ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದ ಕಾರ್ಮೋಡ | ಬಲಿಷ್ಠ ಬಿಜೆಪಿ ಸರ್ಕಾರ ಬೇಕು: ಪ್ರಧಾನಿ ಮೋದಿ

ಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಗೆಲ್ಲಿಸುವ ಅಗತ್ಯ ಪ್ರತಿಪಾದಿಸಿದ ಪ್ರಧಾನಿ ಮೋದಿ
Published 19 ಏಪ್ರಿಲ್ 2024, 15:44 IST
Last Updated 19 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ದಮೋಹ್: ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಸುಳಿಯುತ್ತಿದ್ದು, ಇಂಥ ಸಂದರ್ಭದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಎದುರಿಸಲು ಮತ್ತು ದೇಶದ ಹಿತಾಸಕ್ತಿ ರಕ್ಷಿಸಲು ಪರಿಪೂರ್ಣ ಬಹುಮತದೊಂದಿಗೆ ಬಲಿಷ್ಠ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದು ‍ಪ್ರಧಾನಿ ಮೋದಿ ಶುಕ್ರವಾರ ಪ್ರತಿಪಾದಿಸಿದರು.     

ಮಧ್ಯಪ್ರದೇಶದ ದಮೋಹ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಸ್ಥಿರ ಮತ್ತು ಸಮರ್ಥ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಕೊರೊನಾ ಸಾಂಕ್ರಾಮಿಕದ ವೇಳೆ ಸಾಬೀತಾಗಿದೆ. ಸರ್ಕಾರ ಕೋಟ್ಯಂತರ ಮಂದಿಗೆ ಉಚಿತ ಲಸಿಕೆ ನೀಡಿತು. ಬಡವರಿಗೆ ಪಡಿತರ ವಿತರಿಸಿತು’ ಎಂದು ತಿಳಿಸಿದರು.

‘ಇಂದು ದೇಶವನ್ನು ಆಳುತ್ತಿರುವ ಸರ್ಕಾರ ಯಾವುದೇ ಒತ್ತಡಕ್ಕೂ ಒಳಗಾಗುವುದಿಲ್ಲ, ‌ಯಾರ ಮುಂದೆಯೂ ತಲೆಬಾಗುವುದಿಲ್ಲ. ದೇಶ ಮೊದಲು ಎನ್ನುವುದು ನಮ್ಮ ತತ್ವ’ ಎಂದು ಪ್ರತಿಪಾದಿಸಿದರು.  

ಮೋದಿ ಅವರು ಹೆಸರು ಹೇಳದೆಯೇ ನೆರೆಯ ಪಾಕಿಸ್ತಾನದ ಕಾಲೆಳೆದರು. ‘ಜಗತ್ತಿನ ಕೆಲವು ದೇಶಗಳ ಪರಿಸ್ಥಿತಿ ಕಳವಳಕಾರಿಯಾಗಿದೆ. ಅನೇಕ ದೇಶಗಳು ದಿವಾಳಿಯಾಗುತ್ತಿವೆ. ‘ಆತಂಕ್’ (ಉಗ್ರವಾದ) ಪೂರೈಸುವ ನಮ್ಮ ನೆರೆಯ ದೇಶವೊಂದು ‘ಆಟಾ’ಕ್ಕಾಗಿ (ಹಿಟ್ಟು) ಪರದಾಡುತ್ತಿದೆ’ ಎಂದು ಹೇಳಿದರು.   

‘ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ದೇಶದ ರಕ್ಷಣಾ ವಲಯವನ್ನು ದುರ್ಬಲಗೊಳಿಸಿತು. ಫ್ರಾನ್ಸ್‌ ನಿರ್ಮಿತ ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರುವುದು ಅವರಿಗೆ ಬೇಕಿರಲಿಲ್ಲ. ಭಾರತದ ವಾಯುಪಡೆ ಸಮಸ್ಯೆಗಳಲ್ಲಿಯೇ ಉಳಿಯಲಿ ಎಂದು ಅವರು ಬಯಸಿದ್ದರು. ವಾಯುಪಡೆ ಸಬಲವಾಗದಂತೆ ನೋಡಿಕೊಳ್ಳಲು ತಮ್ಮ ಸರ್ವಶಕ್ತಿಯನ್ನೂ ಬಳಸಿದರು. ಬಿಜೆಪಿ ಆಡಳಿತದಲ್ಲಿ ಸೇನಾ ಪಡೆಗಳು ಸ್ವಾವಲಂಬಿಯಾದವು. ಅವರು ಶಸ್ತಾಸ್ತ್ರಗಳ ಖರೀದಿಯಲ್ಲಿ ತಮ್ಮ ಸ್ವಂತ ಹಿತಾಸಕ್ತಿಯನ್ನಷ್ಟೇ ನೋಡಿದರು’ ಎಂದು ಆರೋಪಿಸಿದರು.

‘ಭಾರತವು ಶಸ್ತ್ರಾಸ್ತ್ರ ರಫ್ತುದಾರ ದೇಶವಾಗುತ್ತಿದೆ. ಪ್ರಸಕ್ತ ವರ್ಷದಲ್ಲಿಯೇ ಭಾರತವು ₹21 ಸಾವಿರ ಕೋಟಿಯ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ನಾನು ಭಾಷಣ ಮಾಡುತ್ತಿರುವ ಈ ಸಮಯದಲ್ಲಿ ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಸ್ವೀಕರಿಸಿದ್ದಕ್ಕಾಗಿ ರಾಮಜನ್ಮಭೂಮಿ–ಬಾಬ್ರಿ ಮಸೀದಿ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ಇಕ್ಬಾಲ್ ಅನ್ಸಾರಿ ಅವರನ್ನು ಶ್ಲಾಘಿಸಿದ ಮೋದಿ, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ವಿಪಕ್ಷವನ್ನು ಟೀಕಿಸಿದರು.

ಶ್ರೀ ಕೃಷ್ಣ ಶಮಿ ಹೆಸರು ಪ್ರಸ್ತಾಪಿಸಿದ ಮೋದಿ

ಲಖನೌ: ಸಮಾಜವಾದಿ ಪಕ್ಷದ ಮತಬುಟ್ಟಿಗೆ ಕೈಹಾಕಿದ ಪ್ರಧಾನಿ ಮೋದಿ ಯಾದವ ಸಮುದಾಯದ ಶ್ರೀ ಕೃಷ್ಣ ಮತ್ತು ಮುಸ್ಲಿಂ ಸಮುದಾಯದ ಕ್ರಿಕೆಟ್ ಆಟಗಾರ ಮೊಹಮದ್ ಶಮಿ ಅವರನ್ನು ಸ್ಮರಿಸಿದರು. ‘ನಾನು ದ್ವಾರಕಾದಲ್ಲಿ ನೀರಿನೊಳಗೆ ಹೋಗಿ ಶ್ರೀಕೃಷ್ಣನನ್ನು ಪೂಜಿಸಿದೆ. ಆದರೆ ಕಾಂಗ್ರೆಸ್‌ನ ಶಹಜಾದೆ (ರಾಹುಲ್ ಗಾಂಧಿ) ನೀರಿನೊಳಗೆ ಪೂಜಿಸುವಂಥದ್ದು ಏನೂ ಇಲ್ಲ ಎಂದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ನೂರಾರು ವರ್ಷಗಳ ನಂಬಿಕೆಯನ್ನು ತಿರಸ್ಕರಿಸುತ್ತಿದ್ದಾರೆ. ಅಂಥವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ನಾನು ಯದುವಂಶದ ನಾಯಕರೆಂದು ಹೇಳಿಕೊಳ್ಳುವವರನ್ನು ಕೇಳಲು ಬಯಸುತ್ತೇನೆ’ ಎಂದು ಹೇಳಿದರು. ಅಮ್ರೋಹ ಮೂಲದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ‘ಕ್ರಿಕೆಟ್‌ನ ಅದ್ಭುತ ಸಾಧನೆಗಾಗಿ ಅವರಿಗೆ ಕೇಂದ್ರವು ಅರ್ಜುನ ಪ್ರಶಸ್ತಿ ನೀಡಿತು’ ಎಂದು ತಿಳಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT