ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶ: ಪ್ರೊ.ಬಿ.ಕೆ.ಚಂದ್ರಶೇಖರ್

ಪಕ್ಷದ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ವಿಶ್ವಾಸ
Last Updated 21 ಏಪ್ರಿಲ್ 2023, 12:26 IST
ಅಕ್ಷರ ಗಾತ್ರ

ಮೈಸೂರು: ‘ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವುದಕ್ಕೆ ಎಲ್ಲ ರೀತಿಯ ಅವಕಾಶಗಳು ಜಾಸ್ತಿ ಇವೆ’ ಎಂದು ಪಕ್ಷದ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನನ್ನ ವಿದ್ಯಾರ್ಥಿಗಳ ತಂಡದಿಂದ ಸಮೀಕ್ಷೆ ನಡೆಸಿದ್ದೇನೆ. ಈ ಪ್ರಕಾರ, ಕಾಂಗ್ರೆಸ್‌ನತ್ತ ಜನರ ಒಲವು ಇರುವುದು ಕಂಡುಬಂದಿದೆ’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜಾಸ್ತಿ ಇದೆ ಮೊದಲಾದ ಸಮಸ್ಯೆಗಳನ್ನು ಜನರು ಹೇಳಿಕೊಳ್ಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌, ಪೆಟ್ರೋಲ್‌–ಡೀಸೆಲ್ ಮೊದಲಾದವುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಐಟಿ ಕ್ಷೇತ್ರದಲ್ಲಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಕೂಡ ಬಿಜೆಪಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಬಸವರಾಜ ಬೊಮ್ಮಾಯಿ ಮತ್ತೊಬ್ಬ ಮಂತ್ರಿಯಷ್ಟೇ ಆಗಿದ್ದಾರೆ. ಅವರಿಗೆ ಸರ್ಕಾರದ ಮೇಲೆ ಯಾವುದೇ‌ ಹಿಡಿತವಿಲ್ಲ; ಪೂರ್ಣ ಅಧಿಕಾರವನ್ನೂ ನೀಡಿಲ್ಲ’ ಎಂದು ದೂರಿದರು.

‘ಜನರ ಒಲವು ಬಿಜೆಪಿಯತ್ತ ಇಲ್ಲ ಎನ್ನುವ ಕಾರಣದಿಂದಲೇ ಹಾಗೂ ಆತಂಕದಿಂದಲೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಪದೇ ಪದೇ ಇಲ್ಲಿಗೆ ಬರುತ್ತಿದ್ದಾರೆ. ಗೆಲ್ಲುವ ವಿಶ್ವಾಸವಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ಪ್ರಧಾನಿಯು ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಬಂದು ಹೋಗಿರುವುದು ಅವರ ಆತಂಕವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಳ್ಳುವುದು ಕಷ್ಟ. ನಿಜವಾಗಿಯೂ ಅವರಿಗೆ ನೈತಿಕತೆ ಇದ್ದಿದ್ದರೆ ಪ್ರಧಾನಿ ಹುದ್ದೆಗೆ ತಕ್ಷಣವೇ ರಾಜೀನಾಮೆ ಕೊಡಬೇಕಾಗಿತ್ತು. ಪ್ರಜಾಪ್ರಭುತ್ವದ ತಾಯಿ ಭಾರತ ಎನ್ನುವುದನ್ನು ಬಾಯಿ ಮಾತಿನಲ್ಲಷ್ಟೆ ಹೇಳದೇ ನಡೆಯಲ್ಲೂ ಸಾಬೀತುಪಡಿಸಬೇಕಿತ್ತು’ ಎಂದರು.

‘ಸತ್ಯಪಾಲ್ ಮಲಿಕ್‌ ಪ್ರಧಾನಿ ವಿರುದ್ಧ ನೇರ ಹಾಗೂ ದಿಟ್ಟವಾಗಿ ಮಾತನಾಡಿದ್ದಾರೆ. ಇದನ್ನು ಶ್ಲಾಘಿಸಬೇಕು. ರಾಷ್ಟ್ರಪತಿಯೂ ಪ್ರಧಾನಿಯ ಕೈಗೊಂಬೆಯಾಗಿದ್ದಾರೆ. ಇದೆಲ್ಲದರ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಬೇಕಿತ್ತು. ಯಾವುದೇ ಕಾರಣಕ್ಕೂ ಸತ್ಯವನ್ನು ದಮನ ಮಾಡಲಾಗುವುದಿಲ್ಲ. ನಿರಂತರವಾಗಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡಲಾಗದು’ ಎಂದು ವಾಗ್ದಾಳಿ ನಡೆಸಿದರು.

‘ಲಕ್ಷ್ಮಣ ಸವದಿ ಸೇರ್ಪಡೆಯಿಂದ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT