ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ತೇಜಸ್ವಿ ಪ್ರಭೆಗೆ ಮಂಕಾದ ಕಾಂಗ್ರೆಸ್‌

Published 4 ಜೂನ್ 2024, 16:27 IST
Last Updated 4 ಜೂನ್ 2024, 16:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರನ್ನು 2,77,083 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿಯನ್ನು ಮಣಿಸುವಲ್ಲಿ ಕಾಂಗ್ರೆಸ್‌ ಈ ಬಾರಿಯೂ ವಿಫಲವಾಗಿದೆ.

ಈ ಕ್ಷೇತ್ರ ಪರಂಪರಾಗತವಾಗಿ ಕಾಂಗ್ರೆಸ್ಸೇತರ ಕ್ಷೇತ್ರವೆಂದು ಗುರುತಿಸಿಕೊಂಡಿದೆ. ಹಿಂದೆ ಜನತಾ ಪಕ್ಷ ಮತ್ತು ಜನತಾದಳದ ಭ್ರದಕೋಟೆಯಾಗಿತ್ತು. ಆ ಬಳಿಕ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅನಂತಕುಮಾರ್ ಅವರ ನಿಧನದ ಬಳಿಕ 2019 ರಲ್ಲಿ ಈ ಕ್ಷೇತ್ರಕ್ಕೆ ಬಿಜೆಪಿ ತೇಜಸ್ವಿಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತು. ತೇಜಸ್ವಿ ಸೂರ್ಯ ಅವರಿಗೆ ಇದು ಎರಡನೇ ಗೆಲುವು.

ಕಾಂಗ್ರೆಸ್‌ನಿಂದ ಈ ಕ್ಷೇತ್ರದಲ್ಲಿ ಯಾರೂ ಸ್ಪರ್ಧಿಸಲು ತಯಾರಿಲ್ಲದಿದ್ದಾಗ, ಸೌಮ್ಯಾರೆಡ್ಡಿ ಅವರು ಸ್ಪರ್ಧೆಗೆ ಆಸಕ್ತಿ ತೋರಿದರು. ಅದರ ಪರಿಣಾಮ ಪಕ್ಷ ಅವರಿಗೆ ಟಿಕೆಟ್‌ ನೀಡಿತು. ಕ್ಷೇತ್ರದ ಉದ್ದಗಲ ಓಡಾಡಿ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿಯ ಗೆಲುವಿಗಾಗಿ ಸಾಕಷ್ಟು ಶ್ರಮ ಹಾಕಿದ್ದರು ಆದರೆ, ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇಬ್ಬರ ಪ್ರಯತ್ನವೂ ಫಲ ನೀಡಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳು ಮತ್ತು ತಾವು ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತವನ್ನು ಯಾಚಿಸಿದರು. ಜೆಡಿಎಸ್‌ ಪಕ್ಷವೂ ಇವರ ಬೆಂಬಲಕ್ಕೆ ನಿಂತಿತು. ಇವೆಲ್ಲವೂ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದಕ್ಕೆ ಸಹಾಯವಾಯಿತು. ಕಾಂಗ್ರೆಸ್ ಕೂಡ ಈ ಬಾರಿ ಗೆದ್ದೇ ತಿರಬೇಕು ಎಂಬ ಕಾರಣಕ್ಕೆ ಜಿದ್ದಾಜಿದ್ದಿನ ಪೈಪೋಟಿ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕ್ಷೇತ್ರದಲ್ಲಿ ಎರಡೆರಡು ಬಾರಿ ಪ್ರಚಾರ ನಡೆಸಿದ್ದರು.

ತೇಜಸ್ವಿ ಸೂರ್ಯ 7,50,830 ಮತಗಳನ್ನು ಪಡೆದರೆ ಸೌಮ್ಯಾರೆಡ್ಡಿ 4,73,747 ಮತಗಳನ್ನು ಪಡೆದಿದ್ದಾರೆ. ಸಂಘಪರಿವಾರ ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಹೋರಾಟ ತೇಜಸ್ವಿ ಅವರಿಗೆ ಬಲ ನೀಡಿದೆ. ಅಲ್ಲದೇ, ಯುವ ಮತದಾರರು ಕೈ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT