ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ದಕ್ಷಿಣದಲ್ಲಿ ಕಳಪೆ ಸಾಧನೆ; ಕಾಂಗ್ರೆಸ್‌ ನಾಯಕರ ಪರಾಮರ್ಶೆ

Published 5 ಜೂನ್ 2024, 16:16 IST
Last Updated 5 ಜೂನ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಪಕ್ಷ ಉತ್ತಮ ಸಾಧನೆ ತೋರಿದರೂ, ದಕ್ಷಿಣ ಕರ್ನಾಟಕದಲ್ಲಿ ತೀರಾ ಕಳಪೆಯಾಗಿದೆ. ಹಾಸನ, ದಾವಣಗೆರೆ, ಚಾಮರಾಜನಗರ ಕ್ಷೇತ್ರಗಳನ್ನು ಗೆದ್ದಿರುವ ಪಕ್ಷ, ಉಳಿದ ಕಡೆಗಳಲ್ಲಿ ಭಾರಿ ಅಂತರದಿಂದ ಸೋಲು ಅನುಭವಿಸಿದೆ. ಈ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಕಾಂಗ್ರೆಸ್‌ ನಾಯಕರು ಪರಾಮರ್ಶೆಗೆ ತೊಡಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಬುಧವಾರ ಬೆಳಿಗ್ಗೆ ಪ್ರತ್ಯೇಕವಾಗಿ ಭೇಟಿ ಮಾಡಿದ ಕೆಲವು ಸಚಿವರು, ಮುಖಂಡರು ಈ ಬಗ್ಗೆ ಸಮಾಲೋಚನೆ ನಡೆಸಿದರು. ಗೆಲುವು ಖಚಿತವೆಂದು ನಿರೀಕ್ಷಿಸಿದ್ದ ಕೆಲವು ಕ್ಷೇತ್ರಗಳಲ್ಲಿಯೂ ಹೀನಾಯವಾದ ಸೋಲು ಈ ನಾಯಕರನ್ನು ಚಿಂತೆಗೀಡು ಮಾಡಿದೆ.

ಸಚಿವರಾದ ಜಿ. ಪರಮೇಶ್ವರ, ಕೆ.ಎನ್‌. ರಾಜಣ್ಣ, ಬೈರತಿ ಸುರೇಶ್‌, ಜಮೀರ್‌ ಅಹಮದ್‌ ಖಾನ್, ಕೃಷ್ಣ ಬೈರೇಗೌಡ, ಕೆ.ಎಚ್‌. ಮುನಿಯಪ್ಪ, ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತಿತರರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು. ಹಾಸನದಲ್ಲಿ ಗೆಲುವು ದಕ್ಕಿದರೂ, ಜಯದ ಲೆಕ್ಕಾಚಾರ ಹಾಕಿದ್ದ ತುಮಕೂರು, ಕೋಲಾರ ಮತ್ತು ಚಿತ್ರದುರ್ಗದಲ್ಲಿ ಪಕ್ಷಕ್ಕೆ ಸೋಲಾಗಿದೆ. ತುಮಕೂರಿನ ಸೋಲಿನ ಬಗ್ಗೆ ಪರಮೇಶ್ವರ ಮತ್ತು ಕೆ.ಎನ್‌. ರಾಜಣ್ಣ ಮುಖ್ಯಮಂತ್ರಿಗೆ ವಿವರಣೆ ನೀಡಿದರೆ, ಕೋಲಾರದಲ್ಲಿನ ಸೋಲಿಗೆ ಕಾರಣವಾದ ಅಂಶಗಳ ಕುರಿತು ಕೆ.ಎಚ್‌. ಮುನಿಯಪ್ಪ ಮಾಹಿತಿ ನೀಡಿದರು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಕೋಲಾರದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಕೆ.ಎಚ್‌. ಮುನಿಯಪ್ಪ ಮತ್ತು ಕೆ.ಆರ್‌. ರಮೇಶ್‌ ಕುಮಾರ್‌ ಬಣಗಳ ನಡುವೆ ನಡೆದ ತಿಕ್ಕಾಟವೂ ಪಕ್ಷದ ಅಭ್ಯರ್ಥಿ ಕೆ.ಎಂ. ಗೌತಮ್‌ ಅವರ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಮುನಿಯಪ್ಪ, ‘ಕೆಲವರ ಪ್ರತಿಷ್ಠೆಯಿಂದಾಗಿ ಸೋಲಾಗಿದೆ. ಈ ಬಗ್ಗೆ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದೇನೆ’ ಎಂದಿದ್ದಾರೆ.

ತುಮಕೂರಿನಲ್ಲಿ ಎಸ್.ಪಿ. ಮುದ್ದಹನುಮೇಗೌಡ ಅವರೂ ಗೆಲುವಿನ ದಡ ಸೇರುವ ವಿಶ್ವಾಸ ‘ಕೈ’ ನಾಯಕರಲ್ಲಿತ್ತು. ಆದರೆ, ಜೆಡಿಎಸ್‌– ಬಿಜೆಪಿ ಮೈತ್ರಿಯಿಂದ ಧ್ರುವೀಕರಣಗೊಂಡ ಮತಗಳು ಮುದ್ದಹನುಮೇಗೌಡ ಅವರ ಪಾಲಿಗೆ ಮುಳುವಾದವು. ವಿ. ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದಾಗ ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ ಅಪಸ್ವರ ಎತ್ತಿದ್ದರು. ಆ ಲಾಭವನ್ನು ಪಡೆದುಕೊಳ್ಳಲೂ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಈ ಬಗ್ಗೆಯೂ ಪರಮೇಶ್ವರ ಮತ್ತು ರಾಜಣ್ಣ ಅವರು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ‘ಗ್ಯಾರಂಟಿ’ ಯೋಜನೆಗಳು ಚುನಾವಣೆಯಲ್ಲಿ ಪಕ್ಷದ ಕೈ ಹಿಡಿದಿಲ್ಲ. ಹೀಗಾಗಿ ಈ ಯೋಜನೆಗಳನ್ನು ಮುಂದುವರಿಸಬೇಕಾದ ಅಗತ್ಯ ಇದೆಯೇ ಎಂದು ಕೆಲವು ಶಾಸಕರು ಚರ್ಚೆ ನಡೆಸುತ್ತಿದ್ದು, ‘ಅನ್ನಭಾಗ್ಯ’ ( ಹೆಚ್ಚುವರಿಯಾಗಿ 5 ಕಿಲೋ ಅಕ್ಕಿ) ಮತ್ತು ‘ಶಕ್ತಿ’ (ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ) ಯೋಜನೆಗಳನ್ನು ಹೊರತುಪಡಿಸಿ ಉಳಿದ ಯೋಜನೆಗಳನ್ನು ಮುಂದುವರಿಸಬೇಕಾದ ಔಚಿತ್ಯದ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದೂ ಗೊತ್ತಾಗಿದೆ.

ಡಿ.ಕೆ. ಶಿವಕುಮಾರ್‌ ಅವರನ್ನು ಸಚಿವರಾದ ಕೆ.ಎಚ್‌. ‌ಮುನಿಯಪ್ಪ, ಎನ್‌. ಚಲುವರಾಯಸ್ವಾಮಿ, ಡಿ. ಸುಧಾಕರ್, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಉದಯ್ ಕದಲೂರು ಮುಂತಾದವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಶಾಸಕರೇ ಇದ್ದರೂ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಭಾರಿ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಬಗ್ಗೆ ಶಿವಕುಮಾರ್‌ ಜೊತೆ ಚಲುವರಾಯಸ್ವಾಮಿ ವಿಚಾರ ವಿನಿಮಯ ನಡೆಸಿದರು. ಚಿತ್ರದುರ್ಗದಲ್ಲಿ ಪಕ್ಷದ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಅವರ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಚಿವ ಡಿ. ಸುಧಾಕರ್ ವಿವರಣೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT