ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗೆ PM ಮೋದಿ ಬೆಂಬಲ ದೊಡ್ಡದು; ರದ್ದುಪಡಿಸಲು BJP ಬಿಡದು: ಅಮಿತ್ ಶಾ ಭರವಸೆ

Published 13 ಏಪ್ರಿಲ್ 2024, 15:42 IST
Last Updated 13 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ಜೈಪುರ: ‘ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ದೊಡ್ಡದು. ಹೀಗಾಗಿ ಮೀಸಲಾತಿಯನ್ನು ಬಿಜೆಪಿ ಎಂದಿಗೂ ಮೊಟಕುಗೊಳಿಸುವುದಿಲ್ಲ. ಹಾಗೆ ಮಾಡಲು ಬೇರೆಯವರಿಗೂ ಬಿಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜಸ್ಥಾನದ ಅಲ್ವಾರಾ ಜಿಲ್ಲೆಯ ಹರ್ಸೋಲಿಯಲ್ಲಿ ಬಿಜೆಪಿ ಅಭ್ಯರ್ಥಿ ಭೂಪೇಂದ್ರ ಯಾದವ್ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಶನಿವಾರ ಅವರು ಮಾತನಾಡಿದರು.

‘ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಆಡಳಿತಾರೂಢ ಪಕ್ಷ ರದ್ದುಗೊಳಿಸಲಿದೆ ಎಂಬ ತಪ್ಪು ಕಲ್ಪನೆಯನ್ನು ಕಾಂಗ್ರೆಸ್ ಜನರಲ್ಲಿ ಬಿತ್ತುತ್ತಿದೆ. ಆದರೆ ಮೀಸಲಾತಿಗೆ ಸಂಬಂಧಿಸಿದ ವರದಿಯನ್ನು ಮೂಲೆಯಲ್ಲಿಟ್ಟಿದ್ದ ಕಾಂಗ್ರೆಸ್ ನಿಜವಾದ ಹಿಂದುಳಿದ ವರ್ಗಗಳ ವಿರೋಧಿ’ ಎಂದು ಆರೋಪಿಸಿದ್ದಾರೆ.

‘ಕಾಕಾ ಕಾಲೇಲ್ಕರ್ ಆಯೋಗದ ವರದಿಯನ್ನು ಕಾಂಗ್ರೆಸ್ ಹೊರತರಲಿಲ್ಲ. ಮಂಡಲ್ ಕಮಿಷನ್ ವರದಿಯನ್ನೂ ಬಹಿರಂಗಗೊಳಿಸಲಿಲ್ಲ. ಹಿಂದುಳಿದ ವರ್ಗಗಳಿಗೆ ಸೂಕ್ತ ಸ್ಥಾನಮಾನ ಕೊಡಲು ನರೇಂದ್ರ ಮೋದಿ ಅವರೇ ಬರಬೇಕಾಯಿತು. ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿಯನ್ನು ಮೋದಿ ಸರ್ಕಾರ ಕೊಟ್ಟಿದೆ’ ಎಂದಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಮೋದಿ ದೇಶ ಹಾಗೂ ಜನರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇತರರಿಗೆ ಅಸಾಧ್ಯವಾಗಿದ್ದನ್ನು ಸಾಧಿಸಿ ತೋರಿಸಿದ್ದಾರೆ. ಮುಂದಿನ 25 ವರ್ಷಗಳಿಗೆ ಅವರು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಮೂರನೇ ಬಾರಿಗೂ ಅವರನ್ನೇ ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ರಾಮಮಂದಿರ ನಿರ್ಮಾಣ ಕುರಿತ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ‘ಕಳೆದ 70 ವರ್ಷಗಳಿಂದ ರಾಮ ಮಂದಿರ ನಿರ್ಮಾಣದ ವಿಷಯವನ್ನು ಕಾಂಗ್ರೆಸ್ ವಿಳಂಬ ಮಾಡುತ್ತಲೇ ಬಂದಿದೆ. ಅಷ್ಟಲ್ಲದೇ ವಿಷಯಾಂತರ ಮಾಡುತ್ತಾ ತಡೆಯುತ್ತಲೇ ಬಂದಿತ್ತು. ಆದರೆ 500 ವರ್ಷಗಳ ನಂತರ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮೂಲಕ ರಾಮಮಂದಿರ ನಿರ್ಮಾಣದ ಕನಸನ್ನು ಮೋದಿ ಸರ್ಕಾರ ನನಸು ಮಾಡಿದೆ. ಇದೇ ರಾಮನವಮಿಯಂದು ರಾಮನ ಜನ್ಮದಿನವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಲಾಗುವುದು’ ಎಂದಿದ್ದಾರೆ.

ಮಗನನ್ನು ಉಳಿಸಿ, ಪ್ರಧಾನಿ ಮಾಡಿ

’ಹೆಣ್ಣು ಮಕ್ಕಳನ್ನು ಉಳಿಸಿ, ಅವರಿಗೆ ಶಿಕ್ಷಣ ಕೊಡಿ’ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ, ‘ಮಗನನ್ನು ಉಳಿಸಿ, ಪ್ರಧಾನಿಯನ್ನಾಗಿ ಮಾಡಿ’ ಎಂದೆನ್ನುತ್ತಿದೆ. ಸೋನಿಯಾ ಅವರ ಸಂಪೂರ್ಣ ಗಮನ ಮಗನನ್ನು ಪ್ರಧಾನಿ ಮಾಡುವುದು ಆಗಿದೆಯೇ ಹೊರತು, ನಿಮ್ಮ ಮಗ ಹಾಗೂ ಮಗಳನ್ನು ಪ್ರಧಾನಿ ಮಾಡುವುದಲ್ಲ. 20 ಬಾರಿ ಪರಿಚಯಿಸಿದರೂ, ಅಷ್ಟೂ ಬಾರಿ ವಿಫಲವಾದ ವಾಹನವೀ ರಾಹುಲ್ ಬಾಬಾ’ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಏ. 19 ಹಾಗೂ ಏ. 26ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 12 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಉಳಿದ 13 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT