ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ‘ಇಂಡಿಯಾ’: ಒಗ್ಗಟ್ಟಿನ ಯತ್ನಕ್ಕೆ ಸಂದ ಗೆಲುವು

Published 5 ಜೂನ್ 2024, 0:15 IST
Last Updated 5 ಜೂನ್ 2024, 0:15 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಬಲ ವಿರೋಧ ಪಕ್ಷದ ಒಕ್ಕೂಟ ರಚಿಸಬೇಕು ಎಂಬ ವಿಚಾರ ಮೊಳಕೆ ಒಡೆದ ನಂತರ ಅಸ್ತಿತ್ವಕ್ಕೆ ಬಂದಿದ್ದೇ ‘ಇಂಡಿಯಾ’ ಒಕ್ಕೂಟ. 

‘ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆ ಮೈತ್ರಿಕೂ‌ಟ’ ಎಂಬುದು ‘ಇಂಡಿಯಾ’ದ ಸಂಕ್ಷಿಪ್ತರೂಪ. ಒಕ್ಕೂಟ ಪ್ರತಿಪಾದಿಸಿದ ‘ಒಳಗೊಳ್ಳುವಿಕೆ’ಗೆ ಮತದಾರ ಭಾರಿ ಸ್ಪಂದನೆಯನ್ನೇ ನೀಡಿದ್ದಾನೆ.

ಈ ಒಕ್ಕೂಟ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದರೂ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದ ಒಕ್ಕೂಟದ ನಾಯಕ ನಡೆ ದೊಡ್ಡ ಗೆಲುವು ತಂದು ಕೊಟ್ಟಿದೆ. ಇದರೊಂದಿಗೆ ಬಿಜೆಪಿಯ ನಾಗಾಲೋಟಕ್ಕೆ ತಡೆ ಒಡ್ಡಲು ಸಾಧ್ಯವಾಗಿದೆ.

ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗುವಂತೆ ಮಾಡಿರುವ ಕಾಂಗ್ರೆಸ್‌ ಹಾಗೂ ಅದು ಭಾಗವಾಗಿರುವ ‘ಇಂಡಿಯಾ’ ಮೈತ್ರಿಕೂಟ, ಬಿಜೆಪಿಯನ್ನು ಸರಳ ಬಹುಮತ 272ಕ್ಕೂ ಕಡಿಮೆ ಸ್ಥಾನಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿವೆ. ‘ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌’ ಎನ್ನುವ ಮೂಲಕ 400ರ ಗಡಿ ದಾಟುವ ಕನಸು ಕಂಡಿದ್ದ ಎನ್‌ಡಿಎ, 300 ಸ್ಥಾನಗಳನ್ನೂ ದಾಟದಂತೆ ಅದರ ನಾಗಾಲೋಟಕ್ಕೆ ‘ಇಂಡಿಯಾ’ ತಡೆ ಒಡ್ಡಿವೆ.

ಉತ್ತರ ಪ್ರದೇಶವನ್ನು ಯಾರು ಗೆಲ್ಲುತ್ತಾರೋ ಅವರಿಗೆ ದೆಹಲಿ ಗದ್ದುಗೆ ಎಂಬುದು ಭಾರತದ ಚುನಾವಣಾ ರಾಜಕೀಯದ ಅಲಿಖಿತ ನಿಯಮ. ಹಿಂದಿನ ಎಲ್ಲ ಸಾರ್ವತ್ರಿಕ ಚುನಾವಣೆ
ಗಳನ್ನು ಗಮನಿಸಿದಾಗ ಈ ಅಂಶ ಮನದಟ್ಟಾಗುತ್ತದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 80 ಲೋಕಸಭಾ ಕ್ಷೇತ್ರಗಳಿರುವುದೇ ಇದಕ್ಕೆ ಕಾರಣ.

2014ರ ಚುನಾವಣೆಗೆ ಹೋಲಿಸಿದಾಗ, ಉತ್ತರ ಪ್ರದೇಶದಲ್ಲಿ ಎನ್‌ಡಿಎ ಗಮನಾರ್ಹ ಸಂಖ್ಯೆಯ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಹಲವು.

ಆರಂಭದಲ್ಲಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮೀನಮೇಷ ಎಣಿಸಿದ್ದರು. ಇನ್ನೇನು, ಸಮಾಜವಾದಿ ಪಕ್ಷ ‘ಇಂಡಿಯಾ’ ಒಕ್ಕೂಟ ಸೇರದೇ ಸ್ವತಂತ್ರವಾಗಿ ಚುನಾವಣೆ ಎದುರಿಸಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಕೊನೆಗೆ ಅವರು ‘ಇಂಡಿಯಾ’ ಒಕ್ಕೂಟ ಸೇರಲು ನಿರ್ಧರಿಸಿದ್ದು, ಉತ್ತರ ಪ್ರದೇಶದಲ್ಲಿ ಹೊಸ ಸಮೀಕರಣಕ್ಕೆ ಕಾರಣವಾಯಿತು.  

ಕಮಾಲ್‌ ಮಾಡಿದ ‘ಯುಪಿ ಕೆ ಲಡ್ಕೆ’

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಜಂಟಿಯಾಗಿ ಪ್ರಚಾರ ಕಾರ್ಯ ಶುರುಮಾಡಿದರು. ಪ್ರಚಾರದುದ್ದಕ್ಕೂ, ಬಿಜೆಪಿ ಪಾಳಯ ಅವರನ್ನು ‘ಯುಪಿ ಕೆ ಲಡ್ಕೆ’ ಎಂದು ಮೂದಲಿಸಿತ್ತು. ಆದರೆ, ಈ ಜೋಡಿ ‘ಇಂಡಿಯಾ‘ ಒಕ್ಕೂಟಕ್ಕೆ ಹೆಚ್ಚು ಸ್ಥಾನಗಳನ್ನು ತಂದುಕೊಡುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಮಹಾವಿಕಾಸ್‌ ಅಘಾಡಿ (ಎಂವಿಎ) ಕೂಡ ಇಂಡಿಯಾ ಒಕ್ಕೂಟದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಎನ್‌ಸಿಪಿ ಹಾಗೂ ಶಿವಸೇನಾ ಇಬ್ಭಾಗವಾದರೂ, ಅದು ‘ಇಂಡಿಯಾ’ ಒಕ್ಕೂಟದ ಮತ ಗಳಿಕೆಯ ಮೇಲೆ ಪ್ರಭಾವ ಬೀರದಂತೆ ನೊಡಿಕೊಂಡಿರುವುದು ಗಮನಾರ್ಹ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಅದರೆ, ಲೋಕಸಭಾ ಚುನಾವಣೆಯಲ್ಲಿ ತನ್ನ ತಂತ್ರಗಾರಿಕೆ್ ಬದಲಿಸುವ ಮೂಲಕ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆರಂಭದಿಂದಲೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಇಂಡಿಯಾ’ ಒಕ್ಕೂಟದ ಅಂಗಪಕ್ಷಗಳೊಂದಿಗೆ ಗುದ್ದಾಟ ನಡೆಸುತ್ತಲೇ ಇದ್ದರು. ಭಾರತ ಜೋಡೊ ನ್ಯಾಯ ಯಾತ್ರೆಗೆ ಪಶ್ಚಿಮ ಬಂಗಾಳದಲ್ಲಿ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರು ಈ ವಿಷಯದಲ್ಲಿ ಬಹಳ ಎಚ್ಚರಿಕೆಮತ್ತು ಸಂಯಮದಿಂದ ನಡೆದು ಕೊಂಡಿದ್ದು ಗಮನಾರ್ಹ. ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಟಿಎಂಸಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಮುಜುಗರದ ಸಂಗತಿ. ಆದರೂ, ‘ಇಂಡಿಯಾ’ ಒಕ್ಕೂಟ ಅಚ್ಚರಿಯ ಮತ ಫಸಲು ಪಡೆದಿದೆ.

ದಕ್ಷಿಣಕ್ಕೆ ಬಂದರೆ, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿನ ಗೆಲುವು ‘ಇಂಡಿಯಾ‘ ಒಕ್ಕೂಟದ ವಿಶ್ವಾಸವನ್ನು ಹೆಚ್ಚಿಸಿತ್ತು. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ಇತರ ಕೆಲ ದ್ರಾವಿಡ ಪಕ್ಷಗಳೊಂದಿಗೆ ಮೈತ್ರಿ ಮತ ವಿಭಜನೆ ತಡೆಯುವಲ್ಲಿ ಯಶಸ್ವಿಯಾಗಿದೆ.

ಡಿಎಂಕೆ ಸಚಿವ ಉದಯನಿಧಿ ಸ್ವಾಲಿನ್ ಅವರು ಸನಾತನ ಧರ್ಮ ಕುರಿತು ನೀಡಿದ್ದ ಹೇಳಿಕೆ ಕಾಂಗ್ರೆಸ್‌ ಸೇರಿದಂತೆ ‘ಇಂಡಿಯಾ’ ಒಕ್ಕೂಟಕ್ಕೆ ಮುಜುಗರ ತಂದಿತ್ತು. ಈ ವಿವಾದ ಲೋಕಸಭಾ ಚುನಾವಣೆ ವೇಳೆಯಲ್ಲಿ ಮತ ಗಳಿಕೆ ಮೇಲೆ ಪರಿಣಾಮ ಉಂಟು ಮಾಡದಂತೆ ನೋಡಿಕೊಳ್ಳುವಲ್ಲಿಯೂ ಒಕ್ಕೂಟದ ನಾಯಕರುಯಶಸ್ವಿಯಾಗಿದ್ದಾರೆ.

ಲೋಕಸಭಾ ಚುನಾವಣೆಯೂ ಮುನ್ನ, ಮಣಿಪುರದಿಂದ ಮುಂಬೈ ವರೆಗ ಕಾಂಗ್ರೆಸ್‌ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ ಹಮ್ಮಿಕೊಂಡಿತ್ತು. ಈ ಯಾತ್ರೆ ಸಹ ‘ಇಂಡಿಯಾ’ ಒಕ್ಕೂಟದ ಪರ ಮತ ಪ್ರಮಾಣ ಹೆಚ್ಚಲು ಕಾರಣವಾದ ಅಂಶಗಳಲ್ಲಿ ಒಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ, ತಮ್ಮ ಸರ್ಕಾರ ಬಂದ ನಂತರ ಜಾತಿ ಗಣತಿ ನಡೆಸಲಾಗುವುದು ಎಂಬ ಘೋಷಣೆ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ, ಮೀಸಲಾತಿ ಪದ್ಧತಿ ಯನ್ನು ನಾಶ ಮಾಡುತ್ತದೆ ಎಂಬ ಸಂಕಥನ ರೂಪಿಸಿ, ಜನರಿಗೆ ತಲುಪಿಸುವಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ, ಅದರಲ್ಲೂ ಕಾಂಗ್ರೆಸ್‌ ಯಶ ಕಂಡಿದೆ ಎನ್ನಬಹುದು.

ರೈತರ ಸಂಕಷ್ಟ, ಮಣಿಪುರದಲ್ಲಿನ ಹಿಂಸಾಚಾರ, ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದುದು ಸಹ ‘ಇಂಡಿಯಾ’ ಒಕ್ಕೂಟಕ್ಕೆ ಅನುಕೂಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT