ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ನ್ಯಾಯ ಕಲ್ಪಿಸದ ಕಾಂಗ್ರೆಸ್‌: ಗೋವಿಂದ ಕಾರಜೋಳ

Published 2 ಮೇ 2024, 16:23 IST
Last Updated 2 ಮೇ 2024, 16:23 IST
ಅಕ್ಷರ ಗಾತ್ರ

ಹಾವೇರಿ: ‘ದಲಿತರ ಹೆಸರು ಹೇಳಿಕೊಂಡು ಮತ ಗಳಿಸುವ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜನರಿಗೆ ಅನ್ಯಾಯ ಮಾಡುತ್ತದೆ. ಕಳೆದ ವರ್ಷ ಎಸ್‌.ಸಿ, ಎಸ್‌.ಟಿ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹ 11 ಸಾವಿರ ಕೋಟಿಯನ್ನು ಗ್ಯಾರಂಟಿ, ಮತ್ತಿತರ ಯೋಜನೆಗೆ ಬಳಸಿಕೊಂಡಿದೆ. ಈ ಕೂಡಲೇ ಈ ಹಣವನ್ನು ವಾಪಸ್ ಕೊಡಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ, ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟ ಹಣ ದುರುಪಯೋಗ ಮಾಡಿಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಮುಖ್ಯಮಂತ್ರಿ ವಿರುದ್ಧವೇ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕಾಗುತ್ತದೆ. ಹಾಗಾಗಿ, ಈ ಕೂಡಲೇ ಹಣ ಬಿಡುಗಡೆಗೊಳಿಸಿ ಜಮೀನು ಇಲ್ಲದ ಬಡವರಿಗೆ, ಶಿಕ್ಷಣಕ್ಕೆ, ಹಾಸ್ಟೆಲ್ ನಿರ್ಮಾಣಕ್ಕೆ ಹಣ ಉಪಯೋಗಿಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಸಮುದಾಯದವರಿಗೆ ರಕ್ಷಣೆ ಇಲ್ಲ. ರಾಯಚೂರು ಜಿಲ್ಲೆಯ ಲಿಂಗಸಗೂರಲ್ಲಿ ಪರಿಶಿಷ್ಟ ಸಮುದಾಯದವರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಿಲ್ಲ. ಇಂತಹ ಅನೇಕ ಘಟನೆಗಳು ನಡೆದಿವೆ. ಸಿದ್ದರಾಮಯ್ಯನವರು ಪರಿಶಿಷ್ಟ ಸಮುದಾಯದವರ ಪರ ಎಂಬುದು ಕೇವಲ ಹೇಳಿಕೆಗೆ ಸೀಮಿತವಾಗಿದೆ. 10 ವರ್ಷಗಳ ಆಡಳಿತದಲ್ಲಿ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ. ತಳ ಸಮುದಾಯಕ್ಕೆ ಸೇರಿದ ಮೋದಿ ಯಾವತ್ತೂ ಜಾತಿ ರಾಜಕಾರಣ ಮಾಡಲಿಲ್ಲ ಎಂದರು.

ಕಾಂಗ್ರೆಸ್‌ ಪ್ರಧಾನಿ ಯಾರು?

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ಘೋಷಿಸಲಿ. ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಕಾಂಗ್ರೆಸ್‌ ಸುಳ್ಳು ಆರೋಪ ಮಾಡುತ್ತದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್‌. ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಸಂಸತ್‌ಗೆ ಪದಾರ್ಪಣೆ ಮಾಡಿದಾಗ ಮೆಟ್ಟಿಲಿಗೆ ಹಣೆ ಹಚ್ಚಿ ನಮಸ್ಕರಿಸುವ ಮೂಲಕ ಸಂವಿಧಾನಕ್ಕೆ ಗೌರವ ಕೊಟ್ಟರು. ಈ ದೇಶದ ಧರ್ಮಗ್ರಂಥ ಅಂಬೇಡ್ಕರ್ ಬರೆದ ಸಂವಿಧಾನ ಎಂದು ಹೇಳಿದರು.

ಬಡವರ ಬುದ್ಧಿ ಖರೀದಿಸುವ ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿ ಎಂದರೆ ಬಡವರ ಮನಸು, ಬುದ್ಧಿ ಖರೀದಿಸುವ ಗ್ಯಾರಂಟಿ. ಮೋದಿ ಗ್ಯಾರಂಟಿ ಅಂದರೆ ಖಚಿತವಾಗಿ ವಿಶ್ವಾಸದಿಂದ ಬಡವರನ್ನು ಮೇಲೆತ್ತುವ ಗ್ಯಾರಂಟಿ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ. ಅದಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬೊಮ್ಮಾಯಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದು ಕಾರಜೋಳ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಡಿ.ಎಸ್.ಮಾಳಗಿ, ಪರಮೇಶಪ್ಪ ಮೇಗಳಮನಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT