ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ, ಕಾಂಗ್ರೆಸ್‌ಗೆ ಹಿಂದುತ್ವ ಮಾತ್ರ ಗುರಿ: ಮೋದಿ ವಾಗ್ದಾಳಿ

Published 19 ಮಾರ್ಚ್ 2024, 10:44 IST
Last Updated 19 ಮಾರ್ಚ್ 2024, 10:44 IST
ಅಕ್ಷರ ಗಾತ್ರ

ಚೆನ್ನೈ: ‘ಇಂಡಿಯಾ ಮೈತ್ರಿ ಪಾಲುದಾರರು, ವಿಶೇಷವಾಗಿ ಕಾಂಗ್ರೆಸ್ ಮತ್ತು ಡಿಎಂಕೆ, ಹಿಂದೂ ಧರ್ಮವನ್ನು ಪದೇ ಪದೇ ಹಾಗೂ ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿವೆ. ಈ ಪಕ್ಷಗಳು ಬೇರೆ ಯಾವುದೇ ಧರ್ಮಗಳ ವಿರುದ್ಧ ಒಂದು ಸೊಲ್ಲು ಕೂಡ ಎತ್ತುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರೋಪಿಸಿದರು.

ಪಶ್ಚಿಮ ತಮಿಳುನಾಡಿನ ಸೇಲಂನಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕರಾದ ಓ. ಪನ್ನೀರಸೆಲ್ವಂ, ಟಿ.ಟಿ.ವಿ. ದಿನಕರನ್ ಮತ್ತು ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪಾಲುದಾರ ನಾಯಕರೊಂದಿಗೆ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮೋದಿ ಮಾತನಾಡಿದರು.

‘ಕಾಂಗ್ರೆಸ್ ಮತ್ತು ಡಿಎಂಕೆ ಮಹಿಳೆಯರನ್ನು ಕೀಳಾಗಿ ಕಾಣುತ್ತಿವೆ, ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ’ ಎಂದೂ ಹರಿಹಾಯ್ದರು. 

ಡಿಎಂಕೆ ಪಕ್ಷವು ‘ಮಹಿಳಾ ವಿರೋಧಿ’ ಎಂದು ಜರಿದ ಮೋದಿ, ‘ಜೆ. ಜಯಲಲಿತಾ ಅವರು ಬದುಕಿದ್ದಾಗ ಈ ಪಕ್ಷವು ಅವರನ್ನು ಯಾವ ರೀತಿ ನಡೆಸಿಕೊಂಡಿತು ಎಂಬುದನ್ನು ತಮಿಳುನಾಡು ಜನರು ನೆನಪಿಟ್ಟುಕೊಳ್ಳಬೇಕು’ ಎಂದು ಹೇಳುವ ಮೂಲಕ ಎಐಎಡಿಎಂಕೆಯ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದರು.

2013ರಲ್ಲಿ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಬಿಜೆಪಿ ನಾಯಕ ಆಡಿಟರ್‌ ವಿ. ರಮೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದ ಮೋದಿ, ಪಕ್ಷದ  ನಾಯಕರಾಗಿದ್ದ ದಿವಂಗತ ಕೆ.ಎನ್‌. ಲಕ್ಷಣ್‌ ಸೇರಿದಂತೆ ಜಿಲ್ಲೆಯ ಮೂವರು ನಾಯಕರನ್ನು ಸ್ಮರಿಸಿಕೊಂಡರು. 

‘ಆಡಿಟರ್‌’ ರಮೇಶ್‌ ಅವರ ಬಗ್ಗೆ ಮಾತನಾಡುವಾಗ ಮೋದಿ ಅಕ್ಷರಶಃ ಭಾವುಕರಾದರು. ಕೆಲ ಕ್ಷಣ ತಮ್ಮ ಭಾಷಣಕ್ಕೆ ವಿರಾಮ ನೀಡಿ, ಮತ್ತೆ ಮಾತು ಆರಂಭಿಸಿದರು. ಬಿಜೆಪಿಯ ನಾಯಕರಾಗಿದ್ದ ದಿವಂಗತ ಕೆ.ಎನ್‌. ಲಕ್ಷಣ್‌ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು.

ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರಿದ್ದಕ್ಕಾಗಿ ರಾಜ್ಯದ ಉತ್ತರ ಭಾಗದ ಪ್ರಭಾವಿ ಪಕ್ಷ ಪಿಎಂಕೆ ನಾಯಕರಿಗೂ ಧನ್ಯವಾದ ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಮೋದಿ ಅವರು ಡಿಎಂಕೆ ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡರು. ಆದರೆ, ಕಳೆದ ವರ್ಷ ಬಿಜೆಪಿ ಜತೆಗೆ ಮೈತ್ರಿ ಮುರಿದುಕೊಂಡ ಎಐಎಡಿಎಂಕೆ ಬಗ್ಗೆ ಏನನ್ನೂ ಮಾತನಾಡಲಿಲ್ಲ. ಸೇಲಂ ಎಐಎಡಿಎಂಕೆಯ ಭದ್ರಕೋಟೆಯಾಗಿದ್ದು, ರಾಜ್ಯದ ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಇಲ್ಲಿ ಪ್ರಭಾವಿ ನಾಯಕನೆನಿಸಿದ್ದಾರೆ.

‘ಶಕ್ತಿ ನಾಶಕ್ಕೆ ಯತ್ನಿಸುವರು ನಾಶವಾಗುತ್ತಾರೆ’

‘ಶಕ್ತಿ’ ಕುರಿತ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮೋದಿ ಅವರು, ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರಿಗೆ ಹಿಂದೂ ಧರ್ಮವನ್ನು ಅವಮಾನಿಸುವುದು ಅಭ್ಯಾಸವಾಗಿದೆ ಎಂದು ಹರಿಹಾಯ್ದರು.

‘ತಮಿಳುನಾಡಿನ ಜನರಿಂದ ಪೂಜಿಸಲ್ಪಡುವ ಸಮಯಪುರಂ ಮಾರಿಯಮ್ಮನ್, ಮದುರೈ ಮೀನಾಕ್ಷಿ ಮತ್ತು ಕಾಂಚೀಪುರಂ ಕಾಮಾಕ್ಷಿಯಂತಹ ಅನೇಕ ದೇವತೆಗಳಲ್ಲಿ ‘ಶಕ್ತಿ’ ಇದೆ. ಆದರೆ, ಕಾಂಗ್ರೆಸ್ ಮತ್ತು ಡಿಎಂಕೆಯ ‘ಇಂಡಿಯಾ’ ಮೈತ್ರಿಯು ಶಕ್ತಿಯನ್ನು ನಾಶಪಡಿಸುವುದಾಗಿ ಹೇಳುತ್ತಿದೆ. ಈ ರೀತಿ ಹೇಳುವರು ನಾಶವಾಗಿ ಹೋಗುತ್ತಾರೆ. ಶಕ್ತಿ ನಾಶಮಾಡಲು ಯೋಚಿಸುವವರಿಗೆ ವಿನಾಶ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಧರ್ಮಗ್ರಂಥಗಳೇ ಸಾಕ್ಷಿಯಾಗಿವೆ’ ಎಂದು ಎಚ್ಚರಿಸಿದರು.

ಕೇರಳದ ಪಾಲಕ್ಕಾಡ್‌ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೂವಿನ ಅಲಂಕೃತ ವಾಹನದಲ್ಲಿ ರೋಡ್‌ ಶೋ ನಡೆಸಿ ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚಿಸಿದರು

ಕೇರಳದ ಪಾಲಕ್ಕಾಡ್‌ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೂವಿನ ಅಲಂಕೃತ ವಾಹನದಲ್ಲಿ ರೋಡ್‌ ಶೋ ನಡೆಸಿ ಎನ್‌ಡಿಎ ಅಭ್ಯರ್ಥಿಗಳ ಪರ ಮತಯಾಚಿಸಿದರು

– ಪಿಟಿಐ ಚಿತ್ರ

ಕೇರಳದಲ್ಲೂ ಮೋದಿ ಬೃಹತ್‌ ರೋಡ್‌ ಶೋ

ಪಾಲಕ್ಕಾಡ್‌ (ಕೇರಳ): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳಿಗೆ ರಾಜ್ಯದ ಮತದಾರರ ಬೆಂಬಲಗಿಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಲ್ಲಿ ಬೃಹತ್ ರೋಡ್‌ ಶೋ ನಡೆಸಿದರು. ಬಿಜೆಪಿಯ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಭಾಗವಹಿಸಿದ್ದರು. ಸೇಲಂನಿಂದ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಪಾಲಕ್ಕಾಡ್‌ಗೆ ಬಂದಿಳಿದ ಮೋದಿ ನಗರದಲ್ಲಿ ಸುಮಾರು 30 ನಿಮಿಷ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಬಿಸಿಲ ಧಗೆಯನ್ನು ಲೆಕ್ಕಿಸದೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಬೆಂಬಲಿಗರು ಪುಷ್ಪವೃಷ್ಟಿ ಮಾಡಿ ಮೋದಿ ಮತ್ತು ಬಿಜೆಪಿ ಬೆಂಬಲಿಸಿ ಘೋಷಣೆ ಕೂಗಿದರು. ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಕೆ.ಸುರೇಂದ್ರನ್‌ ‘ಮೋದಿಯವರು ಕೇರಳಕ್ಕೆ ಜನವರಿಯಿಂದ ಈವರೆಗೆ ಐದನೇ ಬಾರಿಗೆ ಭೇಟಿ ನೀಡಿದಂತಾಗಿದೆ. ಮೋದಿಯವರ ಭೇಟಿ ಮತ್ತು ಜನರ ಬೆಂಬಲ ಕೇರಳದಲ್ಲಿ ಪಕ್ಷದ ವಿಶ್ವಾಸವನ್ನು ಹೆಚ್ಚಿಸಿದೆ. ಮುಸ್ಲಿಂ ಮಹಿಳೆಯರು ಕೂಡ ಮೋದಿಯವರಿಗೆ ಶುಭ ಕೋರಲು ಸೇರಿದ್ದರು. ಮೋದಿ ಮತ್ತೊಮ್ಮೆ ಕೇರಳಕ್ಕೆ ಚುನಾವಣಾ ಪ್ರಚಾರ ನಡೆಸಲು ಬರಲಿದ್ದಾರೆ. ಪಕ್ಷವು ಈ ಬಾರಿ ರಾಜ್ಯದಲ್ಲಿ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೇಸರಿ ಪಕ್ಷವು ಯಾವುದೇ ಮಹತ್ವದ ಚುನಾವಣಾ ವಿಜಯ ಕಂಡಿಲ್ಲ. ಪ್ರಧಾನಿಯವರು ಪದೇ ಪದೇ ನೀಡುತ್ತಿರುವ ಭೇಟಿ ಈ ಬಾರಿಯ ಚುನಾವಣೆಯಲ್ಲಿಎನ್‌ಡಿಎ ಕೇರಳಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿತೋರಿಸುತ್ತಿದೆ.

ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್‌

ನರೇಂದ್ರ ಮೋದಿ ಅವರು ಕೇರಳಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದಕ್ಕೆ ಟೀಕಿಸಿರುವ ಕಾಂಗ್ರೆಸ್‌ ಮೋದಿ ಅವರು ಈ ಹಿಂದೆ ಕೇರಳವನ್ನು ಸೊಮಾಲಿಯಾಕ್ಕೆ ಹೋಲಿಸಿದ್ದಕ್ಕಾಗಿ ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದೆ. 2016ರಲ್ಲಿ ಚುನಾವಣಾ ಪ್ರಚಾರದ ವೇಳೆ ಮೋದಿ ಅವರು ಕೇರಳದಲ್ಲಿ ಪರಿಶಿಷ್ಟ ಪಂಗಡದಲ್ಲಿ ಶಿಶು ಮರಣ ಪ್ರಮಾಣ ಸೊಮಾಲಿಯಾಕ್ಕಿಂತ ಹೀನಾಯವಾಗಿದೆ ಎಂದು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ನೆನಪಿಸಿದ್ದಾರೆ. ‘ಪ್ರಧಾನಿಯವರು ಕುಖ್ಯಾತ ಸೋಮಾಲಿಯಾಕ್ಕೆ ಕೇರಳವನ್ನು ಹೋಲಿಸಿದ್ದರು. ಆದರೆ ಅಭಿವೃದ್ಧಿ ಸೂಚ್ಯಂಕಗಳಲ್ಲಿ ದೇಶದ ಎಲ್ಲ ರಾಜ್ಯಗಳಿಗಿಂತ ಕೇರಳದ ಸಾಧನೆ ಉತ್ತಮವಾಗಿದೆ. ರಾಜ್ಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಟೀಕೆ ಮಾಡಿದ್ದಕ್ಕಾಗಿ ಮೋದಿಯವರು ಈಗ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತಾರೆಯೇ?’ ಎಂದು ಜೈರಾಮ್‌ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ‘ಮೋದಿ ನೇತೃತ್ವದ ಸರ್ಕಾರವು ತಮಗೆ ಬೇಕಾದ ಕೆಲವು ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಪರಿಸರ ಮತ್ತು ಅರಣ್ಯ ಕಾನೂನನ್ನು ದುರ್ಬಲಗೊಳಿಸಿದೆ. ಇದು ಬಹುಶಃ ಬಿಜೆಪಿಯ ಚುನಾವಣಾ ಬಾಂಡ್‌ಗಳ ಖರೀದಿಯ ಋಣ ತೀರಿಸಲು ಮಾಡಿರುವ ಹುನ್ನಾರವೆನಿಸುತ್ತದೆ. ಈ ಮೂಲಕ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯ ಮೇಲೆ ನಿರಂತರ ಆಕ್ರಮಣ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಮೋದಿ ಬಿಜೆಪಿ ವಿರುದ್ಧ ಎಲ್‌ಡಿಎಫ್‌ ಕಿಡಿ 

ತಿರುವನಂತಪುರ/ಮಲಪ್ಪುರಂ: ಪ್ರಧಾನಿ ಮೋದಿ ಅವರು ಪಾಲಕ್ಕಾಡ್‌ನಲ್ಲಿ ಮಂಗಳವಾರ ನಡೆಸಿದ ರೋಡ್‌ ಶೋನಿಂದ ಎನ್‌ಡಿಎ ಅಭ್ಯರ್ಥಿ ಅಬ್ದುಲ್‌ ಸಲಾಂ ಅವರನ್ನು ದೂರವಿರಿಸಲಾಗಿತ್ತು ಎಂದು ಆರೋಪಿಸಿರುವ ಕೇರಳದ ಆಡಳಿತರೂಢ ಎಲ್‌ಡಿಎಫ್‌ ಈ ವಿಷಯ ಮುಂದಿಟ್ಟುಕೊಂಡು ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.  ಮೋದಿಯವರ ಬೃಹತ್ ರೋಡ್‌ ಶೋ ನಡೆದ ಕೆಲವೇ ಗಂಟೆಗಳ ನಂತರ ಸಿಪಿಎಂ ನಾಯಕ ಎ.ಕೆ. ಬಾಲನ್ ಅವರು ಮಲಪ್ಪುರಂ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಸಲಾಂ ರೋಡ್‌ ಶೋ ಭಾಗವಾಗಿರುತ್ತಾರೆಂದು ಮೊದಲೇ ಘೋಷಿಸಿದ್ದರು. ಆದರೆ ಅವರನ್ನು ಕಾರ್ಯಕ್ರಮದಿಂದ ದೂರವಿಡಲಾಗಿದೆ. ‘ಇದು ಮುಸ್ಲಿಮನು ಮೋದಿಯ ಹತ್ತಿರ ನಿಲ್ಲಲು ಸಾಧ್ಯವಿಲ್ಲ ಎಂಬ ತಪ್ಪು ಸಂದೇಶವನ್ನು ರವಾನಿಸಿದೆ’ ಎಂದು ಟೀಕಿಸಿದರು. ತಾರತಮ್ಯ ಆಗಿರುವುದನ್ನು ನಿರಾಕರಿಸಿರುವ ಎನ್‌ಡಿಎ ಮೈತ್ರಿಕೂಟದ ಕೇರಳದ ಏಕೈಕ ಮುಸ್ಲಿಂ ಅಭ್ಯರ್ಥಿ ಅಬ್ದುಲ್‌ ಸಲಾಂ ‘ರೋಡ್‌ ಶೋನಲ್ಲಿ ಪಾಲ್ಗೊಳ್ಳಲು ನನಗೆ ಆಹ್ವಾನ ಇರಲಿಲ್ಲ. ಮೋದಿ ಅವರ ಭೇಟಿಗೆ ಮತ್ತು ಅವರನ್ನು ಮಲಪ್ಪುರಂಗೆ ಆಹ್ವಾನಿಸುವ ಸಲುವಾಗಿ ನಾನು ಪಾಲಕ್ಕಾಡ್‌ಗೆ ಹೋಗಿದ್ದೆ. ನಾನು ಅವರನ್ನು ಭೇಟಿಯಾಗಿ ನನ್ನನ್ನು ಮಲಪ್ಪುರಂ ಕ್ಷೇತ್ರದ ಅಭ್ಯರ್ಥಿ ಎಂದು ಪರಿಚಯಿಸಿಕೊಂಡೆ. ಅವರು ನನ್ನನ್ನು ನೋಡಿ ಮುಗುಳ್ನಕ್ಕು ನನಗೆ ಶುಭ ಹಾರೈಸಿದರು’ ಎಂದು ಸ್ಪಷ್ಟನೆ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT