ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ | ತಿರುವನಂತಪುರ: ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್

Published 24 ಮಾರ್ಚ್ 2024, 0:30 IST
Last Updated 24 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ರಾಜೀವ್‌ ಚಂದ್ರಶೇಖರ್‌(ಬಿಜೆಪಿ)

ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮೊದಲ ಬಾರಿ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಅದೂ ಪ್ರಬಲ ಅಭ್ಯರ್ಥಿಯಾಗಿರುವ ಶಶಿ ತರೂರ್‌ ವಿರುದ್ಧ. ಮೂಲತಃ ಕೇರಳದವರಾದರೂ ರಾಜೀವ್‌ ಅವರು ಕರ್ನಾಟಕ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಛಾಪು ಮೂಡಿಸಿದವರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತಿರುವನಂತಪುರ ಕ್ಷೇತ್ರದಲ್ಲಿ ಗೆಲುವಿನ ಸಾಧ್ಯತೆ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚಿದೆ ಎಂಬುದು ಸ್ಪಷ್ಟವಿದ್ದರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಮಣಿದು ಇವರು ಸ್ಪರ್ಧಾ ಕಣಕ್ಕಿಳಿದಿದ್ದಾರೆ. ರಾಜಕಾರಣದ ಜೊತೆಗೆ ಉದ್ಯಮಿಯಾಗಿಯೂ ಪ್ರಸಿದ್ಧರಾಗಿರುವ 59 ವರ್ಷದ ಚಂದ್ರಶೇಖರ್‌ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ಸ್ಪರ್ಧೆ ಮಹತ್ವದ್ದು ಎಂದು ವಿಶ್ಲೇಷಿಸಲಾಗಿದೆ. ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದ ಹಿನ್ನೆಲೆಯ ರಾಜೀವ್‌ ಅವರು ಕೇಂದ್ರ ಸರ್ಕಾದ ‘ಡಿಜಿಟಲ್‌ ಇಂಡಿಯಾ’ ಅಭಿಯಾನಕ್ಕೂ ಮಹತ್ವದ ಯೋಗದಾನ ನೀಡಿದ್ದಾರೆ.

ಶಶಿ ತರೂರ್ (ಕಾಂಗ್ರೆಸ್)

ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಅವರು ಈ ಬಾರಿಯೂ ಅಲ್ಲಿಂದಲೇ ಕಣಕ್ಕಿಳಿದಿದ್ದಾರೆ. ತರೂರ್‌ ಬಗ್ಗೆ ರಾಜ್ಯದ ಕೆಲವು ಕಾಂಗ್ರೆಸ್‌ ನಾಯಕರಲ್ಲಿ ಹಿಂದಿನಿಂದಲೂ ಅಸಮಾಧಾನವಿದ್ದರೂ ಇವರು ಹೈಕಮಾಂಡ್‌ನ ನೆಚ್ಚಿನ ಅಭ್ಯರ್ಥಿಯಾಗಿದ್ದಾರೆ. ಮೂಲತಃ ಕೇರಳದವರಾದ ತರೂರ್‌ ಅವರು ರಾಜ್ಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ವಾಗ್ಮಿ ಮತ್ತು ಲೇಖಕರಾಗಿರುವ ಇವರು ವಿಶ್ವಸಂಸ್ಥೆಯ ಶಾಂತಿಪಾಲಕರಾಗಿಯೂ ಕೆಲಸ ಮಾಡಿದ್ದರು. 68 ವರ್ಷದ ಅವರು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸುವ ಮೂಲಕ ಸ್ವಪಕ್ಷೀಯರ ಕೆಂಗಣ್ಣಿಗೂ ಗುರಿಯಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT