ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತ ಹಂತವಾಗಿ ಬದಲಾವಣೆ: ಬಸವರಾಜ ಬೊಮ್ಮಾಯಿ

Last Updated 16 ಏಪ್ರಿಲ್ 2023, 14:41 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಂತ ಹಂತವಾಗಿ ಬದಲಾವಣೆ ಆಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಬಿಜೆಪಿ ಸಮಾನ ಮಾನಸ್ಕರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಮೋದಿಯವರು ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಶಾಸಕರು, ಸಚಿವರು, ಸಿ.ಎಂ ಬದಲಾವಣೆ ಮಾಡೋ ಧೈರ್ಯ ಮೋದಿ ಮತ್ತು ಬಿಜೆಪಿಗೆ ಮಾತ್ರ ಇದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಲಿಂಗಾಯತರ ಕೋಟೆ ಬಹಳ ಭದ್ರವಾಗಿದೆ. ಬಿಜೆಪಿ ಇವರನ್ನು ಗುರುತಿಸುವ ಮುಂಚೆ ಇವರು ಲಿಂಗಾಯತ ನಾಯಕರಾಗಿದ್ರಾ ಎಂದು ಶೆಟ್ಟರ್‌ ಅವರ ಹೆಸರು ಪ್ರಸ್ತಾಪಿಸದೆ ಮಾತನಾಡಿದ ಅವರು, ನನ್ನ ಸೇರಿದಂತೆ ಹಲವರನ್ನು ಬಿ.ಎಸ್‌.ಯಡಿಯೂರಪ್ಪ ಬೆಳೆಸಿದ್ದಾರೆ. ನಾನು, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ್‌, ಸೋಮಣ್ಣ ಸೇರಿದಂತೆ ಹಲವರು ನಾಯಕರಿದ್ದಾರೆ. 50ಕ್ಕಿಂತ ಹೆಚ್ಚಿನವರಿಗೆ ಟಿಕೆಟ್‌ ಕೊಡಲಾಗಿದೆ. ಯಡಿಯೂರಪ್ಪನವರು ಸರ್ವೊಚ್ಚ ಲಿಂಗಾಯತರ ನಾಯಕರು. ಲಿಂಗಾಯತರ ಕೋಟೆ ಒಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯಾರೇ ಪಕ್ಷ ಬಿಟ್ಟು ಹೋದರೂ ಬಿಜೆಪಿಗೆ ಲುಕ್ಸಾನ ಇಲ್ಲ. ಇವತ್ತು ಯಾರ್‍ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಮುಂದೆ ಒಂದು ದಿನ ಅವರು ಪಶ್ಚತ್ತಾಪ ಪಡುತ್ತಾರೆ. ಹಿಂದೆ ಆ ಪಕ್ಷಕ್ಕೆ ಹೋಗಿ ಏನೇನು ಅನುಭವಿಸಿದ್ದಾರೆ ಅದು ನಮ್ಮ ಕಣ್ಣು ಮುಂದಿದೆ. ಇವರು (ಶೆಟ್ಟರ್‌) ಕೂಡ ಒಂದಿಲ್ಲ ಒಂದು ದಿನ ಪಶ್ಚತ್ತಾಪ ಪಡುತ್ತಾರೆ ಎಂದರು.

ಪಕ್ಷದ ವರಿಷ್ಠರು ಅವರಿಗೆ (ಶೆಟ್ಟರ್‌) ದೆಹಲಿ ಮಟ್ಟದಲ್ಲಿ ದೊಡ್ಡ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿದಾಗಲೂ ಅವರು ಕೇಳಲಿಲ್ಲ. ಬಹಳ ಹಿರಿಯ ಮುಖಂಡರಾದ ಅವರು ಈ ತರಹದ ನಿರ್ಣಯ ಏಕೆ ತೆಗೆದುಕೊಂಡರು ಎನ್ನುವುದು ಅರ್ಥವಾಗುತ್ತಿಲ್ಲ. ಇದು ದುಡುಕಿನ ನಿರ್ಧಾರ ಅನಿಸುತ್ತದೆ. ಆದರೆ, ಪಕ್ಷ ಇದನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿದೆ. ಯಾವ ಕ್ಷೇತ್ರದಲ್ಲಿ ಮುಖಂಡರು ಬಿಟ್ಟು ಹೋಗಿದ್ದಾರೆ ಅಲ್ಲೆಲ್ಲ ಪಕ್ಷ ಮತ್ತೆ ಪುಟಿದೇಳಲಿದೆ ಎಂದು ಹೇಳಿದರು.

ಶೆಟ್ಟರ್ ಅವರ ಫ್ಲೈಟ್ ಎಲ್ಲಿ ಹೋಯ್ತು ಅನ್ನೋದು ಮುಖ್ಯ ಅಲ್ಲ. ಡೆಸ್ಟಿನೇಷನ್ ಮುಖ್ಯ. ಹಲವಾರು ಸರ್ವೆ ಮತ್ತು ಬೇರೆ ಬೇರೆ ಕಾರಣಗಳಿಗೆ ಬದಲಾವಣೆ ಆಗಿದೆ. ಪಕ್ಷಕ್ಕೆ ಅದನ್ನು ನಿಭಾಯಿಸುವ ಶಕ್ತಿ ಇದೆ. ಕೆಲವು ಹಿರಿಯರು ತಾವೇ ನಿವೃತ್ತಿ ಘೋಷಿಸಿದ್ದಾರೆ. ಆನಂದ್‌ ಸಿಂಗ್ ಅವರಿಗೆ ವಯಸ್ಸು ಇತ್ತು. ಅವರ ಜೊತೆ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಡಿಯೂರಪ್ಪ ಅವರು ಯುವಕರಿಗೆ ಅವಕಾಶ ಮಾಡಿಕೊಟ್ಟರು. ಶೆಟ್ಟರ್ ಸಹ ಯುವಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು ಎಂದರು.

ಈ ಹಿಂದೆ ಶೆಟ್ಟರ್‌ ಅವರಿಗೆ ಪಕ್ಷ ದೊಡ್ಡ ಸ್ಥಾನಮಾನಗಳನ್ನು ಕೊಟ್ಟಿದೆ. ಅವರು ಶಾಸಕರಾಗಲು ಸಾವಿರಾರು ಕಾರ್ಯಕರ್ತರ ಶ್ರಮವಿದೆ. ಇಂತಹ ನಾಯಕರು, ಯಾರೇ ಪಕ್ಷ ಬಿಟ್ಟು ಹೋದ್ರು ಅವರಿಂದ ಯಾವುದೇ ನಷ್ಟವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT