ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ಲೋಕಸಭಾ ಚುನಾವಣೆ: ಯೋಗಿ ಆದಿತ್ಯನಾಥ

Published 10 ಮೇ 2024, 3:06 IST
Last Updated 10 ಮೇ 2024, 3:06 IST
ಅಕ್ಷರ ಗಾತ್ರ

ಲಖೀಂಪುರ ಖೇರಿ: ಈ ಬಾರಿಯ ಲೋಕಸಭಾ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಪಾದಿಸಿದ್ದಾರೆ.

‌ಬಿಜೆಪಿ ಅಭ್ಯರ್ಥಿಗಳಾಗಿ ಖೇರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಅಜಯ್‌ ಮಿಶ್ರಾ ಪರ ಗೋಲಾ ಪಟ್ಟಣದಲ್ಲಿ ಹಾಗೂ ಧೌರಾಹ್ರ ಕ್ಷೇತ್ರದಿಂದ ಸ್ಪರ್ಧಿಸಿರುವ ರೇಖಾ ವರ್ಮಾ ಪರವಾಗಿ ಲಖೀಂಪುರ್‌ ಖೇರಿಯ ಮೊಹಮ್ಮದಿಯಲ್ಲಿ ಯೋಗಿ ಗುರುವಾರ ಪ್ರಚಾರ ನಡೆಸಿದ್ದಾರೆ.

ಗೋಲಾದಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹಾಗೂ ಅವರ ಕುಟುಂಬದ ನಾಲ್ವರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

'ಸಮಾಜವಾದಿ ಪಕ್ಷದ ಮುಖ್ಯಸ್ಥರ ಕುಟುಂಬ ಸದಸ್ಯರು ಎಲ್ಲಾ ಐದು ಕ್ಷೇತ್ರಗಳಲ್ಲಿ ಸೋಲು ಅನಭವಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿಯು ಉತ್ತರ ಪ್ರದೇಶದಲ್ಲಿ ಖಾತೆ ತೆರೆಯುವುದಿಲ್ಲ' ಎಂದು ಹೇಳಿದ್ದಾರೆ.

ಅಖಿಲೇಶ್‌ ಯಾದವ್‌ ಅವರು ಕನೌಜ್ ಕ್ಷೇತ್ರದಿಂದ, ಅವರ ಪತ್ನಿ ದಿಂಪಲ್‌ ಯಾದವ್‌ ಮೈನ್‌ಪುರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅಖಿಲೇಶ್‌ ಅವರ ಸಂಬಂಧಿಗಳಾದ ಅಕ್ಷಯ್‌ ಯಾದವ್‌, ಆದಿತ್ಯ ಯಾದವ್‌ ಮತ್ತು ಧರ್ಮೇಂದ್ರ ಯಾದವ್‌ ಅವರು ಕ್ರಮವಾಗಿ ಫಿರೋಜಾಬಾದ್‌, ಬದೌನ್‌ ಮತ್ತು ಅಜಮ್‌ಗಢ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.

ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ'ದ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಎಸ್‌ಪಿ ಲೋಕಸಭಾ ಚುನಾವಣೆಗೂ ಮುನ್ನವೇ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿವೆ.

'ರಾಮ ಮಂದಿರ ನಿರ್ಮಾಣ ಅನಗತ್ಯ ಎಂದು ಕಾಂಗ್ರೆಸ್‌ ಹಾಗೂ ಎಸ್‌ಪಿ ಪಕ್ಷದವರು ಹೇಳುತ್ತಿದ್ದಾರೆ. ಬಡವರಿಗೆ ಸವಲತ್ತು, ಕಲ್ಯಾಣ ಯೋಜನೆಗಳನ್ನು ನೀಡುವ ರಾಮಭಕ್ತರು ಒಂದು ಕಡೆ ಇದ್ದರೆ, ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿರುವ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಅವಮಾನಿಸುತ್ತಿರುವ ರಾಮ ವಿರೋಧಿಗಳು ಮತ್ತೊಂದೆಡೆ ಇದ್ದಾರೆ' ಎಂದು ಯೋಗಿ ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಹಾಗೂ ಎಸ್‌ಪಿ ಪಕ್ಷಗಳು ದೇಶವನ್ನು ವಿಭಜಿಸುವ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವದ ಪ್ರಬಲ ರಾಷ್ಟ್ರವಾಗುವತ್ತ ಭಾರತ ಮುನ್ನುಗ್ಗುತ್ತಿದೆ ಎಂದೂ ಹೇಳಿದ್ದಾರೆ.

ಸೀತಾಪುರದಲ್ಲಿಯೂ ವಿರೋಧ ಪಕ್ಷಗಳ ವಿರುದ್ಧ ಗುಡುಗಿದ ಯೋಗಿ, ಈ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ. ಲಖೀಂಪುರ ಖೇರಿಯಲ್ಲಿ 2021ರ ಅಕ್ಟೋಬರ್‌ 3ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT