ ಕೆಲಸದ ಆಧಾರದ ಮೇಲೆ ಪ್ರಧಾನಿ ಮೋದಿ ಅವರು ಏಕೆ ಮತ ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ಅವರು ಮಟನ್, ದನದ ಮಾಂಸ, ಚಿಕನ್, ಮೀನು ಮತ್ತು ಮಂಗಳಸೂತ್ರ ಎಂದು ಹೇಳಿಲ್ಲವೇ? ಇವು ಅವರದ್ದೇ ಮಾತುಗಳು, ನನ್ನವಲ್ಲ’ ಎಂದು ಹೇಳಿದರು. 

‘ದೇಶದಲ್ಲಿ ನಾಲ್ಕು ಹಂತದ ಮತದಾನ ಮುಗಿದಿವೆ. ‘ಇಂಡಿಯಾ’ ಕೂಟವು ಉತ್ತಮ ಸ್ಥಿತಿಯಲ್ಲಿದೆ. ದೇಶದ ಜನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೀಳ್ಕೊಡಲು ಸಿದ್ಧರಾಗಿದ್ದಾರೆ ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ‘ಇಂಡಿಯಾ’ ಕೂಟವು ಜೂನ್ 4ರಂದು ಹೊಸ ಸರ್ಕಾರ ರಚಿಸಲಿದೆ’ ಎಂದು ನುಡಿದರು.

ಪ್ರಧಾನಿ ಮೋದಿ ಸುಳ್ಳು ಹೇಳುತ್ತಾ ಕಾಂಗ್ರೆಸ್ಅನ್ನು ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ, ‘ರಾಮನ ಹೆಸರನ್ನು ಪ್ರಸ್ತಾಪಿಸಿದ್ದಕ್ಕಿಂತಲೂ ಹೆಚ್ಚು ಬಾರಿ ಅವರು ಕಾಂಗ್ರೆಸ್, ಸೋನಿಯಾ, ರಾಹುಲ್ ಹೆಸರನ್ನು ಮತ್ತು ಉಳಿದ ಸಮಯದಲ್ಲಿ ಪ್ರಿಯಾಂಕಾ ಹಾಗೂ ನನ್ನ ಹೆಸರು ಪ್ರಸ್ತಾಪಿಸಿ, ನಿಂದಿಸಿದ್ದಾರೆ’ ಎಂದು ಟೀಕಿಸಿದರು.

ಅಖಿಲೇಶ್ ಯಾದವ್ ಮಾತನಾಡಿ, ‘ಬಿಜೆಪಿಯು ನಕಾರಾತ್ಮಕ ನಿರೂಪಣೆಯಲ್ಲಿ ತೊಡಗಿದೆ. ಅವರ ಭರವಸೆಗಳೆಲ್ಲವೂ ಸುಳ್ಳು ಎನ್ನುವುದು ಹಿಂದಿರುಗಿ ನೋಡಿದರೆ ತಿಳಿಯುತ್ತದೆ. ಸೋಲಿನ ಸುಳಿವು ದೊರೆತ ಬಿಜೆಪಿ ಮಂದಿಯು ಅವರ ಭಾಷೆ ಮತ್ತು ವರಸೆ ಬದಲಾಯಿಸಿಕೊಂಡಿದ್ದಾರೆ. ನಕಾರಾತ್ಮಕ ರಾಜಕಾರಣದ ಕಾಲ ಮುಗಿದಿದೆ. ದೇಶದ ಜನ ಬದಲಾವಣೆ ಬಯಸಿದ್ದು, ಅದು ಜೂನ್ 4ರಂದು ಸಾಕಾರವಾಗಲಿದೆ’ ಎಂದರು.

ಮೋದಿ ರೋಗಗ್ರಸ್ತ ಸುಳ್ಳುಗಾರ: ‘ಮೋದಿ ಗ್ಯಾರಂಟಿ ಸಂಪೂರ್ಣ ವಿಫಲವಾಗಿದ್ದು, ‘ಚಾರ್‌ಸೌ ಪಾರ್’ ಸದ್ದಿಲ್ಲದೇ ಸಮಾಧಿಯಾಗಿದೆ. ಹೀಗಾಗಿ ನಿರ್ಗಮಿಸಲಿರುವ ಪ್ರಧಾನಿಗೆ ಹಿಂದು–ಮುಸ್ಲಿಂ ರಾಜಕಾರಣ ಹೊರತುಪಡಿಸಿ ಬೇರೆ ಕಾರ್ಯಸೂಚಿಯೇ ಇಲ್ಲ’ ಎಂದು ‌ಮೋದಿ ವಿರುದ್ಧ ಕಾಂಗ್ರೆಸ್ ಬುಧವಾರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ನಿರ್ಗಮಿಸಲಿರುವ ಪ್ರಧಾನಿಯು ಒಬ್ಬ ರೋಗಗ್ರಸ್ತ ಸುಳ್ಳುಗಾರ’ ಎಂದು ಟೀಕಿಸಿದ್ದಾರೆ.

‘ತನಗೆ ಹಿಂದು ಮುಸ್ಲಿಂ ರಾಜಕೀಯ ಗೊತ್ತಿಲ್ಲ ಎನ್ನುವ ಇತ್ತೀಚಿನ ಹೇಳಿಕೆ ಮೂಲಕ ಅವರು ತಮ್ಮ ದಿನನಿತ್ಯದ ಸುಳ್ಳಿನ ಹೊಸ ಆಳವನ್ನು ತಲುಪಿದ್ದಾರೆ. 2024ರ ಏಪ್ರಿಲ್ 19ರಿಂದ ಮೋದಿ ಅವರು ಕೋಮುವಾದಿ ಭಾಷೆ, ಚಿಹ್ನೆ ಮತ್ತು ಪ್ರಸ್ತಾಪಗಳನ್ನು ಬಳಸಿರುವುದು ಸಾರ್ವಜನಿಕ ದಾಖಲೆಯಲ್ಲಿದೆ’ ಎಂದು ಉಲ್ಲೇಖಿಸಿದ್ದಾರೆ.

ಮೋದಿ ದೇಶದ 140 ಕೋಟಿ ಜನರನ್ನೂ ಒಂದೇ ಎಂದು ಪರಿಗಣಿಸಿದವರು. ಅವರ ವಿರುದ್ಧ ‘ಹಿಂದೂ–ಮುಸ್ಲಿಂ’ ಆರೋಪ ಮಾಡಿದ್ದು ವಿರೋಧ ಪಕ್ಷದವರು.
-ಶಾನವಾಜ್ ಹುಸೈನ್, ಬಿಜೆಪಿ ವಕ್ತಾರ
ಮೋದಿ ಅವರು ತಮ್ಮ ಒಳಗೊಳ್ಳುವಿಕೆಯ ಆಡಳಿತದಿಂದ ಒಂದು ವರ್ಗದ ಓಲೈಕೆಯನ್ನು ಅಂತ್ಯಗೊಳಿಸಿದರು. ಅವರ ಯೋಜನೆಗಳಿಂದ ಎಲ್ಲ ಜಾತಿ ವರ್ಗ ಧರ್ಮದವರೂ ಅನುಕೂಲ ಪಡೆದಿದ್ದಾರೆ.
-ಮುಖ್ತಾರ್ ಅಬ್ಬಾಸ್ ನಖ್ವಿ, ಮಾಜಿ ಕೇಂದ್ರ ಸಚಿವ

ಮೋದಿ ಹೇಳಿದ್ದೇನು?

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ‘ಹಿಂದೂ ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಜೀವನದಲ್ಲಿರಲು ಯೋಗ್ಯನಲ್ಲ’ ಎಂದು ಹೇಳಿದ್ದರು. ‘ನನಗೆ ಆಘಾತವಾಗಿದೆ. ಹೆಚ್ಚು ಮಕ್ಕಳು ಇರುವವರ ಬಗ್ಗೆ ಯಾರಾದರೂ ಮಾತನಾಡಿದರೆ ಅದು ಮುಸ್ಲಿಮರ ಬಗ್ಗೆ ಆಡಿದ ಮಾತು ಎಂದು ನಿಮಗೆ ಹೇಳಿದ್ದು ಯಾರು? ಮುಸ್ಲಿಮರ ಬಗ್ಗೆ ಏಕೆ ಅಷ್ಟು ಅನ್ಯಾಯ? ಬಡ ಕುಟುಂಬಗಳಲ್ಲಿನ ಪರಿಸ್ಥಿತಿಯೂ ಹಾಗೆಯೇ ಇರುತ್ತದೆ. ಸಾಮಾಜಿಕ ವಲಯ ಯಾವುದೇ ಇರಲಿ ಎಲ್ಲಿ ಬಡತನ ಇರುತ್ತದೆಯೋ ಅಲ್ಲಿ ಹೆಚ್ಚು ಮಕ್ಕಳಿರುತ್ತಾರೆ. ನಾನು ಹಿಂದು ಎಂದಾಗಲಿ ಮುಸ್ಲಿಂ ಎಂದಾಗಲಿ ಹೇಳಿಲ್ಲ. ನಾನು ಹೇಳಿದ್ದು ನಿಮಗೆ ಎಷ್ಟು ಮಕ್ಕಳನ್ನು ಪೋಷಿಸಲು ಸಾಧ್ಯವಾಗುತ್ತದೆಯೋ ಅಷ್ಟು ಮಕ್ಕಳಿರಬೇಕು ಎಂದು. ನಿಮ್ಮ ಮಕ್ಕಳ ಬಗ್ಗೆ ಸರ್ಕಾರ ಗಮನ ಕೊಡಬೇಕಾದ ಪರಿಸ್ಥಿತಿ ಸೃಷ್ಟಿಗೆ ಕಾರಣರಾಗಬೇಡಿ’ ಎಂದು ಪ್ರಧಾನಿ ಸಂದರ್ಶನದಲ್ಲಿ ಹೇಳಿದ್ದರು.

‘ಧರ್ಮದ ಆಧಾರದಲ್ಲಿ ಕಾಂಗ್ರೆಸ್‌ ದೇಶ ವಿಭಜಿಸುತ್ತಿದೆ’

ಕಲ್ಯಾಣ್ (ಮಹಾರಾಷ್ಟ್ರ): ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಕೂಟದ ಯೋಜನೆಗಳನ್ನು ತಾನು ಬಯಲಿಗೆಳೆಯುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು. 

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ‘ತನಗಿಂತ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದಿದ್ದರು. ಕಾಂಗ್ರೆಸ್ ಪಕ್ಷವು ಬಜೆಟ್‌ನಲ್ಲಿ ಶೇ 15ರಷ್ಟು ಮೊತ್ತವನ್ನು ಮುಸ್ಲಿಮರಿಗೆ ಮೀಸಲಿಡುವ ಮೂಲಕ ದೇಶದ ಬಜೆಟ್‌ಅನ್ನು ಮುಸ್ಲಿಂ ಬಜೆಟ್ ಮತ್ತು ಹಿಂದು ಬಜೆಟ್ ಎಂದು ವಿಂಗಡಿಸಲು ಹೊರಟಿತ್ತು’ ಎಂದು ಆರೋಪಿಸಿದರು. ‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದ ನಂತರ ಈ ಓಲೈಕೆ ನೀತಿಯನ್ನು ಜಾರಿ ಮಾಡಲಿದೆ. ಈ ದೇಶದ ಐಕ್ಯತೆ ನನಗೆ ಮುಖ್ಯ’ ಎಂದು ಹೇಳಿದರು.  

10 ಕೆ.ಜಿ ಪಡಿತರ: ಖರ್ಗೆ ಘೋಷಣೆ

ಸರ್ಕಾರವು ಈಗ ಬಡವರಿಗೆ ನೀಡುತ್ತಿರುವ ಪಡಿತರವನ್ನು ‘ಇಂಡಿಯಾ’ ಕೂಟವು ಅಧಿಕಾರಕ್ಕೆ ಬಂದರೆ ದುಪ್ಪಟ್ಟು ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು. ಮೋದಿ ಸರ್ಕಾರವು ಬಡವರಿಗೆ ಪ್ರತಿ ತಿಂಗಳು 5 ಕೆ.ಜಿ ಪಡಿತರ ನೀಡುತ್ತಿರುವುದನ್ನು ಪ್ರಸ್ತಾಪಿಸಿದ ಅವರು ‘ಕಾಂಗ್ರೆಸ್ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿತು. ನೀವು ಏನೂ ಮಾಡಲಿಲ್ಲ. ಬಡವರಿಗೆ ನೀವು 5 ಕೆ.ಜಿ ಪಡಿತರ ನೀಡುತ್ತಿದ್ದೀರಿ ನಾವು 10 ಕೆ.ಜಿ ನೀಡುತ್ತೇವೆ’ ಎಂದು ತಿಳಿಸಿದರು. ‘ನಾನು ಇದನ್ನು ಗ್ಯಾರಂಟಿಯಾಗಿ ಹೇಳುತ್ತಿದ್ದೇನೆ. ಏಕೆಂದರೆ ನಾವು ಇದನ್ನು ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜಾರಿಗೆ ತಂದಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT