ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಂತ್ಯದ ಮಹಾತ್ಮಾ ಗಾಂಧಿ ಕನಸು ರಾಹುಲ್‌ರಿಂದ ನನಸು: ಆಚಾರ್ಯ ಕೃಷ್ಣಂ

Published 23 ಮೇ 2024, 10:41 IST
Last Updated 23 ಮೇ 2024, 10:41 IST
ಅಕ್ಷರ ಗಾತ್ರ

ಸಂಭಾಲ್: ‘ಕಾಂಗ್ರೆಸ್ ಅನ್ನು ಅಂತ್ಯಗೊಳಿಸುವ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪೂರ್ಣಗೊಳಿಸುತ್ತಿರುವ ರಾಹುಲ್ ಗಾಂಧಿ ಒಬ್ಬ ‘ಮಹಾಪುರಷ‘’ ಎಂದು ಪಕ್ಷದ ಮಾಜಿ ಮುಖಂಡ, ಉತ್ತರ ಪ್ರದೇಶದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ಮುಖಂಡನ ಕಾಲೆಳೆದಿದ್ದಾರೆ.

‘ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಅಂತ್ಯಗೊಳಿಸುವ ಕನಸು ಕಂಡಿದ್ದರು. ಅದು ಈವರೆಗೂ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಬಿಜೆಪಿಗೂ ಅದು ಆಗಿರಲಿಲ್ಲ. ಆದರೆ ರಾಹುಲ್ ಗಾಂಧಿ ಅವರು ಅಸಾಧ್ಯವಾದದ್ದನ್ನು ಸ್ವತಃ ಸಾಧಿಸುತ್ತಿದ್ದಾರೆ. ಕಾಂಗ್ರೆಸ್ ಅನ್ನು ಅಂತ್ಯಗೊಳಿಸಿ ತಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ಸತ್ಯವನ್ನು ನಾನು ಮಾತ್ರವಲ್ಲ, ದೇಶದಲ್ಲಿರುವ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರೂ ಅರಿತಿದ್ದಾರೆ’ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ’ ಎಂದು ಆಚಾರ್ಯ ಅವರು ಭವಿಷ್ಯ ನುಡಿದಿದ್ದಾರೆ.

ಏತನ್ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಸೈನಿಕರನ್ನು ಕಾರ್ಮಿಕರನ್ನಾಗಿಸಲು ಹೊರಟಿದೆ. ಹೀಗಾಗಿ ಜೂನ್ 4ರ ನಂತರ ಅಧಿಕಾರಕ್ಕೆ ಬಂದ ತಕ್ಷಣವೇ ಅಗ್ನಿವೀರ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಹುಲ್ ಬುಧವಾರ ಹೇಳಿದ್ದರು.

‘ಪ್ರಧಾನಿ ಮೋದಿ ಅವರು ಎರಡು ರೀತಿಯ ಸೈನಿಕರನ್ನು ಸೃಷ್ಟಿಸಿದ್ದಾರೆ. ಒಬ್ಬರು ಸಾಮಾನ್ಯ ಸೈನಿಕರು ಹಾಗೂ ಅಧಿಕಾರಿಗಳು. ಅವರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ ಇದೆ. ಆದರೆ ಮತ್ತೊಂದು ವರ್ಗದ ಹೆಸರು ಅಗ್ನವೀರ ಎಂದು. ಇದಕ್ಕೆ ಬಡ ಕುಟುಂಬ ಯುವಕರನ್ನು ಸೇರಿಸಿಕೊಂಡಿದ್ದಾರೆ. ಒಂದೊಮ್ಮೆ ಈ ಅಗ್ನಿವೀರರು ವೈರಿಗಳ ಕಾಳಗದಲ್ಲಿ ಮೃತಪಟ್ಟರೆ ಅವರಿಗೆ ‘ಹುತಾತ್ಮ’ ಎಂಬ ಗೌರವೂ ಇರದು, ಅವರ ಕುಟುಂಬಕ್ಕೆ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ಸಿಗದು. ಸೇನೆಗೆ ಬೇಡದ ಇಂಥ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ’ ಎಂದು ರಾಹುಲ್ ಆರೋಪಿಸಿದ್ದರು.

ರಾಹುಲ್ ಗಾಂಧಿ ಅವರು ಈ ಬಾರಿ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT