ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ 1.01 ಕೋಟಿ ಮತದಾರರು

ಏಪ್ರಿಲ್‌ 23ರಂದು ಮಧ್ಯಾಹ್ನ 1 ಗಂಟೆ ನಂತರ ಪ್ರವಾಸಕ್ಕೆ ಕೊಂಡೊಯ್ಯಲು ಮನವಿ
Published 23 ಏಪ್ರಿಲ್ 2024, 15:36 IST
Last Updated 23 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಮೊದಲ ಬಾರಿಗೆ ಒಂದು ಕೋಟಿ ದಾಟಿದೆ. ಕೇಂದ್ರ, ದಕ್ಷಿಣ, ಉತ್ತರ ಲೋಕಸಭಾ ಕ್ಷೇತ್ರಗಳ ಜೊತೆಗೆ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಮತದಾರರಿದ್ದಾರೆ.

2024ರ ಜನವರಿಯಲ್ಲಿ ಪ್ರಕಟಿಸಿದ್ದ ಪಟ್ಟಿಯಲ್ಲಿ 97,13,349 ಮತದಾರರಿದ್ದರು. ಏಪ್ರಿಲ್‌ 23ರಂತೆ 1.01 ಕೋಟಿ ಮತದಾರರಿದ್ದಾರೆ.

ಏಪ್ರಿಲ್‌ 4ರವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿತ್ತು. ಅಲ್ಲಿಯವರೆಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣೆಗೆ 8,984 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 43,123 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು  ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

4,492 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದ್ದು, 11,793 ಕೇಂದ್ರ ಸಶಸ್ತ್ರ ಮೀಸಲು ಪಡೆ (ಸಿಎಪಿಎಫ್‌) ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ ಎಂದರು.

1 ಗಂಟೆ ನಂತರ ಪ್ರವಾಸ: ‘ನಗರದಲ್ಲಿರುವ ಪ್ರವಾಸಿ ಕ್ಯಾಬ್‌ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದ್ದು, ಏಪ್ರಿಲ್‌ 26ರಂದು ಮಧ್ಯಾಹ್ನ 1 ಗಂಟೆಯ ನಂತರವೇ ಪ್ರವಾಸಗಳು ಆರಂಭವಾಗಲಿವೆ. ನಗರ ಹಾಗೂ ನಗರದ ಹೊರಭಾಗಕ್ಕೆ ಪ್ರವಾಸ ಹೊರಡುವವರು ಬೆಳಿಗ್ಗೆಯೇ ಮತದಾನ ಮಾಡಿ ತೆರಳಲು ಸಂಸ್ಥೆಗಳೂ ನಮ್ಮೊಂದಿಗೆ ಕೈಜೋಡಿಸಿವೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿ ಮುನೀಶ್‌ ಮೌದ್ಗಿಲ್ ಉಪಸ್ಥಿತರಿದ್ದರು.

₹44.93 ಕೋಟಿ ಮೌಲ್ಯದ ವಸ್ತು ವಶ

ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾಗಣೆ ಮಾಡುತ್ತಿದ್ದ ₹44.93 ಕೋಟಿ ಮೌಲ್ಯದ ವಸ್ತುಗಳನ್ನು ಮಾರ್ಚ್ 16 ರಿಂದ ಏಪ್ರಿಲ್‌ 23ರವರ ಅವಧಿಯಲ್ಲಿ ಜಪ್ತಿ ಮಾಡಲಾಗಿದೆ.

₹11.45 ಕೋಟಿ ನಗದು, ₹18.64 ಕೋಟಿ ಮೌಲ್ಯದ 4.44 ಲಕ್ಷ ಲೀಟರ್‌ ಮದ್ಯ, ₹7.15 ಕೋಟಿ ಮೌಲ್ಯದ 226 ಕೆ.ಜಿ ಮಾದಕ ವಸ್ತು, ₹53.71 ಲಕ್ಷ ಮೌಲ್ಯದ 49.58 ಕೆ.ಜಿ ಚಿನ್ನ–ಬೆಳ್ಳಿ ಆಭರಣಗಳು, ₹1.17 ಕೋಟಿ ಮೌಲ್ಯದ ಉಡುಗೊರೆ, ₹5.97 ಕೋಟಿ ಮೌಲ್ಯದ ವಾಹನಗಳು ಸೇರಿದಂತೆ ₹44.93 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಪೊಲೀಸ್‌ ಠಾಣೆಯಲ್ಲಿ 116, ಅಬಕಾರಿ ಇಲಾಖೆಯಲ್ಲಿ 6,150 ಪ್ರಕರಣ ಸೇರಿದಂತೆ 6,266 ಎಫ್ಐಆರ್‌ಗಳನ್ನು ಈವರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದರು.

‘ನಿಷೇಧಾಜ್ಞೆ ಜಾರಿ: ಮದ್ಯ ಮಾರಾಟ ನಿಷೇಧ’

‘ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಪ್ರಿಲ್ 24ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ತಡರಾತ್ರಿ 12 ಗಂಟೆಯವರೆಗೆ ಸಿಆರ್‌ಪಿಸಿ ಸೆಕ್ಷನ್ 144ರಡಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ನಿಯಮ ಮೀರಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಸಾರ್ವಜನಿಕರು ಧೈರ್ಯವಾಗಿ ಮತದಾನ ಮಾಡಬೇಕು. ಚುನಾವಣೆ ಸಂಬಂಧಿತ ಯಾವುದೇ ಕ್ರಮ ಹಾಗೂ ತುರ್ತು ಸಹಾಯಕ್ಕಾಗಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT