ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ 400 ಸೀಟು ಲಭ್ಯತೆ ಹಾಸ್ಯಾಸ್ಪದ, 300 ಅಸಾಧ್ಯ, 200 ಸವಾಲು: ಶಶಿ ತರೂರ್

Published 2 ಮೇ 2024, 10:40 IST
Last Updated 2 ಮೇ 2024, 10:40 IST
ಅಕ್ಷರ ಗಾತ್ರ

ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳುತ್ತಿರುವ ಬಿಜೆಪಿಯ ಅತಿಯಾದ ವಿಶ್ವಾಸವೇ ಒಂದು ತಮಾಷೆಯಂತೆ ಕಾಣಿಸುತ್ತಿದೆ. 300ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಅಸಾಧ್ಯ ಹಾಗೂ 200ರ ಗಡಿ ದಾಟುವುದೇ ದೊಡ್ಡ ಸವಾಲು’ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ.

ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಶಶಿ ತರೂರ್ ಮಾತನಾಡಿ, ‘ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಿಜೆಪಿಯದ್ದು ಶೂನ್ಯ ಸಂಪಾದನೆಯಾಗಲಿದೆ. ದಕ್ಷಿಣದಲ್ಲಿ ಈಬಾರಿ 2019ಕ್ಕಿಂತಲೂ ಕಳಪೆ ಸಾಧನೆ ಬಿಜೆಪಿಯದ್ದಾಗಿರಲಿದೆ. ಈವರೆಗೂ 190 ಕ್ಷೇತ್ರಗಳಿಗೆ ಮತದಾನವಾಗಿದೆ. ಮೂಲಗಳ ಪ್ರಕಾರ ಫಲಿತಾಂಶ ನಮಗೆ ಅನುಕೂಲಕರವಾಗಿರಲಿದೆ. ಹಾಗೆಂದ ಮಾತ್ರಕ್ಕೆ, ನಮಗೆ ಅದ್ಭುತ ಜಯ ಸಿಗಲಿದೆ ಎಂದು ಹೇಳುವುದಿಲ್ಲ. ಆದರೆ, ಹಾಲಿ ಸರ್ಕಾರಕ್ಕೂ ಅದು ಸುಲಭವಲ್ಲ ಎಂಬುದು ಸ್ಪಷ್ಟ’ ಎಂದರು.

ಬಿಜೆಪಿ ಮತದಾರರಲ್ಲಿ ಕುಂದಿದ ಉತ್ಸಾಹ

‘ಚುನಾವಣೆಯನ್ನು ನಿರಂತರವಾಗಿ ಗಮನಿಸುತ್ತಿರುವವರೇ ಕೆಲವೊಂದು ಅಂಶಗಳನ್ನು ಹೇಳುತ್ತಿದ್ದಾರೆ. 2014 ಮತ್ತು 2019ರ ಚುನಾವಣೆಯನ್ನು ಗಮನಿಸಿದರೆ, ಬಿಜೆಪಿ ಮತದಾರರಲ್ಲೇ ಆ ಉತ್ಸಾಹ ಉಳಿದಿಲ್ಲ. ಇದನ್ನು ಗಮನಿಸಿದಾಗ ನಾವು ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ. ಜತೆಗೆ, ಹಿಂದಿ ಭಾಷಿಕ ಪ್ರದೇಶಗಳಲ್ಲೂ ನಾವು ಪ್ರಜ್ಞಾಪೂರ್ವಕವಾಗಿಯೇ ಆಶಾವಾದಿಗಳಾಗಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟವು ಈ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಪ್ರಶ್ನೆಗೆ ಹಾಸ್ಯ ಭರಿತವಾಗಿ ಉತ್ತರಿಸಿದ ತರೂರ್, ‘ಕ್ರಿಕೆಟ್‌ ಫ್ಯಾನ್‌ ಸ್ಕೋರ್‌ ಊಹಿಸಿದಂತೆ ಚುನಾವಣೆಯ ಫಲಿತಾಂಶ ಊಹಿಸುವುದು ಕಷ್ಟ. ಆದರೆ ಗೆಲುವನ್ನು ನಿರೀಕ್ಷಿಸಬಲ್ಲೆ’ ಎಂದಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಬಹುಮತ ಕಳೆದುಕೊಳ್ಳಲಿದೆ ಎಂಬುದನ್ನು ಹೇಳಬಲ್ಲೆ. ಹಿಂದಿನ ಚುನಾವಣೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಗೆದ್ದಿಲ್ಲ. ಆದರೆ ಈ ಬಾರಿ 5ರಿಂದ 7 ಕ್ಷೇತ್ರಗಳನ್ನು ಗೆಲ್ಲುವುದಾಗಿ ಸಮೀಕ್ಷೆಗಳು ಹೇಳಿವೆ. ಕರ್ನಾಟಕದಲ್ಲಿ ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಈ ಬಾರಿ 10ರಿಂದ 17 ಸ್ಥಾನಗಳನ್ನು ಗೆಲ್ಲಲಿದೆ. ಕೆಲವರು 20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಇದೇ ರೀತಿ ಎಲ್ಲಾ ರಾಜ್ಯಗಳಲ್ಲೂ ಹಿಂದೆ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಹಲವು ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ತಿಳಿಸಿದ್ದಾರೆ.

ಇನ್ನೂ 353 ಕ್ಷೇತ್ರಗಳಿಗೆ ನಡೆಯಬೇಕಿದೆ ಮತದಾನ

‘ಉತ್ತರ ಭಾರತದಲ್ಲಿ ಕಳೆದ ಬಾರಿ ಬಿಜೆಪಿ ಬಹಳಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ ಆ ಸಾಧನೆ ಈ ಬಾರಿ ಕಷ್ಟ. ಉತ್ತರ ಮತ್ತು ದಕ್ಷಿಣದಲ್ಲಿ ಅವರ ಸ್ಥಾನಗಳು ಕಡಿಮೆಯಾಗಲಿವೆ. ಇನ್ನೂ 353 ಕ್ಷೇತ್ರಗಳಿಗೆ ಮತದಾನ ನಡೆಯಬೇಕಿದೆ. ನಾವು ಮತ್ತು ಇಂಡಿಯಾ ಒಕ್ಕೂಟದ ಇತರ ಪಕ್ಷಗಳು ಹೇಗೆ ಕೆಲಸ ಮಾಡಲಿವೆ ಎಂಬುದರ ಆಧಾರದಲ್ಲಿ ಇದು ನಿರ್ಧಾರವಾಗಲಿದೆ’ ಎಂದು ತರೂರ್ ಹೇಳಿದ್ದಾರೆ.

‘2014ರಲ್ಲಿ ಯುವ ಮತದಾರರು ಬಿಜೆಪಿಗೆ ಏಕೆ ಮತ ಹಾಕಿದರು ಎಂಬುದನ್ನು ಭಾರತೀಯ ನಾಗರಿಕನಾಗಿ ಪ್ರಶ್ನಿಸಿದ್ದೆ. ಉದ್ಯೋಗದ ನಿರೀಕ್ಷೆಯಲ್ಲಿ ಹತ್ತು ವರ್ಷಗಳ ಹಿಂದೆ ಬಿಜೆಪಿಗೆ ಮತ ಹಾಕಿದ್ದರು. ಆದರೆ ಅದು ಈವರೆಗೂ ಅವರಿಗೆ ಸಿಕ್ಕಿಲ್ಲ. ಕಳೆದ ಒಂದು ದಶಕದಲ್ಲಿ ಭಾರತದ ಶೇ 80ರಷ್ಟು ಜನಸಂಖ್ಯೆಯ ತಲಾದಾಯ ಕಡಿಮೆಯಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಭ್ರಮೆಯಲ್ಲೇ ಇಟ್ಟ ಬಿಜೆಪಿಗೆ ಈ ಶೇ 80ರಷ್ಟು ಮತದಾರರು ಏಕೆ ಮತ ಹಾಕುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

2014ರಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಈ ಅವಧಿಯಲ್ಲಿ ದೇಶ ಆರ್ಥಿಕವಾಗಿ ಕುಸಿಯಿತು. 2019ರಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಪುಲ್ವಾಮಾ ಮತ್ತು ಬಾಲಾಕೋಟ್ ದಾಳಿಗೆ ಸಂಬಂಧಿಸಿದಂತೆ ದೇಶದ ಭದ್ರತೆ ವಿಷಯ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂತು. ಆದರೆ ದೇಶದ ಆರ್ಥಿಕತೆಯನ್ನು ಇವರು ಹದಗೆಡಿಸಿದ ಪರಿಣಾಮ, ನೌಕರಿಯನ್ನೂ ಪಡೆಯಲಾಗದೆ, ಅತ್ತ ಅಗತ್ಯವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸಲೂ ಆಗದ ಸ್ಥಿತಿ ದೇಶದ ಜನರದ್ದಾಗಿದೆ’ ಎಂದು ತರೂರ್ ವಾಗ್ದಾಳಿ ನಡೆಸಿದ್ದಾರೆ.

ವೈಫಲ್ಯ ಮುಚ್ಚಿಕೊಳ್ಳಲು ಧರ್ಮದ ಆಧಾರದಲ್ಲಿ ಬಿಜೆಪಿ ಮತಯಾಚನೆ

’ಈ ಎಲ್ಲಾ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಧಾನಿ ಸಹಿತ ಎಲ್ಲಾ ಬಿಜೆಪಿ ನಾಯಕರು ಈಗ ಧರ್ಮದ ಆಧಾರದಲ್ಲಿ ಮತ ಯಾಚಿಸುತ್ತಿದ್ದಾರೆ. ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ, ಮತ ಪಡೆಯುವ ಹುನ್ನಾರ ನಡೆಸಿದೆ. ಆದರೆ ಈ ತಂತ್ರ ದೇಶದಲ್ಲಿ ಈವರೆಗೂ ಅತಿಯಾಗಿ ಬಳಕೆಯಾಗಿದೆ. ಇದೇ ಆಧಾರದಲ್ಲಿ ಆಲೋಚಿಸುವವರು ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ ತಟಸ್ಥ ಮತದಾರರು ಇವರ ಇಂಥ ತಂತ್ರಕ್ಕೆ ಮಣಿಯರು’ ಎಂದಿದ್ದಾರೆ.

‘ಚುನಾವಣೆ ಘೋಷಣೆಯಾದ ಮೇಲೆ ಮಾರ್ಚ್ 16ರಿಂದ ನೀತಿ ಸಂಹಿತೆ ಜಾರಿ ಮಾಡಿದ್ದು ಯಾವ ಕಾರಣಕ್ಕಾಗಿ. ಜೂನ್ 4 ಮತ ಎಣಿಕೆ ದಿನವಾಗಿದ್ದು, ಇದೂ ಕೂಡಾ ಅಸಂಬದ್ಧವಾಗಿದೆ. ಒಂದೊಮ್ಮೆ ದೇಶದಲ್ಲಿ ಚುನಾವಣಾ ಹಿಂಸಾಚಾರ ನಡೆಯುವ ಭೀತಿ ಇದ್ದಲ್ಲಿ, ಅದನ್ನು ತಡೆಗಟ್ಟಲು ಚುನಾವಣಾ ಆಯೋಗವು ಅನ್ಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬಹುದಾಗಿತ್ತು. ಕಡಿಮೆ ಅವಧಿಯಲ್ಲಿ ನಡೆಸಬಹುದಾದ ಚುನಾವಣೆಯನ್ನು ಅನಗತ್ಯವಾಗಿ ದೀರ್ಘಗೊಳಿಸುವ ಮೂಲಕ, ತಮ್ಮ ಒಂದು ದೇಶ ಒಂದು ಚುನಾವಣೆ ಅಜೆಂಡಾವನ್ನು ಗುಪ್ತವಾಗಿ ಜಾರಿಗೊಳಿಸುವ ಉದ್ದೇಶ ಇರುವ ಸಾಧ್ಯತೆ ಇದೆ’ ಎಂದು ತರೂರ್ ಹೇಳಿದ್ದಾರೆ.

ಕೇರಳದ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಶಶಿ ತರೂರ್ ಅವರ ವಿರುದ್ಧ ಬಿಜೆಪಿಯ ರಾಜೀವ್ ಚಂದ್ರಶೇಖರ್, ಸಿಪಿಐನ ಪಿ.ರವೀಂದ್ರನ್ ಸ್ಪರ್ಧಿಸಿದ್ದಾರೆ. ಏ. 26ರಂದು ಇಲ್ಲಿ ಮತದಾನ ನಡೆದಿದೆ. ಒಂದೊಮ್ಮೆ ಈ ಬಾರಿ ತರೂರ್‌ ಗೆಲುವು ಸಾಧಿಸಿದರೆ, ನಾಲ್ಕನೇ ಬಾರಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸದ ಎಂದೆನಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT