ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಎದುರು ಬೆಂಕಿಕಡ್ಡಿಗೂ ಸಮವಲ್ಲದ ರಾಹುಲ್ ರಾಜಕೀಯ ಅನನುಭವಿ: ಮೋಹನ್ ಯಾದವ್

Published 29 ಮೇ 2024, 12:37 IST
Last Updated 29 ಮೇ 2024, 12:37 IST
ಅಕ್ಷರ ಗಾತ್ರ

ಭೋಪಾಲ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ರಾಜಕೀಯ ಜ್ಞಾನದ ಕೊರತೆ ಇದೆ. ಅವರು ಪ್ರಧಾನಿ ನರೇಂದ್ರ ಮೋದಿ ಎದುರು ಬೆಂಕಿಕಡ್ಡಿಗೂ ಸಮವಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಯಾದವ್‌ ಅವರು, ಲೋಕಸಭಾ ಚುನಾವಣೆ ಬಳಿಕ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದಿರುವ ರಾಹುಲ್‌ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರನ್ನು ಟೀಕಿಸಿದ್ದಾರೆ. ಇದಕ್ಕಿಂತ ದೊಡ್ಡ ಹಾಸ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೇರಳದ ವಯನಾಡ್‌ ಸಂಸದ ರಾಹುಲ್‌ ಅವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ, ತಮ್ಮ ಹಿಡಿತದಲ್ಲಿದ್ದ ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧಿಸುವ ಧೈರ್ಯವಿಲ್ಲ ಎಂದು ತಿವಿದಿದ್ದಾರೆ.

ರಾಹುಲ್ ಅವರು ತಮ್ಮ ಅಜ್ಜಿಯೂ ಆದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರಂತೆ ಆಡಳಿತ ಅನುಭವ ಹೊಂದಬೇಕೇ ಎಂಬ ಪ್ರಶ್ನೆಗೆ, 'ಅವರು (ರಾಹುಲ್‌) ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುವ ಮುನ್ನ, ಸಚಿವ ಸ್ಥಾನದ ಅನುಭವ ಮತ್ತು ರಾಜಕೀಯ ಜ್ಞಾನ ಇರಲಿಲ್ಲ. ಮೋದಿಯಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವಾಗ ವಿರೋಧ ಪಕ್ಷದವರೇ ಆದರೂ ಒಂದು ಹಂತಕ್ಕೆ ವರ್ತಿಸಬೇಕು. ಸೂರ್ಯನ ಎದುರು ರಾಹುಲ್‌ ಸಣ್ಣ ದೀಪಕ್ಕೂ ಸಮನಲ್ಲ. ಅವರ ಸಾಮರ್ಥ್ಯ, ಬೆಂಕಿಕಡ್ಡಿಗೂ ಸಮವಲ್ಲ. ಆದರೂ, ತಮ್ಮನ್ನು ತಾವು ಸೂರ್ಯನ ಬೆಳಕು ಎಂದು ಬಿಂಬಿಸಿಕೊಳ್ಳಲು ಬಯಸುತ್ತಿದ್ದಾರೆ. ಅವರು ಇಂತಹ ಹಗಲುಗನಸು ಕಾಣುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಕುಟುಕಿದ್ದಾರೆ.

2014 ಹಾಗೂ 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಃಪತನ ಹೊಂದಿದಾಗಲೇ, ರಾಹುಲ್‌ ಗಾಂಧಿ ಸರಿಯಾದ ನಾಯಕನಲ್ಲ ಎಂಬದು ಸಾಬೀತಾಗಿದೆ ಎಂದೂ ಯಾದವ್‌ ಹೇಳಿದ್ದಾರೆ.

'ಜನರ ಆಶೀರ್ವಾದದಿಂದ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ನಮ್ಮ ನಾಯಕ ಮೋದಿ ಅವರು 2014ರ ಚುನಾವಣೆಗೂ ಮುನ್ನ ಹೇಳಿದ್ದರು. ಅದು ಸತ್ಯವಾಯಿತು' ಎಂದು ಸ್ಮರಿಸಿರುವ ಅವರು, 'ಬಿಜೆಪಿ ನಾಯಕತ್ವವು, ಎರಡನೇ ಸಲ (2019ರಲ್ಲಿ) 300 ಸ್ಥಾನಗಳ ಗುರಿ ಹಾಕಿಕೊಂಡಿತ್ತು. ಅದು ಸಾಧ್ಯವಾಯಿತು. ಈ ಸಲ 400ರ ಗುರಿ ಹೊಂದಿದ್ದೇವೆ. ಇನ್ನೊಂದು ಹಂತದ ಮತದಾನ ಬಾಕಿ ಇದ್ದು, ನಮ್ಮ ಗುರಿ ಸಾಧ್ಯವಾಗಲಿದೆ ಎಂಬುದು ಈಗಾಗಲೇ ಗೋಚರವಾಗುತ್ತಿದೆ. ಮೋದಿ ಅವರ ವಿರುದ್ಧ ರಾಹುಲ್‌ ಬಳಸುತ್ತಿರುವ ಕೀಳು ಮಟ್ಟದ ಭಾಷೆಗೆ ಜನರು ಆರು ಹಂತಗಳ ಮತದಾನದ ಮೂಲಕ ಈಗಾಗಲೇ ಉತ್ತರ ನೀಡಿದ್ದಾರೆ. ಜೂನ್‌ 1ರಂದು ನಡೆಯುವ ಕೊನೇ ಹಂತದ ಮತದಾನದಲ್ಲೂ ಅದೇ ಪ್ರತಿಧ್ವನಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಫಲಿತಾಂಶದ (ಜೂನ್‌ 4ರ) ಬಳಿಕ ಬಿಜೆಪಿ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ ಎಂದು ರಾಹುಲ್‌ ಮತ್ತು ಲಾಲು ಹೇಳಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ, 'ಇದಕ್ಕಿಂತಲೂ ದೊಡ್ಡ ಜೋಕ್‌ ಇನ್ನೊಂದಿಲ್ಲ. ಅವುಗಳನ್ನು ಹೇಳಿದವರು ಯಾರು ಎಂಬುದನ್ನು ನೋಡಿ. 235ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರುತ್ತೇವೆ ಎಂದು 2014ಕ್ಕೂ ಮೊದಲು ರಾಹುಲ್‌ ಹೇಳಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ' ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ವಿನಯದಿಂದ ಜನರ ಮುಂದೆ ಇಟ್ಟಿದ್ದಾರೆ ಎಂದೂ ಯಾದವ್‌ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT