ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಧೂಳೀಪಟ: ಬಿ.ವೈ.ವಿಜಯೇಂದ್ರ ಹೇಳಿಕೆ

Published 10 ಏಪ್ರಿಲ್ 2024, 15:18 IST
Last Updated 10 ಏಪ್ರಿಲ್ 2024, 15:18 IST
ಅಕ್ಷರ ಗಾತ್ರ

ಹಾವೇರಿ: ‘ಬಿಜೆಪಿ– ಜೆಡಿಎಸ್‌ ಪಕ್ಷಗಳ ಮೈತ್ರಿ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಅಲೆಯಿಂದ ಕಾಂಗ್ರೆಸ್‌ ನಾಯಕರು ನಿದ್ದೆಗೆಟ್ಟಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ಸರ್ಕಾರ ಧೂಳೀಪಟವಾಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. 

ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬುಧವಾರ ಏರ್ಪಡಿಸಿದ್ದ ಯುವ ಸಮಾವೇಶದಲ್ಲಿ ಅವರು ಮಾತನಾಡಿ, 'ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಗೆ ಸಿದ್ದರಾಮಯ್ಯನವರು ತಮ್ಮ ಫೋಟೊ ಹಾಕಿಕೊಂಡು ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. 9 ತಿಂಗಳ ಹಿಂದೆ ರಾಜ್ಯದ ಮತದಾರರಿಗೆ ಸುಳ್ಳು ಭರವಸೆಗಳನ್ನು ನೀಡಿ, ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು?' ಎಂದು ಪ್ರಶ್ನಿಸಿದರು. 

'ನರೇಂದ್ರ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಜನರು ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಮೋದಿ ಅವರ ಆಡಳಿತ ಭ್ರಷ್ಟಾಚಾರರಹಿತವಾಗಿದೆ. ಕೋವಿಡ್‌ ಸಂದರ್ಭದಲ್ಲಿ ಮೋದಿಯವರು ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ಮತ್ತು ಉಚಿತ ಲಸಿಕೆ ನೀಡಿ, ಜೀವ ಮತ್ತು ಜೀವನ ಎರಡನ್ನೂ ಉಳಿಸಿದರು' ಎಂದರು. 

''ಕಿಸಾನ್‌ ಸಮ್ಮಾನ್‌’ ಯೋಜನೆಯಡಿ ರೈತರಿಗೆ ಕೊಡುತ್ತಿದ್ದ ₹4 ಸಾವಿರ ಹಣವನ್ನು ಕಾಂಗ್ರೆಸ್‌ ಸರ್ಕಾರ ನಿಲ್ಲಿಸಿದೆ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ವಿದ್ಯಾನಿಧಿ ಸ್ಕಾಲರ್‌ಶಿಪ್‌ ಅನ್ನು ಕೊಡುತ್ತಿಲ್ಲ. ಉಚಿತ ವಿದ್ಯುತ್‌ ಎಂದು ಹೇಳಿ ವಿದ್ಯುತ್‌ ದರ ಹೆಚ್ಚಿಸಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಎಂದು ಹೇಳಿ, ಬಸ್‌ ದರವನ್ನು ಶೇ 30ರಷ್ಟು ಹೆಚ್ಚಿಸಿದೆ. ₹25 ಸಾವಿರಕ್ಕೆ ಸಿಗುತ್ತಿದ್ದ ವಿದ್ಯುತ್‌ ಪರಿವರ್ತಕ ಈಗ ₹3 ಲಕ್ಷ ಕೊಟ್ಟು ಖರೀದಿಸುವ ಪರಿಸ್ಥಿತಿ ತಂದಿದೆ. ಭೀಕರ ಬರಗಾಲವಿದ್ದರೂ ಮುಖ್ಯಮಂತ್ರಿ ರೈತರ ಬಗ್ಗೆ ಕನಿಕರ ತೋರಿಸುತ್ತಿಲ್ಲ. 850ಕ್ಕೂಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ಕೊಟ್ಟಿಲ್ಲ. ಇವೆಲ್ಲವೂ ಕಾಂಗ್ರೆಸ್‌ ಸರ್ಕಾರದ ಸಾಧನೆಯಾ?' ಎಂದು ಪ್ರಶ್ನಿಸಿದರು. 

'ಮನಮೋಹನ್‌ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ದೇಶವನ್ನು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದೇಶಕ್ಕೆ ಭವಿಷ್ಯ ಇಲ್ಲ ಅಂತ ಯುವಕರು ಮಾತನಾಡುತ್ತಿದ್ದರು. ಬದುಕನ್ನು ಕಟ್ಟಿಕೊಳ್ಳಲು ಯುವಜನತೆ ಪರಿತಪಿಸುತ್ತಿದ್ದರು. ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಾಧ್ಯವಿಲ್ಲ ಅಂತಿದ್ರು. ಅಂಥ ಕ್ಲಿಷ್ಟಕರ ಸಂದರ್ಭದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ, ಜಗತ್ತಿನ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿದೆ. ಭ್ರಷ್ಟಾಚಾರರಹಿತ ಸರ್ಕಾರ ನೀಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟವರು ಮೋದಿ' ಎಂದು ವಿಜಯೇಂದ್ರ ಬಣ್ಣಿಸಿದರು. 

'ಬಸವರಾಜ ಬೊಮ್ಮಾಯಿಯವರು 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ಶತಃಸಿದ್ಧ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದು ಮತ್ತು ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತಗಳಿಂದ ಬಿಜೆಪಿಯನ್ನು ಆಡಳಿತಕ್ಕೆ ತರುವುದು ನನ್ನ ಎರಡು ಪ್ರಮುಖ ಗುರಿಗಳಾಗಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT