ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ಅಮೇಠಿಯಿಂದ ಸ್ಪರ್ಧೆ: ಪಕ್ಷದ ನಿರ್ಧಾರಕ್ಕೆ ಬದ್ಧ ಎಂದ ರಾಹುಲ್ ಗಾಂಧಿ

Published 17 ಏಪ್ರಿಲ್ 2024, 14:31 IST
Last Updated 17 ಏಪ್ರಿಲ್ 2024, 14:31 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿಯಿಂದ ತಾವು ಸ್ಪರ್ಧಿಸುವ ಕುರಿತು ಹಬ್ಬಿರುವ ವದಂತಿಗಳಿಗೆ ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಈ ಬಗ್ಗೆ ಪಕ್ಷದ ಆದೇಶದಂತೆ ನಡೆಯುವೆ’ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ವೇಳೆ ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

‘ವಯನಾಡ್‌ ಜೊತೆಗೆ ಅಮೇಠಿಯಿಂದಲೂ ಕಣಕ್ಕಿಳಿಯುತ್ತೀರಾ’ ಎಂಬ ಪ್ರಶ್ನೆಗೆ, ‘ನಾನು ಅಮೇಠಿಯಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಕುರಿತು ಪಕ್ಷ ನೀಡುವ ಆದೇಶಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದು ರಾಹುಲ್‌ ಹೇಳಿದ್ದಾರೆ.

ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್‌ 26ರಂದು ಮತದಾನ ನಡೆಯಲಿದ್ದರೆ, ಅಮೇಠಿ ಕ್ಷೇತ್ರಕ್ಕೆ ಮೇ 20ರಂದು ಮತದಾನ ನಡೆಯುವುದು.

‘ವಿಶ್ವದ ದೊಡ್ಡ ಸುಲಿಗೆ ಯೋಜನೆ’: ಚುನಾವಣಾ ಬಾಂಡ್‌ ಯೋಜನೆ ಕುರಿತು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ‘ಈ ಯೋಜನೆಯು ವಿಶ್ವದ ಅತ್ಯಂತ ದೊಡ್ಡ ಸುಲಿಗೆ ಯೋಜನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಸಮರ್ಥಕ’ ಎಂದು ಆರೋಪಿಸಿದರು.

‘ಪ್ರಧಾನಿ ಮೋದಿ ಇತ್ತೀಚೆಗೆ ಕೆಲ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಗಳು ಪೂರ್ವಯೋಜಿತ. ಚುನಾವಣಾ ಬಾಂಡ್‌ಗಳನ್ನು ಸಮರ್ಥಿಸಿ ಅವರು ವಿವರಣೆ ನೀಡಿದ್ದಾರೆ. ಹೀಗಾಗಿ, ಅದೊಂದು ವಿಫಲ ಕಸರತ್ತು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT