ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಸಾವಿರ ಕೋಟಿ ಕಪ್ಪು ಹಣ ದೇಶಕ್ಕೆ ವಾಪಾಸ್‌ ಬಂದಿದೆ: ಗಣೇಶ್‌ ಕಾರ್ಣಿಕ್‌

Published 20 ಮಾರ್ಚ್ 2024, 12:02 IST
Last Updated 20 ಮಾರ್ಚ್ 2024, 12:02 IST
ಅಕ್ಷರ ಗಾತ್ರ

ಮಂಗಳೂರು: ‘ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಠೇವಣಿ ಇಟ್ಟಿದ್ದ ₹ 25 ಸಾವಿರ ಕೋಟಿಗಳಷ್ಟು ಕಪ್ಪು ಹಣ ಬೇರೆ ಬೇರೆ ರೂಪಗಳಲ್ಲಿ ದೇಶಕ್ಕೆ ವಾಪಾಸ್‌ ಬಂದಿದೆ’ ಎಂದು ಬಿಜೆಪಿ ಮುಖಂಡ ಗಣೇಶ ಕಾರ್ಣಿಕ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ವಿದೇಶಿ ಬ್ಯಾಂಕ್‌ಗಳಿಂದ ಹಣವನ್ನು ಹೊತ್ತುಕೊಂಡು ತರಲಾಗದು. ಕಪ್ಪುಹಣ ಠೇವಣಿ ಇಟ್ಟವರ ವಿವರ ಪಡೆದು, ಆಸ್ತಿ ಜಪ್ತಿ ಮಾಡುವಂತಹ ಪ್ರಕ್ರಿಯೆಗಳು ನಡೆದಿವೆ. ಕಪ್ಪು ಹಣ ಠೇವಣಿ ಕುರಿತು ಮಾಹಿತಿ ಹಂಚಿಕೊಳ್ಳುವ ಕುರಿತು ಕೆಲ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ವಿದೇಶದಿಂದ ಕಪ್ಪುಹಣ ಮರಳಿ ತಂದರೆ ಪ್ರತಿ ಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ಹಣ ಹಾಕಬಹುದು ಎಂಬ ಭರವಸೆಗೆ ಹೋಲಿಸಿದರೆ ₹ 25 ಸಾವಿರ ಕೋಟಿ ಮೊತ್ತ ತೀರಾ ಕಡಿಮೆ ಅಲ್ಲವೇ ಎಂಬ ಪ್ರಶ್ನೆಗೆ, ‘ಇದರ ಪ್ರಮಾಣ ಕಡಿಮೆ ಇರಬಹುದು. ಕಪ್ಪುಹಣ ಸಮಸ್ಯೆ ಸಂಪೂರ್ಣ ನಿವಾರಣೆ ಆಗಿದೆ ಎನ್ನುವುದಿಲ್ಲ. ಆದರೆ, ಕಪ್ಪು ಹಣ ಮರಳಿ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನೂ ಮುಂದುವರಿಯಲಿದೆ’ ಎಂದರು.

‘ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಪಕ್ಷಕ್ಕೆ ಹಾನಿ ಆಗಿಲ್ಲ. ಅಷ್ಟಕ್ಕೂ ಸಂಸತ್ತಿನಲ್ಲಿ ಕಾಯ್ದೆ ರೂಪಿಸಿದ ಬಳಿಕವೇ ಚುನಾವಣಾ ಬಾಂಡ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಚುನಾವಣಾ ಬಾಂಡ್‌ ಖರೀದಿ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳೆಲ್ಲವೂ ಊಹೆಗಳು ಮಾತ್ರ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ’ ಎಂದರು.

ಪುಲ್ವಾಮ‌ ದಾಳಿಯ ತನಿಖೆಯ ಸರಿಯಾಗಿ ನಡೆದಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸೇನೆಗೆ ಸಂಬಂಧಿಸಿ ನಡೆಯುವ ಸಣ್ಣ ದಾಳಿಯ ಕುರಿತೂ ಸಮಗ್ರವಾಗಿ ತನಿಖೆಯಾಗುತ್ತದೆ. ತನಿಖೆಯ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ. ಈ ಘಟನೆಯ ಅಗಾಧತೆ ನೋಡಿಕೊಂಡು ಸರ್ಕಾರ ಕೆಲವು ಕಠೋರ ನಿರ್ಣಯ ತೆಗೆದುಕೊಂಡಿದೆ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದಾಗ ಹಾಲಿ ಸಂಸದರು ಅತೃಪ್ತರಾಗುವುದು ಸಹಜ. ಅಸಮಾಧಾನ ವ್ಯಕ್ತಪಡಿಸಿರುವವರು ನಮ್ಮ‌ ಪಕ್ಷದ ಸೈದ್ದಾಂತಿಕ ನಿಲುವಿಗೆ ಬದ್ಧರಾಗಿರುವವರು. ಈ ಅಸಹನೆಗಳೆಲ್ಲವೂ ಕ್ರಮೇಣ ತಣ್ಣಗಾಗಲಿವೆ’ ಎಂದರು.

ಮಾಜಿ ಸೈನಿಕ ಬೃಜೇಶ್ ಚೌಟ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ನಿವೃತ್ತ ಸೈನಿಕರೂ ಆಗಿರುವ ಗಣೇಶ್‌ ಕಾರ್ಣಿಕ್‌ ಧನ್ಯವಾದ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಿತಿನ್ ಕುಮಾರ್,‌ ಸುದರ್ಶನ್ ಮೂಡುಬಿದಿರೆ‌, ಕಿಶೋರ್ ಕುಮಾರ್‌, ಸಂಜಯ ಪ್ರಭು, ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT