ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ | ಜೋಶಿ ಕೈಹಿಡಿದ ಸೆಂಟ್ರಲ್‌, ಪಶ್ಚಿಮ ಕ್ಷೇತ್ರ

ಕಡಿಮೆಯಾದ ಗೆಲುವಿನ ಅಂತರ; ಮುಳುವಾದ ಕಾಂಗ್ರೆಸ್ ನಾಯಕರ ಅತಿಯಾದ ವಿಶ್ವಾಸ
Published 6 ಜೂನ್ 2024, 4:45 IST
Last Updated 6 ಜೂನ್ 2024, 4:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ಐದನೇ ಸಲ ಗೆದ್ದಿರುವ ಬಿಜೆಪಿಯ ಪ್ರಲ್ಹಾದ ಜೋಶಿ ಅವರಿಗೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಮತ್ತು ಪಶ್ಚಿಮ ವಿಧಾನಸಭಾ ಕ್ಷೇತ್ರಗಳು ದೊಡ್ಡಮಟ್ಟದಲ್ಲಿ ಕೈಹಿಡಿದಿವೆ.

ಸೆಂಟ್ರಲ್‌ ಕ್ಷೇತ್ರದಲ್ಲಿ ಜೋಶಿ 1,13,678 ಮತ ಗಳಿಸಿದ್ದು, ವಿನೋದ ಅಸೂಟಿ ಅವರಿಗೆ 62,360 ಮತ ಬಂದಿವೆ. ಜೋಶಿ ಅವರಿಗೆ ಎದುರಾಳಿಗಿಂತ 51,318 ಮತ ಹೆಚ್ಚು ಸಿಕ್ಕಿವೆ. ಪಶ್ಚಿಮ ಕ್ಷೇತ್ರದಲ್ಲಿ 1,13,086 ಮತಗಳು ಜೋಶಿ ಮತ್ತು 71 498 ಮತಗಳು ವಿನೋದ ಅಸೂಟಿ ಬುಟ್ಟಿಗೆ ಬಿದ್ದಿವೆ. ಒಟ್ಟಾರೆ ಲೀಡ್ 41,588.

‌ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಜೋಶಿ ಅವರ ಗೆಲುವಿನ ಅಂತರ ಈ ಬಾರಿ ಕಡಿಮೆ ಆಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚು ಮತಗಳು ಬಾರದಿದ್ದರೆ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

‘ಕ್ಷೇತ್ರದಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಆರೋಪ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವ ನಿರ್ಧಾರ ಸೇರಿ ಹಲವು ಅಂಶಗಳು ಜೋಶಿ ಅವರ ಗೆಲುವಿನ ಅಂತರ ಕಡಿಮೆಯಾಗಲು ಕಾರಣ’ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿನೋದ ಅಸೂಟಿ ಅವರಿಗೆ ನವಲಗುಂದ, ಹುಬ್ಬಳ್ಳಿ–ಧಾರವಾಡ ಪೂರ್ವ, ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಿಕ್ಕಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿ ಬಸವರಾಜ ಬೊಮ್ಮಾಯಿ ಅವರಿದ್ದರೂ ವಿನೋದ ಅಸೂಟಿ ಅವರಿಗೆ 8,598 ಮತ ಹೆಚ್ಚು ಬಂದಿದೆ.

ಬಿಜೆಪಿಯ ಭದ್ರಕೋಟೆ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಮತ್ತು ಹುಬ್ಬಳ್ಳಿ–ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಭದ್ರ ನೆಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ ಟೆಂಗಿನಕಾಯಿ ಶಾಸಕರಾಗಿದ್ದು, ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರನ್ನು ಮಣಿಸಿದ್ದರು. ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸತತ ಆರು ಬಾರಿ ಜಯಗಳಿಸಿದ್ದ ಶೆಟ್ಟರ್ ಅವರು ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದರು. ಟೆಂಗಿನಕಾಯಿ ಅವರಿಗೆ ಗೆಲುವಿನ ಸಿಹಿ ನೀಡಿದ್ದ ಮತದಾರರು ಕ್ಷೇತ್ರದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಸಾರಿದ್ದರು.

ಹುಬ್ಬಳ್ಳಿ– ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಅರವಿಂದ ಬೆಲ್ಲದ ಅವರು ಸತತವಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. 

‘ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಕೈಹಿಡಿಯುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವಿಗೆ ಅಡ್ಡಿಯಾಯಿತು. ನಗರದ ಪ್ರದೇಶಕ್ಕಿಂತ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರಚಾರ ಮಾಡಿದ್ದು, ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಸರಿಯಾದ ಕಾರ್ಯತಂತ್ರ ರೂಪಿಸಿ ಪ್ರಚಾರ ಮಾಡದಿರುವುದು ಹಿನ್ನಡೆಗೆ ಕಾರಣ’ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.

‘ಪ್ರಲ್ಹಾದ ಜೋಶಿ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಿಂದೂ–ಮುಸ್ಲಿಮರ ನಡುವೆ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರು. ಹೀಗಾಗಿಯೇ ಅವರ ಗೆಲುವಿನ ಅಂತರ ಕಡಿಮೆಯಾಗಿದೆ. ನೈತಿಕವಾಗಿ ಇದು ಅವರ ಗೆಲುವಲ್ಲ’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಹೇಳಿದರು.

‘ನಗರ ಪ್ರದೇಶದಲ್ಲಿ ಮತದಾರರು ಬಿಜೆಪಿ ಕೈಹಿಡಿದಿದ್ದಾರೆ. ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚು ಇರುವುದರಿಂದ ಸಹಜವಾಗಿ ಅಲ್ಲಿ ಹಿನ್ನಡೆಯಾಗಿದೆ. ಕನಿಷ್ಠ 2–3 ಲಕ್ಷ ಮತಗಳ ಅಂತರದ ಗೆಲುವು ನಿರೀಕ್ಷಿಸಿದ್ದೆವು’ ಎನ್ನುತ್ತಾರೆ ಹುಬ್ಬಳ್ಳಿ-ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ.

‘ಗ್ಯಾರಂಟಿ ಯೋಜನೆಗಳು ಕ್ಷೇತ್ರದಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಗೆಲುವಿನ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಆದರೂ ಗೆಲುವಿನ ಅಂತರ ಕಡಿಮೆ ಆಗಲು ಕಾರಣ ಏನು ಎಂಬ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

****

ಕ್ಷೇತ್ರದಲ್ಲಿ ಸಣ್ಣ ಸಣ್ಣ ಸಭೆ ನಡೆಸಿ ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದೆವು. ವಿಭಿನ್ನ ಕಾರ್ಯತಂತ್ರ ಕಾರ್ಯಕರ್ತರು ಮುಖಂಡರ ಶ್ರಮದಿಂದಾಗಿ ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ಕೊಡಲು ಸಾಧ್ಯವಾಗಿದೆ

–ಮಹೇಶ ಟೆಂಗಿನಕಾಯಿ ಶಾಸಕ ಹು–ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರ

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಹಿನ್ನಡೆ

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ ಹಿನ್ನಡೆಯಾಗಿದೆ. ಈ ಕ್ಷೇತ್ರದಲ್ಲಿ  ಜೋಶಿ ಅವರು 96402 ಮತಗಳನ್ನು ಪಡೆದಿದ್ದರೆ ಅಸೂಟಿ ಅವರಿಗೆ 63665 ಮತಗಳು ಬಂದಿವೆ. ಇಲ್ಲಿ ಜೋಶಿ ಅವರಿಗೆ 32737 ಮತಗಳ ಲೀಡ್ ಸಿಕ್ಕಿದೆ. ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರು ಪ್ರತಿನಿಧಿಸುವ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲೂ ಅಸೂಟಿ ಅವರಿಗೆ ಮುನ್ನಡೆ ಸಿಕ್ಕಿಲ್ಲ. ಈ ಕ್ಷೇತ್ರದಲ್ಲಿ  ಜೋಶಿ ಅವರು ಎದುರಾಳಿಗಿಂತ 21316 ಮತಗಳನ್ನು ಹೆಚ್ಚು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT