ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೋಡ್ ಷೋನಲ್ಲಿ ‘ಮೈತ್ರಿ’ ಶಕ್ತಿ ಪ್ರದರ್ಶನ

ತೆರೆದ ವಾಹನದಲ್ಲಿ ಅಮಿತ್ ಶಾ ರೋಡ್ ಷೋ; ಕೇಸರಿ–ಹಸಿರುಮಯವಾದ ಚನ್ನಪಟ್ಟಣ
Published 3 ಏಪ್ರಿಲ್ 2024, 5:04 IST
Last Updated 3 ಏಪ್ರಿಲ್ 2024, 5:04 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಟ್ಟಣದಲ್ಲಿ ಮಂಗಳವಾರ ನಡೆಸಿದ ರೋಡ್ ಷೋ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಭಾರೀ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಶಾ ರೋಡ್ ಷೋ ಮತ್ತು ಭಾಷಣ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಚುನಾವಣಾ ಉತ್ಸಾಹ ತುಂಬಿತು.

ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯ ಮಂಗಳವಾರಪೇಟೆ ವೃತ್ತದಿಂದ ಪೊಲೀಸ್ ವೃತ್ತದವರೆಗೆ ಒಂದು ತಾಸು ರೋಡ್ ಷೋ ನಡೆಯಿತು. ಕಣ್ಣು ಹಾಯಿಸಿದತ್ತೆಲ್ಲಾ ಜನರೇ ಕಾಣುತ್ತಿದ್ದರು. ಇಡೀ ರಸ್ತೆ ಕೇಸರಿ ಮತ್ತು ಹಸಿರು ಬಾವುಟಗಳಿಂದ ರಾರಾಜಿಸುತ್ತಿತ್ತು. ಕಾರ್ಯಕರ್ತರು ‘ಭಾರತ್ ಮಾತಾ ಕೀ ಜೈ’, ‘ಜೈ ಶ್ರೀರಾಮ್’, ‘ವಂದೇ ಮಾತರಂ, ‘ಜೈ ಮೋದಿ, ಅಮಿತ್ ಶಾ’, ‘ಜೈ ಕುಮಾರಣ್ಣ’, ‘ಜೈ ದೇವೇಗೌಡ’ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಹೂವಿನ ಸ್ವಾಗತ: ಮಾರ್ಗದುದ್ದಕ್ಕೂ ಕಾರ್ಯಕರ್ತರು ಅಮಿತ್ ಶಾ ವಾಹನದತ್ತ ಹೂ ಎರಚಿ ಸ್ವಾಗತಿಸಿದರು. ಶಾ ಅವರು ಸಹ ಕಾರ್ಯಕರ್ತರತ್ತ ಹೂ ಎರಚಿ ಹುರಿದುಂಬಿಸಿದರು. ಕಿವಿಗಡಚಿಕ್ಕುವ ತಮಟೆ, ಡೊಳ್ಳುಗಳ ಸದ್ದಿನ ಜೊತೆಗೆ ಜಾನಪದ ಕಲಾತಂಡಗಳು ರೋಡ್‌ ಷೋಗೆ ವಿಶೇಷ ಮೆರಗು ತಂದವು. ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು.

ಹೆದ್ದಾರಿಯ ಒಂದು ಕಡೆ ರೋಡ್‌ ಷೋ ವಾಹನ ಸಾಗಲು ಹಾಗೂ ಮತ್ತೊಂದು ಕಡೆ ಜನ ಜಮಾಯಿಸಿದ್ದರು. ಜನರು ಅಮಿತ್ ಶಾ ಅವರತ್ತ ನುಗ್ಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಕಾರ್ಯಕರ್ತರು ಖಾಸಗಿ ಬಸ್ ಹಾಗೂ ವಾಹನಗಳಲ್ಲಿ ಸಂಜೆ 4 ಗಂಟೆಯಿಂದಲೇ ಚನ್ನಪಟ್ಟಣದತ್ತ ಬರತೊಡಗಿದರು. ಸಂಜೆ 5.30ರಿಂದ ರೋಡ್ ಷೋ ಮುಗಿಯವವರೆಗೆ ವಾಹನಗಳ ಸಂಚಾರ ಬಂದ್ ಮಾಡಿ, ಹೊಸ ಹೆದ್ದಾರಿಗೆ ತಿರುಗಿಸಲಾಗಿತ್ತು. ಷೋ ಮುಗಿಯುತ್ತಿದ್ದಂತೆ ಪಟ್ಟಣದಲ್ಲಿ ಸುಮಾರು ಅರ್ಧ ತಾಸು ಭಾರೀ ಸಂಚಾರ ದಟ್ಟಣೆಯಾಯಿತು.

ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್, ಚನ್ನಪಟ್ಟಣದ ಶಾಸಕರೂ ಆಗಿರುವ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎ. ಮಂಜುನಾಥ್ ಅವರು ಅಮಿತ್ ಶಾ ಅವರಿಗೆ ರೋಡ್‌ ಷೊನಲ್ಲಿ ಸಾಥ್ ನೀಡಿದರು.

ಬಿಗಿ ಬಂದೋಬಸ್ತ್: ರೋಡ್ ಷೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಮಾರ್ಗದ್ದುದ್ದಕ್ಕೂ ಪೊಲೀಸರು ಹಾಗೂ ಅರೆ ಸೇನಾಪಡೆ ಸಿಬ್ಬಂದಿ ಸಾವಿರಕ್ಕೂ ಹೆಚ್ಚು ಮಂದಿ ಕಟ್ಟೆಚ್ಚರ ವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಡ್ರೋನ್ ಕ್ಯಾಮೆರಾಗಳು ಸಹ ಹಾರಾಡಿದವು. ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಸ್ಥಳದಲ್ಲಿದ್ದು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಚನ್ನಪಟ್ಟಣದಲ್ಲಿ ಮಂಗಳವಾರ ರಾತ್ರಿ ರೋಡ್ ಷೋ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಪರವಾಗಿ ಅವರ ಕೈ ಹಿಡಿದೆತ್ತಿ ಮತ ಯಾಚಿಸಿದರು
ಚನ್ನಪಟ್ಟಣದಲ್ಲಿ ಮಂಗಳವಾರ ರಾತ್ರಿ ರೋಡ್ ಷೋ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಪರವಾಗಿ ಅವರ ಕೈ ಹಿಡಿದೆತ್ತಿ ಮತ ಯಾಚಿಸಿದರು
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಷೋ ಕಣ್ತುಂಬಿಕೊಳ್ಳಲು ತಾಸಿಗೂ ಮುನ್ನವೇ ಬಂದ ರಸ್ತೆ ಬದಿ ಕುಳಿತಿದ್ದ ಜನ
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಷೋ ಕಣ್ತುಂಬಿಕೊಳ್ಳಲು ತಾಸಿಗೂ ಮುನ್ನವೇ ಬಂದ ರಸ್ತೆ ಬದಿ ಕುಳಿತಿದ್ದ ಜನ
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಷೋ ನಡೆಸುವುದಕ್ಕೆ ಮುಂಚೆ ಷೋ ಮಾರ್ಗದಲ್ಲಿ ಗಸ್ತು ತಿರುಗಿದ ಅರೆ ಸೇನಾಪಡೆ ಸಿಬ್ಬಂದಿ
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಷೋ ನಡೆಸುವುದಕ್ಕೆ ಮುಂಚೆ ಷೋ ಮಾರ್ಗದಲ್ಲಿ ಗಸ್ತು ತಿರುಗಿದ ಅರೆ ಸೇನಾಪಡೆ ಸಿಬ್ಬಂದಿ
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಷೋ ಸಂದರ್ಭದಲ್ಲಿ ಮೋದಿ ಮುಖವಾಡ ಧರಿಸಿದ್ದ ಕಾರ್ಯಕರ್ತರು ಡೊಳ್ಳು ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ
ಚನ್ನಪಟ್ಟಣದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್ ಷೋ ಸಂದರ್ಭದಲ್ಲಿ ಮೋದಿ ಮುಖವಾಡ ಧರಿಸಿದ್ದ ಕಾರ್ಯಕರ್ತರು ಡೊಳ್ಳು ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ
ಚನ್ನಪಟ್ಟಣದಲ್ಲಿ ಮಂಗಳವಾರ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಷೋ ಸಂದರ್ಭದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು
ಚನ್ನಪಟ್ಟಣದಲ್ಲಿ ಮಂಗಳವಾರ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಷೋ ಸಂದರ್ಭದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು
ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಎಸ್‌ಡಿಪಿಐ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡುತ್ತಿದೆ. ಇದು ರಾಷ್ಟ್ರ ಮತ್ತು ರಾಜ್ಯದ ಸುರಕ್ಷತೆಗೆ ದೊಡ್ಡ ಸವಾಲು. ಅಂತಹವರ ಸಹವಾಸ ಮಾಡಿದವರನ್ನು ಕಿತ್ತೊಗೆಯಬೇಕು –
ಅಮಿತ್ ಶಾ ಗೃಹ ಸಚಿವ
ಜನ ಬಯಸಿರುವ ಬದಲಾವಣೆಯ ಗಾಳಿ ಚನ್ನಪಟ್ಟಣದಿಂದಲೇ ಶುರುವಾಗಿದೆ. ಇಲ್ಲಿರುವ ಜನಸಾಗರ ನೋಡಿದರೆ ನನ್ನ ಗೆಲುವಿನಲ್ಲಿ ಅನುಮಾನವಿಲ್ಲ. ಮೋದಿ ಅವರ ಮಿಷನ್ 400 ಸ್ಥಾನಗಳಲ್ಲಿ ನಾನೂ ಒಬ್ಬನಾಗುವುದು ನಿಶ್ಚಿತ
ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಅಭ್ಯರ್ಥಿ

ಮೋದಿ ಕೈ ಬಲಪಡಿಸಿದರೆ ದೇಶ ಸುಭದ್ರ’ ‘

ಇಡೀ ದೇಶದಲ್ಲಿ ಮೋದಿ ಅಲೆ ಎದ್ದಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೇಳಲು ನಾನು ರಾಜ್ಯಕ್ಕೆ ಬಂದಿರುವೆ. ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರನ್ನು 5 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಗುಜರಾತ್ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಮೋದಿ ಅವರು ದೇಶದ ಪ್ರಧಾನಿಯಾಗಿ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ನೀವು ಹಾಕುವ ಒಂದೊಂದು ಮತವೂ ಮೋದಿ ಅವರನ್ನು ತಲುಪುತ್ತದೆ. ಅವರ ಕೈ ಬಲಪಡಿಸಿದರೆ ದೇಶ ಸುಭದ್ರವಾಗಿರುತ್ತದೆ’ ಎಂದು ಗೃಹ ಸಚಿವ ಅಮಿತ್ ಶಾ ಅವರು ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರ ಕೈ ಹಿಡಿದು ಹೇಳಿದರು. ‘ಸಿಎಂ ಡಿಸಿಎಂ ನಿದ್ದೆಗೆಡಿಸಿದ ಒಗ್ಗಟ್ಟು’ ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿದ್ದೆಗೆಡಿಸಿದೆ. ನಮ್ಮ ಮೈತ್ರಿಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ನಡುಕ ಶುರುವಾಗಿದೆ. ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಈ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದ ಮಂಜುನಾಥ್ ಸೇರಿದಂತೆ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ’ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಆರಂಭ–ಅಂತ್ಯದಲ್ಲೂ ‘ಶ್ರೀ ರಾಮ್’ ‘ಜೈ ಶ್ರೀರಾಮ್’ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯೊಂದಿಗೆ ಭಾಷಣ ಆರಂಭಿಸಿದ ಗೃಹ ಸಚಿವ ಅಮಿತ್ ಶಾ ಅವರು ಅಂತ್ಯವನ್ನು ಸಹ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಮುಗಿಸಿದರು. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಅದೇ ಘೋಷಣೆಯೊಂದಿಗೆ ಭಾಷಣ ಅಂತ್ಯಗೊಳಿಸಿದರು.

ಜೆಡಿಎಸ್‌ ಸತ್ತಿದೆ ಎಂದವರಿಗೆ ಇದೇ ಉತ್ತರ’

‘ಜೆಡಿಎಸ್ ಎಲ್ಲಿದೆ? ರಾಜ್ಯದಲ್ಲಿ ಆ ಪಕ್ಷ ಸತ್ತು ಹೋಗಿದೆ ಎಂದವರಿಗೆ ಇಲ್ಲಿ ಸೇರಿರುವ ಜನಸಾಗರವೇ ಉತ್ತರವಾಗಿದೆ. ಈ ಚುನಾವಣೆ ಧರ್ಮಯುದ್ದವಾಗಿದ್ದು ಧರ್ಮವು ಗೆಲುವು ಸಾಧಿಸಲಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಐತಿಹಾಸಿಕ ಗೆಲುವಿನೊಂದಿಗೆ ಟೀಕಾಕಾರರಿಗೆ ಉತ್ತರ ನೀಡಬೇಕು’ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು. ‘ಅಮಿತ್ ಶಾ ಅವರ ರೋಡ್ ಷೊಗೆ ಚನ್ನಪಟ್ಟಣ ಆಯ್ಕೆ ಮಾಡಿದ್ದಕ್ಕೆ ವಿಶೇಷ ಧನ್ಯವಾದ. ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಉತ್ತರ ಕೊಡಲು ಅಮಿತ್ ಶಾ ಅವರು ಮಂಜುನಾಥ್ ಅವರೇ ಅಭ್ಯರ್ಥಿ ಆಗಬೇಕು ಎಂದು ಸಲಹೆ ನೀಡಿದರು. ಅದರಂತೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನವರ ಸೀರೆ ಕುಕ್ಕರ್ ಹಾಗೂ ಹಣದ ಆಮಿಷಕ್ಕೆ ಮರುಳಾಗದೆ ಮಂಜುನಾಥ್ ಗೆಲ್ಲಿಸಿ’ ಎಂದು ಮನವಿ ಮಾಡಿದರು. ‘ಚುನಾವಣೆಗಾಗಿ ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿದರೂ ನನ್ನ ಹೃದಯ ರಾಮನಗರ ಜಿಲ್ಲೆಯಲ್ಲೇ ಇದೆ. ಈ ಊರು ಬಿಟ್ಟು ಹೋಗುವುದಿಲ್ಲ. ಹುಟ್ಟಿದ್ದು ಹಾಸನವಾದರೂ ರಾಜಕೀಯವಾಗಿ ಬೆಳೆಸಿ ಸಾಕಿದ್ದು ರಾಮನಗರ. ಇಲ್ಲಿನವರ ಋಣವನ್ನು ಬದುಕಿರುವವರೆಗೆ ಮರೆಯಲಾರೆ. ಗಂಡು ಮೆಟ್ಟಿದ ಚನ್ನಪಟ್ಟಣದ ಜನರ ಆಶೀರ್ವಾದ ಇರುವವರೆಗೆ ನನ್ನನ್ನು ಯಾರೂ ಏನೂ ಮಾಡಲಾರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT