ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿಯಲ್ಲಿ ಮೈತ್ರಿಗೆ ಸಿಗದ ‘ಫಲ’

Published 6 ಜೂನ್ 2024, 5:17 IST
Last Updated 6 ಜೂನ್ 2024, 5:17 IST
ಅಕ್ಷರ ಗಾತ್ರ

ಕಲಬುರಗಿ: ಕಾಂಗ್ರೆಸ್‌ನ ಭದ್ರ ಕೋಟೆಯಾದ ಲೋಕಸಭಾ ಕಲುಬುರಗಿ ಮೀಸಲು ಕ್ಷೇತ್ರವನ್ನು ತನ್ನಲ್ಲಿ ಉಳಿಸಿಕೊಳ್ಳಲು ಬಿಜೆಪಿ–ಜೆಡಿಎಸ್ ಒಂದಾಗಿ ಅಖಾಡಕ್ಕೆ ಇಳಿದರೂ ‘ಹಸ್ತ’ದ ಗೆಲುವಿನ ನಾಗಾಲೋಟವನ್ನು ತಡೆಯಲು ಆಗಲಿಲ್ಲ. ಗೆಲುವಿನೊಂದಿಗೆ ‘ಕೈ’ ಪಾಳೆಯ ಚುನಾವಣೆಯಿಂದ ಚುನಾವಣೆಗೆ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿಕೊಂಡಿದೆ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಕಾಂಗ್ರೆಸ್ ‘ಕೈ’ ಹಿಡಿದಿದ್ದು, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಮುಖಭಂಗವಾಗಿತ್ತು. ಲೋಕಸಭೆಯಲ್ಲಿ ಇಬ್ಬರೂ ಕೈಜೋಡಿಸಿದ್ದರೂ ನಿರೀಕ್ಷಿತ ಫಲ ನೀಡಲಿಲ್ಲ. ‘ಮೈತ್ರಿ’ಯ ಮತಗಳು ‘ಕಮಲ’ದ ಅಭ್ಯರ್ಥಿಯನ್ನು ಗೆಲುವಿನ ದಡ ಸೇರಿಸಲಿಲ್ಲ.

ಚುನಾವಣೆ ಘೋಷಣೆಯಾದ ದಿನವೇ ನಗರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿತ್ತು. ಆರಂಭಿಕ ದಿನಗಳಲ್ಲಿ ಬಿಜೆಪಿಯಲ್ಲಿನ ಬಿರುಸಿನ ಚಟುವಟಿಕೆಗಳು ಮತದಾನ ಹತ್ತಿರ ಆಗುತ್ತಿದ್ದಂತೆ ಮಂಕಾಗುತ್ತಾ ಹೋದವು. ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತವಾದರು.

ಮತ್ತೊಂದು ಕಡೆ ‘ಬಿಜೆಪಿಗರು ಮೈತ್ರಿ ಧರ್ಮ ಸರಿಯಾಗಿ ನಿಭಾಯಿಸುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದ ಶಾಸಕ ಶರಣಗೌಡ ಕಂದಕೂರ ಅವರು ಆರಂಭದಲ್ಲಿ ಅಂತರ ಕಾಯ್ದುಕೊಂಡಿದ್ದರು.

ಡಾ. ಉಮೇಶ ಜಾಧವ ಅವರು ಶರಣಗೌಡ ಅವರ ಮನೆಗೆ ತೆರಳಿ ಭೇಟಿ ಮಾಡಿ, ಸಮನ್ವಯದ ಮಾತುಕತೆ ನಡೆಸಿದ ಬಳಿಕವೇ ಪ್ರಚಾರದ ಅಖಾಡಕ್ಕೆ ಇಳಿದರು. ನಾಮಪತ್ರ ಸಲ್ಲಿಕೆಗೂ ಹಾಜರಿದ್ದರು.

ಆದರೆ, ಕಳೆದ ಬಾರಿಯ 19,883 ಲೀಡ್ ಮತಗಳ ತಂದುಕೊಡಲು ಆಗಲಿಲ್ಲ. ಬದಲಿಗೆ 16,402 ಮತಗಳ ಲೀಡ್ ಸಿಕ್ಕಿತು.

ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ನರಿಬೋಳ ಅವರು ನಾಮಪತ್ರ ಸಲ್ಲಿಕೆಗೆ ತಮಗೆ ಆಹ್ವಾನ ನೀಡಿಲ್ಲವೆಂದು ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದರು. ಮನವೊಲಿಕೆಯ ಬಳಿಕ ಜೇವರ್ಗಿಯಲ್ಲಿ ನಡೆದ ಜೆಡಿಎಸ್ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಹೀಗಾಗಿ, ಕಳೆದ ಬಾರಿಯ 24,288 ಮತಗಳ ಲೀಡ್ ಬದಲು ಈ ಬಾರಿ ಬಿಜೆಪಿಗೆ 5,026 ಲೀಡ್‌ ಮತಗಳಷ್ಟೇ ಲೀಡ್ ಬಂದಿದ್ದು ಗೆಲುವಿಗೆ ಬಹುದೊಡ್ಡ ಹಿನ್ನಡೆಯಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಅವರು ಪ್ರಚಾರದ ಬಹುತೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಉಳಿದವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದರು. ಮೈತ್ರಿ ಒಳಗಿನ ಸ್ಥಳೀಯ ನಾಯಕರ ನಡುವಿನ ಆಂತರಿಕ ಹಗ್ಗಜಗ್ಗಾಟಕ್ಕೆ ಜೆಡಿಎಸ್ ಹಾಗೂ ಕಮಲ ಪಡೆ ತಕ್ಕ ಬೆಲೆ ತೆತ್ತಿವೆ. ಜೆಡಿಎಸ್‌ ಪ್ರಾಬಲ್ಯ ಇರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲೀಡ್‌ ಮತಗಳು ‘ಕಮಲ’ಕ್ಕೆ ಹರಿದುಬರಲಿಲ್ಲ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಟ್ಟು 6,11,351 ಮತಗಳು ಹರಿದುಬಂದಿದ್ದವು. ಲೋಕಸಭಾ ಚುನಾವಣೆ ವೇಳೆಗೆ ಅದು 6,53,124ಕ್ಕೆ ತಲುಪಿದೆ. ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 4,22,052 ಹಾಗೂ ಜೆಡಿಎಸ್‌ ಅಭ್ಯರ್ಥಿಗಳು 1,80,630 ಮತಗಳು ಸೇರಿ ಒಟ್ಟು 6,02,682 ಮತಗಳು ಪಡೆದಿದ್ದರು. ಲೋಕಸಭೆಯ ‘ಮೈತ್ರಿ’ ಅಭ್ಯರ್ಥಿಗೆ 6,24,313 ಮತಗಳು ಬಿದ್ದಿದ್ದರೂ ಗೆಲುವಿಗೆ ಸಾಲದೆ ಹೋದವು.

ಕಾಂಗ್ರೆಸ್ ಮತ ಗಳಿಕೆ: ಶೇ 5.89ರಷ್ಟು ಜಿಗಿತ

ಲೋಕಸಭೆಯ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಮತಗಳಿಕೆಯಲ್ಲಿ ಶೇ 5.89ರಷ್ಟು ಹೆಚ್ಚಳವಾಗಿದೆ. ಬಿಜೆಪಿ ಶೇ 4.34ರಷ್ಟು ಕುಸಿತ ಕಂಡಿದೆ.

ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಡಮನಿ ಅವರು 2024ರಲ್ಲಿ 6,53,124 ಮತಗಳೊಂದಿಗೆ ಶೇ 49.97ರಷ್ಟು ಮತ ಪಡೆದರು. ಬಿಜೆಪಿಯ ಡಾ. ಉಮೇಶ ಜಾಧವ ಅವರು 6,24,313 ಮತಗಳೊಂದಿಗೆ ಶೇ 47.76ರಷ್ಟು ಮತ ಗಳಿಸಿದರು. ಒಟ್ಟು 13,06,923 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2019ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 5,24,740 (ಶೇ 44.08ರಷ್ಟು) ಹಾಗೂ ಜಾಧವ ಅವರು 6,20,192 (ಶೇ 52.1) ಮತಗಳನ್ನು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT