ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ಯ ದೇಶಗಳ ಪೈಪೋಟಿ ಎದುರಿಸಲು ಸನ್ನದ್ದ: ಅನುರಾಗ್ ಠಾಕೂರ್

2036ರ ಒಲಿಂಪಿಕ್ ಕೂಟದ ಬಿಡ್:
Published 11 ಮೇ 2024, 16:11 IST
Last Updated 11 ಮೇ 2024, 16:11 IST
ಅಕ್ಷರ ಗಾತ್ರ

ಹಮೀರ್ಪುರ್ (ಪಿಟಿಐ); 2036ರ ಒಲಿಂಪಿಕ್ ಕೂಟದ ಬಿಡ್ ಪಡೆಯುವಲ್ಲಿ ಭಾರತದ ಸಾಧ್ಯತೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಬೇರೆ ದೇಶಗಳ ಪೈಪೋಟಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿ (ಐಒಸಿ) ಮುಂದಿನ ವರ್ಷ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿರುವುದರಿಂದ ಕ್ರೀಡಾಕೂಟದ ಆತಿಥ್ಯವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭವಿಷ್ಯದ ಆತಿಥ್ಯ ಆಯೋಗವು 2026 ಅಥವಾ 2027 ಕ್ಕಿಂತ ಮೊದಲು ನಿರ್ಧರಿಸುತ್ತದೆ. ಭಾರತದ ಮಹತ್ವಾಕಾಂಕ್ಷೆಯ ಆಸಕ್ತಿಗೆ ಪ್ರಸ್ತುತ ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಅವರ ಬೆಂಬಲ ದೊರೆತಿದೆ.  

‘ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಪೋಲೆಂಡ್, ಇಂಡೊನೇಷ್ಯಾ, ಮೆಕ್ಸಿಕೊ, ಕತಾರ್ ಮತ್ತು ಸೌದಿ ಅರೇಬಿಯಾದಂತಹ ಹಲವಾರು ದೇಶಗಳು ಸ್ಪರ್ಧೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಪೈಪೋಟಿ ಎದುರಿಸಲು ಸನ್ನದ್ದರಾಗಿದ್ದೇವೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.  

ಕಳೆದ ವರ್ಷ ನಮ್ಮ ಬಂಡವಾಳ ವೆಚ್ಚ ₹10 ಲಕ್ಷ ಕೋಟಿಗಳಾಗಿದ್ದರೆ, ಒಂದು ವರ್ಷದ ಹಿಂದೆ ಇದು ₹7.5 ಲಕ್ಷ ಕೋಟಿ. ಈ ವರ್ಷ ಅದು ₹11,11,111 ಕೋಟಿ. ಕ್ರೀಡಾ ಮೂಲಸೌಕರ್ಯಕ್ಕೆ ಕೇವಲ ₹5,000 ಕೋಟಿ. ಇದು ₹20,000 ಕೋಟಿ ತಲುಪಿದರೂ ಮಾಡಬಹುದು’ ಎಂದು ಅವರು ವೆಚ್ಚದ ಅಂಶ ಬಗ್ಗೆ ವಿವರಿಸಿದರು. 

ಕೇಂದ್ರ ಸರ್ಕಾರ ತನ್ನ ಸಿದ್ಧತೆ ಪ್ರಾರಂಭಿಸಿದೆ ಮತ್ತು 2030ರ ಯೂತ್ ಒಲಿಂಪಿಕ್ಸ್‌ ಆತಿಥ್ಯ ಹಕ್ಕುಗಳನ್ನು ಗೆಲ್ಲುವ ಮೂಲಕ ತನ್ನ ವಾದವನ್ನು ಬಲಪಡಿಸಲು ಬಯಸಿದೆ. ಎರಡೂ ಕೂಟಗಳಿಗೂ ಅಹಮದಾಬಾದ್ ಅನ್ನು ಆತಿಥ್ಯ ನಗರವಾಗಿ ಸಿದ್ಧಪಡಿಸುವ ಯೋಜನೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶದ ಕ್ರೀಡಾಪಟುಗಳ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಹತ್ತಕ್ಕೂ ಹೆಚ್ಚು ಪದಕಗಳನ್ನು ಪಡೆಯುವಂತಾಗಬೇಕು ಎಂದರು.  

ಕ್ರೀಡಾಕೂಟವನ್ನು ಆಯೋಜಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಉದಾಹರಣೆಗೆ ಐಪಿಎಲ್ ಪ್ರಾರಂಭವಾದಾಗಿನಿಂದ ಒಂದು–ಎರಡು ತಿಂಗಳಲ್ಲಿ ಹಲವಾರು ಜನರಿಗೆ ಉದ್ಯೋಗ ಒದಗಿಸಿದೆ. ಇದು ದೇಶದ ಆರ್ಥಿಕತೆಗೆ ನೆರವಾಗಲಿದೆ. ಕ್ರೀಡಾಕೂಟದ ಆತಿಥ್ಯ ವಹಿಸುವುದರಿಂದ ಭಾರತದಂತಹ ದೇಶಕ್ಕೆ ಲಾಭವಾಗಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT