ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಬಣ್ಣದ ವಿಚಾರ ಮುಂದಿಟ್ಟುಕೊಂಡು ರಾಜಕೀಯ: ರಾಹುಲ್‌ ವಿರುದ್ಧ ಮೋದಿ ಕಿಡಿ

ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಬಿಜೆಪಿ
Published 8 ಮೇ 2024, 16:08 IST
Last Updated 8 ಮೇ 2024, 16:08 IST
ಅಕ್ಷರ ಗಾತ್ರ

ನವದೆಹಲಿ/ಹೈದರಾಬಾದ್‌: ಭಾರತದ ವೈವಿಧ್ಯತೆ ಕುರಿತು ವಿವರಿಸಲು ಕಾಂಗ್ರೆಸ್‌ ಮುಖಂಡ ಸ್ಯಾಮ್‌ ಪಿತ್ರೋಡಾ ನೀಡಿರುವ ಹೇಳಿಕೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್‌ ಗುರಿಯಾಗಿಸಿ ಮೋದಿ ನಡೆಸಿರುವ ವಾಗ್ದಾಳಿಗೆ ದನಿಗೂಡಿಸಿದ್ದಾರೆ.

ತೆಲಂಗಾಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ‘ಶೆಹಜಾದಾ(ರಾಹುಲ್‌ ಗಾಂಧಿ) ಅವರ ಅಮೆರಿಕ ಮೂಲದ ತತ್ವಜ್ಞಾನಿ ಮತ್ತು ‘ಮಾವ’, ಭಾರತೀಯರ ಕುರಿತು ಜನಾಂಗೀಯ ತಾರತಮ್ಯದ ನೀಡಿರುವ ಹೇಳಿಕೆಯಿಂದ ನಾನು ವ್ಯಗ್ರನಾಗಿರುವೆ’ ಎಂದು ಹೇಳಿದರು.

‘ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಸೋಲಿಸಲು ಕಾಂಗ್ರೆಸ್‌ ಯತ್ನಿಸಿತ್ತು. ಚರ್ಮದ ಬಣ್ಣದ ಕಾರಣದಿಂದ ಅವರನ್ನು ‘ಆಫ್ರಿಕಾ’ದವರು ಎಂದು ಪರಿಗಣಿಸಿದ್ದ ಕಾಂಗ್ರೆಸ್‌ ಅವರನ್ನು ಪರಾಭವಗೊಳಿಸಲು ಆಗ ಯತ್ನಿಸಿತ್ತು ಎಂಬುದು ನನಗೆ ಈಗ ಅರ್ಥವಾಗುತ್ತಿದೆ’ ಎಂದು ಹೇಳಿದರು.

‘ಯಾರಾದರೂ ನನ್ನನ್ನು ಬೈದರೆ ನಾನು ಸಹಿಸಿಕೊಳ್ಳುತ್ತೇವೆ. ಆದರೆ, ಈ ದಿನ ನನಗೆ ಬಹಳ ಕೋಪ ಬಂದಿದೆ. ‘ಶೆಹಜಾದಾ’ನ ತತ್ವಜ್ಞಾನಿ ನೀಡಿರುವ ಮೂದಲಿಕೆ ಮಾತುಗಳೇ ನನ್ನ ಈ ಕೋಪಕ್ಕೆ ಕಾರಣ’ ಎಂದರು.

‘ನಮ್ಮ ದೇಶದ ಜನರ ಸಾಮರ್ಥ್ಯಗಳನ್ನು ಅವರ ಚರ್ಮದ ಬಣ್ಣದ ಮೇಲೆ ನಿರ್ಧರಿಸಲು ಸಾಧ್ಯವೇ? ಚರ್ಮದ ಬಣ್ಣದ ವಿಚಾರವನ್ನು ಮುಂದಿಟ್ಟುಕೊಂಡು ಇಂತಹ ರಾಜಕಾರಣ ಮಾಡಲು ಶೆಹಜಾದಾಗೆ ಅಧಿಕಾರ ನೀಡಿದ್ದು ಯಾರು’ ಎಂದು ಕೋಪದಿಂದ ಪ್ರಶ್ನಿಸಿದರು.

‘ಸಂವಿಧಾನದ ಬಗ್ಗೆ ಭಾಷಣ ಮಾಡುತ್ತಿರುವವರೇ ಚರ್ಮದ ಬಣ್ಣದ ಆಧಾರದ ಮೇಲೆ ದೇಶದ ಜನರನ್ನು ಅವಮಾನಿಸುತ್ತಿದ್ದಾರೆ’ ಎಂದೂ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT